ಉಡುಪಿ: ಒಂದೇ ಕುಟುಂಬದ ನಾಲ್ವರ ಕಗ್ಗೋಲೆ ಪ್ರಕರಣ; ಆರೋಪಿ ಮೇಲೆ ಆಕ್ರೋಶಿತ ಗುಂಪಿನಿಂದ ದಾಳಿಗೆ ಯತ್ನ; ಮಹಜರು ಪ್ರಕ್ರಿಯೆ ವೇಳೆ ಘಟನೆ: ಪೊಲೀಸರಿಂದ ಲಾಠಿಚಾರ್ಜ್

Source: Vb | By I.G. Bhatkali | Published on 17th November 2023, 9:52 AM | Coastal News | State News |

ಉಡುಪಿ: ತಾಯಿ ಮತ್ತು ಮೂವರು ಮಕ್ಕಳ ಕಗ್ಗೋಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಗುರುವಾರ ಸಂಜೆ ನೇಜಾರು ತೃಪ್ತಿ ಲೇಔಟ್‌ನಲ್ಲಿರುವ ಮನೆಗೆ ಮಹಜರು ನಡೆಸಲು ಕರೆ ತಂದಿದ್ದ ವೇಳೆ ಆಕ್ರೋಶಿತ ಗುಂಪು ದಾಳಿಗೆ ಮುಂದಾದ ಘಟನೆ ನಡೆಯಿತು. ಈ ವೇಳೆ ಪೊಲೀಸರು ಲಘು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.

ಆರೋಪಿ ಪ್ರವೀಣ್‌ನನ್ನು ಮಹಜರು ಪ್ರಕ್ರಿಯೆಗಾಗಿ ಪೊಲೀಸರು ಬಿಗಿ ಪೊಲೀಸ್ ಭದ್ರತೆಯಲ್ಲಿ ಇಂದು ಸಂಜೆ 4:40ರ ಸುಮಾರಿಗೆ ಕೃತ್ಯ ಎಸಗಿದ ಮನೆಗೆ ಕರೆತಂದರು. ಮನೆಯೊಳಗೆ ಕರೆದೊಯ್ದು 20 ನಿಮಿಷಗಳ ಕಾಲ ಮಹಜರು ಪ್ರಕ್ರಿಯೆ ನಡೆಸಿದರು.

ಈ ವೇಳೆ ಉಡುಪಿ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ ಡಿವೈಎಸ್ಪಿ ಕೆ.ಪಿ.ದಿನಕರ್ ಹಾಗೂ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ವೃತ್ತ ನಿರೀಕ್ಷಕ ಮಂಜುನಾಥ್, ಮಲ್ಪೆ ಠಾಣಾಧಿಕಾರಿ ಗುರುನಾಥ್ ಹಾದಿಮನಿ ಮತ್ತಿತರರು ಹಾಜರಿದ್ದರು.

ನೂರಾರು ಜನ ಜಮಾವಣೆ:: ಆರೋಪಿಯನ್ನು ಮನೆಗೆ ಕರೆತರುತ್ತಿರುವ ಮಾಹಿತಿ ತಿಳಿದು, ಪರಿಸರದಲ್ಲಿ ಬೆಳಗ್ಗೆಯಿಂದ ಜನ ಸೇರಿದ್ದರು. ಮಧ್ಯಾಹ್ನದ ಬಳಿಕ ಬಹಳಷ್ಟು ಮಂದಿ ಕಾದು ವಾಪಸ್ ಹೋಗಿದ್ದರು. ಬಳಿಕ ಸಂಜೆ ಆರೋಪಿಯನ್ನು ಕರೆ ತರುವ ವಿಚಾರ ತಿಳಿದು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮನೆ ಎದುರು ನೆರೆದಿದ್ದ ಗುಂಪನ್ನು ಪೊಲೀಸರು ಹಿಂದಕ್ಕೆ ಕಳುಹಿಸಿ ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಗುಂಪು, ಆರೋಪಿಯನ್ನು ತಮ್ಮ ಕೈಗೆ ಒಪ್ಪಿಸಿ ನಾವು ಆತನಿಗೆ ಶಿಕ್ಷೆ ಕೊಡುತ್ತೇವೆ. ಇಡೀ ಕುಟುಂಬವನ್ನು ಸರ್ವನಾಶ ಮಾಡಿದನಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರವೀಣ್ ಚೌಗುಲೆಯನ್ನು ಗಲ್ಲಿಗೇರಿಸಿ ಎಂದು ಘೋಷಣೆ ಕೂಗಿದರು. ಪೊಲೀಸರ ತನಿಖೆಗೆ ನಾವು ಯಾವುದೇ ತೊಂದರೆ ಮಾಡುವುದಿಲ್ಲ. ನಮಗೆ ನಾಲ್ಕು ಕೊಲೆ ಮಾಡಿದವನ ಮೇಲೆ ಆಕ್ರೋಶ ಇದೆ. ಅದನ್ನು ನಾವು ವ್ಯಕ್ತಪಡಿಸುತ್ತಿದ್ದೇವೆ ಎಂದು ಗುಂಪು ಹೇಳಿತು.

ಡಿವೈಎಸ್ಪಿಕೆ.ಪಿ.ದಿನಕರ್, ಮಲ್ಪೆಎಸೈ ಗುರುನಾಥ್, ಕಾಂಗ್ರೆಸ್ ಮುಖಂಡ ಎಂ.ಎ.ಗಫೂ‌ರ್ ಆಕ್ರೋಶಿ ತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಇದರಿಂದ ತಣ್ಣಗಾಗದ ಗುಂಪು, ಘೋಷಣೆ ಕೂಗುವುದನ್ನು ಮುಂದುವರಿಸಿತು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ರಸ್ತೆ ತಡೆದು ಪ್ರತಿಭಟನೆ: ಪೊಲೀಸರ ನಡೆಸಿದ ಲಾಠಿಚಾರ್ಜ್ ಖಂಡಿಸಿ ಗುಂಪು ನೇಜಾರು- ಕೆಮ್ಮಣ್ಣು ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್ಪಿ ಆಗಮಿಸುವಂತೆ ಪಟ್ಟು ಹಿಡಿದರು.

ಸುಮಾರು ಒಂದು ಗಂಟೆಗಳ ಕಾಲ ರಸ್ತೆಯಲ್ಲಿ ಧರಣಿ ನಡೆಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು. ಮಹಿಳೆಯರು ಕೂಡ ಧರಣಿಯಲ್ಲಿ ಪಾಲ್ಗೊಂಡಿದ್ದರು. ಇದರಿಂದಕೆಲ ಕಾಲ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯಗೊಂಡಿತು.

ಬಳಿಕ ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಗುಂಪಿನ ಮಧ್ಯೆ ಸಿಲುಕಿದ ಶಾಲಾ ವಾಹನವನ್ನು ಸುಗಮವಾಗಿ ಹೋಗಲು ಪ್ರತಿಭಟನಾಕಾರರು ಅನುವು ಮಾಡಿ ಕೊಟ್ಟರು.

ಮುಖಂಡರಿಂದ ಮನವರಿಕೆ: ಮಲ್ಪೆ ಎಸ್ಸೆ ಗುರುನಾಥ ಹಾದಿಮನಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು. ಆರೋಪಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ಎಲ್ಲ ರೀತಿಯ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಅದಕ್ಕೆ ಎಲ್ಲರೂ ಸಹಕಾರ ನೀಡ ಬೇಕು ಎಂದು ಮನವಿ ಮಾಡಿದರು.

ಅದೇ ರೀತಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮತ್ತು ಪದಾಧಿಕಾರಿಗಳು ಪ್ರತಿಭಟನಕಾರರನ್ನು ಸಮಾಧಾನ ಪಡಿಸಿದರು. ಬಳಿಕ ಪ್ರತಿಭಟನೆ ಕೈಬಿಟ್ಟು ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟು ಎಲ್ಲರೂ ಅಲ್ಲಿಂದ ತೆರಳಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...