ಕಾರವಾರ: ಗೊಂದಲಕ್ಕೆ ಒಳಗಾಗಬೇಡಿ, ಯಶಸ್ವಿ ಚುನಾವಣೆ ನಡೆಸಿ :ಜಿಲ್ಲಾಧಿಕಾರಿ

Source: S O News | By I.G. Bhatkali | Published on 2nd May 2024, 10:42 PM | Coastal News | Don't Miss |

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ, ಜಿಲ್ಲೆಯಲ್ಲಿ ಮೇ 7 ರಂದು ನಡೆಯುವ ಮತದಾನದ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು, ತರಬೇತಿಯ ಅವಧಿಯಲ್ಲಿ ತಮ್ಮಲ್ಲಿರುವ ಎಲ್ಲಾ ಗೊಂದಲಗಳನ್ನು ಬಗೆಹರಿಸಿಕೊಂಡು, ಮತದಾನದ ಯಾವುದೇ ಗೊಂದಲಗಳಿಗೆ ಒಳಗಾಗದೇ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಯುವಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಅವರು ಗುರುವಾರ, ಕಾರವಾರ ಸೈಂಟ್ ಮೈಕಲ್ ಶಾಲೆಯಲ್ಲಿ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳಿಗೆ ನಡೆದ 2 ನೇ ಹಂತದ ತರಬೇತಿ ವೀಕ್ಷಿಸಿ ಮಾತನಾಡಿದರು.

ತರಬೇತಿ ಸಮಯದಲ್ಲಿ ಇ.ವಿ.ಎಂ ಗಳ ಬಳಕೆ, ವಿವಿ ಪ್ಯಾಟ್ ಬಳಕೆ ಸೇರಿದಂತೆ, ಮತದಾನ ದಿನದಂದು ಚುನಾವಣಾ ಆಯೋಗದ ನಿರ್ದೇಶನಗಳ ಅನ್ವಯ ನಡೆಯುವ ಎಲ್ಲಾ ಪ್ರಕ್ರಿಯೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸವಿವರವಾಗಿ ತಿಳಿದುಕೊಳ್ಳುವಂತೆ ತಿಳಿಸಿದರು.

ಚುನಾವಣಾ ಪ್ರಕ್ರಿಯೆಯ ಯಶಸ್ಸಿಗೆ ಮತಗಟ್ಟೆ ಮಟ್ಟದಲ್ಲಿ ನಡೆಯುವ ಕಾರ್ಯವು ಅತ್ಯಂತ ಪ್ರಮುಖವಾಗಿರುವುದರಿಂದ, ಎಲ್ಲಾ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮತ್ತು ಪರಸ್ಪರ ಸಮನ್ವಯದಿಂದ , ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ತಮ್ಮ ಕರ್ತವ್ಯ ಕಾರ್ಯನಿರ್ವಹಿಸುವಂತೆ ತಿಳಿಸಿದರು.

ಮತಗಟ್ಟೆಗಳಲ್ಲಿ ಮತದಾನ ಮಾಡುವ ಸ್ಥಳವನ್ನು ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಸೂಕ್ತ ರೀತಿಯಲ್ಲಿ ಸಿದ್ದಪಡಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮತಗಟ್ಟೆಗಳಲ್ಲಿ ಮತ್ತು ಮತದಾನದ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಮತದಾನ ಪ್ರಮಾಣದ ಹೆಚ್ಚಳಕ್ಕೆ ಜಿಲ್ಲಾಡಳಿತದಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಿಂದಾಗಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ಸಾದ್ಯತೆಯಿದೆ. ಮತ ಚಲಾಯಿಸಲು ಆಗಮಿಸುವ ಮತದಾರರು ತಮ್ಮ ಎಪಿಕ್ ಕಾರ್ಡ್ ಅಥವಾ ಚುನಾವಣಾ ಆಯೋಗ ಸೂಚಿಸಿರುವಂತೆ ಬಳಸಬಹುದಾದ ಪರ್ಯಾಯ ಗುರುತಿನ ದಾಖಲೆಗಳ ಕುರಿತಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಸಮಗ್ರ ಮಾಹಿತಿ ಹೊಂದಿರಬೇಕು. ಮತದಾನದ ಅವಧಿ ಮುಕ್ತಾಯದ ನಂತರವೂ ಸರದಿ ಸಾಲಿನಲ್ಲಿ ಇರುವವರಿಗೆ ಟೋಕನ್ ಗಳನ್ನು ನೀಡುವ ಮೂಲಕ ಅವರಿಗೆ ಮತದಾನ ಮಾಡಲು ಅವಕಾಶ ನೀಡಬೇಕು ಎಂದರು.

ತರಬೇತಿ ಕಾರ್ಯಕ್ರಮದಲ್ಲಿ ಕಾರವಾರ ತಹಸೀಲ್ದಾರ್ ಪುರಂದರ, ವಿವಿಧ ಸೆಕ್ಟರ್ ಅಧಿಕಾರಿಗಳು ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಿಬ್ಬಂದಿಗಳಿಗಾಗಿ ಅಂಚೆ ಮತದಾನದ ಸೌಲಭ್ಯ ಕೇಂದ್ರ ತೆರೆಯಲಾಗಿದ್ದಿತು.

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...