ಧಾರವಾಡ: ಗ್ರಾ.ಪಂ. ಸದಸ್ಯರು, ಪಿಡಿಓ ಮಧ್ಯೆ ಸಮನ್ವಯತೆ ಇರಲಿ: ಸಚಿವ ಸಂತೋಷ ಲಾಡ್

Source: SO News | By Laxmi Tanaya | Published on 25th November 2023, 7:29 AM | State News | Don't Miss |

ಧಾರವಾಡ : ಜಿಲ್ಲೆಯ ಬರಗಾಲ ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆ ಕಾಣದಿದ್ದರೂ ಮುಂಬರುವ ದಿನಗಳಲ್ಲಿ ಸಮರ್ಪಕವಾಗಿ ಬರ ನಿರ್ವಹಣೆ ಮಾಡಲು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರು, ದನ, ಕರುಗಳಿಗೆ ಮೇವು ಹಾಗೂ ಕೂಲಿ ಕಾರ್ಮಿಕರ ಕೈಗೆ ಕೆಲಸ ನೀಡುವ ಉದ್ಯೋಗಕ್ಕೆ ಆಧ್ಯತೆ ನೀಡಲಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಅವರು ಶುಕ್ರವಾರ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ  ಧಾರವಾಡ ಜಿಲ್ಲೆಯ ಬರಗಾಲ ಪೀಡಿತ ಪ್ರದೇಶಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ಎಲ್ಲ ಗ್ರಾಮಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಓ ಮತ್ತು ಕಾರ್ಯದರ್ಶಿಗಳ ಸಭೆ ಜರುಗಿಸಿ ಮಾತನಾಡಿದರು. 

 ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿ ಹಾಗೂ ಕಾರ್ಯಕ್ರಮಗಳು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕೂಡಿ ಕೆಲಸ ಮಾಡಿದರೆ ಮಾತ್ರ ನಿಗದಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ. ವಿಶೇಷವಾಗಿ ಗ್ರಾಮಪಂಚಾಯತ್ ಅಧ್ಯಕ್ಷರಾದಿಯಾಗಿ ಸದಸ್ಯರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಮತ್ತು ಉದ್ಯೋಗ ಚೀಟಿ ಹೊಂದಿರುವ ಕೂಲಿ ಕಾರ್ಮಿಕರಿಗೆ ಅಗತ್ಯ ಕೆಲಸವನ್ನು ನೀಡಲು ಬದ್ಧರಾಗಿರಬೇಕು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ನೀಲನಕ್ಷೆಯನ್ನು ರೂಪಿಸಿ, ನರೇಗಾ ಯೋಜನೆಯ ಆಶಯದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಿ, ಬೆಳೆಸಲು ಆಧ್ಯತೆ ನೀಡಬೇಕೆಂದು ಸಚಿವರು ತಿಳಿಸಿದರು. 

 ಬರಗಾಲದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನರೇಗಾ ಯೋಜನೆಯಡಿ ನೋಂದಾಯಿತ ಕೂಲಿ ಕಾರ್ಮಿಕರಿಗೆ  ಉದ್ಯೋಗ ನೀಡಲು ಮಾನವ ದಿನಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಗ್ರಾಮಪಂಚಾಯತಿಗಳು ನರೇಗಾ ಯೋಜನೆಯ ಗುರಿ ಸಾಧಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ನರೇಗಾ ಯೋಜನೆಯ ಅನುದಾನ ಗ್ರಾಮ ಪಂಚಾಯಿತಿಗಳಿಗೆ ಸರಳವಾಗಿ ಸಿಗುವಂತೆ ಮಾಡಬೇಕು ಎಂದು ಸಚಿವರು ಹೇಳಿದರು. 

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೋರ್‍ವೆಲ್‍ಗಳು ಸೇರಿದಂತೆ ಎಲ್ಲ ಆಸ್ತಿ, ಅಸೆಟ್‍ಗಳ ಮೌಲ್ಯಮಾಪನ ಮತ್ತು ಅವುಗಳ ದಾಖಲಾತಿ ಕುರಿತು ನಿರಂತರ ಪರಿಶೀಲನೆಯಾಗಬೇಕು. ಮುಂದಿನ ಒಂದು ವಾರದಲ್ಲಿ ಪ್ರತಿ ಗ್ರಾಮಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯಿತಿ ವ್ಯಾಪ್ತಿಯ ಬೋರ್‍ವೆಲ್, ಆರ್‍ಓ ಪ್ಲಾಂಟ್ ಮತ್ತು ಇತರೆ ಆಸ್ತಿಗಳ ಕುರಿತು ಮತ್ತು ಅವುಗಳ ಸುಸ್ಥಿತಿ ಕುರಿತು ವರದಿ ಸಲ್ಲಿಸಬೇಕೆಂದು ಸಚಿವ ಸಂತೋಷ ಲಾಡ್ ಅವರು ನಿರ್ದೇಶಿಸಿದರು. 

 ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ಪಡೆದಿರುವ ಕೂಲಿ ಕಾರ್ಮಿಕರಿಗೆ ಬೇಡಿಕೆಯಷ್ಟು ಉದ್ಯೋಗ ನೀಡಬೇಕು. ಜಿಲ್ಲೆಯಲ್ಲಿ 1.69 ಲಕ್ಷ ಉದ್ಯೋಗ ಚೀಟಿಗಳಿದ್ದು, ಪ್ರತಿ ಉದ್ಯೋಗ ಚೀಟಿದಾತನಿಗೆ ನೂರು ದಿನಗಳ ಕೂಲಿ ನೀಡಿದರೆ ಅಂದಾಜು ರೂ. 541 ಕೋಟಿ ರೂ.ಗಳ ಅನುದಾನ ಇಡೀ ಜಿಲ್ಲೆಗೆ ಅನ್ವಯಿಸುತ್ತದೆ. ಆದ್ದರಿಂದ ಗ್ರಾಮಗಳ ಮಟ್ಟದಲ್ಲಿ ನೋಂದಾಯಿತ ಕೂಲಿ ಕಾರ್ಮಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಕಾಡಿನ ಅಂಚಿನಲ್ಲಿ, ದೂರದ ಊರುಗಳಲ್ಲಿ ಇರುವ ಜನರಿಗೆ ನರೇಗಾ ಯೋಜನೆ ಕುರಿತು ತಿಳುವಳಿಕೆ ನೀಡಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. 

 ಜಿಲ್ಲೆಯಲ್ಲಿ ಪ್ರತಿ ಗ್ರಾಮ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗೃತೆ ವಹಿಸಲಾಗಿದೆ. ದನ ಕರುಗಳಿಗೆ ಅಗತ್ಯವಿರುವ ಮೇವು ಮುಂದಿನ ಎರಡು ತಿಂಗಳಿಗೆ ಆಗುವಷ್ಟು ಜಿಲ್ಲೆಯಲ್ಲಿ ದಾಸ್ತಾನು ಇದೆ. ಮೇವು ಕೊರತೆ ಆಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಎಲ್ಲರ ಸಹಕಾರದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸೋಣ ಎಂದು ಸಚಿವರು ಹೇಳಿದರು.

 ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲು ಮತ್ತು ಗ್ರಾಮಪಂಚಾಯತ್ ಹಂತದ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಪರಿಹರಿಸಲು ಅನುಕೂಲವಾಗುವಂತೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಪ್ರತಿ ತಾಲೂಕಾವಾರು ಜಿಲ್ಲಾ ಪಂಚಾಯತ್ ಸಿಇಓ ಮತ್ತು ಅಧಿಕಾರಿಗಳು ಸಭೆ ಜರುಗಿಸಲು ತಿಳಿಸಿದ ಸಚಿವರು, ತಾವು ಸಹ ಜಿಲ್ಲಾಮಟ್ಟದಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಗ್ರಾಮಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪಿಡಿಓಗಳ ಸಭೆ ಜರುಗಿಸುವುದಾಗಿ ತಿಳಿಸಿದರು. 

 ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳು ಪರಸ್ಪರ ಸಮನ್ವಯ ಮತ್ತು ಸಹಕಾರದಿಂದ ಕೆಲಸ ಮಾಡಿದರೆ ನರೇಗಾ ಯೋಜನೆಯಡಿ ಕಾಮಗಾರಿ ಅನುಷ್ಠಾನದಲ್ಲಿ ರಾಜ್ಯಕ್ಕೆ ನಂಬರ್ ಒನ್ ಆಗಬಹುದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

 ನವಲಗುಂದ ಶಾಸಕ ಎನ್.ಎಚ್. ಕೋನರೆಡ್ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ವಿಫಲವಾಗಿದೆ. ಹಿಂಗಾರು ಬಿತ್ತನೆ, ಬೆಳೆಗಳು ಅಷ್ಟು ಹಿತಕರವಾಗಿಲ್ಲ. ರೈತರಿಗೆ, ಗ್ರಾಮೀಣ ಜನರಿಗೆ ಬರಗಾಲ ಬಹಳಷ್ಟು ಹಾನಿ ಮಾಡಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮತ್ತು ಕೂಲಿ ಕಾರ್ಮಿಕರಿಗೆ, ರೈತರಿಗೆ ಅವರಿದ್ದಲ್ಲಿಯೇ ನರೇಗಾ ಯೋಜನೆಯ ಮೂಲಕ ಉದ್ಯೋಗ ಕಲ್ಪಿಸಬೇಕಾಗಿದೆ ಎಂದರು.

 ಗ್ರಾಮೀಣ ಭಾಗದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರು, ಮೇವು ಕೊರತೆ ಕಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಇದು ಸಮಸ್ಯೆಯಾಗದಂತೆ ಮುಂಜಾಗೃತೆ ವಹಿಸಬೇಕು. ನೀರು ಶುದ್ಧೀಕರಣ ಘಟಕಗಳು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.

 ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಬರನಿರ್ವಹಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವತ್ತಿನವರೆಗೆ ಕುಡಿಯುವ ನೀರು, ಮೇವು, ಇತರ ಸೌಲಭ್ಯಗಳ ಕೊರತೆ ಕಂಡುಬಂದಿಲ್ಲ.  ಕೆಲವು ಗ್ರಾಮಗಳಲ್ಲಿ ಅಂತರ್ಜಲ ಕೊರತೆಯಿಂದ ನೀರು ಸರಬರಾಜಿನಲ್ಲಿ ವ್ಯತ್ಯಾಸವಾಗಿದ್ದು, ಅಂತಹ ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್ ವ್ಯವಸ್ಥೆ ಮಾಡಲಾಗಿದೆ. ಮತ್ತು ಅಗತ್ಯವಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸುವುದಾಗಿ ಅವರು ಹೇಳಿದರು.

 ದನ ಕರುಗಳಿಗೆ ಮುಂದಿನ ಎರಡ್ಮೂರು ತಿಂಗಳಿಗೆ ಅಗತ್ಯವಿರುವಷ್ಟು ಮೇವು ಜಿಲ್ಲೆಯಲ್ಲಿ ಮತ್ತು ರೈತರಲ್ಲಿ ದಾಸ್ತಾನು ಇದೆ. ನಂತರದ ದಿನಗಳಲ್ಲಿ ಮೇವು ಕೊರತೆಯಾಗದಂತೆ ಕ್ರಮವಹಿಸಲು ಮೇವು ಪೂರೈಕೆಗಾಗಿ ಟೆಂಡರ್ ಸಹ ಕರೆಯಲಾಗುತ್ತಿದೆ. ನೀರಿನ ಸೌಲಭ್ಯವಿರುವ ರೈತರಿಗೆ ಪಶುಪಾಲನಾ ಇಲಾಖೆ ಮೂಲಕ ಉಚಿತವಾಗಿ ಮೇವು ಬೀಜಗಳನ್ನು ವಿತರಿಸಲಾಗುತ್ತಿದೆ. ಮೇವು ಬೆಳೆದ ರೈತರು ತಮ್ಮ ದನ ಕರುಗಳಿಗೆ ಬಳಸಿ, ಮೇವು ಹೆಚ್ಚುವರಿ ಇದ್ದಲ್ಲಿ ಟೆಂಡರ್ ದರಕ್ಕೆ ಪಶುಸಂಗೋಪನಾ ಇಲಾಖೆಗೆ ನೀಡಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

 ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಜಿಲ್ಲೆಯ ಬರಗಾಲ ಪರಿಸ್ಥಿತಿ ಮತ್ತು ಬರಗಾಲ ಪೀಡಿತ ಪ್ರದೇಶಗಳ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ನಂತರ ಅವರು ಮಾತನಾಡಿ, ನರೇಗಾ ಯೋಜನೆಗೆ ಹಾಗೂ ಗ್ರಾಮಪಂಚಾಯಿತಿ ಕ್ರಿಯಾಯೋಜನೆಗಳಿಗೆ ಸಲ್ಲಿಕೆಯಾದ ತಕ್ಷಣ ಪರಿಶೀಲಿಸಿ ಅನುಮೋದನೆ ನೀಡಲಾಗುತ್ತದೆ. ನರೇಗಾ ಯೋಜನೆಯ ಅನುಷ್ಠಾನಕ್ಕೆ ಆಧ್ಯತೆ ನೀಡಿದ್ದು, ಪಂಚಾಯಿತಿಗಳಿಗೆ ಹೆಚ್ಚುವರಿ ಮಾನವ ದಿನಗಳ ಅನುಮೋದನೆಯನ್ನು ನೀಡಲಾಗುತ್ತಿದೆ. ನೀರು ಶುದ್ಧಿಕರಣ ಘಟಕ, ಬೋರ್‍ವೆಲ್‍ಗಳ ಸುಸ್ಥಿತಿಗೆ ಕ್ರಮವಹಿಸಿ, ಸಾರ್ವಜನಿಕರಿಗೆ ಅಗತ್ಯ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು. 

 ವಿವಿಧ ಇಲಾಖೆಗಳಿಗೆ ನಿಗದಿಪಡಿಸಿರುವ ನರೇಗಾ ಯೋಜನೆಯ ಆರ್ಥಿಕ ಮತ್ತು ಭೌತಿಕ ಗುರಿಯನ್ನು ಕ್ರೊಢೀಕರಿಸಿ, ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯತೆಯೊಂದಿಗೆ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಮತ್ತು ಜನೋಪಯೋಗಿಯಾಗಿ ಅನುಷ್ಠಾಗೊಳಿಸಲಾಗುವುದು. ಈ ಕುರಿತ ಸಭೆಗಳನ್ನು ಅಧಿಕಾರಿ ಮತ್ತು ಗ್ರಾಮಪಂಚಾಯತ್ ಪ್ರತಿನಿಧಿಗಳೊಂದಿಗೆ ಜರುಗಿಸುವುದಾಗಿ ಅವರು ಹೇಳಿದರು. 

 ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸಲಿಂಗಯ್ಯ ಎಸ್. ಮುಗನೂಮಠ ಅವರು ಸ್ವಾಗತಿಸಿ. ಸಭೆ ನಿರ್ವಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತಕಾರ್ಯದರ್ಶಿ ಪಿ.ಕುಮಾರ, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕಳದಿಮಠ, ಜಿಲ್ಲಾ ಆರೋಗ್ಯಾಧಿಕಾರಿ ಡಾ: ಶಶಿ ಪಾಟೀಲ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶಿನಾಥ ಬದ್ರಣ್ಣವರ, ಕೃಷಿ ಇಲಾಖೆಯ ಜಂಟಿನಿರ್ದೇಶಕ ಡಾ. ಕಿರಣಕುಮಾರ, ಕುಡಿಯುವ ನೀರು, ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಆರ್.ಎಂ. ಸೊಪ್ಪಿಮಠ, ಜಿಲ್ಲಾ ಪಂಚಾಯತ್ ಮುಖ್ಯಯೋಜನಾಧಿಕಾರಿ ದೀಪಕ್ ಮಡಿವಾಳರ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಮುಖ್ಯ ಲೆಕ್ಕಾಧಿಕಾರಿ ಅಕ್ಕಮ್ಮ ಲಮಾಣಿ, ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಎಂ.ಟಿ. ದೊಡಮನಿ, ಎಂ.ಎಂ. ನದಾಫ್, ಅರಣ್ಯ ಇಲಾಖೆಯ ಎಸಿಎಫ್ ಪರಿಮಳಾ, ತಹಶೀಲ್ದಾರರಾದ ದೊಡ್ಡಪ್ಪ ಹೂಗಾರ, ಪ್ರಕಾಶ ನಾಶಿ, ಕಲ್ಲನಗೌಡ ಪಾಟೀಲ, ಸುಧೀರ ಸಾಹುಕಾರ, ಬಸವರಾಜ ಬೆಣ್ಣಿಶಿರೂರ, ಅಶೊಕ ಶಿಗ್ಗಾಂವಿ ಸೇರಿದಂತೆ ಮೀನುಗಾರಿಕೆ, ರೇಷ್ಮೆ, ಅರಣ್ಯ, ಲೋಕೋಪಯೋಗಿ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವೇದಿಕೆಯಲ್ಲಿದ್ದರು. 

ಸಭೆಯಲ್ಲಿ ಅಳ್ನಾವರ ತಾಲೂಕಿನ ಪರವಾಗಿ ಅರವಟಗಿ ಗ್ರಾಮಪಂಚಾಯತ್ ಅಧ್ಯಕ್ಷ ಅಶೋಕ ಜೋಡಟ್ಟಿಯವರ, ಅಣ್ಣಿಗೇರಿ ತಾಲೂಕಿನ ಪರವಾಗಿ ಶಲವಾಡಿ ಗ್ರಾಮಪಂಚಯಿತಿ ಅಧ್ಯಕ್ಷೆ ಸುವರ್ಣ ಮಠಪತಿ. ಧಾರವಾಡ ತಾಲೂಕಿನ ಪರವಾಗಿ ಮುಮ್ಮಿಗಟ್ಟಿ ಗ್ರಾಮಪಂಚಾಯತ್ ಉಪಾಧ್ಯಕ್ಷ ವಿಠ್ಠಲ ಭಟ್ಟಂಗಿ, ಹುಬ್ಬಳ್ಳಿ ತಾಲೂಕಿನ ಪರವಾಗಿ ಮಲ್ಲಿಗವಾಡ ಗ್ರಾಮಪಂಚಾಯತ್ ಅಧ್ಯಕ್ಷ ಮಂಜುನಾಥ ಬಡಫಕ್ಕೀರಪ್ಪನವರ, ಕಲಘಟಗಿ ತಾಲೂಕಿನ ಪರವಾಗಿ ದೇವಲಿಂಗಿಕೊಪ್ಪ ಗ್ರಾಮಪಂಚಾಯತ್ ಅಧ್ಯಕ್ಷ ದಾವುಲ್‍ಸಾಬ್ ಕುಂಬಾರ, ಕುಂದಗೋಳ ತಾಲೂಕಿನ ಪರವಾಗಿ ಬೆಟದೂರು ಗ್ರಾಮಪಂಚಾಯತ್ ಅಧ್ಯಕ್ಷ ಭೀಮಪ್ಪ ದೊಡ್ಡಶಂಕರ ಮತ್ತು ನವಲಗುಂದ ತಾಲೂಕಿನ ಪರವಾಗಿ ಗುಡಿಸಾಗರ ಗ್ರಾಮಪಂಚಾಯತ್ ಅಧ್ಯಕ್ಷ ರವಿ ಹಳಿಯಾಳ ಸೇರಿದಂತೆ ಕೊಟಬಾಗಿ, ಹೆಬ್ಬಳ್ಳಿ, ಅಳಗವಾಡಿ ಸೇರಿದಂತೆ ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರು ಮಾತನಾಡಿ, ಗ್ರಾಮದ ಸಮಸ್ಯೆಗಳನ್ನು ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರು. 

ಸಭೆಯಲ್ಲಿ ಎಲ್ಲ ತಾಲೂಕುಗಳ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಗ್ರಾಮಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಭಾಗವಹಿಸಿದ್ದರು. 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...