ಆಡಳಿತ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಮಾಧ್ಯಮಗಳು ಎಚ್ಚರಿಸಬೇಕು : ಜಿಲ್ಲಾಧಿಕಾರಿ ಪ್ರಭುಲಿಂಗ

Source: SO News | By Laxmi Tanaya | Published on 16th July 2023, 10:43 PM | Coastal News | Don't Miss |

ಕಾರವಾರ: ಒಳ್ಳೆಯ ಕೆಲಸ ಮಾಡಲು ಯಾವುದೇ ನಿಗದಿಯ ದಿನ ಆಗಬೇಕು ಎಂದಿಲ್ಲ. ವ್ಯಕ್ತಿ ಎಂದ ಮೇಲೆ ತಪ್ಪುಗಳಾಗುವುದು ಸಹಜ. ಆಡಳಿತ ತಪ್ಪು ದಾರಿಯಲ್ಲಿ ಹೋಗುತ್ತಿದ್ದರೆ ಮಾಧ್ಯಮಗಳು ಎಚ್ಚರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ಭಾನುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರವಾರ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ  ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇತ್ತೀಚಿನ ದಿನದಲ್ಲಿ  ವ್ಯಾಪಕವಾಗುತ್ತಿರುವ ಮಾದಕ ವಸ್ತುಗಳ ವಿಷ ವರ್ತುಲದಿಂದ  ಯುವಜನತೆಯನ್ನು ಮುಕ್ತ ಮಾಡುವಲ್ಲಿ ಮಾಧ್ಯಮ, ಆಡಳಿತ ಒಟ್ಟಾಗಿ ಕಾರ್ತನಿರ್ವಹಿಸಬೇಕಿದೆ.
ಮಾದಕ ದ್ರವ್ಯಕ್ಕೆ ಅಂಟಿಕೊಂಡವರು ತಮ್ಮ ಆಸ್ತಿ, ಪಾಸ್ತಿ ಮಾರಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪುವುದನ್ನು ನೋಡಿದ್ದೇವೆ. ಆ ನಿಟ್ಟಿನಲ್ಲಿ ಎಲ್ಲರೂ ಜಾಗೃತವಾಗಬೇಕಿದೆ ಎಂದರು.
ಪತ್ರಿಕೋದ್ಯಮಕ್ಕೆ ಯಾವುದೇ ಪರಿಮಿತಿ ಇಲ್ಲ. ಮಾಧ್ಯಮದ ಸ್ವರೂಪ ಬದಲಾಗಿದೆ. ಅಂದು ಪತ್ರಿಕೆಗಳು ಮಾತ್ರ ಸುದ್ದಿಯ ಮೂಲವಾಗಿದ್ದವು. ಇಂದು, ಸಾಮಾಜಿಕ ಜಾಲತಾಣದ ಕಾಲದಲ್ಲಿ ಎಲ್ಲರೂ ಪತ್ರಕರ್ತರಾಗಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಹೊಸ ಬದಲಾವಣೆಯಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳನ್ನು ಆಳವಡಿಸಿಕೊಂಡು ಈ ಕ್ಷೇತ್ರ ಇನ್ನಷ್ಟು ಬೆಳೆಯಲಿ ಎಂದರು.

ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಮಂಜುನಾಥ ನಾವಿ, ಸಂವಿಧಾನದ ನಾಲ್ಕನೆಯ ಸ್ತಂಬ ಮಾಧ್ಯಮ. ಆಡಳಿತದ ತಪ್ಪು ತಿದ್ದುವ, ಜವಾಬ್ದಾರಿ ಮಾಧ್ಯಮಗಳಿಗಿದೆ ಎಂದರು.ಕಾರವಾರದ ಪತ್ರಕರ್ತರು ಮೌಲ್ಯಗಳನ್ನು ಅಳವಡಿಸಿಕೊಂಡಿದ್ದನ್ನು ನೋಡಿದ್ದೇನೆ ಎಂದು ಶ್ಲಾಘಿಸಿದರು.

ಉತ್ತರಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ, ಎಲ್ಲ ಕ್ಷೇತ್ರಗಳ ಸಮಸ್ಯೆ ಬಗೆಹರಿಯಲು ಮಾಧ್ಯಮ ಕಾರಣ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಶಿವಾನಂದ ನಾಯಕ, ಪತ್ರಕರ್ತರಿಗೆ ಸಾಕಷ್ಟು, ಸವಾಲುಗಳಿವೆ. ತೊಂದರೆಯಿದೆ. ಅವುಗಳನ್ನು ಸಹಿಸಿ ಕುಟುಂಬ ಕಾಪಿಟ್ಟುಕೊಂಡು  ಪತ್ರಿಕಾ ಕ್ಷೇತ್ರಸಲ್ಲಿ ಜವಾಬ್ದಾರಿ ನಿರ್ವಹಿಸುವುದು ಶ್ಲಾಘನೀಯ ಎಂದರು. ಮಾಧ್ಯಮ ಕಲುಷಿತವಾಗುವ ಸಂದರ್ಭದಲ್ಲಿ, ಅದಕ್ಕೆ ಬಗ್ಗದೇ, ಕಾರವಾರದ ಪತ್ರಕರ್ತರು ಕಾರ್ಯನಿರ್ವಹಿಸಿದ್ದಾರೆ ಎಂದರು.

ನೇತ್ರಾಣಿ ಅಡ್ವೆಂಚರ್ಸ್ ಮಾಲೀಕ ಗಣೇಶ ಹರಿಕಂತ್ರ, ಉತ್ತರ ಕನ್ನಡದಲ್ಲಿ ಪ್ರವಾಸೋದ್ಯಮ‌ ಬೆಳೆಸಲು ಮಾಧ್ಯಮ ಕಾರಣ ಎಂದರು.

ಹಿರಿಯ ಪತ್ರಕರ್ತರಾದ ಪಿ. ಕೆ. ಚಾಪಗಾಂವಕರ್, ವಸಂತಕುಮಾರ‌ ಕತಗಾಲ, ನಾಗರಾಜ ಹರಪನಹಳ್ಳಿ, ನಾಗೇಂದ್ರ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ವರ್ಗಾವಣೆಯಾದ ವಾರ್ತಾ ಇಲಾಖೆ ರಾಘವೇಂದ್ರ ಕುರಣಿ  ಅವರನ್ನು ಬೀಳ್ಕೊಡಲಾಯಿತು.

ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ. ಬಿ. ಹರಿಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ  ಸುಭಾಷ್ ಚಂದ್ರ ಎನ್.ಎಸ್. ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಗಣಪತಿ ಹೆಗಡೆ ವಂದಿಸಿದರು. ವಿನುತಾ ಅಂಬೇಕರ್ ಪ್ರಾರ್ಥಿಸಿದರು.
........
ಟ್ಯಾಗೋರ್ ಪ್ರಶಸ್ತಿ ಪ್ರದಾನ : 
ಜೀ ನ್ಯೂಸ್ ಪ್ರಧಾನ ರಾಜಕೀಯ ವರದಿಗಾರ  ಜನಾರ್ಧನ ಹೆಬ್ಬಾರ್, ನ್ಯೂಸ್ 18 ಉತ್ತರ ಕನ್ನಡ ವರದಿಗಾರ ದರ್ಶನ ನಾಯ್ಕ, ಕರಾವಳಿ ಮುಂಜಾವು ವರದಿಗಾರ ಪ್ರಶಾಂತ ಮಹಾಲೆ ಅವರಿಗೆ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೊಡಮಾಡುವ 2023 ರ  ಟ್ಯಾಗೋರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶೇಷಗಿರಿ ಮುಂಡಳ್ಳಿ ನಿರ್ವಹಣೆ ಮಾಡಿದರು.

ಸಮಾಜ ಸೇವಕರಿಗೆ ಸನ್ಮಾನ : 
ಉರಗ ತಜ್ಞರಾದ ಗೋಪಾಲ ನಾಯ್ಕ, ಮಹೇಶ ನಾಯ್ಕ ಅವರ್ಸಾ,  ಸಮಾಜ ಸೇವಕ ಸ್ಯಾಮ್ಸನ್ ಜಾನ್  ಡಿಸೋಜಾ, ರಕ್ತದಾನಿ ಮಂಜುನಾಥ ಕೃಷ್ಣ ಮುದಗೇಕರ್ ಹಾಗೂ ಪಹರೆ ವೇದಿಕೆಯ ಗೌರವ ಅಧ್ಯಕ್ಷ ರಮೇಶ ಗುನಗಿ, ಜೀವ ರಕ್ಷಕರಾದ  ಚಂದ್ರಶೇಖರ ಗಣಪತಿ ದೇವಾಡಿಗ, ಜೈರಾಮ ಕುಪ್ಪ ಹರಿಕಾಂತ, ಮಾರುತಿ ಪಾಂಡುರಂಗ ಸಾಧಿಯೆ, ಪೌರ ಕಾರ್ಮಿಕರಾದ ವಿಠ್ಠಲ ಅಣ್ಣು ಹರಿಜನ, ಸುಮಿತ್ರಾ ಶಿರಾಲಿಕರ್ ಅವರನ್ನು ಸನ್ಮಾನಿಸಲಾಯಿತು. ಪ್ರಮೋದ ಹರಿಕಾಂತ ಹಾಗೂ ಸುಭಾಸ ಧೂಪದಹೊಂಡ ನಿರ್ವಹಿಸಿದರು

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...