ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ : ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ.

Source: SO News | By Laxmi Tanaya | Published on 8th July 2023, 8:12 AM | State News |

ಬೆಂಗಳೂರು : ಗ್ಯಾರಂಟಿ ಯೋಜನೆಗಳಿಗೆ ಪ್ರಸಕ್ತ ಸಾಲಿಗೆ 35,410 ಕೋಟಿ ರೂ. ಅಗತ್ಯವಿದ್ದು, ಜನಸಾಮಾನ್ಯರಿಗೆ ಹೊರೆಯಾಗದಂತೆ ಸಂಪನ್ಮೂಲ ಕ್ರೋಢೀಕರಣ ಮಾಡಲಾಗುವುದು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪೆಟ್ರೋಲ್-ಡೀಸೆಲ್ ಮೇಲೆ ತೆರಿಗೆ ಹೆಚ್ಚಳ ಮಾಡಿಲ್ಲ. ಬಡವರು-ಮಧ್ಯಮ ವರ್ಗದವರನ್ನು ಹೆಚ್ಚುವರಿ ತೆರಿಗೆ ಹೊರೆಯಿಂದ ಮುಕ್ತರಾಗಿಸಿದ್ದೇವೆ.

ಗ್ಯಾರಂಟಿ ಯೋಜನೆಗಳಿಗೆ 13,500 ಕೋಟಿ ರೂ. ರಾಜಸ್ವ ಸಂಗ್ರಹ ಗುರಿ ಹೆಚ್ಚಳ ಹಾಗೂ 8000 ಕೋಟಿ ರೂ. ಹೆಚ್ಚುವರಿ ಸಾಲದ ಮೂಲಕ ಮತ್ತು ಉಳಿದ ಸಂಪನ್ಮೂಲವನ್ನು ಯೋಜನೆಗಳ ಆದ್ಯತೆಯನ್ನು ನಿಗದಿಪಡಿಸುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳ ಅನುಷ್ಠಾನಕ್ಕಾಗಿ ಬಡವರ-ಮಧ್ಯಮ ವರ್ಗದವರ ಮೇಲೆ ಯಾವುದೇ ತೆರಿಗೆ ಹಾಕಿಲ್ಲ, ಜನರಿಗೆ ಹೊರೆ ಆಗಬಾರದು ಎನ್ನುವ ಕಾರಣಕ್ಕೇ ಪೆಟ್ರೋಲ್ - ಡೀಸೆಲ್ ಮೇಲೆ ತೆರಿಗೆ ಹಾಕಲಿಲ್ಲ, ಬೆಲೆ ಏರಿಕೆ ಮಾಡಿಲ್ಲ‌ ಎಂದರು.

ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ 3 ಮಾನದಂಡಗಳನ್ನು ಪಾಲಿಸಬೇಕಿದ್ದು, ಈ ಪೈಕಿ 2023-24 ರ ಬಜೆಟ್ ನಲ್ಲಿ 2 ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ ವಿತ್ತೀಯ ಕೊರತೆ ಶೇ.3 ರಷ್ಟಿರಬೇಕು, ಸಾಲದ ಪ್ರಮಾಣ ಜಿಡಿಪಿಯ ಶೇ.25 %ರ ಒಳಗೆ ಇರಬೇಕು.  ಉಳಿತಾಯ ಬಜೆಟ್ (revenue surplus) ಇರಬೇಕು ಎನ್ನುವ ಮಾನದಂಡಗಳಿವೆ.  ವಿತ್ತೀಯ ಕೊರತೆ ಶೇ. 2.6 ರಷ್ಟಿದ್ದು, ಸಾಲ ಜಿಡಿಪಿಯ ಶೇ. 22.3 % ರಷ್ಟಿದೆ. ಹೀಗೆ 2 ಮಾನದಂಡಗಳನ್ನು ಪಾಲಿಸಿ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲಾಗಿದೆ.

ಈ ಆಯವ್ಯಯಲ್ಲಿ 2,50,933 ಕೋಟಿ ರೂ. ರಾಜಸ್ವ ವೆಚ್ಚ , ಬಂಡವಾಳ ವೆಚ್ಚ 54,374 ಕೋಟಿ ರೂ.ಗಳಾಗಿದ್ದು, 2022-23ರ ಬಜೆಟ್ ಗೆ ಹೋಲಿಸಿದರೆ ಶೇ,23 ರಷ್ಟು ರಾಜಸ್ವ ವೆಚ್ಚ ಹಾಗೂ ಶೇ.16 ರಷ್ಟು ಬಂಡವಾಳ ವೆಚ್ಚ ಹೆಚ್ಚಾಗುತ್ತದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 2021-22 ರಲ್ಲಿ  ವಿತ್ತೀಯ ಕೊರತೆ 14,699  ಕೋಟಿ ರೂ.ಗಳಷ್ಟಿತ್ತು. ನಮ್ಮ ಸರ್ಕಾರದ ರಾಜಸ್ವ ಕೊರತೆ 12,523 ಕೋಟಿ ರಷ್ಟಿದೆ, ವಿತ್ತೀಯ ಕೊರತೆ 66,646 ಕೋಟಿ ರೂ. ಇದು ಜಿಎಸ್ ಡಿಪಿಯ ಶೇ. 2.6 ರಷ್ಟಿದೆ. ರಾಜ್ಯದ ಹೊಣೆಗಾರಿಕೆ 5,71,665 ಕೋಟಿ ರೂ.ಗಳಷ್ಟಿದ್ದು, ಇದು ಜಿಎಸ್ ಡಿಪಿ ಶೇ. 22.3 ರಷ್ಟಿದೆ. 2023-24 ಕ್ಕೆ ರಾಜ್ಯವು ಪಡೆಯುವ ಸಾಲ 85,818 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ‌ ಎಂದರು.

ವಾಣಿಜ್ಯ ತೆರಿಗೆ ಫೆಬ್ರವರಿ ಆಯವ್ಯಯಕ್ಕಿಂತ 4,000 ಕೋಟಿ ರೂ. ಹೆಚ್ಚುವರಿ ಗುರಿ ನಿಗದಿಪಡಿಸಲಾಗಿದೆ. ಅಬಕಾರಿ ಸುಂಕ ಗುರಿ 1,000 ಕೋಟಿ ರೂ. ಹೆಚ್ಚಳ ಮಾಡಿದೆ. ಇದನ್ನು ಸೇರಿದಂತೆ ತೆರಿಗೆ ಸಂಗ್ರಹದ ಒಟ್ಟಾರೆ ಗುರಿಯನ್ನು 13,500 ಕೋಟಿ ರೂ.ಗಳಷ್ಟು ಹೆಚ್ಚಳ ಮಾಡಿದೆ ಎಂದು
ಮುಖ್ಯಮಂತ್ರಿ ಹೇಳಿದರು.

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...