ಮಹಾಮೈತ್ರಿ ಮುರಿದು ಎನ್‌ಡಿಎ ಸೇರಿದ ನಿತೀಶ್, 9ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ; ಡಿಸಿಎಂಗಳಾಗಿ ಬಿಜೆಪಿಯ ಸಾಮ್ರಾಟ್ ಚೌಧುರಿ, ವಿಜಯ್ ಸಿನ್ಹಾ

Source: Vb | By I.G. Bhatkali | Published on 29th January 2024, 8:29 AM | National News |

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ಬಿಹಾರದಲ್ಲಿ ಉಂಟಾಗಿದ್ದ ರಾಜಕೀಯ ಅಸ್ಥಿರತೆಗೆ ತೆರೆ ಬಿದ್ದಿದೆ. ಬಿಹಾರದ ಆರ್ ಜೆಡಿ-ಜೆಡಿಯು ನೇತೃತ್ವದ ಮಹಾಘಟಬಂಧನ್ ಸರಕಾರದ ಮುಖ್ಯಮಂತ್ರಿ ಸ್ನಾನಕ್ಕೆ ರಾಜೀನಾಮೆ ನೀಡಿರುವ ನಿತೀಶ್ ಕುಮಾರ್ ರವಿವಾರ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಬೆಂಬಲದೊಂದಿಗೆ ಹೊಸ ಸರಕಾರ ರಚಿಸಿದ್ದಾರೆ.

9ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್ ಜೊತೆಗೆ ಉಪಮುಖ್ಯಮಂತ್ರಿಗಳಾಗಿ ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧುರಿ ಮತ್ತು ವಿಜಯ್ ಸಿನ್ಹಾ, ಇತರ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. 

ಡಾ. ಪ್ರೇಮ ಕುಮಾರ್ (ಬಿಜೆಪಿ), ವಿಜಯ್ ಚೌಧುರಿ (ಜೆಡಿಯು), ಶ್ರವಣ್ ಕುಮಾರ್ (ಜೆಡಿಯು), ಬಿಜೇಂದ್ರ ಯಾದವ್ (ಜೆಡಿಯು), ಸಂತೋಷ್ ಸುಮನ್ (ಎಚ್‌ಎಎಂ) ಹಾಗೂ ಸುಮಿತ್ ಸಿಂಗ್ (ಪಕ್ಷೇತರ) ಪ್ರಮಾಣ ವಚನ ಸ್ವೀಕರಿಸಿದ ಇತರ ಸಚಿವರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಜಿತಿನ್ ರಾಮ್ ಮಾಂಝಿ, ಚಿರಾಗ್ ಪಾಸ್ವಾನ್, ಜೆ.ಪಿ.ನಡ್ಡಾ ಮತ್ತಿತರರು ಉಪಸ್ಥಿತರಿದ್ದರು.

ನಿತೀಶ್ ಮಹಾಘಟಬಂಧನ ಸರಕಾರವನ್ನು ತೊರೆದು, ಬಿಜೆಪಿ ಜೊತೆ ಕೈಜೋಡಿಸಿ ಸರಕಾರ ರಚಿಸಲಿದ್ದಾರೆಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಹರಿದಾಡುತ್ತಿದ್ದವು. ರವಿವಾರ ಬೆಳಗ್ಗೆ 11:00 ಗಂಟೆಗೆ ರಾಜಭವನಕ್ಕೆ ಆಗಮಿಸಿದ ನಿತೀಶ್ ಅವರು ಮಹಾಘಟ ಬಂಧನ್ ಸರಕಾರಕ್ಕೆ ರಾಜೀನಾಮೆ ನೀಡಿದರು.. ಆನಂತರ ಮಧ್ಯಾಹ್ನ 1:00 ಗಂಟೆಗೆ ಮತ್ತೆ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಮಂಡಿಸಿದರು.

ಬಿಜೆಪಿ ಬೆಂಬಲದೊಂದಿಗೆ ನೂತನ ಸರಕಾರ ರಚಿಸುವುದಾಗಿ ಅವರು ತಿಳಿಸಿದ್ದರು. ಇಂದು ಬೆಳಗ್ಗೆ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್ ಜೆಡಿ ಹಾಗೂ ಎನ್‌ಡಿಎ ಬಣದ ಇತರ ಪಕ್ಷಗಳ ಜೊತೆಗೂಡಿ ನೂತನ ಸರಕಾರ ರಚಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಮಹಾಘಟಬಂಧನ ಹಾಗೂ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲದ ಕಾರಣ, ತಾನು ಹೊರಬರಬೇಕಾಯಿತು ಎಂದು ನಿತೀಶ್ ಹೇಳಿಕೊಂಡಿದ್ದಾರೆ.

ರಾಜಭವನದಲ್ಲಿ ಸಂಜೆ 5:00 ಗಂಟೆಗೆ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅವರು ನಿತೀಶ್ ರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು. ಬಿಜೆಪಿ, ಜೆಡಿಯು ಶಾಸಕರ 'ಭಾರತ್ ಮಾತಾ ಕೀ ಜೈ' ಹಾಗೂ 'ಜೈ ಶ್ರೀ ರಾಮ್' ಘೋಷಣೆಗಳ ನಡುವೆ ಅವರು ಪ್ರಮಾಣವಚನ ಸ್ವೀಕರಿಸಿದರು.

ನಿತೀಶ್ ಮೈತ್ರಿಕೂಟವನ್ನು ಬದಲಾಯಿಸಿರುವುದು ಪೂರ್ವಯೋಜಿತವಾಗಿದ್ದು ಈ ವಿಷಯದಲ್ಲಿ ಅವರು, ಕಾಂಗ್ರೆಸ್ ಹಾಗೂ ಆರ್‌ಜೆಡಿ ನಾಯಕತ್ವದನ್ನು ಕತ್ತಲಲ್ಲಿಟ್ಟಿದ್ದರು ಎಂದು ಖರ್ಗೆ ಹೇಳಿದ್ದಾರೆ.

ಮಹಾಘಟಬಂಧನ್, ಇಂಡಿಯಾ ಮೈತ್ರಿಕೂಟ ಸರಿಹೊಂದದ ಕಾರಣ ಹೊರಬಂದಿರುವೆ: ನಿತೀಶ್
ಪಟ್ನಾ: ಮಹಾಘಟಬಂಧನ ಸರಕಾರ ಹಾಗೂ ಪ್ರತಿಪಕ್ಷ ಮೈತ್ರಿಕೂಟ ಇಂಡಿಯಾದಲ್ಲಿ ತನಗೆ ಪರಿಸ್ಥಿತಿ ಸರಿಹೊಂದದ ಕಾರಣ ಮೈತ್ರಿಕೂಟದಿಂದ ಹೊರಬಂದಿರುವುದಾಗಿ ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ರವಿವಾರ ಹೇಳಿದ್ದಾರೆ. ಇಂದು ಬೆಳಗ್ಗೆ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಅವರನ್ನು ಭೇಟಿಯಾಗಿ ಮಹಾಘಟಬಂಧನ್ ಸರಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರಾಜಭವನದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ನಿತೀಶ್, ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಹಾಲಿ ಸರಕಾರವನ್ನು ವಿಸರ್ಜಿಸುವಂತೆ ನಾನು ರಾಜ್ಯಪಾಲರನ್ನು ಕೇಳಿಕೊಂಡಿದ್ದೇನೆ. ಪಕ್ಷದ ನಾಯಕರು ನೀಡಿದ ಸಲಹೆಯನ್ನು ಆಲಿಸಿದ ಬಳಿಕ ನಾನು ರಾಜೀನಾಮೆ ಸಲ್ಲಿಸಿದ್ದೇನೆ. ಮಹಾಘಟಬಂಧನ್ ಹಾಗೂ ಇಂಡಿಯಾ ಮೈತ್ರಿಕೂಟದಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ ಹೀಗಾಗಿ ನಾನು ಅವುಗಳೊಂದಿಗೆ ನಂಟು ಕಡಿದುಕೊಂಡಿರುವುದಾಗಿ ಅವರು ಹೇಳಿದರು.

ನಿತೀಶ್ ರಾಜೀನಾಮೆಯ ಬೆನ್ನಲ್ಲೇ, ಬಿಹಾರದಲ್ಲಿ ಬಿಜೆಪಿಯ ಉಸ್ತುವಾರಿ ವಿನೋದ್ ತಾವೆ ಅವರು ಹೇಳಿಕೆಯೊಂದನ್ನು ನೀಡಿ, ಪಕ್ಷದ ರಾಜ್ಯಾಧ್ಯಕ್ಷ ಸಾಮ್ರಾಟ್‌ ಚೌಧುರಿ ಹಾಗೂ ಮಾಜಿ ಸ್ಪೀಕ‌ರ್ ವಿಜಯ ಕುಮಾ‌ರ್ ಸಿನ್ಹಾ ಅವರನ್ನು ಬಿಜೆಪಿ ಶಾಸಕಾಂಗಪಕ್ಷದ ನಾಯಕ ಹಾಗೂ ಉಪನಾಯಕರಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದರು.

ತಾವೆ ಹಾಗೂ ಸಾಮ್ರಾಟ್ ಚೌಧುರಿ ಆನಂತರ ನಿತೀಶ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನಿಡಿದರು. ಆನಂತರ ನಿತೀಶ್‌ಕುಮಾ‌ರ್ ಜೊತೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರನ್ನು ಭೇಟಿಯಾದರು ಹಾಗೂ ಬಿಜೆಪಿ-ಜೆಡಿಯು ಸರಕಾರ ರಚನೆಗೆ ಹಕ್ಕು ಮಂಡಿಸಿದರು.

ಮಹಾಘಟಬಂಧನ ಸರಕಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗಿ ಹಾಗೂ ಆವರ ಹಿರಿಯ ಸಹೋದರ ತೇಜ್‌ ಪ್ರತಾಪ್ ಯಾದವ್ ಸಂಪುಟ ಸಚಿವರಾಗಿದ್ದರು. ಸ್ಪೀಕರ್ ಅವಥ್ ಬಿಹಾರಿ ಸೇರಿದಂತೆ 79 ಶಾಸಕರನ್ನು ಹೊಂದಿರುವ ಆರ್‌ಜೆಡಿ, ಬಿಹಾರ ವಿಧಾನಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...