ಕುಡಿಯುವ ನೀರಿನ ಪೈಪನ ವಿಚಾರವಾಗಿ: ಸೈನಿಕರ ತಂದೆ ತಾಯಿಗಳ ಮೇಲೆ ಮಾರಣಾಂತಿಕ ಹಲ್ಲೆ

Source: so news | By MV Bhatkal | Published on 18th March 2019, 8:49 AM | Coastal News | Don't Miss |

ಭಟ್ಕಳ:  ಮುರ್ಡೇಶ್ವರ ಮಾವಳ್ಳಿ-1 ಪಂಚಾಯತ ವ್ಯಾಪ್ತಿಯ ಹಿರೇದೋಮಿಯಲ್ಲಿ ಭಾನುವಾರದಂದು ಸೈನಿಕರ ತಂದೆ ತಾಯಿಗಳ  ಮೇಲೆ  ಮಾರಣಾಂತಿಕ  ಹಲ್ಲೆ  ನಡೆಸಿ  ಗಾಯಗೊಳಿಸಿ, ಜೀವ ಬೆದರಿಕೆ ಹಾಕಿದ ಕುರಿತಾಗಿ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಹಲ್ಲೆಗೊಳಗಾದ  ಸೈನಿಕರ ತಂದೆ ತಾಯಿಗಳು ಮುರ್ಡೇಶ್ವರ ಹೀರೆದೋಮಿಯ ಮಂಜುನಾಥ ಶನಿಯಾರ ನಾಯ್ಕ, ಯಮುನಾ ಮಂಜುನಾಥ ನಾಯ್ಕ ಎಂದು ತಿಳಿದು ಬಂದಿದೆ.  
ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪಿಗಳು ಹಿರೆದೋಮಿಯ ಶ್ರೀಧರ ತಿಮ್ಮಪ್ಪ ಮೊಗೇರ, ತಿಮ್ಮಪ್ಪ ನಾರಾಯಣ ಮೊಗೇರ, ಮಾದೇವಿ ತಿಮ್ಮಪ್ಪ ಮೊಗೇರ, ನೇತ್ರಾ ಉಮೇಶ ಮೊಗೇರ ಎಂದು ದೂರಿನಲ್ಲಿ ತಿಳಿಸಿದ್ದಾರೆ. 
ಹಲ್ಲೆ  ನಡೆಸಿದವರು  ಪಕ್ಕದ ಮನೆಯವರಾಗಿದ್ದು ಪಂಚಾಯಿತಿಯಿಂದ ಕುಡಿಯುವ ನೀರಿನ ಪೈಪನ ವಿಚಾರವಾಗಿ ಹಾಗೂ ದನ ತಿರುಗಾಡುವ ದಾರಿ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರತಿ ಬಾರಿಯೂ ಸೈನಿಕರ ಮನೆಗೆ ಬರುವ ನೀರಿನ ಪೈಪ್‍ನ್ನು ಆರೋಪಿಗಳು ತುಂಡರಿಸುತ್ತಿದ್ದರು. ಇದರಿಂದ ಬೇಸತ್ತ ಮಂಜುನಾಥ ನಾಯ್ಕ ಮುರ್ಡೇಶ್ವರಕ್ಕೆ ಆಗಮಿಸಿದ ಜಿ.ಪಂ ಸಿ.ಎಸ್‍ಗೆ ದೂರು ಸಲ್ಲಿಸಿದ್ದರು. ಅದನ್ನು  ಪರಿಶೀಲಿಸಿ ನೀರಿನ ಪೈಪ್ ದುರಸ್ತಿ ಮಾಡಲು ಸಿ.ಎಸ್. ಮಾವಳ್ಳಿ ಪಂಚಾಯಿತಿ ಪಿಡಿಒಗೆ ಸೂಚಿಸಿದ್ದರು. ಪಿಡಿಒ  ಸ್ಥಳಕ್ಕೆ  ತೆರಳಿದಾಗಲೂ ಆರೋಪಿಗಳು  ಖ್ಯಾತೆ ತೆಗೆದಿದ್ದರು. ಆದರೆ ಇದು ಸರ್ಕಾರದ ಆದೇಶ ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವದು ಅನಿವಾರ್ಯ ಎಂದು ಪಿಡಿಒ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದನ ಮೇಯಿಸಲು  ಯಮುನಾ  ಮಂಜುನಾಥ ನಾಯ್ಕ ತೆರಳಿದಾಗ ಹಿಂದಿನಿಂದ ಬಂದು ಕತ್ತಿಯಿಂದ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಮಂಜುನಾಥ ಶನಿಯಾರ ನಾಯ್ಕ ಇವರ ಮೇಲೂ ಕುತ್ತಿಗೆ ಸೇರಿದಂತೆ ವಿವಿದೆಡೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಸ್ಥಳಿಯರು ಶಿರಾಲಿ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು ಅಲ್ಲಿ ಇಬ್ಬರನ್ನು ದಾಖಲಿಸಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ನೇರವಾಗಿ ತಾಲೂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಗಾಯಗೊಂಡ ಸೈನಿಕರ ತಾಯಿಯ ಕೈಗೆ ಬಲವಾದ ಗಾಯಗೊಂಡಿದ್ದು ತಂದೆಗೆ ಎದೆ ಭಾಗಕ್ಕೆ ಪೆಟ್ಟಾಗಿದೆ. ಸದ್ಯ ಇಬ್ಬರು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 
ಇವರ ಹಿರಿಯ ಪುತ್ರ ಹರೀಶಾ ಮಂಜುನಾಥ  ನಾಯ್ಕ  ಗುಜರಾತಿನಲ್ಲಿ  ಭಾರತೀಯ ಭೂಸೇನೆಯಲ್ಲಿ ಕಮಾಂಡೊ ಆಗಿದ್ದರೆ, ಇನ್ನೊರ್ವ ಪುತ್ರ ನಂದೀಶ ಮಂಜುನಾಥ ನಾಯ್ಕ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಭೂಸೇನೆಯಲ್ಲಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 
ಈ ಕುರಿತು ಪ್ರತಿಕ್ರಿಯಿಸಿದ ಸೈನಿಕರ ತಂದೆ ಮಂಜುನಾಥ ಶನಿಯಾರ ನಾಯ್ಕ ‘ನನ್ನ ಪತ್ನಿ ದನ ಮೇಯಿಸಲು ತೆರಳಿದ ವೇಳೆ ಅಡ್ಡ ಗಟ್ಟಿ ಕತ್ತಿ ಹಿಡಿದು ಹಲ್ಲೆ ನಡೆಸಿದ್ದಾರೆ. ಕೆಟ್ಟ ಶಬ್ಧದಿಂದ ಬೈಯ್ದು ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ. ಮಕ್ಕಳಿಬ್ಬರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದು ಪಾಲಕರಾದ ನಮಗೆ ಯಾವುದೇ ರಕ್ಷಣೆಯಿಲ್ಲವಾಗಿದೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ವಾಸವಿದ್ದು ನಮಗೆ ರಕ್ಷಣೆ ಬೇಕಿದೆ ಎಂದು ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...