ಬೆಳ್ತಂಗಡಿ; ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ; ಮೂವರ ಮೃತ್ಯು

Source: Vb | By I.G. Bhatkali | Published on 29th January 2024, 7:54 AM | Coastal News |

ಬೆಳ್ತಂಗಡಿ: ಸುಡುಮದ್ದು ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ ಮೂವರು ಮೃತಪಟ್ಟು, ಹಲವರು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಪಂ ವ್ಯಾಪ್ತಿಯ ಕಡ್ಯಾರು ಎಂಬಲ್ಲಿ ರವಿವಾರ ಅಪರಾಹ್ನ 3 ಗಂಟೆ ಸುಮಾರಿಗೆ ನಡೆದಿರುವುದು ವರದಿಯಾಗಿದೆ.

ಮೃತರನ್ನು ಹಾಸನ ಅಂಕನಾಯಕನಹಳ್ಳಿ ನಿವಾಸಿ ಚೇತನ್, ಕೇರಳದ ಸ್ವಾಮಿ, ತ್ರಿಶೂರ್ ನಿವಾಸಿ ವರ್ಗೀಸ್ ಎಂದು ಗುರುತಿಸಲಾಗಿದೆ. ಉಳಿದಂತೆ ಇಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್ ಹಾಸನ, ಕಿರಣ್ ಹಾಸನ, ಕುಮಾರ್ ಅರಸೀಕೆರೆ, ಕಲ್ಲೇಶ್ ಚಿಕ್ಕಮಾರಹಳ್ಳಿ, ಕೇರಳ ನಿವಾಸಿಗಳಾದ ಪ್ರೇಮ್, ಕೇಶವ ಎಂಬವರ ಪೈಕಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಲ್ಕು ಕಿ.ಮೀ. ದೂರ ಕೇಳಿಸಿದ ಸ್ಫೋಟದ ಸದ್ದು
ಸುಡುಮದ್ದು ತಯಾರಿಕಾ ಘಟಕದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಘಟಕದ ಶೆಡ್ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಸ್ಫೋಟದ ಶಬ್ದ ಸುಮಾರು 4 ಕಿ.ಮೀ. ವ್ಯಾಪ್ತಿಯಷ್ಟು ದೂರಕ್ಕೆ ಕೇಳಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಇಬ್ಬರ ಮೃತದೇಹಗಳು ಸಂಪೂರ್ಣವಾಗಿ ಛಿದ್ರಗೊಂಡಿದ್ದು, ಘಟಕದ ಸುತ್ತ ಇರುವ ತೋಟದಲ್ಲಿ ಅಲ್ಲಲ್ಲಿ ಮಾಂಸದ ಮುದ್ದೆಗಳು ಬಿದ್ದಿದ್ದ ದೃಶ್ಯ ಭೀಕರವಾಗಿತ್ತು.

ಘಟನೆ ವಿವರ: ಕಡ್ಯಾರುವಿನಲ್ಲಿ ಕಾರ್ಯಾಚರಿಸುತ್ತಿದ್ದ ಬಶೀರ್ ಎಂಬವರ ಮಾಲಕತ್ವದ 'ಸಾಲಿಡ್ ಫಯರ್ ವರ್ಕ್' ಎಂಬ ಪಟಾಕಿ ತಯಾರಿಕಾ ಘಟಕದಲ್ಲಿ ಈ ಸ್ಫೋಟ ಸಂಭವಿಸಿದೆ.

ಸ್ಫೋಟ ನಡೆದ ವೇಳೆ ಘಟಕದಲ್ಲಿ ಒಟ್ಟು 9 ಮಂದಿ ಕೂಲಿ ಕಾರ್ಮಿಕರು ಸುಡುಮದ್ದು ತಯಾರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಸ್ಫೋಟ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರಾವಸ್ಥೆಯಲ್ಲಿದ್ದ ಓರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮೃತಪಟ್ಟ ಮೂವರು ಘಟನೆ ಸಂಭವಿಸಿದ ವೇಳೆ ಪಟಾಕಿ ತಯಾರಿಕೆಯಲ್ಲಿ ನಿರತರಾಗಿದ್ದರು. ಮೃತರ ಪೈಕಿ ಓರ್ವನ ಮೃತದೇಹ ದೊರೆತಿದ್ದು, ಇನ್ನಿಬ್ಬರ ದೇಹ ಸ್ಫೋಟದ ತೀವ್ರತೆಗೆ ಸುತ್ತ ನೂರು ಮೀಟರ್ ವ್ಯಾಪ್ತಿಯಲ್ಲಿ ಛಿದ್ರವಾಗಿ ಬಿದ್ದಿದೆ.

ಸ್ಫೋಟದ ತೀವ್ರತೆಗೆ ಘಟಕದ ಸುತ್ತ ಬೆಂಕಿ ಆವರಿಸಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದೆ. ಸ್ಫೋಟದ ವೇಳೆ ಪಟಾಕಿ ಹಾಗೂ ಕದಿನ ತಯಾರಿಕೆಗೆ ಶೇಖರಿಸಿಟ್ಟಿರುವ ಕಚ್ಚಾ ಸಾಮಗ್ರಿಗಳ ಕೊಠಡಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

ಸೈಯದ್ ಬಶೀರ್ ಎಂಬವರಿಗೆ ಸೇರಿದ ಸಾಲಿಡ್ ಫಯರ್ ವರ್ಕ್ಸ್ ಪಟಾಕಿ ಕಂಪೆನಿಯಲ್ಲಿ ರವಿವಾರ ಸಂಜೆ 5:30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಪೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು.2011-12ರಲ್ಲಿ ಪ್ರಾರಂಭಗೊಂಡಿರುವ ಈ ಪಟಾಕಿ ಕಂಪೆನಿ ಪರವಾನಿಗೆಯನ್ನು ಹೊಂದಿದೆ.
-ಸಿ.ಬಿ.ರಿಷ್ಯಂತ್, ಪೊಲೀಸ್ ವರಿಷ್ಠಾಧಿಕಾರಿ, ದ.ಕ. ಜಿಲ್ಲೆ

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಳ್ತಂಗಡಿ ಹಾಗೂ ವೇಣೂರು ಪೊಲೀಸರು ಸ್ಥಳದಲ್ಲೇ ಇದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಪಟಾಕಿ ತಯಾರಿಕಾ ಘಟಕದ ಪರವಾನಿಗೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಳೆದ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಘಟಕ ವೇಣೂರು ಸೇರಿದಂತೆ ತಾಲೂಕಿನ ಹಾಗೂ ಹೊರ ತಾಲೂಕುಗಳ ಜಾತ್ರೆಗಳಿಗೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ 'ಸಾಲಿಡ್ ಫಯ‌ರ್ ವರ್ಕ್‌'ನಿಂದಲೇ ಪಟಾಕಿ, ಕದಿನಗಳನ್ನು ಪೊರೈಸಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಕಂಪೆನಿ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಘಟಕದ ಮಾಲಕ ಬಶೀರ್ 'ಗರ್ನಲ್ ಸಾಹೇಬ್' ಎಂದೇ ಹೆಸರಾಗಿದ್ದರು. ಪರವಾನಿಗೆ ಹೊಂದಿರುವ ಪಟಾಕಿ ತಯಾರಿಕಾ ಘಟಕ ಇದಾಗಿದ್ದು, ಈ ಮೊದಲು ಇಂತಹ ಯಾವುದೇ ಅನಾಹುತಗಳು ನಡೆದಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...