ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ, ಸರ್ವಾಧಿಕಾರದ ಸಂಕೇತ; ಎಂಟು ಪ್ರತಿಪಕ್ಷ ನಾಯಕರಿಂದ ಪ್ರಧಾನಿಗೆ ಪತ್ರ

Source: Vb | By I.G. Bhatkali | Published on 6th March 2023, 7:30 AM | National News |

ಹೊಸದಿಲ್ಲಿ: ಕಳೆದ ವಾರ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಬಂಧನದ ಹಿನ್ನೆಲೆಯಲ್ಲಿ ಎಂಟು ಪ್ರತಿಪಕ್ಷಗಳ ನಾಯಕರು ತಮ್ಮ ವಿರುದ್ಧ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯನ್ನು ಆರೋಪಿಸಿ ರವಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಈಗ ರದ್ದುಗೊಂಡಿರುವ ದಿಲ್ಲಿಯ ನೂತನ ಅಬಕಾರಿ ನೀತಿಯಲ್ಲಿ ಅವ್ಯವಹಾರಗಳ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐ ಫೆ.26ರಂದು ಆಪ್ ನಾಯಕ ಸಿಸೋಡಿಯಾರನ್ನು ಬಂಧಿಸಿದೆ. ಮೋದಿಯವರಿಗೆ ಬರೆದಿರುವ ಪತ್ರಕ್ಕೆ ಅಂಕಿತ ಹಾಕಿರುವ ಪ್ರತಿಪಕ್ಷ ನಾಯಕರಲ್ಲಿ ಆಪ್‌ನ ಅರವಿಂದ ಕೇಜಿವಾಲ್‌ ಮತ್ತು ಭಗವಂತ ಮಾನ್‌, ಆರ್‌ಜೆಡಿಯ ತೇಜಸ್ವಿ ಯಾದವ್, ಶಿವಸೇನೆ (ಉದ್ಧವ ಬಾಳಾಸಾಹೇಬ ಠಾಕ್ರೆಯ) ಉದ್ಧವ ಠಾಕ್ರೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎನ್‌ಸಿಪಿ ವರಿಷ್ಠ ಶರದ ಪವಾರ್, ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಭಾರತ ರಾಷ್ಟ್ರ ಸಮಿತಿಯ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಸೇರಿದ್ದಾರೆ.

ಸಿಸೋಡಿಯಾರನ್ನು ಯಾವುದೇ ಆಧಾರವಿಲ್ಲದೆ ಬಂಧಿಸಲಾಗಿದೆ ಮತ್ತು ಅವರ ವಿರುದ್ಧದ ಆರೋಪಗಳು ರಾಜಕೀಯ ಪಿತೂರಿಯ ಭಾಗವಾಗಿವೆ ಎಂದು ಈ ನಾಯಕರು ಆರೋಪಿಸಿದ್ದಾರೆ.

2014ರಿಂದ ನಿಮ್ಮ ಆಡಳಿತದಡಿ ತನಿಖಾ ಸಂಸ್ಥೆಗಳಿಂದ ಪ್ರಕರಣಗಳು ದಾಖಲಿಸಲ್ಪಟ್ಟ, ಬಂಧಿತರಾದ, ದಾಳಿ ಅಥವಾ ವಿಚಾರಣೆಗೊಳಗಾದ ಪ್ರಮುಖ ರಾಜಕಾರಣಿಗಳ ಪೈಕಿ ಗರಿಷ್ಠ ನಾಯಕರು ಪ್ರತಿಪಕ್ಷಗಳಿಗೆ ಸೇರಿದವರಾಗಿದ್ದಾರೆ ಎಂದು ಹೇಳಿರುವ ಪತ್ರವು, ಆಸಕ್ತಿಕರವೆಂದರೆ ಬಿಜೆಪಿಯನ್ನು ಸೇರುವ ಪ್ರತಿಪಕ್ಷ ನಾಯಕರ ವಿರುದ್ಧದ ಪ್ರಕರಣಗಳ ವಿಚಾರಣೆಯಲ್ಲಿ ತನಿಖಾ ಸಂಸ್ಥೆಗಳು ನಿಧಾನ ನೀತಿಯನ್ನು ಅನುಸರಿಸುತ್ತಿವೆ ಎಂದು ಬೆಟ್ಟು ಮಾಡಿದೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕಾಂಗ್ರೆಸ್‌ನಲ್ಲಿದ್ದಾಗ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಅವರ ವಿರುದ್ಧ ತನಿಖಾ ಸಂಸ್ಥೆಗಳು ದಾಖಲಿಸಿದ್ದ ಪ್ರಕರಣವು ಅವರು ಬಿಜೆಪಿಗೆ ಸೇರಿದ ಬಳಿಕ ಹಳ್ಳ ಹಿಡಿದಿದೆ. ಇದೇ ರೀತಿ ನಾರದ ಕುಟುಕು ಕಾರ್ಯಾಚರಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿಗಾದಲ್ಲಿದ್ದ ಮಾಜಿ ಟಿಎಂಸಿ ನಾಯಕರಾದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ವಿರುದ್ಧದ ಪ್ರಕರಣಗಳು ಅವರು ಪ.ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಿದ ಬಳಿಕ ಪ್ರಗತಿಯನ್ನು ಕಂಡಿಲ್ಲ ಎಂದು ಈ ನಾಯಕರು ಪತ್ರದಲ್ಲಿ ಎತ್ತಿ ತೋರಿಸಿದ್ದಾರೆ. ಜನವರಿಯಲ್ಲಿ ಹಿಂಡನ್‌ಬರ್ಗ್ ರೀಸರ್ಚ್‌ ವರದಿ ಬಿಡುಗಡೆಯ ಬಳಿಕ ಎಸ್‌ಬಿಐ ಮತ್ತು ಎಲ್‌ಐಸಿ ಮಾರುಕಟ್ಟೆ ಬಂಡವಾಳದಲ್ಲಿ 78,000 ಕೋ.ರೂ.ನಷ್ಟ ಅನುಭವಿಸಿದ ನಂತರ ಅದಾನಿ ಗ್ರೂಪ್ ವಿರುದ್ಧ ಕೇಂದ್ರೀಯ ಸಂಸ್ಥೆಗಳು ಏಕೆ ತನಿಖೆ ನಡೆಸಿಲ್ಲ ಎಂದು ಈ ನಾಯಕರು ಪ್ರಶ್ನಿಸಿದ್ದಾರೆ.

ಈ ಸಂಸ್ಥೆಗಳು ತಮ್ಮ ಆದ್ಯತೆಗಳನ್ನು ಕಡೆಗಣಿಸಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕರು, ಸಾರ್ವಜನಿಕ ಹಣವನ್ನು ಪಣಕ್ಕೊಡ್ಡಲಾಗಿದ್ದರೂ ಅದಾನಿ ಗ್ರೂಪ್‌ನ ಹಣಕಾಸು ಅಕ್ರಮಗಳ ಬಗ್ಗೆ ತನಿಖೆಗೆ ಕೇಂದ್ರೀಯ ಸಂಸ್ಥೆಗಳಿಗೆ ಏಕೆ ಆದೇಶಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸುವ ಮತ್ತು ಆಡಳಿತಕ್ಕೆ ಅಡ್ಡಿಯನ್ನುಂಟು ಮಾಡುವ ರಾಜ್ಯಪಾಲರನ್ನು ನೇಮಿಸುವ ಮೂಲಕ ಕೇಂದ್ರವು ದೇಶದ ಒಕ್ಕೂಟ ರಚನೆಯ ವಿರುದ್ಧ ಯುದ್ಧವನ್ನು ಸಾರಿದೆ ಎಂದೂ ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...