ಕಾರ್ಕಳ ಬಳಿ ಭೀಕರ ರಸ್ತೆ ಅಪಘಾತ; 9ಪ್ರವಾಸಿಗರ ಸಾವು, 26ಕ್ಕೂ ಹೆಚ್ಚು ಗಂಭೀರ

Source: sonews | By Staff Correspondent | Published on 16th February 2020, 12:00 AM | Coastal News | Don't Miss |

ಕಾರ್ಕಳ: ಮೈಸೂರಿನಿಂದ ಕಾರ್ಕಳ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಪ್ರವಾಸಿ ಖಾಸಗಿ  ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದರೆಯ ಬಂಡೆಕಲ್ಲಿಗೆ ಢಿಕ್ಕಿ ಹೊಡೆದ ಪರಿಣಾಮ ಒಟ್ಟು ಒಂಬತ್ತು ಮಂದಿ ಮೃತಪಟ್ಟ ಘಟನೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುವ ಮಾಳ ಮುಳ್ಳೂರು ಘಾಟಿಯಲ್ಲಿ ಶನಿವಾರ ಸಂಜೆ 5:35ರ ಸುಮಾರಿಗೆ ಸಂಭವಿಸಿದೆ.

ಈ ಭೀಕರ ಅಪಘಾತದಲ್ಲಿ 26 ಮಂದಿ ಗಾಯಗೊಂಡಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮೈಸೂರಿನ ಎಚ್.ಡಿ. ಕೋಟೆ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದ ವೈಟ್ ರೆಕಾರ್ಡರ್ಸ್‌ ಎಂಬ ಐಟಿ ಕಂಪೆನಿಯ ಸಿಬ್ಬಂದಿ ಎಂದು ಗುರುತಿಸಲಾಗಿದೆ. ಅನಘ್ನಾ(21), ರಂಜಿತಾ ಪಿ., ಶಾರೋಲ್, ಯೋಗೇಂದ್ರ (21), ರಾಧಾರವಿ(22), ಪ್ರೀತಂ ಗೌಡ, ಬಸ್ ಚಾಲಕ ಉಮೇಶ್ ಹಾಗೂ ಅಡುಗೆ ಸಹಾಯಕ ಬಸವರಾಜ್(22) ಎಂಬವರು ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ. ಅಂಬಿಕಾ(22), ಮಂಜಳಾ(27), ಕಾವ್ಯಾ(24), ನಳಿನಿ(24), ಜಗದೀಶ್(22), ಶ್ರೀಧರ್(28) ಮಾನಸಾ(24), ಸುನೀಲ್(26), ಲಕ್ಷ್ಮೀ, ಮುತ್ತುರಾಜ್, ಸುಷ್ಮಾ ಸೇರಿದಂತೆ ಒಟ್ಟು 26 ಮಂದಿ ಗಾಯಗೊಂಡಿದ್ದಾರೆ.

ಘಾಟಿಯ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಟೂರಿಸ್ಟ್ ಬಸ್, ರಸ್ತೆ ಬದಿಯ ದರೆಯ ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ವೈಟಲ್ ರೆಕಾರ್ಡ್ಸ್ ಕಂಪೆನಿಯ 35 ಸಿಬ್ಬಂದಿ ಬಸ್ಸಿನಲ್ಲಿ ಪ್ರವಾಸ ಹೊರಟಿದ್ದರು. ಇವರು ಶುಕ್ರವಾರ ತಡರಾತ್ರಿ ಎರಡು ಗಂಟೆ ಸುಮಾರಿಗೆ ಮೈಸೂರಿನಿಂದ ಬಸ್ಸಿನಲ್ಲಿ ಹೊರಟಿದ್ದು, ಶನಿವಾರ ಪೂರ್ವಾಹ್ನ 11:30 ಹೊತ್ತಿಗೆ ಹೊರನಾಡು ತಲುಪಿದ್ದು ಬಳಿಕ ಕಳಸಕ್ಕೆ ತೆರಳಿದ್ದರು. ಕಳಸದಿಂದ ಕಾರ್ಕಳ ಮಾರ್ಗವಾಗಿ ಉಡುಪಿ ಮಲ್ಪೆ ಕಡೆ ಬರುತ್ತಿದ್ದರೆನ್ನಲಾಗಿದೆ. ಮಾಳ ಮುಳ್ಳೂರು ಘಾಟ್‌ನ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ಸಂಪೂರ್ಣ ಜಖಂಗೊಂಡಿದೆ.

ಗಾಯಾಳುಗಳಲ್ಲಿ ಎಂಟು ಮಂದಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಈ ಮೊದಲೊಮ್ಮೆ ಬಸ್ಸಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕಳಸದ ಗ್ಯಾರೇಜ್‌ನಲ್ಲಿ ದುರಸ್ತಿ ಕಾರ್ಯ ನಡೆಸಿ ಬಳಿಕ ಪ್ರಯಾಣ ಮುಂದುವರಿಸಿರುವುದಾಗಿ ಗಾಯಾಳು ಪ್ರಯಾಣಿಕರೊಬ್ಬರು ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ತಾಲೂಕು ದಂಡಧಿಕಾರಿ ಪುರಂದರ ಹೆಗ್ಡೆ ಆಸ್ಪತ್ರೆ ಗೆ ಭೇಟಿ ನೀಡಿದ್ದಾರೆ.
ಗಂಭೀರ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆ ಕರೆದುಕೊಂಡು ಬಂದ ಸಂದರ್ಭ ಸ್ಥಳೀಯ ವೈದ್ಯರು ತುರ್ತು ಚಿಕಿತ್ಸೆ ನೀಡುವ ಮೂಲಕ ಸ್ಪಂದಿಸಿದ್ದಾರೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಾರ್ವಜನಿಕರು ಗಾಯಗಳನ್ನು ಆಸ್ಪತ್ರೆ ಕರೆ ತರುವಲ್ಲಿ ಸಹಕರಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಗೇಜ್ ಬಸ್ಸಿನಿಂದ ಹೊರಗಡೆ ಬಿದ್ದಿರುವುದಾಗಿ ಪ್ರಯಾಣಿಕರೊಬ್ಬರು ಜೋರಾಗಿ ಕಿರುಚಿದರೆನ್ನಲಾಗಿದೆ. ಈ ವೇಳೆ ಚಾಲಕ ಹಿಂಬದಿಗೆ ತಿರುಗಿ ನೋಡಿದ್ದರಿಂದ ಬಸ್ ನಿಯಂತ್ರಣ ತಪ್ಪಿ ರಸ್ತೆ ಬಲಭಾಗದ ದರೆಯ ಬಂಡೆಗೆ ಢಿಕ್ಕಿ ಹೊಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

Read These Next

21 ಜೂನ್ ನಿಂದ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದದಲ್ಲಿ ಎಲ್ಲ ಸೇವೆಗಳು ಸಾರ್ವಜನಿಕರಿಗೆ ಮುಕ್ತ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಸೋಮವಾರ ದಿನಾಂಕ 21ನೇ ಜೂನ್ 2021 ರಿಂದ  ...