ಹು-ಧಾ ಬೈಪಾಸ್ ರಸ್ತೆಯಲ್ಲಿ ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮ. ರಸ್ತೆ ಅಪಘಾತಗಳನ್ನು ತಪ್ಪಿಸಲು ಇಲಾಖೆಗಳು ಸಮನ್ವಯತೆಯಿಂದ ಕಾರ್ಯಮಾಡಬೇಕು - ಜಿಲ್ಲಾಧಿಕಾರಿ ನಿತೇಶ ಪಾಟೀಲ

Source: SO News | By Laxmi Tanaya | Published on 18th January 2021, 9:31 PM | State News |

ಧಾರವಾಡ :  ಕಳೆದ ಸಾಲಿಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ 2020 ನೇ ಸಾಲಿಗೆ ಕಡಿಮೆ ಪ್ರಮಾಣದಲ್ಲಿ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಸಾರಿಗೆ, ಪೊಲೀಸ್, ಲೊಕೋಪಯೋಗಿ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರೆ ರಸ್ತೆ ಅಪಘಾತಗಳು ಸಂಭವಿಸದಂತೆ ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಅವರು ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಭವನದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿನ 30 ಕಿ.ಮೀ ರಸ್ತೆಯಲ್ಲಿನ ಅಪಘಾತಗಳನ್ನು ತಪ್ಪಿಸಲು ಸಂಚಾರಿ ನಿಯಮಗಳ ಪಾಲನೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಪ್ರತಿ ಕಿ.ಮೀ.ಗೆ 60 ವೇಗದ ಮಿತಿ ಇದ್ದರೂ ಬಸ್, ಟ್ರಕ್, ಮಿನಿಬಸ್, ಕಾರ್ ಮುಂತಾದ ವಾಹನಗಳ ಚಾಲಕರು ನಿಯಮ ಪಾಲಿಸದೇ ವೇಗವಾಗಿ ವಾಹನ ಚಾಲನೆ, ವಾಹನಗಳ ಓವರ್‍ಟೆಕ್ ಮಾಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತ, ಸಾವು-ನೋವು ಆಗುತ್ತಿವೆ. ರಸ್ತೆ ನಿರ್ವಾಹಕ ಗುತ್ತಿಗೆದಾರ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡ ಬೈಪಾಸ್‍ನ 30 ಕಿ.ಮೀ ರಸ್ತೆ ಪರಿಶೀಲಿಸಿ ಮುಂದಿನ 72 ಗಂಟೆಗಳಲ್ಲಿ ಅಪಾಯಕಾರಿ ಸ್ಥಳ, ಸೇತುವೆ ತಿರುವು ಗುರುತಿಸಿ ಅಲ್ಲಿ ಕನಿಷ್ಠ 20 ಎಚ್ಚರಿಕೆ ಫಲಕ, ವೇಗದ ಮೀತಿ ಸೂಚಿಸುವ ಮತ್ತು ಸುರಕ್ಷತಾ ನಿಯಮಗಳ ಫಲಕಗಳನ್ನು ಅಳವಡಿಸಿ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಹುಬ್ಬಳ್ಳಿ-ಧಾರವಾಡದ 30 ಕಿ.ಮೀ. ಬೈಪಾಸ್ ರಸ್ತೆಯ ಮಧ್ಯದಲ್ಲಿ ರಬ್ಬರ ಮತ್ತು ಫೈಬರ್ ಸಾಧನ ಬಳಸಿ, ರಸ್ತೆ ವಿಭಜಕಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು. ರಸ್ತೆ ಅಗಲೀಕರಣ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದು, ಅನುಮತಿ ಬಂದ ತಕ್ಷಣ ಈ ಕುರಿತು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಫುಟ್‍ಪಾತ್ ಅತಿಕ್ರಮಿಸಿ ಅನೇಕ ರೀತಿಯ ಅಂಗಡಿ, ವ್ಯಾಪಾರಗಳು ಅನಧಿಕೃತವಾಗಿ ನಡೆಯುತ್ತಿವೆ. ಟೊಲ್ ಪಕ್ಕದಲ್ಲಿಯೇ ಗುತ್ತಿಗೆದಾರರಿಗೆ ನೀಡಿರುವ ಜಾಗದಲ್ಲಿ ನಿಯಮ ಉಲ್ಲಂಘಿಸಿ ಅಂಗಡಿ ನಿರ್ಮಾಣ, ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡಲಾಗಿದೆ. ಈ ಕುರಿತು ರಸ್ತೆ ನಿರ್ವಾಹಕ ಗುತ್ತಿಗೆದಾರ ಸಂಸ್ಥೆಗೆ ನೋಟೀಸ್ ನೀಡಿ ಮತ್ತು ಸೂಕ್ತ ಬಂದೋಬಸ್ತ್ ನಲ್ಲಿ ಎಲ್ಲ ಅತಿಕ್ರಮಣಗಳನ್ನು ಶೀಘ್ರದಲ್ಲಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು. 

ಇತ್ತೀಚಿಗೆ ಬೈಪಾಸ್ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಅಸುನೀಗಿದವರ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮತ್ತು ಟಿಪ್ಪರ್ ವಾಹನದ ಚಾಲಕನ ಮೇಲೆ ಅಜಾಗರೂಕತೆಯ ವಾಹನ ಚಾಲನೆ ಸೇರಿದಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಬಿ.ಆರ್.ಟಿ.ಎಸ್. ರಸ್ತೆಯಲ್ಲಿ ಖಾಸಗಿ ಹಾಗೂ ಕೆಲವು ಸರಕಾರಿ ಇಲಾಖೆ ವಾಹನಗಳು ಸಂಚರಿಸುತ್ತಿರುವುದು ಕಂಡು ಬರುತ್ತಿದೆ. ನಗರ ಪೊಲೀಸ್ ಆಯುಕ್ತರು ಬಿಆರ್‍ಟಿಎಸ್ ರಸ್ತೆಯಲ್ಲಿ ಬಿಆರ್‍ಟಿಎಸ್ ಬಸ್‍ಗಳನ್ನು ಹೊರತುಪಡಿಸಿ ಯಾವ ತುರ್ತು ವಾಹನಗಳು ಸಂಚರಿಸಬೇಕೆಂದು ನಿರ್ಧರಿಸಿ, ಅಧಿಸೂಚನೆ ಹೊರಡಿಸಬೇಕು. ಮತ್ತು ಅಧಿಸೂಚಿತವಲ್ಲದ ವಾಹನಗಳು ಸಂಚರಿಸಿದರೆ ತಕ್ಷಣ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

 ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ರಾಜ್ಯ ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರಿ ವಿಭಾಗದ ಅಪರ ಪೊಲೀಸ್ ಮಹಾನಿರ್ದೇಶಕ ಪ್ರತಾಪರೆಡ್ಡಿ ಅವರು ಮಾತನಾಡಿ, ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ವಾಹನ ಹಾಗೂ ವಾಹನ ಚಾಲಕರಿಂದ ಕಾನೂನು ಹಾಗೂ ನಿಯಮಗಳ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಅಪಾಯಕಾರಿ ರಸ್ತೆ, ತಿರುವು, ಸೇತುವೆಗಳ ಸಮೀಪದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಅಪಘಾತ ವಲಯಗಳನ್ನು ಗುರುತಿಸಿ, ಎಚ್ಚರಿಕೆ ಸಂದೇಶಗಳನ್ನು ಚಾಲಕರಿಗೆ ಎದ್ದು ಕಾಣುವಂತೆ ಅಳವಡಿಸಬೇಕು ಎಂದು ಹೇಳಿದರು. 

 ಉತ್ತರವಲಯದ ಪೊಲೀಸ್ ಮಹಾನಿರೀಕ್ಷಕ ರಾಘವೇಂದ್ರ ಸುಹಾಸ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ, ತಿರುವು, ಸೇತುವೆಗಳ, ಸುಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ರಸ್ತೆ ಸುರಕ್ಷತೆ ಹಾಗೂ ಎಚ್ಚರಿಕೆ ಸಂದೇಶದ ಫಲಕಗಳ ಅಳವಡಿಕೆ, ನಿರ್ವಹಣೆ ಕುರಿತು ಮೇಲುಸ್ತುವಾರಿ ಮಾಡಿ ನಿಗಾವಹಿಸಬೇಕು. ಗುತ್ತಿಗೆದಾರನ ನಿರ್ವಹಣೆ ಕುರಿತು ನಿಯಮಗಳ ಪಾಲನೆ ಆಗಿರುವುದನ್ನು ಪರಿಶೀಲಿಸಬೇಕೆಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ಲಾಬೂರಾಮ ಅವರು ಮಾತನಾಡಿ, ರಸ್ತೆ ಸುರಕ್ಷತಾ ಹಾಗೂ ಸಂಚಾರಿ ನಿಯಮಗಳ ಪಾಲನೆಗೆ ಆಧ್ಯತೆ ನೀಡಬೇಕು. ಹೆದ್ದಾರಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೈಪಾಸ್, ಬಿಆರ್‍ಟಿಎಸ್ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳನ್ನು ಪರಿಶೀಲಿಸಿ, ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸಲಾಗಿದೆ ಎಂದು ಹೇಳಿದರು.  

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ಮಾತನಾಡಿ, ವಾಹನಗಳ ಚಾಲಕರು ರಾತ್ರಿ ಸಂಚರಿಸುವಾಗ ಪ್ರಖರ ಬೆಳಕಿನ ಹೆಡ್‍ಲೈಟ್ ಬಳಸುತ್ತಾರೆ. ಇದರಿಂದಾಗಿ ಎದುರಿಗೆ ಬರುವ ವಾಹನಗಳಿಗೆ ದಾರಿ ಕಾಣದಾಗುತ್ತದೆ. ತಿರುವುಗಳಲ್ಲಿ ಮತ್ತು ನಿರ್ಧಿಷ್ಟಪಡಿಸಿದ ವೇಗದ ಮಿತಿ ಪಾಲಿಸದೇ ವೇಗವಾಗಿ ವಾಹನ ಚಲಾಯಿಸುತ್ತಾರೆ. ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳ ನೋಂದಣಿ ಹಾಗೂ ಫಿಟ್‍ನೆಸ್ ಸರ್ಟಿಫಿಕೇಟ್ ಕೊಡುವಾಗ ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
 
 ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ. ಸುಶೀಲ ಅವರು ರಸ್ತೆ ಸುರಕ್ಷತೆ, ಅಪಘಾತಗಳ ನಿಯಂತ್ರಣ ಕುರಿತು ಸಭೆಯಲ್ಲಿ ಮಾತನಾಡಿದರು. 

ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಾಲ್ವತ್ತವಾಡಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

 ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಡಿವೈಎಸ್‍ಪಿಗಳಾದ ಎಂ.ಬಿ. ಸಂಕದ, ರಾಮನಗೌಡ ಹಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎಸ್.ಬಿ. ಚೌಡನ್ನವರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರ ಆರ್.ಕೆ. ಮಠದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಲ್. ಹಂಚಾಟೆ, ನೈಸ್ ಸಂಸ್ಥೆಯ ಪ್ರತಿನಿಧಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯರು, ರಸ್ತೆ ನಿರ್ವಹಣಾ ಗುತ್ತಿಗೆದಾರರು ಭಾಗವಹಿಸಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...