ಚುನಾವಣಾ ಬಾಂಡ್ ರದ್ದುಗೊಳಿಸಿದ ಸುಪ್ರೀಂ; ಅಸಾಂವಿಧಾನಿಕ; ಮಾಹಿತಿ ಹಕ್ಕು, ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದ ನ್ಯಾಯಾಲಯ

Source: Vb | By I.G. Bhatkali | Published on 17th February 2024, 4:10 PM | National News |

ಹೊಸದಿಲ್ಲಿ: ಚುನಾವಣಾ ಬಾಂಡ್ ಅಸಾಂವಿಧಾನಿಕವಾಗಿದೆ ಎಂದು ಗುರುವಾರ ಬಣ್ಣಿಸಿರುವ ಸುಪ್ರೀಂ ಕೋರ್ಟ್, ಯೋಜನೆಯನ್ನು ರದ್ದುಗೊಳಿಸಿದೆ. ಈ ಯೋಜನೆಯು ಮಾಹಿತಿ ಹಕ್ಕು ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸರ್ವೋಚ್ಚ ನ್ಯಾಯಾಲಯವು, ಇದು ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವೆ ಒಳ ಒಪ್ಪಂದಕ್ಕೆ ಅವಕಾಶ ಮಾಡಿ ಕೊಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಹದಿನೈದು ದಿನಗಳ ವಾಯಿದೆ ಮುಕ್ತಾಯಗೊಳ್ಳದ ಮತ್ತು ರಾಜಕೀಯ ಪಕ್ಷಗಳಿಂದ ನಗದೀಕರಣಗೊಳ್ಳದ ಚುನಾವಣಾ ಬಾಂಡ್‌ಗಳನ್ನು ಅವುಗಳನ್ನು ಖರೀದಿಸಿದವರಿಗೆ ಮರಳಿಸಬೇಕು ಎಂಬುದಾಗಿಯೂ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವೊಂದು ಈ ಸರ್ವಾನುಮತದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಸದಸ್ಯರೂ ಆಗಿರುವ ನ್ಯಾಯಪೀಠವು ಎರಡು ಪ್ರತ್ಯೇಕ, ಆದರೆ ಸರ್ವಾನುಮತದ ತೀರ್ಪುಗಳನ್ನು ನೀಡಿದೆ.

ಅದೇ ವೇಳೆ, ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ತಕ್ಷಣ ನಿಲ್ಲಿಸುವಂತೆ ನ್ಯಾಯಾಲಯವು ಭಾರತೀಯ ಸ್ಟೇಟ್ ಬ್ಯಾಂಕ್‌ ನಿರ್ದೇಶನವನ್ನೂ ನೀಡಿದೆ. ಅಷ್ಟೇ ಅಲ್ಲದೆ, 2019 ಎಪ್ರಿಲ್ 12ರಿಂದ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ವಿವರಗಳನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆಯೂ ಅದು ಬ್ಯಾಂಕ್‌ಗೆ ಸೂಚಿಸಿದೆ.

ಈ ವಿವರಗಳನ್ನು ಮಾರ್ಚ್ 13ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್ ನೀಡುವ ವಿವರಗಳಲ್ಲಿ, ಪ್ರತಿ ಚುನಾವಣಾ ಬಾಂಡ್ ಖರೀದಿಯಾದ ದಿನಾಂಕ, ಖರೀದಿದಾರರ ಹೆಸರು ಮತ್ತು ಅವರು ಖರೀದಿಸಿದ ಬಾಂಡ್‌ ಮುಖಬೆಲೆ ಹಾಗೂ ಅವುಗಳನ್ನು ಸ್ವೀಕರಿಸಿದ ರಾಜಕೀಯ ಪಕ್ಷಗಳ ಹೆಸರುಗಳು ಒಳಗೊಂಡಿರಬೇಕು ಎಂದು ನ್ಯಾಯಾಲಯ ಹೇಳಿದೆ.

ರಾಜಕೀಯ ದೇಣಿಗೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರುವುದಕ್ಕಾಗಿ ಹಾಗೂ ಕಪ್ಪುಹಣ ಸೃಷ್ಟಿಯಾಗುವುದನ್ನು ತಪ್ಪಿಸುವುದಕ್ಕಾಗಿ ತಾನು ಚುನಾವಣಾ ಬಾಂಡ್ ಗಳನ್ನು ತರುತ್ತಿರುವುದಾಗಿ 2018ರಲ್ಲಿ ಅದನ್ನು ಪರಿಚಯಿಸಿದ ವೇಳೆ ಕೇಂದ್ರ ಸರಕಾರ ಹೇಳಿತ್ತು.

ಆದರೆ, ಚುನಾವಣಾ ಬಾಂಡ್‌ಗಳ ಯೋಜನೆಯು ಕಪ್ಪುಹಣವನ್ನು ನಿಗ್ರಹಿಸುವ ಏಕೈಕ ವಿಧಾನವಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

ಕಪ್ಪುಹಣವನ್ನು ನಿಗ್ರಹಿಸುವ ಉದ್ದೇಶಕ್ಕಾಗಿ ಮಾಹಿತಿ ಹಕ್ಕಿನ ಮೇಲೆ ನಡೆಯುವ ಅತಿಕ್ರಮಣವನ್ನು ಸಮರ್ಥಿಸಲು ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್‌ನ ಆದೇಶ ತಿಳಿಸಿದೆ.

ರಾಜಕೀಯ ಪಕ್ಷಗಳಿಗೆ ಆರ್ಥಿಕ ದೇಣಿಗೆಗಳನ್ನು ಎರಡು ಕಾರಣಗಳಿಗಾಗಿ ನೀಡಲಾಗುತ್ತದೆ- ತನ್ನ ನೆಚ್ಚಿನ ರಾಜಕೀಯ ಪಕ್ಷವನ್ನು ಬೆಂಬಲಿಸುವುದಕ್ಕಾಗಿ ಅಥವಾ ರಾಜಕೀಯ ಪಕ್ಷಗಳಿಂದ ನಿರ್ದಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಾಗಿ” ಎಂದು ನ್ಯಾಯಾಲಯ ಹೇಳಿತು.

ಚುನಾವಣಾ ಬಾಂಡ್‌ಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಸಿತ್ತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...