ಭಟ್ಕಳದಲ್ಲಿ ಹಾಳುಮೂಳು ಹೆದ್ದಾರಿ ಕಾಮಗಾರಿ; ಸಂಪರ್ಕ ರಸ್ತೆಯೂ ಇಲ್ಲ, ಸರ್ವೀಸ್ ರಸ್ತೆಯೂ ಇಲ್ಲ ! ಇದು ಐಆರ್‍ಬಿ ಆಘಾತ ; ನಿಲ್ಲುವ ಹಾಗಿಲ್ಲ ಅಪಘಾತ

ಭಟ್ಕಳ: ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಆರಂಭವಾಗಿ 8 ವರ್ಷಗಳೇ ಕಳೆದಿವೆ. ಹೆದ್ದಾರಿ ಕಾಮಗಾರಿ ಮುಗಿಯುವ ಮುನ್ನವೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಹೆದ್ದಾರಿಯನ್ನು ಉದ್ಘಾಟಿಸಿ ವರ್ಷವೇ ಕಳೆದು ಹೋಗಿದೆ. ಆದರೆ ಭಟ್ಕಳದಲ್ಲಿ ಚತುಷ್ಪಥ ಹೆದ್ದಾರಿ ಎನ್ನುವುದು ಹಾಳುಮೂಳು ಕೆಲಸವಾಗಿಯೇ ಉಳಿದುಕೊಂಡಿದ್ದು, ನಿತ್ಯವೂ ನಾಗರಿಕರನ್ನು ಗೋಳು ಹೊಯ್ದುಕೊಳ್ಳುತ್ತಿದೆ.
ಭಟ್ಕಳ ತೆಂಗಿನಗುಂಡಿ ಕ್ರಾಸ್‍ನಿಂದ ಇಲ್ಲಿನ ಮಣ್ಕುಳಿಯವರೆಗೂ ಅಲ್ಲಲ್ಲಿ ಅಗೆದಿಟ್ಟ ರಸ್ತೆ, ನಡುನಡುವೆ ಐಆರ್‍ಬಿ ಬ್ಯಾರಿಕೇಡ್, ಅನಿಯಮಿತ ತಿರುವುಗಳು ಜನರನ್ನು ಎದುರುಗೊಳ್ಳುತ್ತಲೇ ಇದೆ. ಅಕ್ಕಪಕ್ಕದ ಕಿರುರಸ್ತೆಗಳಿಂದ ಹೆದ್ದಾರಿಯನ್ನು ಸಂಪರ್ಕಿಸಲು ತಿಣುಕಾಡಲೇ ಬೇಕು. ಅಲ್ಲಲ್ಲಿ ಹಂಪ್‍ಗಳನ್ನು ನೆನಪಿಸುವ ರಸ್ತೆಯ ಅಂಚುಗಳು ವಾಹನ ಸವಾರರನ್ನು ಅಪಾಯಕ್ಕೆ ನೂಕುತ್ತಿವೆ. ರಸ್ತೆ ನಿಯಮಗಳನ್ನು ಕಳೆದುಕೊಂಡು,
ಕಳೆದ 7-8 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಅಲ್ಲಿ, ಇಲ್ಲಿ ಹೆದ್ದಾರಿಇ ಅಗೆದು ಅರ್ಧಕ್ಕೆ ಬಿಡಲಾಗಿದೆ. ಜನ ಸಾಯುತ್ತಾ ಇದ್ದಾರೆ. ಹೆದ್ದಾರಿ ಕಾಮಗಾರಿಗೆ ವೇಗ ನೀಡಲು ಅಧಿಕಾರಿಗಳು ಮುಂದಾಗಬೇಕು. - ರಾಘವೇಂದ್ರ ನಾಯ್ಕ, ಬಾಬಾ ಯಮ್ಹಾ ಮೋಟಾರ್ಸ್, ಭಟ್ಕಳ |
ಎಲ್ಲಿಂದಲೋ ಬಂದು ಹೆದ್ದಾರಿಗೆ ನುಗ್ಗುವ ವಾಹನಗಳು ಅಪಘಾತಗಳನ್ನು ಹೆಚ್ಚಿಸುತ್ತಿವೆ. ತೆಂಗಿನಗುಂಡಿ ಕ್ರಾಸ್, ಸಿಟಿಲೈಟ್ ಹೊಟೆಲ್, ಹಿಂದೂ ಕಾಲೋನಿ, ಜಾಲಿ ಕ್ರಾಸ್, ನ್ಯೂ ಇಂಗ್ಲೀಷ್ ಸ್ಕೂಲ್ ರೋಡ್ ಕ್ರಾಸ್, ತಾಪಂ ಕಚೇರಿ ಕ್ರಾಸ್, ಪಿಎಲ್‍ಡಿ ಬ್ಯಾಂಕ್ ಕ್ರಾಸ್ ಸೇರಿದಂತೆ ಹಲವಡೆ ದಿನದಿಂದ ದಿನಕ್ಕೆ ಹೆದ್ದಾರಿಯನ್ನು ಸಂಪರ್ಕಿಸುವಲ್ಲಿ ವಾಹನ ದಟ್ಟಣೆ ನಿರ್ಮಾಣವಾಗುತ್ತಿದ್ದು, ಹೆದ್ದಾರಿ ಪ್ರಯಾಣ ಎನ್ನುವುದು ಸಾಹಸಮಯ ಕಸರತ್ತಾಗಿ ಬದಲಾಗಿದೆ. ಭಟ್ಕಳ ಸಂಶುದ್ದೀನ್ ಸರ್ಕಲ್ ಇನ್ನಷ್ಟು ವಾಹನ ನಿಬಿಡ ಪ್ರದೇಶವಾಗುತ್ತಿದೆ. ಶಿರಾಲಿ ಭಾಗದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಭಟ್ಕಳ ಹೆದ್ದಾರಿಯಲ್ಲಿ ಪ್ರತಿ ದಿನ ಒಂದಿಲ್ಲೊಂದು ವಾಹನ ಅಪಘಾತಗಳು ಸಂಭವಿಸುತ್ತಲೇ ಇವೆ. ಪುಟ್ಟ ಮಕ್ಕಳು, ವಯೋವೃದ್ಧರಂತೂ ರಸ್ತೆ ದಾಟುವುದು ಇರಲಿ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಲೂ ಯಾತನೆಯನ್ನು ಅನುಭವಿಸಬೇಕಾಗಿದೆ.
ಕುಂಟುತ್ತ ಸಾಗಿರುವ ಕಾಮಗಾರಿ:
ತಾಲೂಕಿನ ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಭಟ್ಕಳ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುಂಟುತ್ತ ಸಾಗಿದೆ. ಕಟ್ಟಡ ತೆರವು ಕಾರ್ಯವೂ ನಿಧಾನಗತಿಯಲ್ಲಿ ಸಾಗಿದೆ.
ಭಟ್ಕಳದಲ್ಲಿ 95% ಭೂಸ್ವಾಧೀನ ಕಾರ್ಯವನ್ನು ಮುಗಿಸಿದ್ದೇವೆ. ಪರಿಹಾರ ವಿತರಣೆ ಕೆಲಸ ಪ್ರಗತಿಯಲ್ಲಿದ್ದು, ಮುಂದಿನ 15-20 ದಿನಗಳ ಒಳಗೆ ಎಲ್ಲವೂ ಒಂದು ಹಂತಕ್ಕೆ ಬರಲಿದೆ. - ಸಾಜೀದ್ ಮುಲ್ಲಾ, ಭೂಸ್ವಾಧೀನಾಧಿಕಾರಿಗಳು |
ಅಲ್ಲಲ್ಲಿ ಕೆಲವು ಕಡೆ ಡಾಂಬರು ಹಾಕಿ ಅರ್ಧಕ್ಕೆ ಬಿಡಲಾಗಿದೆ. ಪರಿಣಾಮವಾಗಿ ಚತುಷ್ಪಥ ಹೆದ್ದಾರಿಯೂ ಇಲ್ಲ, ಹಳೆಯ ಹೆದ್ದಾರಿಯೂ ಇಲ್ಲ ಎಂಬಂತಾಗಿದ್ದು, ಹಾಳು ರಸ್ತೆಯಲ್ಲಿ ವಾಹನ ಓಡಿಸುವ ಅನುಭವ ಪ್ರಯಾಣಿಕರದ್ದಾಗಿದೆ. ಸಾಲದೆಂಬಂತೆ ಭಟ್ಕಳದಲ್ಲಿ ಫ್ಲೈ ಓವರ್ ಆಗುತ್ತದೆಯೋ, ಹೆದ್ದಾರಿ ಅಗಲವೆಷ್ಟು, ಅಂಡರ್ ಪಾಸ್ ಎಲ್ಲಿ ಇತ್ಯಾದಿ ಯಾವ ಪ್ರಶ್ನೆಗೂ ನಿಖರ ಉತ್ತರ ಸಿಗುತ್ತಿಲ್ಲ. ಈ ನಡುವೆ ಅಕ್ಕಪಕ್ಕದ ಊರುಗಳಿಗೆ ತೆರಳುವ ವಾಹನಗಳಿಂದ ಅದಾಗಲೇ ಟೋಲ್ ವಸೂಲಿ ನಡೆಯುತ್ತಿದ್ದು, ಹೆದ್ದಾರಿ ಸರಿ ಇಲ್ಲದೇ ಹಣ ಏಕೆ ನೀಡಬೇಕು ಎಂದು ಜನರು ಕೇಳುತ್ತಲೇ ಇದ್ದಾರೆ. ಕೇಳಿಸಿಕೊಳ್ಳುವವರು ಮಾತ್ರ ಯಾರೂ ಇಲ್ಲ!