ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

Source: sonews | By Staff Correspondent | Published on 19th July 2019, 5:36 PM | Coastal News | Don't Miss |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ಬಾಲಕಿಯೊಬ್ಬಳು ಮೃತಪಟ್ಟಿರುವುದರೊಂದಿಗೆ ನಗರದಲ್ಲಿ ಅಧಿಕೃತವಾಗಿ ಡೆಂಗ್‌ಗೆ 2ನೆ ಬಲಿ ವರದಿಯಾಗಿದೆ.

ಇದರೊಂದಿಗೆ ಇಂದಿನವರೆಗೆ ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ವರದಿಯಾಗುವ ಮೂಲಕ ಅಪಾಯದ ಮುನ್ಸೂಚನೆಯನ್ನು ನೀಡಿದೆ.

ಜಪ್ಪು ಮಾರುಕಟ್ಟೆ ಸಮೀಪದ ಗುಜ್ಜರಕೆರೆ ಬಳಿ ಡೆಂಗ್‌ಗೆ ಬಲಿಯಾದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರವರು, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿರುವ ಸೊಳ್ಳೆಗಳ ಉತ್ಪತ್ತಿ ಮಾಡುವ ತಾಣಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಮಾತ್ರವಲ್ಲದೆ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೊಳ್ಳೆಗಳ ಲಾರ್ವಾ ಕಾಣಿಸಿಕೊಂಡಲ್ಲಿ ಸಂಬಂಧಪಟ್ಟವರಿಗೆ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲು ಸೂಚಿಸಿದರು.

‘‘ಜುಲೈ 1ರಿಂದ ಜಿಲ್ಲೆಯಲ್ಲಿ ಅಲ್ಪಸ್ವಲ್ಪ ಮಳೆ, ಬಿಸಿಲಿನ ವಾತಾವರಣದಿಂದ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ಉತ್ಪತ್ತಿ ತೀವ್ರಗೊಂಡಿದೆ. ಇದರಿಂದಾಗಿ ಡೆಂಗ್ ಹಾಗೂ ಮಲೇರಿಯಾ ಪ್ರಕರಣಗಳು ಉಲ್ಬಣಗೊಂಡಿವೆ. ನಗರ ಪಾಲಿಕೆಯಲ್ಲಿ ಈ ಹಾವಳಿ ಹೆಚ್ಚಿದ್ದು, ಈಗಾಗಲೇ ಮಹಾನಗರ ಪಾಲಿಕೆ ವತಿಯಿಂದ ಫಾಗಿಂಗ್‌ನಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸದ್ಯ ನಿನ್ನೆಯಿಂದ ಮಳೆ ಬರುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಸೊಳ್ಳೆಗಳ ಲಾರ್ವಾ ನಾಶಗೊಂಡು ರೋಗ ನಿಯಂತ್ರಣವಾಗಲಿದೆ. ಜಿಲ್ಲಾಡಳಿತವು ಇದರೊಂದಿಗೆ ಕಮಾಂಡ್ ಸೆಂಟರ್ (ತುರ್ತು ಕೇಂದ್ರ)ವನ್ನು ಆರಂಭಿಸಿದೆ. ಈ ಕೇಂದ್ರದಡಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಐದು ಪ್ರಮುಖ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಲಿವೆ. ಒಂದು ತಂಡ ಯೋಜನೆ ಮತ್ತು ಅಂಕಿ ಅಂಶ ಸಂಗ್ರಹ ಕಾರ್ಯ ನಡೆಸಿದರೆ, ಮತ್ತೊಂದು ತಂಡ ಮಾಹಿತಿ ಕಲೆ ಹಾಕಲಿದೆ. ಇನ್ನೊಂದು ಮಹಾನಗರ ಪಾಲಿಕೆ ತಂಡ (ಸೊಳ್ಳೆಗಳ ಲಾರ್ವಾ ನಾಶ ಸೇರಿದಂತೆ) ಚರಂಡಿಗಳು ಸೇರಿದಂತೆ ಸ್ವಚ್ಛತಾ ಕಾರ್ಯವನ್ನು ಮಾಡಲಿದೆ.  ಮತ್ತೊಂದು ತಂಡ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸುವ ಕಾರ್ಯ ನಡೆಸಲಿದೆ ಹಾಗೂ ಮತ್ತೊಂದು ತಂಡ ಮುಂಜಾಗೃತಾ ಹಾಗೂ ನಿಯಂತ್ರಣ ಕ್ರಮಗಳನ್ನು ನಡೆಸಲಿದೆ. ಸರಕಾರಿ ಅಧಿಕಾರಿಗಳು, ವೈದ್ಯರಿಂದ ತಪಾಸಣೆ, ಪರಿಶೀಲನೆ, ಕ್ರಮಗಳ ಜತೆಗೆ ಖಾಸಗಿ ವೈದ್ಯರು, ಎನ್‌ಜಿಒಗಳಿಂದಲೂ ಕೂಡಾ ಪರಿಶೀಲನೆ ನಡೆಸಲಾಗುವುದು. ಪ್ರತಿ ದಿನ ಈ ಐದು ತಂಡಗಳ ಮುಖ್ಯಸ್ಥರು ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಸೇರಿ ವರದಿ ಒದಗಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಇಂದು ತಮ್ಮನ್ನು ಭೇಟಿಯಾದ ‘ವಾರ್ತಾಭಾರತಿ’ ಪ್ರತಿನಿಧಿಗೆ ಮಾಹಿತಿ ನೀಡಿದ್ದಾರೆ.

''ಸಾಂಕ್ರಾಮಿಕ ರೋಗಗಳು ಹರಡಲು ಸೊಳ್ಳೆಗಳ ನಿಯಂತ್ರಣ ಅತೀ ಅಗತ್ಯವಾಗಿರುವುದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ಸೊಳ್ಳೆಗಳು ಉತ್ಪತ್ತಿಯಾಗದಂತೆ ಗಮನ ಹರಿಸಬೇಕು. ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲದೆ ಹಗಲು ಹೊತ್ತಿನಲ್ಲೂ ಸೊಳ್ಳೆ ನಿರೋಧಕ (ಗುಡ್‌ನೈಟ್, ಸೊಳ್ಳೆ ಪರದೆ, ಸಂಪೂರ್ಣ ಮೈ ಮುಚ್ಚುವ ಉಡುಪುಗಳು) ಗಳನ್ನು ಬಳಸಬೇಕು. ಜ್ವರದ ಬಂದಾಗ ತಕ್ಷಣ ವೈದ್ಯರ ಮೂಲಕ ತಪಾಸಣೆ ಮಾಡಿಸಿಕೊಳ್ಳಬೇಕು.''

-ಸಿಕಾಂತ್ ಸೆಂಥಿಲ್, ಜಿಲ್ಲಾಧಿಕಾರಿ, ದ.ಕ

ಮುನ್ನೆಚ್ಚರಿಕೆ ವಹಿಸಿ: ಗಾಬರಿ ಬೇಡ

*ಡೆಂಗ್-ಮಲೇರಿಯಾ ಸಾಂಕ್ರಾಮಿಕ ರೋಗವಾದ ಕಾರಣ ಮುನ್ನೆಚ್ಚರಿಕೆ ವಹಿಸಬೇಕು. ಆದರೆ, ಗಾಬರಿಯಾಗುವ ಅಗತ್ಯವಿಲ್ಲ.
*ತಲೆಸುತ್ತು/ಗಂಟು ನೋವು ಜ್ವರದ ಲಕ್ಷಣವಾಗಿದ್ದು, ಕಾಣಿಸಿಕೊಂಡ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
*ಮನೆಯ ಸುತ್ತಮುತ್ತ, ಪರಿಸರದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
*ನಿರ್ಮಾಣ ಹಂತದ ಕಟ್ಟಡಗಳಲ್ಲಿ ನೀರು ನಿಲ್ಲದಂತೆ, ಕೊಳಚೆ ಉಂಟಾಗದಂತೆ ಅಗತ್ಯ ಗಮನ ಹರಿಸಬೇಕು.
*ಹಗಲು ಬಿಸಿಲು, ರಾತ್ರಿ ಮಳೆ ಸುರಿಯುವ ವಾತಾವರಣವೂ ಸೊಳ್ಳೆ ಉತ್ಪತ್ತಿಗೆ ಪೂರಕವಾಗುತ್ತಿದೆ. ಮಳೆ ನೀರು ಅಲ್ಲಲ್ಲಿ ನಿಂತು ಸೊಳ್ಳೆ ಉತ್ಪತ್ತಿಯಾಗುವುದರಿಂದ ಮತ್ತು ಕೊಳಚೆ ನೀರಿನ ನಿಲುಗಡೆಯಿಂದ ಡೆಂಗ್-ಮಲೇರಿಯಾ ಸೊಳ್ಳೆ ಹುಟ್ಟುತ್ತವೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...