14 ದಿನಗಳವರೆಗೆ ಪೊಲೀಸರು ಏನು ಮಾಡುತ್ತಿದ್ದರು? ಪರಿಸ್ಥಿತಿಯ ಬಗ್ಗೆ ವಿವರವಾದ ವರದಿ ಸಲ್ಲಿಸಲು ಮಣಿಪುರಕ್ಕೆ ಸುಪ್ರೀಂ ಸೂಚನೆ

Source: Vb | By I.G. Bhatkali | Published on 1st August 2023, 8:08 AM | National News |

ಹೊಸದಿಲ್ಲಿ: ಮಣಿಪುರದ ಕಾಂಗ್‌ಪೊಕ್ವಿ ಜಿಲ್ಲೆಯಲ್ಲಿ ಮೇ 4ರಂದು ಮೂವರು ಕುಕಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಪೊಲೀಸರಿಗೆ 14 ದಿನಗಳು ಯಾಕೆ ಬೇಕಾಯಿತು ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.

“ಆ 14 ದಿನಗಳ ಕಾಲ ಪೊಲೀಸರು ಏನು ಮಾಡುತ್ತಿದ್ದರು?” ಎಂದು ಮುಖ್ಯ ನ್ಯಾಯಾಧೀಶ ಡಿ.ವೈ, ಚಂದ್ರಚೂಡ್ ಕೇಳಿದರು. “ಝೀರೋ ಎಫ್‌ಐಆರ್ (ಪ್ರಕರಣ ನಡೆದ ಸ್ಥಳದ ಠಾಣಾ ವ್ಯಾಪ್ತಿಯ ಹೊರಗೆ ದಾಖಲಾದ ಎಫ್‌ಐಆರ್) ದಾಖಲಿಸಲು 14 ದಿನಗಳು? ಯಾಕೆ?” ಎಂದು ಅವರು ಉದ್ದರಿಸಿದರು.

“ಮಣಿಪುರ ವೀಡಿಯೊದಲ್ಲಿರುವ ಮಹಿಳೆಯರನ್ನು ಪೊಲೀಸರೇ ದುಷ್ಕರ್ಮಿಗಳ ಗುಂಪಿಗೆ ಹಸ್ತಾಂತರಿಸಿದರು. ಇದು ಭಯಾನಕ” ಎಂದು ನ್ಯಾ. ಚಂದ್ರಚೂಡ್ ಹೇಳಿದರು.

ಮೇ 4ರಂದು ಕಾಂಗ್‌ಪೊಕ್ಸಿಯಲ್ಲಿ ನಡೆದ ಬೆತ್ತಲೆ ಮೆರವಣಿಗೆಯ ಇಬ್ಬರು ಸಂತ್ರಸ್ತ ಮಹಿಳೆಯರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಶ್ನೆಗಳನ್ನು ಕೇಳಿದೆ.

ಮೇ 4ರಂದು ಕಾಂಗ್‌ಪೊಕ್ಷಿಯ ಬಿ. ಫೈನೊಮ್‌ನಲ್ಲಿ ಮೂವರು ಕುಕಿ ಮಹಿಳೆಯರನ್ನು ಬೆತ್ತಲಾಗಿಸಿ ಅವರನ್ನು ಮೆರವಣಿಗೆಯಲ್ಲಿ ಒಯ್ಯಲಾಗಿತ್ತು ಹಾಗೂ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಅದರ ವೀಡಿಯೊ ಜುಲೈ 19ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ಪೈಕಿ ಓರ್ವ ಮಹಿಳೆಯ ಮೇಲೆ “ಅಮಾನುಷ ಸಾಮೂಹಿಕ ಅತ್ಯಾಚಾರ' ನಡೆಸಲಾಗಿತ್ತು ಎಂಬುದಾಗಿ ಪೊಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ಆರೋಪಿಸಲಾಗಿತ್ತು.

ಆದರೆ, ಝೀರೋ ಎಫ್‌ಐಆರ್‌ನ್ನು ಮೇ 18ರಂದು ದಾಖಲಿಸಲಾಗಿತ್ತು. ಆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು ಜುಲೈ 19ರಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕವಷ್ಟೇ.

ಸುಪ್ರೀಂ ಕೋರ್ಟ್ ಜುಲೈ 20ರಂದು ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿತ್ತು. “ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ವಿಶೇಷ ತನಿಖಾ ತಂಡ (ಸಿಟ್) ಕ್ಕೆ ಹಸ್ತಾಂತರಿಸುವುದಷ್ಟೇ ಸಾಕಾಗುವುದಿಲ್ಲ. ನ್ಯಾಯದ ಪ್ರಕ್ರಿಯೆ ಸಂತ್ರಸ್ತೆಯ ಮನೆ ಬಾಗಿಲಿಗೆ ಹೋಗುವಂತೆ ನೋಡಿಕೊಳ್ಳಬೇಕು'' ಎಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠ ಹೇಳಿತು.

ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಈ ಪೀಠದ ಇತರ ಸದಸ್ಯರಾಗಿದ್ದಾರೆ.

ರಾಜ್ಯದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ನ್ಯಾಯಾಲಯವು ಮಣಿಪುರ ಸರಕಾರಕ್ಕೆ ಸೂಚಿಸಿತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...