ಕಾರವಾರ: ಹಣ, ಉಡುಗೊರೆ ಹಂಚಿಕೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ : ವಿಶೇಷ ವೆಚ್ಚ ವೀಕ್ಷಕ ಬಿ.ಮುರಳಿ ಕುಮಾರ್

Source: S O News | By I.G. Bhatkali | Published on 2nd May 2024, 11:08 PM | Coastal News |

ಕಾರವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಮೇ 7 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ, ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ತೀವ್ರ ನಿಗಾ ವಹಿಸಬೇಕು, ಈ ಕುರಿತಂತೆ ದೂರುಗಳು ಬಂದ ತಕ್ಷಣವೇ , ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲೆಗೆ ವಿಶೇಷ ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುವ ಬಿ.ಮುರಳಿ ಕುಮಾರ್ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯಲು ಅಡ್ಡಿ ಪಡಿಸಲು, ಮತದಾರರಿಗೆ ಹಣ, ಉಡುಗೊರೆಗಳನ್ನು ನೀಡುವ ಮೂಲಕ ಅವರಿಗೆ ಆಮಿಷ ನೀಡುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಕುರಿತಂತೆ ಹೆಚ್ಚಿನ ನಿಗಾ ವಹಿಸಿಬೇಕು. ಅಕ್ರಮ ತಡೆಗೆ ನಿಯೋಜಿಸಿರುವ ಫ್ಲೈಯಿಂಗ್ ಸ್ಕೋಡನ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಚರಿಸಬೇಕು. ಫ್ಲೈಯಿಂಗ್ ಸ್ಕೋಡ್ ವಾಹನಗಳ ಚಲನವಲನಗಳ ಕುರಿತಂತೆ ಜಿ.ಪಿ.ಎಸ್ ಮೂಲಕ ಪರಿಶೀಲಿಸುತ್ತಿರಬೇಕು ಎಂದರು.

ಜಿಲ್ಲೆಯಲ್ಲಿನ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳಲ್ಲಿನ ದೈನಂದಿನ ವ್ಯವಹಾರಗಳ ಮೇಲೆ ಪ್ರತಿದಿನ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿರಬೇಕು, ಸಂಶಯಾಸ್ಪದ ಹಣ ವರ್ಗಾವಣೆ ಮತ್ತಿತರರ ನಗದು ವಹಿವಾಟುಗಳು ಕಂಡುಬAದಲ್ಲಿ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಸಂಬಂದಿತ ಇಲಾಖೆಗಳಿಗೆ ತಕ್ಷಣ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್ ಗಳಲ್ಲಿ ತಪಾಸಣಾ ಕಾರ್ಯವನ್ನು ಇನ್ನಷ್ಟು ಬಿಗಿಗೊಳಿಸಬೇಕು. ಮತದಾನ ಹತ್ತಿರವಾದಂತೆ ಜಿಲ್ಲೆಯ ಗಡಿಬಾಗದಿಂದ ಚುನಾವಣಾ ಅಕ್ರಮ ಚಟುವಟಿಕೆಗಳಿಗೆ ಪೂರಕವಾಗುವಂತಹ ವಸ್ತುಗಳ ಪೂರೈಕೆ ಆಗುವ ಸಾಧ್ಯತೆ ಇದ್ದು ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದು.ಅಲ್ಲದೇ ಇದೇ ಅವಧಿಯಲ್ಲಿ ಲೋಕಸಭಾ ಕ್ಷೇತ್ರದ ಒಳಗೆ ಸಹ ಚುನಾವಣಾ ಅಕ್ರಮ ಚಟುವಟಿಕೆಗಳು ನಡೆಯದಂತೆ ತೀವ್ರ ಎಚ್ಚರವಹಿಸಬೇಕು ಎಂದರು.

ಚುನಾವಣಾ ಅಕ್ರಮಗಳ ಕುರಿತು ಸೀ ವಿಜಿಲ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ನಿಗಧಿತ ಅವಧಿಯೊಳಗೆ ಇತ್ಯರ್ಥಪಡಿಸಬೇಕು. ದೂರು ನೀಡುವ ಸಾರ್ವಜನಿಕರನ್ನು ಸಂಪರ್ಕಿಸಿ ದೂರಿನ ಕುರಿತಂತೆ ಸಮಗ್ರ ಮಾಹಿತಿ ಪಡೆಯುವದರ ಜೊತೆಗೆ ದೂರು ಪರಿಶೀಲನೆಗೆ ತಾವು ಆಗಮಿಸುತ್ತಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿ. ಇದರಿಂದ ಸಾರ್ವಜನಿಕರಿಗೆ ಜಿಲ್ಲಾಡಳಿತ ಅವರ ದೂರಿಗೆ ತಕ್ಷಣದಲ್ಲಿ ಸ್ಪಂದಿಸುತ್ತಿದೆ ಎಂಬ ಭಾವನೆ ಮೂಡಿ, ಅಕ್ರಮಗಳ ಕುರಿತಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ನೀಡಲಿದ್ದಾರೆ ಎಂದರು.
 ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಿ, ಮತಗಟ್ಟೆಗೆ ಆಗಮಿಸುವ ಮತದಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಫ್ಯಾನ್ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಕೊಠಡಿ, ವಿಕಲಚೇತನರಿಗೆ ವೀಲ್ ಚೇರ್ ಮತ್ತು ರ‍್ಯಾಂಪ್ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು. 

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ, ನ್ಯಾಯಸಮ್ಮತ ಮತ್ತು ಸುಗಮ ಹಾಗೂ ಶಾಂತಿಯುತ ಚುನಾವಣೆಗಾಗಿ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಹಾಗೂ ಚುನಾವಣಾ ಅಕ್ರಮ ತಡೆ ಕುರಿತಂತೆ ಕೈಗೊಂಡಿರುವ ಕ್ರಮಗಳು ಮತ್ತು ವಶಪಡಿಸಿಕೊಂಡಿರುವ ವಸ್ತುಗಳು ಹಾಗೂ ದಾಖಲಿಸಿರುವ ಪ್ರಕರಣಗಳ ಕುರಿತು ವಿವರಿಸಿದರು.

ಸಭೆಯಲ್ಲಿ ಜಿಲ್ಲೆಯ ಚುನಾವಣಾ ವೀಕ್ಷಕ ರಾಜೀವ ರತನ್, ವೆಚ್ಚ ವೀಕ್ಷಕ ಪ್ರಶಾಂತ್ ಸಿಂಗ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್, ಸಹಾಯಕ ಆಯುಕ್ತರಾದ ಕನಿಷ್ಕ, ಕಲ್ಯಾಣಿ ಕಾಂಬ್ಳೆ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ವಿವಿಧ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...