ಹುತಾತ್ಮ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತ 50 ಲಕ್ಷ ರೂ.ಗೆ ಏರಿಕೆ: ಸಿಎಂ

Source: Vb | By I.G. Bhatkali | Published on 22nd October 2023, 8:13 AM | State News |

ಬೆಂಗಳೂರು: ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಪೊಲೀಸ್‌ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು 20 ಲಕ್ಷ ರೂ.ನಿಂದ 50 ಲಕ್ಷ ರೂ.ಗೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಶನಿವಾರ ನಗರದ ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಪೊಲೀಸ್ ಸಂಸ್ಮರಣ ದಿನದ ಅಂಗವಾಗಿ ಹುತಾತ್ಮರಿಗೆ ಪುಷ್ಪ ಚಕ್ರ ಅರ್ಪಿಸಿ ನಮನ ಸಲ್ಲಿಸಿ ಮಾತನಾಡಿದ ಅವರು, ಪೊಲೀಸ್ ವ್ಯವಸ್ಥೆ ರಾಜ್ಯದ, ಸರಕಾರದ ಘನತೆಯನ್ನು ಹೆಚ್ಚಿಸುವಂತೆ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ ಎಂದರು.

ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೋ ಅಲ್ಲಿಗೆ ಬಂಡವಾಳ ಹೆಚ್ಚಾಗಿ ಬರುತ್ತದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಿ, ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಇದರ ಪರಿಣಾಮ ನಾಡಿನ ತಲಾ ಆದಾಯದ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ನಾಡಿನ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ತಂತ್ರಜ್ಞಾನ ಬೆಳೆದಂತೆ ಪೊಲೀಸ್ ವ್ಯವಸ್ಥೆ ಹೊಸ ಹೊಸ ಸವಾಲುಗಳಿಗೆ ಮುಖಾಮುಖಿ ಆಗುತ್ತದೆ. ಸೈಬರ್ ತಂತ್ರಜ್ಞಾನದ ಜತೆಗೆ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆ ಹಿಡಿಯಬೇಕು ಎಂದು ಸಿದ್ದರಾಮಯ್ಯ ಸೂಚನೆ ನೀಡಿದರು.

ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ರಕ್ಷಣೆ ಕೊಡುವ ಅಗತ್ಯವಿದೆ. ಸುಗಮ ಸಂಚಾರ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಹೀಗಾಗಿ ಹೆಚ್ಚುವರಿ ಪೊಲೀಸ್ ಹುದ್ದೆ ಸೃಷ್ಟಿಸಿದ್ದೇವೆ. ಹೆಚ್ಚುವರಿ ಮಹಿಳಾ ಮತ್ತು ಸಂಚಾರ ಠಾಣೆಗಳನ್ನು ಆರಂಭಿಸಿದ್ದೇವೆ. ಹೊಸ ವಾಹನ ಖರೀದಿಗೆ 100 ಕೋಟಿ ರೂ.ಗಳನ್ನು ನೀಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

2,125 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 450 ಕೋಟಿ ರೂ. ನೀಡಲಾಗುವುದು. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ಭಾಗ್ಯಕ್ಕಾಗಿ 100 ಕೋಟಿ ರೂ. ಒದಗಿಸಲಾಗಿದೆ. ನಿವೃತ್ತ ಸಿಬ್ಬಂದಿಯ ಆರೋಗ್ಯ, ಚಿಕಿತ್ಸೆಗಾಗಿ ನಿಶ್ಚಿತ ಠೇವಣಿ ಇಡಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ 7 ಜಿಲ್ಲೆಗಳಲ್ಲಿ 7 ಪೊಲೀಸ್ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಇವುಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರಕಾರ ಬದ್ಧವಾಗಿದೆ. ಪೊಲೀಸ್ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ ಸರಕಾರದ ಮುಖ್ಯ

ಕಾರ್ಯದರ್ಶಿ ವಂದಿತಾ ಶರ್ಮ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಮತ್ತು ಪೊಲೀಸ್ ಇಲಾಖೆಯ ನಾನಾ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...