ಕೇಂದ್ರದ ದಿಲ್ಲಿ ಮಸೂದೆಗೆ ಲೋಕಸಭೆ ಅಂಗೀಕಾರ; ವಿಪಕ್ಷ ಸಭಾತ್ಯಾಗ

Source: Vb | By I.G. Bhatkali | Published on 4th August 2023, 11:36 AM | National News |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಯಲ್ಲಿ ಸೇವೆಗಳ ನಿಯಂತ್ರಣ ಕುರಿತ ವಿವಾದಾತ್ಮಕ ದಿಲ್ಲಿ ಸುಗ್ರೀವಾಜ್ಞೆಗೆ ಬದಲಾಗಿ ದಿಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶದ ಸರಕಾರ (ತಿದ್ದುಪಡಿಗಳು) ಮಸೂದೆ, 2023ನ್ನು ಲೋಕಸಭೆಯು ಗುರುವಾರ ಅಂಗೀಕರಿಸಿದೆ. ದಿನವಿಡೀ ಭಾರೀ ವಾದವಿವಾದಗಳ ಬಳಿಕ ಮಸೂದೆಯು ಧ್ವನಿಮತದಿಂದ ಅಂಗೀಕಾರಗೊಂಡ ಬೆನ್ನಿಗೇ ಪ್ರತಿಪಕ್ಷ ಸಂಸದರು ಸಭಾತ್ಯಾಗ ನಡೆಸಿದರು.

ಕೇಂದ್ರವು ಮೇ 19ರಂದು ದಿಲ್ಲಿಯಲ್ಲಿ ಗ್ರೂಪ್ ಎ ಅಧಿಕಾರಿಗಳ ವರ್ಗಾವಣೆಗಳು ಮತ್ತು ನಿಯೋಜನೆಗಳಿಗಾಗಿ ಪ್ರಾಧಿಕಾರವನ್ನು ರಚಿಸಲು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.

ಇಂದು ಭಾರತವು ಪ್ರತಿಪಕ್ಷಗಳ ಎರಡು ಮುಖಗಳನ್ನು ನೋಡುತ್ತಿದೆ. ಅವರ ಪಾಲಿಗೆ ಸಾರ್ವಜನಿಕ ಕಲ್ಯಾಣಕ್ಕಾಗಿ ಮಸೂದೆಗಳು ಮುಖ್ಯವಲ್ಲ,ಸಣ್ಣ ಪಕ್ಷವೊಂದು ತಮ್ಮ ಮೈತ್ರಿಕೂಟವನ್ನು ತೊರೆಯದಂತೆ ನೋಡಿಕೊಳ್ಳಲು ಅವು ಮಸೂದೆಯನ್ನು ಪ್ರತಿಭಟಿಸುತ್ತಿವೆ. 
# ಅಮಿತ್ ಶಾ, ಕೇಂದ್ರ ಗೃಹಸಚಿವ

ದಿಲ್ಲಿಗೆ ಪೂರ್ಣ ರಾಜ್ಯ ಸ್ಥಾನಮಾನವನ್ನು ನೀಡುವುದಾಗಿ ಬಿಜೆಪಿಯು ಮತ್ತೆ ಮತ್ತೆ ಭರವಸೆಯನ್ನು ನೀಡಿತ್ತು. 2014ರಲ್ಲಿ ನರೇಂದ್ರ ಮೋದಿಯವರು ತಾನು ಪ್ರಧಾನಿಯಾದ ಬಳಿಕ ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನವನ್ನು ಒದಗಿಸುವುದಾಗಿ ಹೇಳಿದ್ದರು. ಇಂದು ಈ ಜನರು ದಿಲ್ಲಿಯ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ಭವಿಷ್ಯದಲ್ಲಿ ಮೋದಿಯವರ ಮಾತುಗಳನ್ನು ನಂಬಬೇಡಿ.
# ಅರವಿಂದ ಕೇಜ್ರವಾಲ್, ದಿಲ್ಲಿ ಸಿಎಂ

ದಿಲ್ಲಿಯ ಚುನಾಯಿತ ಸರಕಾರವು ಮಾತ್ರ ಸರಕಾರಿ ನೌಕರರ ಮೇಲೆ ಅಧಿಕಾರವನ್ನು ಹೊಂದಿದೆ ಹಾಗೂ ಭೂಮಿ, ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳನ್ನು ಹೊರತುಪಡಿಸಿ ಸಂವಿಧಾನದಡಿ ಲೆಫ್ಟಿನಂಟ್ ಗವರ್ನರ್ (ಎಲ್‌ಜಿ) ಅವರು ಯಾವುದೇ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬೆನ್ನಿಗೇ ಕೇಂದ್ರ ಸರಕಾರವು ಈ ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು.

ಸೇವೆಗಳು ಯಾವಾಗಲೂ ಕೇಂದ್ರ ಸರಕಾರದ ನಿಯಂತ್ರಣದಲ್ಲಿವೆ. ಸರ್ವೋಚ್ಚ ನ್ಯಾಯಾಲಯವು ವ್ಯಾಖ್ಯಾನವೊಂದನ್ನು ನೀಡಿದೆ. 1993ರಿಂದ 2015ರವರೆಗೆ ಯಾವುದೇ ಮುಖ್ಯಮಂತ್ರಿ ಇದಕ್ಕಾಗಿ ಹೋರಾಟ ಮಾಡಿರಲಿಲ್ಲ. ಏಕೆಂದರೆ ಜನರಿಗೆ ಸೇವೆಯನ್ನು ಸಲ್ಲಿಸುವುದು ಅಧಿಕಾರಕ್ಕೆ ಬಂದಿದ್ದ ಯಾವುದೇ ಸರಕಾರದ ಉದ್ದೇಶವಾಗಿತ್ತು. ಸೇವೆಯನ್ನು ಸಲ್ಲಿಸುವುದು ಅಗತ್ಯವಾಗಿದ್ದಾಗ ಹೋರಾಡುವ ಅಗತ್ಯವಿಲ್ಲ. ಆದರೆ ಅವರು ಅಧಿಕಾರವನ್ನು ಬಯಸುತ್ತಾರಾದರೆ ಹೋರಾಡುತ್ತಾರೆ ಎಂದು ಲೋಕಸಭೆಯಲ್ಲಿ ಮಸೂದೆಯ ಮೇಲಿನ ಚರ್ಚೆ ಸಂದರ್ಭದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದರು. ಇಂದು ದಿಲ್ಲಿಯ ಜನರ ಹಕ್ಕುಗಳನ್ನು

ಕಿತ್ತುಕೊಳ್ಳುವ ಮಸೂದೆಯ ಕುರಿತು ಲೋಕಸಭೆಯಲ್ಲಿ ಅಮಿತ್‌ ಶಾ ಅವರ ಭಾಷಣವನ್ನು ನಾನು ಆಲಿಸಿದ್ದೇನೆ. ಮಸೂದೆಯನ್ನು ಬೆಂಬಲಿಸಲು ಒಂದೇ ಒಂದು ಪ್ರಬಲ ವಾದ ಅವರ ಬಳಿಯಲ್ಲಿಲ್ಲ. ಅವರು ಅರ್ಥಹೀನ ಮಾತುಗಳನ್ನು ಆಡುತ್ತಿದ್ದಾರೆ, ತಾನು ತಪ್ಪು ಮಾಡುತ್ತಿದ್ದೇನೆ ಎಂದು ಅವರಿಗೂ ಗೊತ್ತಿದೆ' ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಅವರು ಮಸೂದೆಯ ಅಂಗೀಕಾರಕ್ಕೆ ಮುನ್ನ ಟ್ವಿಟಿಸಿದ್ದರು.

ಗುರುವಾರ ಬೆಳಗ್ಗೆ ಸುಗ್ರೀವಾಜ್ಞೆಯನ್ನು ವಿರೋಧಿಸುತ್ತಿರುವುದಕ್ಕಾಗಿ ಕೇಜ್ರವಾಲ್ ನೇತೃತ್ವದ ಸರಕಾರದ ವಿರುದ್ಧ ಹರಿಹಾಯ್ದಿದ್ದ ಶಾ, ಆಪ್ ಜಾಗೃತ ಇಲಾಖೆಯನ್ನು ನಿಯಂತ್ರಿಸಲು ಮತ್ತು ಕೇಜಿವಾಲ್ ಅವರ ಅಧಿಕೃತ ನಿವಾಸದ ನವೀಕರಣವನ್ನು ಬಚ್ಚಿಡಲು ಬಯಸಿದೆ. ಇದೇ ಕಾರಣಕ್ಕೆ ಅದು ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದೆ ಎಂದು ಹೇಳಿದ್ದರು.

ಆಪ್‌ನ ಏಕೈಕ ಸಂಸದನ ಅಮಾನತು:
ಆಶಿಸ್ತಿನ ನಡವಳಿಕೆಗಾಗಿ ನೂತನವಾಗಿ ಚುನಾಯಿತ ರಾಗಿರುವ ಆಪ್ ಸಂಸದ ಸುಶೀಲ್ ಕುಮಾರ್ ರಿಂಕು ಅವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಮುಂಗಾರು ಅಧಿವೇಶನದ ಬಾಕಿ ಅವಧಿಗೆ ಅಮಾನತುಗೊಳಿಸಿದರು.

ದಿಲ್ಲಿ ಸುಗ್ರೀವಾಜ್ಞೆ ಮಸೂದೆ, 2023 ಮೇಲೆ ಚರ್ಚೆಯ ಸಂದರ್ಭದಲ್ಲಿ ಸದನದ ಅಂಗಳಕ್ಕೆ ತೆರಳಿ ಕಾಗದಪತ್ರಗಳನ್ನು ಸ್ಪೀಕರ್‌ ಪೀಠಕ್ಕೆ ಎಸೆದ ಬಳಿಕ ರಿಂಕು ಅವರ ಅಮಾನತು ಆದೇಶ ಹೊರಬಿದ್ದಿತು.

ರಿಂಕು ಲೋಕಸಭೆಯಲ್ಲಿ ಆಪ್‌ ಏಕೈಕ ಸಂಸದರಾಗಿದ್ದಾರೆ. ಮಣಿಪುರ ಹಿಂಸಾಚಾರ ಕುರಿತು ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದಕ್ಕಾಗಿ ಆಪ್ ಸದಸ್ಯ ಸಂಜಯ್ ಸಿಂಗ್ ಅವರನ್ನು ಈ ಹಿಂದೆ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು.

'ರಿಂಕು ಸದನದ ಘನತೆಯನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸಿದ್ದೆ, ಆದರೆ ಅವರು ಅದರಲ್ಲಿ ವಿಫಲಗೊಂಡಿದ್ದಾರೆ. ಅವರು ಸದನದ ಘನತೆಯನ್ನು ಕುಂದಿಸಲು ಪ್ರಯತ್ನಿಸಿದ್ದರು' ಎಂದು ಸ್ಪೀಕರ್ ಹೇಳಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...