ಸತತ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯ : ಕೆ.ಬಿ.ಶಿವಕುಮಾರ್

Source: so news | Published on 14th December 2019, 12:28 AM | Coastal News | Don't Miss |


ಶಿವಮೊಗ್ಗ: ಸತತ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ್ರೇರಣ ಶಿಕ್ಷಣ ಸಂಸ್ಥೆ ಇವರುಗಳು ಸಂಯುಕ್ತಾಶ್ರಯದಲ್ಲಿ ನಗರದ ಪೆಸಿಟ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆ ಸಂಬಂಧ ಏರ್ಪಡಿಸಲಾಗಿದ್ದ ವ್ಯಕ್ತಿತ್ವವಿಕಸನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಎಂಬುದು ಪ್ರಮುಖ ಘಟ್ಟ. ಭವಿಷ್ಯದ ಬದುಕಿಗೆ ಇದು ಮುನ್ನುಡಿಯಾಗಲಿದೆ ಎಂದವರು ನುಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದು, ಈ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯದೇ ಅರ್ಥಪೂರ್ಣವಾಗಿ ಬಳಸಿಕೊಳ್ಳುವಂತೆ ಸೂಚಿಸಿದ ಅವರು, ಉತ್ತಮ ಫಲಿತಾಂಶದೊಂದಿಗೆ ಗುರಿ ತಲುಪುವ ಸಂಕಲ್ಪ ಮಾಡಬೇಕೆಂದವರು ನುಡಿದರು.
ಇನ್ನಾದರೂ ಪರೀಕ್ಷಾರ್ಥಿಗಳು ಅಂದಿನ ಪಾಠ ಪ್ರವಚನವನ್ನು ಅಂದೇ ಓದಿ ಮನನ ಮಾಡಿಕೊಳ್ಳಬೇಕು ಅಲ್ಲದೇ ನಿರಂತರ ಬರವಣಿಗೆಯ ಮೂಲಕ ಅರ್ಜಿಸಿಕೊಳ್ಳಬೇಕು. ಸುಮ್ಮನೆ ಓದದೆ ಅರ್ಥಮಾಡಿಕೊಂಡು ಓದಬೇಕು. ಸೀಮಿತ ಕಾಲಾವಧಿಯಲ್ಲಿ ನಡೆಯುವ ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದನ್ನು ರೂಢಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಭಯ, ಆತಂಕಗಳಿಂದ ದೂರವಾಗಿ ಪ್ರಫುಲ್ಲ ಮನಸ್ಸನ್ನು ಹೊಂದಿರಬೇಕು. ಇದರಿಂದಾಗಿ ಸಹಜವಾಗಿ ತಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ ಎಂದವರು ನುಡಿದರು.
ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರು ತಮ್ಮ ಇಟ್ಟುಕೊಂಡಿರುವ ನಂಬಿಕೆ, ಪ್ರೀತಿಯನ್ನು ಹುಸಿಯಾಗದಂತೆ ನೋಡಿಕೊಳ್ಳಬೇಕು. ಅವರ ತೃಪ್ತಿಗಾಗಿ ಹಾಗೂ ತಮ್ಮ ಭವಿಷ್ಯ ಬದುಕನ್ನು ಒಮ್ಮೆ ನೆನಪಿಸಿಕೊಂಡು, ವಾಮಮಾರ್ಗ ಅನುಸರಿಸದೇ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸುವಲ್ಲಿ ಗಮನಹರಿಸಬೇಕೆಂದವರು ನುಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಎಂ.ಎಲ್.ವೈಶಾಲಿ ಅವರು ಮಾತನಾಡಿ, ಇಷ್ಟಪಟ್ಟು ಓದಿದರೆ ಪರೀಕ್ಷೆ ಕಷ್ಟವಲ್ಲ. ಸೋಲನ್ನು ಸೋಲಿಸಿ, ಗೆಲುವಿನ ಹಾದಿಯನ್ನು ಕಂಡುಕೊಳ್ಳಬೇಕೆಂದ ಅವರು, ಕಲಿಕೆ ವ್ಯವಸ್ಥಿತವಾಗಿರಬೇಕು. ಕಲಿಕೆಯನ್ನು ಮನನ ಮಾಡಿಕೊಳ್ಳಬೇಕು. ನಿಮ್ಮ ಆತ್ಮವಿಶ್ವಾಸ ನಿಮ್ಮ ಮನೋಸ್ಥೈರ್ಯವನ್ನೆ ಅವಲಂಬಿಸಿದೆ ಎಂದರು.
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೆ ಇದೆ. ಪರೀಕ್ಷೆಗಳು ಮುಗಿಯುವವರೆಗೆ ಟಿ.ವಿ. ಮೊಬೈಲ್‍ಗಳಿಂದ ದೂರವಿರಿ. ಉಳಿದಿರುವ ಸ್ವಲ್ಪ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿ.ಇ.ಎಸ್. ಟ್ರಸ್ಟ್‍ನ ಟ್ರಸ್ಟಿ ಶ್ರೀಮತಿ ಎಸ್.ವೈ.ಅರುಣಾದೇವಿ ಅವರು ಮಾತನಾಡಿ, ಪರೀಕ್ಷೆಯನ್ನು ಎದುರಿಸುವ ಪ್ರತಿ ವಿದ್ಯಾರ್ಥಿಗಳಿಗೆ ಸಮಯಪ್ರಜ್ಞೆ ಇರಬೇಕು. ವಿದ್ಯಾರ್ಥಿಗಳು ಇಂದಿನ ಆಧುನಿಕ ಯುಗದ ವೇಗಕ್ಕೆ ಹೊಂದಿಕೊಳ್ಳಲು ಸನ್ನದ್ಧರಾಗಿರಬೇಕು ಎಂದವರು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ವೇದಾವಿಜಯಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹೆಚ್. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಕೆ.ಬಿ., ಪೆಸಿಟ್‍ನ ಮುಖ್ಯ ಸಂಯೋಜನಾಧಿಕಾರಿ ಡಾ|| ಆರ್.ನಾಗರಾಜ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ರಾಘವೇಂದ್ರ ಸೇರಿದಂತೆ ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಸೇರಿದಂತೆ ಶಿವಮೊಗ್ಗದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಂತರ ಡಾ|| ಆರ್.ನಾಗರಾಜ್ ಅವರು ಸಾಧನೆಗಳು ಮತ್ತು ಸಮಯಪಾಲನೆ, ನಂದೀಶ್ ಶೆಟ್ಟರ್ ಅವರು ವ್ಯಕ್ತಿತ್ವ ವಿಕಸನ ಎಂಬ ವಿಷಯದ ಕುರಿತು ಮಾತನಾಡಿದರು. ರಂಗನಾಥಯ್ಯ ಅವರು ಎಸ್.ಎಸ್.ಎಲ್.ಸಿ. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಿರುವ ಅವಕಾಶಗಳು, ಶಶಿಕುಮಾರ್ ಅವರು ಎಸ್.ಎಸ್.ಎಲ್.ಸಿ. ನಂತರ ಡಿಪ್ಲೋಮಾ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಎಂ.ಬಸವರಾಜ್ ಮತ್ತು ಉಪನ್ಯಾಸಕಿ ಶ್ರೀಮತಿ ರಾಜಶ್ರೀ ಅಮರನಾಥ್ ಅವರು ನಿರೂಪಿಸಿ ವಂದಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...