ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆ: ಬೈಂದೂರು ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನಾ ಪಾದಯಾತ್ರೆ

Source: so news | By Staff Correspondent | Published on 15th December 2019, 12:18 AM | Coastal News | Don't Miss |


ಕುಂದಾಪುರ : ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ತಲ್ಲೂರಿನಿಂದ ಶಿರೂರಿನ ರೆಗೆ ಚತುಷ್ಪಥ ಕಾಮಗಾರಿ ಕಳಪೆಯಾಗಿದೆ ಮತ್ತು ನಿಯಮದಂತೆ ಕಾಮಗಾರಿ ಮುಗಿಯುವ ಮುನ್ನ ಶಿರೂರಿನಲ್ಲಿ ಟೋಲ್ ಸಂಗ್ರಹ ಮಾಡಬಾರದು ಎಂದು ಆಗ್ರಹಿಸಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ  ಬ್ಲಾಕ್ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಪಾದಯಾತ್ರೆಯು ಮರವಂತೆಯಿಂದ  ಬೈಂದೂರು ತನಕ ಶನಿವಾರ ಬೆಳಿಗ್ಗೆ ನಡೆಯಿತು. ಪಾದಯಾತ್ರೆಯ ಕೊನೆಯಲ್ಲಿ ಇಲ್ಲಿನ ಹೊಸ ಬಸ್‌ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಲ್ಲೂರಿನಿಂದ ಶಿರೂರು ವರೆಗಿನ ಚತುಷ್ಪಥ ಹೆದ್ದಾರಿ ಕಾಮಗಾರಿ ರಾಷ್ರೀಯ ಹೆದ್ದಾರಿ ಗುಣಮಟ್ಟ ಹೊಂದಿಲ್ಲ. ಅದರಿಂದಾಗಿ ಈಗಾಗಲೇ ಆಗಿರುವ ಜೀವ ಮತ್ತು ಆಸ್ತಿಪಾಸ್ತಿ ಹಾನಿ ಮುಂದಿನ ದಿನಗಳಲ್ಲಿ ಉಲ್ಬಣಗೊಳ್ಳಲಿದೆ. ಅವ್ಯವಸ್ಥಿತ ಹೆದ್ದಾರಿಯನ್ನು ಶೀಘ್ರ ಸರಿಪಡಿಸಬೇಕು ಎಂದರು.

ದಟ್ಟ ಜನವಾಸ ಇರುವೆಡೆ ಸರ್ವೀಸ್ ರಸ್ತೆ ನಿರ್ಮಿಸಬೇಕು. ಮಳೆನೀರು ಹರಿದುಹೋಗಲು ಚರಂಡಿ ರಚಿಸಬೇಕು. ಹೆದ್ದಾರಿ ಮೇಲೆ ನೀರು ಹರಿದು ಕೃತಕ ನೆರೆ ಏರ್ಪಟ್ಟು ಕೃಷಿ ಭೂಮಿ, ಮನೆಗಳಿಗೆ ನುಗ್ಗಿ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿತವಾಗಿರುವ ಬೈಂದೂರು-ಕೊಲ್ಲೂರು ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಯಡ್ತರೆ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ನಿರ್ಮಿಸಿ ಅಲ್ಲಿ ಉಂಟಾಗಬಹುದಾದ ಅಪಾಯವನ್ನು ತಡೆಗಟ್ಟಬೇಕು. ಎಲ್ಲೆಡೆ ಬಸ್ ನಿಲ್ದಾಣ ನಿರ್ಮಿಸಬೇಕು. ನಾಶ ಪಡಿಸಿರುವ ಪಂಚಾಯಿತಿಗಳ ಕುಡಿಯುವ ನೀರಿನ ಪೈಪ್‌ಗಳನ್ನು ಸರಿಪಡಿಸಿಕೊಡಬೇಕು. ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪೊಲೀಸ್ ವರಿಷ್ಠರ ಗಮನಕ್ಕೆ ತರಲಾಗಿದೆ ಈ ಕುರಿತು ಅವರನ್ನೂ ಇನ್ನೊಮ್ಮೆ ಆಗ್ರಹಿಸಲಾಗುವುದು ಎಂದು ಅವರು ಹೇಳಿದರು.  
 
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಮಾತನಾಡಿ ಈ ಹಿಂದೆ ಸಂಸದ ಆಸ್ಕರ್ ಫೆರ್ನಾಂಡೀಸ್ ಶಿರೂರು ಮತ್ತು ಬೈಂದೂರಿನಲ್ಲಿ ನಡೆಸಿದ ಸಭೆಗಳಲ್ಲಿ ಅಧಿಕಾರಿಗಳಿಗೆ ನೀಡಿದ್ದ ಸೂಚನೆಗಳನ್ನು ಪಾಲಿಸಬೇಕು.  ಅರೆಬರೆ ಕಾಮಗಾರಿ ನಡೆಸಿ ಶಿರೂರಿನಲ್ಲಿ ಶುಲ್ಕ ಸಂಗ್ರಹಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕೆ ನಮ್ಮ ಮತ್ತು ಸಾರ್ವಜನಿಕರ ಪ್ರಬಲ ವಿರೋಧ ಇದೆ. ಹಾಗೇನಾದರೂ ಮಾಡಿದರೆ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪಕುಮಾರ ಶೆಟ್ಟಿ, ಜಿಲ್ಲಾ ಸಮಿತಿ ಕೋಶಾಧಿಕಾರಿ ಎಸ್. ವಾಸುದೇವ ಯಡಿಯಾಳ್, ಯುವ ಘಟಕದ ಅಧ್ಯಕ್ಷ ಶೇಖರ ಪೂಜಾರಿ, ಮಹಿಳಾ ಪ್ರತಿನಿಧಿ ಮಂಜುಳಾ, ಪದಾಧಿಕಾರಿಗಳು, ಪ್ರಮುಖರು ಇದ್ದರು. 

ತಹಶೀಲ್ದಾರ್ ಬಸಪ್ಪ ಪಿ. ಪೂಜಾರ್ ಬೇಡಿಕೆಗಳ ಮನವಿ ಸ್ವೀಕರಿಸಿ, ಅದನ್ನು ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು. ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಚೆನ್ನಯ್ಯ ಮತ್ತು ಗುತ್ತಿಗೆದಾರ ಕಂಪನಿಯ ಯೋಜನಾ ನಿರ್ದೇಶಕ ಯೋಗೇಂದ್ರಪ್ಪ ಅವರಿಗೂ ಮನವಿಯ ಪ್ರತಿಗಳನ್ನು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.

ಬೆಳಿಗ್ಗೆ ಗೋಪಾಲ ಪೂಜಾರಿ ಮರವಂತೆಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದರು. ಮಹಿಳೆಯರೂ ಸೇರಿದಂತೆ ನೂರಾರು ಕಾರ್ಯಕರ್ತರು ಬಿಸಿಲನ್ನು ಲೆಕ್ಕಿಸದೆ ಬೈಂದೂರು ವರೆಗಿನ ೧೫ ಕಿಲೋಮೀಟರು ಉದ್ದದ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಉದ್ದಕ್ಕೂ ಬೇಡಿಕೆಗಳ ಘೋಷಣೆ, ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರ ಕಂಪನಿ ಐಆರ್‌ಬಿ ವಿರುದ್ಧ ಖಂಡನೆ ಮೊಳಗಿದುವು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...