ವಾಹನಗಳನ್ನು ತಡೆದರೆ ಪೊಲೀಸ್ ಕ್ರಮಕ್ಕೆ ಶಾಸಕ ಸುನಿಲ್ ಸೂಚನೆ; ಮುರುಡೇಶ್ವರ ರಸ್ತೆ ಕಾಮಗಾರಿ ವಿಳಂಬಕ್ಕೆ ತರಾಟೆ; ಕೆಡಿಪಿ ಸಭೆಯಲ್ಲಿ ಕಳ್ಳಭಟ್ಟಿ ಮಾರಾಟಕ್ಕೂ ಕಿಡಿ

Source: S O News service | By I.G. Bhatkali | Published on 13th April 2021, 6:01 PM | Coastal News |

ಭಟ್ಕಳ: ಸಾರಿಗೆ ನೌಕರರ ಮುಷ್ಕರದ ಮಧ್ಯೆ ಬಸ್ಸುಗಳನ್ನು ಓಡಿಸಲು ಕೆಲವು ಚಾಲಕರು, ನಿರ್ವಾಹಕರು ಮುಂದೆ ಬಂದಿದ್ದಾರೆ, ಖಾಸಗಿ ಬಸ್ಸುಗಳನ್ನು ಓಡಿಸಲೂ ಕ್ರಮ ಕೈಗೊಳ್ಳಲಾಗಿದೆ. ಬಸ್ಸುಗಳ ಓಡಾಟಕ್ಕೆ ಯಾರಾದರೂ ತೊಂದರೆ ನೀಡಿದ್ದಲ್ಲಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಶಾಸಕ ಸುನಿಲ್ ಕರ್ನಾಟಕ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಭಟ್ಕಳ ಘಟಕದ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.

ಸೋಮವಾರ ಇಲ್ಲಿನ ತಾಪಂ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶಾಸಕರು, ಸಾರಿಗೆ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸರಕಾರವೇ ಸ್ಪಷ್ಟ ಪಡಿಸಿದೆ. ಇದನ್ನು ಅಧಿಕಾರಿಗಳು ಪಾಲಿಸಬೇಕು, ಭಟ್ಕಳದಲ್ಲಿ ಬಸ್ಸುಗಳನ್ನು ಓಡಿಸಲು ಏನು ಕ್ರಮ ಕೈಗೊಂಡಿದ್ದೀರಿ ಎಂದು ಸಾರಿಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಭಟ್ಕಳ ಡಿಪೋ ವ್ಯವಸ್ಥಾಪಕ ದಿವಾಕರ, ರವಿವಾರ ಕೆಲವು ಬಸ್ಸುಗಳನ್ನು ಓಡಿಸಲು ಕ್ರಮ ಕೈಗೊಂಡಿದ್ದೆವು, ಆದರೆ ಬಸ್ಸುಗಳನ್ನು ಕೆಲವರು ತಡೆದಿದ್ದು, ಸದ್ಯ ಸ್ಥಗಿತಗೊಂಡಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಬಸ್ಸುಗಳನ್ನು ಯಾರಿಗೂ ತಡೆಯಲು ಅವಕಾಶ ಇಲ್ಲ, ಕೂಡಲೇ ಅಂತವರನ್ನು ಪತ್ತೆ ಹಚ್ಚಿ ಪೊಲೀಸರಿಗೆ ದೂರು ನೀಡಿ ಎಂದು ಹೇಳಿದರು.

ಸಭೆ ಆರಂಭವಾಗುತ್ತಿದ್ದಂತೆಯೇ ಇತ್ತೀಚಿಗೆ ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಡೆದ ದೂರಿನ ವಿಚಾರಣೆ ಹಾಗೂ ಸಂಘ, ಸಂಸ್ಥೆಗಳ ಮುಖಂಡರ ಆಕ್ಷೇಪದ ಬಗ್ಗೆ ಪ್ರಸ್ತಾಪಿಸಿದ ಶಾಸಕ ಸುನಿಲ್, ಘಟನೆಯ ಬಗ್ಗೆ ಮಾಹಿತಿ ನೀಡುವಂತೆ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ತಿಳಿಸಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್, ದಾನಿಗಳ ಸಹಕಾರದೊಂದಿಗೆ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲು ಶ್ರಮವಹಿಸಲಾಗಿದೆ. ಆಸ್ಪತ್ರೆಯ ಆಡಳಿತ, ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿದ್ದೇವೆ. ಆದರೆ ಈ ಬಗ್ಗೆ ದೂರು ನೀಡಲಾಗಿದ್ದು, ವಿಚಾರಣೆ ನಡೆದಿದೆ. ವರದಿ ಬಂದ ನಂತರ ಮಾಹಿತಿ ನೀಡುವುದಾಗಿ ವಿವರಿಸಿದರು.

ನಂತರ ಮಾತನಾಡಿದ ಶಾಸಕ ಸುನಿಲ್, ಕಳೆದ 2-3 ವರ್ಷಗಳಿಂದ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ರೂಪಿಸಲಾಗಿದೆ. ಆದರೆ ಕೆಲವು ಹಿತಾಸಕ್ತಿಗಳು ಆಸ್ಪತ್ರೆಯನ್ನು ಹಾಳುಗೆಡುಹಲು ಪ್ರಯತ್ನಿಸುತ್ತಿವೆ, ಇದಕ್ಕೆ ಅವಕಾಶ ನೀಡದಂತೆ ಠರಾವು ಮಾಡಿ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮುರುಡೇಶ್ವರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ ಅಸಮಾಧಾನವನ್ನು ಹೊರ ಹಾಕಿದ ಅವರು, ಮುರುಡೇಶ್ವರ ಪ್ರಸಿದ್ಧ ಪ್ರವಾಸೋದ್ಯಮ ಕ್ಷೇತ್ರವಾಗಿದೆ. ಆದರೆ ರಸ್ತೆ ಕಾಮಗಾರಿಯ ವಿಳಂಬದಿಂದಾಗಿ ಮುರುಡೇಶ್ವರಕ್ಕೆ ಕೆಟ್ಟ ಹೆಸರು ಬರುತ್ತಿದೆ, ಜನರು ಹಿಡಿಶಾಪ ಹಾಕುತ್ತಿದ್ದಾರೆ, ಗುತ್ತಿಗೆದಾರರ ಉದ್ದೇಶವೇ ಬೇರೆ ಇರುವ ಹಾಗೆ ಇದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಇದಕ್ಕೆ ಉತ್ತರಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಭಿಯಂತರ ಮಹೇಶ ನಾಯ್ಕ, ಮೇ ತಿಂಗಳ ಅಂತ್ಯದ ಒಳಗೆ ಕಾಮಗಾರಿಯನ್ನು ಮುಗಿಸುವುದಾಗಿ ಭರವಸೆ ನೀಡಿದರು.

ಭಟ್ಕಳ ತಾಲೂಕಿನ ಮುಂಡಳ್ಳಿ ಹಾಗೂ ಸಣಬಾವಿಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ವ್ಯಾಪಕವಾಗಿರುವ ಬಗ್ಗೆ ದೂರುಗಳಿವೆ, ಮತ್ತೆ ಈ ಬಗ್ಗೆ ಸಾರ್ವಜನಿಕ ವಲಯದಿಂದ ಆರೋಪ ಕೇಳಿ ಬಂದರೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು. ಕೆಲವು ಕಡೆ ಶಾಲೆಗೆ ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಾಗದಿರುವುದು, ವಿದ್ಯುತ್ ಮೀಟರ್ ಬದಲಾವಣೆ ಕಾರ್ಯದಲ್ಲಿ ಜನರಿಂದ ಹಣ ವಸೂಲಿ, ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀನುಗಾರಿಕಾ ದೋಣಿ, ಬಲೆ ಇತ್ಯಾದಿ ಸೌಲಭ್ಯಕ್ಕೆ ಅಡೆತಡೆ, ಕಾರ್ಮಿಕ ಇಲಾಖೆಯಲ್ಲಿ ಅರ್ಜಿ ವಿಲೇವಾರಿ ವಿಳಂಬ ಸೇರಿದಂತೆ ಹಲವು ಪ್ರಮುಖ ವಿಷಯಗಳು ಸಭೆಯಲ್ಲಿ ಪ್ರಸ್ತಾಪವಾದವು.

ತಹಸೀಲ್ದಾರ ಎಸ್.ರವಿಚಂದ್ರ, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಉಪಸ್ಥಿತರಿದ್ದರು. ತಾಪಂ ವ್ಯವಸ್ಥಾಪಕ ಕೃಷ್ಣಕಾಂತ ಸ್ವಾಗತಿಸಿದರು .ಕರಿಯಪ್ಪ ನಾಯ್ಕ ವಂದಿಸಿದರು. 

Read These Next

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ; ದೇಶ ಬಿಜೆಪಿ ಆಡಳಿತದಲ್ಲಿ 25 ವರ್ಷದಷ್ಟು ಹಿಂದೆ ಹೋಗಿದೆ; ದೇಶಪಾಂಡೆ ಆರೋಪ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ...