ದೇಶದಲ್ಲಿ ಕಾಂಗ್ರೆಸ್ ಮಾಡಿದ ಆಸ್ತಿಯನ್ನು ಬಿಜೆಪಿ ಮಾರಾಟಕ್ಕಿಟ್ಟಿದೆ: ಮಲ್ಲಿಕಾರ್ಜುನ ಖರ್ಗೆ

Source: vb news | By MV Bhatkal | Published on 11th September 2021, 7:25 PM | Coastal News | Don't Miss |

ಮಂಗಳೂರು: ದೇಶದಲ್ಲಿ ಸ್ವಾತಂತ್ರ್ಯ ನಂತರ ಜನರ ಹಿತದೃಷ್ಟಿಯಿಂದ ಮಾಡಿದ ಸಾರ್ವಜನಿಕ ಆಸ್ತಿಯನ್ನು ಕಳೆದ ಏಳು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾರಾಟಕ್ಕಿಟ್ಟಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 70 ವರ್ಷಗಳಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವವವರೇ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಾಡಿದ ರೈಲ್ವೆ, ಬಂದರು, ರಸ್ತೆಗಳು, ಗ್ಯಾಸ್‌ಪೈಪ್‌ಲೈನ್‌ಗಳು, ವಿದ್ಯುತ್ ಪ್ರಸರಣ ಜಾಲಗಳು, ಟೆಲಿಕಾಂ ಟವರ್‌ಗಳು, ಸ್ಟೇಡಿಯಂ ಸೇರಿದಂತೆ ಸಾರ್ವಜನಿಕ ವಲಯದ ಸ್ವತ್ತುಗಳನ್ನು ನಿರ್ವಹಿಸಲು, ಸಮರ್ಥವಾಗಿ ಬಳಸಿಕೊಳ್ಳಲು ಅಸಮರ್ಥವಾಗಿರುವುದನ್ನು ಪ್ರಸಕ್ತ ಕೇಂದ್ರ ಸರಕಾರ ನಿರೂಪಿಸಿದೆ. ಇಬ್ಬರು ಮಾಡುತ್ತಿರುವ ಮಾರಾಟವನ್ನು ಇಬ್ಬರು ಖರೀದಿಸುತ್ತಿರುವಂತಹ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಲಾಗಿದೆ. ಆದರೂ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿರುವುದು ದುರ್ದೈವ. ಕಾಂಗ್ರೆಸ್ ಏನೂ ಮಾಡಿಲ್ಲವೆಂದರೆ ಪ್ರಸಕ್ತ ಕೇಂದ್ರ ಸರಕಾರದ ಅಂಕಿ ಅಂಶದ ಪ್ರಕಾರವೇ 27,000 ಕಿ.ಮೀ. ರಸ್ತೆಗಳು, 400 ರೈಲ್ವೇ ಸ್ಟೇಶನ್‌ಗಳು ಹೇಗೆ ಬಂದವು ಎಂದು ಅವರು ಪ್ರಶ್ನಿಸಿದರು.

ನಾವು ಮಾಡಿದ ರಸ್ತೆಯಲ್ಲೇ ಓಡಾಡಿ, ನಾವು ಮಾಡಿದ ಶಾಲಾ ಕಾಲೇಜುಗಳಲ್ಲೇ ಕಲಿತು, ನಾವು ಮಾಡಿದ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆದು ಇದೀಗ ಅವೆಲ್ಲವನ್ನೂ ಮಾರಾಟ ಮಾಡಲು ಮುಂದಾಗಿರುವ ಸರಕಾರದ ಬಗ್ಗೆ ಅದರ ಫಲಾನುಭವಿಗಳೂ ಮೌನವಾಗಿರುವುದು ಬೇಸರದ ಸಂಗತಿ. ದ.ಕ., ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳು ಸ್ವಾತಂತ್ರ್ಯ ಪೂರ್ವದಲ್ಲಿ ಹೇಗಿತ್ತು, ನಂತರ ಹೇಗಾಗಿದೆ ಎಂಬ ಬಗ್ಗೆ ಜನರಿಗೆ ಅರಿವಿದೆ. ಸ್ವಾತಂತ್ರ್ಯ ನಂತರ ಜವಾಹರ ಲಾಲ್ ನೆಹರೂರವರು ಮಿಶ್ರಿತ ಆರ್ಥಿಕತೆಯ ಕಲ್ಪನೆಯ ಮೂಲಕ 1951ರಲ್ಲಿ ಐದು ಸಂಖ್ಯೆಯಲ್ಲಿದ್ದ ಸಾರ್ವಜನಿಕ ವಲಯದ ಉದ್ದಿಮೆಗಳು 1969ರ ಅವಧಿಗೆ 84ಕ್ಕೇರಿತ್ತು. ಬಳಿಕ ಕಾಂಗ್ರೆಸ್ ಅವಧಿಯಲ್ಲಿ ಇದು 366ಕ್ಕೇರಿತ್ತು. ಈ ಉದ್ದಿಮೆಗಳಲ್ಲಿ 9.2 ಲಕ್ಷ ಖಾಯಂ ಉದ್ಯೋಗಿಗಳು ಹಾಗೂ 4.98 ಲಕ್ಷ ಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನು ಕೇಂದ್ರ ಸಚಿವನಾಗಿದ್ದ ಅವಧಿಯಲ್ಲಿ ಅಂದಾಜು 14 ಲಕ್ಷ ಮಂದಿ ರೈಲ್ವೇಯಲ್ಲಿ ಉದ್ಯೋಗದಲ್ಲಿದ್ದರು. ಆದರೆ 2 ಕೋಟಿ ಉದ್ಯೋಗದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಏಳು ವರ್ಷಗಳ ಅವಧಿಯಲ್ಲಿ ಈ ಸಂಖ್ಯೆ 12.53 ಲಕ್ಷಕ್ಕೆ ಇಳಿಕೆಯಾಗಿದೆ. ಟೆಲಿಕಾಂನಲ್ಲಿ 4 ಲಕ್ಷದಷ್ಟಿದ್ದ ಉದ್ಯೋಗಸ್ಥರ ಸಂಖ್ಯೆ 3.66 ಲಕ್ಷಕ್ಕೆ ಇಳಿಕೆಯಾಗಿದೆ. ಅದಲ್ಲದೆ ಸಂವಿಧಾನದ ರಕ್ಷಣೆಯ ಜತೆಗೆ ಪ್ರಜಾಪ್ರಭುತ್ವವನ್ನು ಉಳಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ ಎಂದರು.

ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್‌ರವರ ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆಯ ಮೂಲಕ ಸರಕಾರದ ಸ್ವತ್ತುಗಳಾದ ರಸ್ತೆ, ರೈಲ್ವೇ, ವಿದ್ಯುತ್ ಪ್ರಸರಣ ಜಾಲ, ವಿದ್ಯುತ್ ಉತ್ಪಾದನಾ ಘಟಕಗಳು ಮೊದಲಾದ ಸಾರ್ವಜನಿಕ ವಲಯದ ಸ್ವತ್ತುಗಳನ್ನು 4 ವರ್ಷದ ಅವಧಿಗೆ 6 ಲಕ್ಷ ಕೋಟಿ ರೂ.ಗಳಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ ಯಾವುದೇ ಸರಕಾರ ಮಾಡದ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾಡಲು ಹೊರಟಿದೆ. ಸರಕಾರ ನಿರೀಕ್ಷಿಸುತ್ತಿರುವ 6 ಲಕ್ಷ ಕೋಟಿ ರೂ.ಗಳ ಆದಾಯದಲ್ಲಿ 26,700 ಕಿ.ಮೀ. ಹೆದ್ದಾರಿ ನಿರ್ವಹಣೆಯಿಂದ ಬರಲಿದೆ. ನೀತಿ ಆಯೋಗದ ನೀಲಿ ನಕ್ಷೆಯ ಪ್ರಕಾರ ಈ ನಿರ್ವಹಣಾ ಒಪ್ಪಂದವು ಶುಲ್ಕ ವಿಧಿಸುವುದು, ನಿರ್ವಹಿಸುವುದು ಹಾಗೂ ಹಿಂದಿರುಗಿಸುವಿಕೆಯ ಆದಾರದಲ್ಲಿ ನಡೆಯಲಿದ್ದು, ಗುತ್ತಿಗೆ ಪಡೆಯುವ ಕಂಪೆನಿಗಳು ಲಾಭಕ್ಕಾಗಿ ಅದರ ಹೊರೆಯನ್ನು ಸಾರ್ವಜನಿಕರ ಮೇಲೆ ಹೇರಲಿದೆ ಎಂದು ಅವರು ಹೇಳಿದರು.

ಕಳೆದ ಏಳು ವರ್ಷಗಳಲ್ಲಿ ಪ್ರಧಾನಿ ಮೋದಿಯವರು 3.5 ಲಕ್ಷ ಕೋಟಿ ರೂ.ಗಳಿಗೆ ಅನೇಕ ಪಿಎಸ್‌ಯುಗಳನ್ನು ಮಾರಾಟ ಮಾಡಿದ್ದಾರೆ. ಬಿಜೆಪಿಯೊಂದಿಗೆ ನಿಕಟ ಸಂಪಂಧ ಹೊಂದಿರುವ ಕೆಲವು ಆಯ್ದ ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಸಾರ್ವಜನಿಕ ಆಸ್ತಿಯನ್ನು ಇಂದು ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಇತ್ತೀಚೆಗೆ ನಾಲ್ಕು ವಿಮಾ ಕಂಪನಿಗಳನ್ನು ಹೂಡಿಕೆ ಹಿಂದೆಗೆದುಕೊಳ್ಳುವಿಕೆ ಯೋಜನೆಯಡಿ ತರುವ ತಿದ್ದುಪಡಿ ಮಸೂದಿಗೆ ಉಭಯ ಸದನಗಳಲ್ಲಿ ಅನುಮೋದನೆ ಪಡೆಯಲಾಗಿದೆ. ಈ ವಿಮಾ ಕಂಪೆನಿಗಳಲ್ಲಿ 1 ಲಕ್ಷ ಖಾಯಂ ಉದ್ಯೋಗಿಗಳು ಹಾಗೂ 12 ಲಕ್ಷ ಪಿಗ್ಮಿ ಸಂಗ್ರಹ ಮಾಡುವ ನೌಕರರಿದ್ದಾರೆ. ಸಾಮಾಜಿಕ ಸಬಲೀಕರಣದ ಉದ್ದೇಶದಿಂದ ಈ ಸಾರ್ವಜನಿಕ ಉದ್ದಿಮೆಗಳಲ್ಲಿ ಮೀಸಲಾತಿ ನಿಯಮ ಜಾರಿಯಲ್ಲಿದೆ. ಕೊರೋನ ಸಂಕಷ್ಟದ ಸಮಯದಲ್ಲಿ ಅಗತ್ಯ ವಸ್ತುಗಳು ಹಾಗೂ ಔಷಧಿಗಳನ್ನು ಸಾಗಿಸಲು ರೈಲ್ವೇಯು ಸಹಕಾರಿಯಾಗಿ ಕೋಟ್ಯಂತರ ಜೀವಗಳನ್ನು ರಕ್ಷಿಸಿದೆ. ಆದರೆ ಈ ಕಂಪೆನಿಗಳು ಖಾಸಗಿಯವರಿಗೆ ಮಾರಾಟವಾದರೆ ಈ ಉದ್ಯೋಗಿಗಳು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬದವರ ಗತಿಯೇನು? ಮಾತ್ರವಲ್ಲದೆ ಯುದ್ಧ, ಸಾಂಕ್ರಾಮಿಕದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಸಂಸ್ಥೆಗಳನ್ನು ಮಾರಾಟ ಮಾಡಿದವರ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಸರಕಾರಕ್ಕೆ ಎದುರಾಗಲಿದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ರಮಾನಾಥ ರೈ, ಕೆ.ಅಭಯಚಂದ್ರ ಜೈನ್, ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಯು.ಟಿ.ಖಾದರ್, ಮೊಯ್ದಿನ್ ಬಾವ, ಹರೀಶ್ ಕುಮಾರ್, ಯು.ಬಿ.ವೆಂಕಟೇಶ್, ಪಿ.ವಿ. ಮೋಹನ್, ಮಂಜುನಾಥ ಭಂಡಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...