ಬೆಂಗಳೂರು: ಬೇಡಿಕೆಗಳಿಗೆ ಸ್ಪಂದಿಸದ ಸರಕಾರದ ವಿರುದ್ಧ ಆಕ್ರೋಶ, ಇಂದಿನಿಂದ ಕೆಎಸ್ಸಾರ್ಟಿಸಿ ಮುಷ್ಕರ, ಜನಸಾಮಾನ್ಯರು ಬಾಧಿತರಾಗುವ ಸಾಧ್ಯತೆ

Source: VB | By JD Bhatkali | Published on 7th April 2021, 5:52 PM | State News |

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಸಾರಿಗೆ ನೌಕರರು ಎ.7ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿರುವುದರಿಂದ ರಾಜ್ಯದೆಲ್ಲೆಡೆಸಾರ್ವಜನಿಕರಿಗೆ ಸಾರಿಗೆ ಬಸ್‌ಗಳ ಕೊರತೆಯ ಬಿಸಿ ತಟ್ಟಲಿದೆ.

ರಾಜ್ಯದ ಹಲವು ಬಸ್ ಘಟಕಗಳಲ್ಲಿ ಮಂಗಳವಾರ ಮಧ್ಯಾಹ್ನ ಪಾಳಿಯ ಬಸ್ ಚಾಲಕರು ಮತ್ತು ನಿರ್ವಾಹಕರು ಗೈರಾದ ಕಾರಣದಿಂದಾಗಿ ಬೆಂಗಳೂರಿನ ಕೆಬಿಎಸ್, ಹುಬ್ಬಳ್ಳಿ, ಬಿಜಾಪುರ, ಬೆಳಗಾವಿ ಒಳಗೊಂಡಂತೆ ವಿವಿಧ 2 ಬಸ್ ನಿಲ್ದಾಣಗಳಿಂದ ಸಂಚಾರ ಮಾಡಬೇಕಿದ್ದ ಬಸ್‌ಗಳು ನಿಲ್ದಾಣಗಳಲ್ಲಿ ನಿಂತಿದ್ದವು. ಈ ವೇಳೆ ಬಸ್ಸಿಗಾಗಿ ಪ್ರಯಾಣಿಕರು ಪರದಾಟ ನಡೆಸುತ್ತಿದ್ದ ದೃಶ್ಯಗಳು ಕಂಡಬಂದವು. ಇನ್ನು, ರಾತ್ರಿ ಹೊರಡಬೇಕಿದ್ದ ಹಲವಾರು ಬಸ್ ಗಳ ಸಂಚಾರವೂ ರದ್ದಾಗಿದೆ. ಈಗಾಗಲೇ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಗೊಂದಲಕ್ಕೀಡಾದರು ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಬಿಎಂಟಿಸಿಯ 6 ಸಾವಿರಕ್ಕೂ ಹೆಚ್ಚು ಬಸ್‌ಗಳು ಸೇರಿ ನಾಲ್ಕು ನಿಗಮಗಳ

ರಾಜ್ಯ ಸರಕಾರದ ನಡೆ ಗಾಬರಿ 'ಹುಟ್ಟಿಸಿದ್ದು, ರಾಜ್ಯ ಸರಕಾರ ಶೇ.8ರಷ್ಟು ವೇತನ ಹೆಚ್ಚಳವನ್ನು ಏಕಪಕ್ಷೀಯವಾಗಿ ಪ್ರಕಟಿಸಿದೆ. ಅಲ್ಲದೆ, ನೌಕರರ ಸಮಸ್ಯೆಗಳ ಕುರಿತು ರಾಜ್ಯ ಸರಕಾರ ಮಾತುಕತೆಗಳ ಮೂಲಕ ಬಗೆಹರಿಸಲು ಮುಂದಾಗಬೇಕು.

ಎಚ್.ವಿ.ಅನಂತಸುಬ್ಬರಾವ್, ಕೆಎಸ್ಸಾರ್ಟಿಸಿ ಸ್ಟಾಫ್‌ಆ್ಯಂಡ್ ವರ್ಕರ್ಸ್ ಫೆಡರೇಷನ್‌ನ ಅಧ್ಯಕ್ಷಷ

ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ನೀಡಲು ಸಾಧ್ಯವೇ ಇಲ್ಲ. ಸಾರಿಗೆ ನೌಕರರು ಹಠ ಮಾಡದೇ ಮುಷ್ಕರ ಹಿಂಪಡೆಯಬೇಕು. ನಿಮ್ಮ ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸರಕಾರ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ನೀಡಬೇಡಿ. ಮುಷ್ಕರ ಕೈಬಿಟ್ಟು ಸರಕಕಾರಕ್ಕೆ ಸಹಕಾರ ನೀಡಿ.   
|
ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ಕೋವಿಡ್ ನೆಪವೊಡ್ಡಿ ಬೇರೆ ಬೇರೆ ರಾಜ್ಯಗಳಲ್ಲಿ ಸಾರಿಗೆ ಇಲಾಖೆಯ ನೌಕರರಿಗೆ ಶೇ.20ರಿಂದ ಶೇ.30ರಷ್ಟು ವೇತನ ಕಡಿತಗೊಳಿಸಿದ್ದಾರೆ. ಆದರೆ ನಾವು ಮಾಡಿಲ್ಲ. ನಾವು ಸಾರಿಗೆ ನೌಕರರಿಗೆ ಸಂಬಳ ನೀಡಿದ್ದೇವೆ ಸಾರಿಗೆ ನೌಕರರು ಒಂಭತ್ತು ಬೇಡಿಕೆ ಇಟ್ಟಿದ್ದರು, ಅದರಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ಹಾಗಾಗಿ, ನೌಕರರು ಪ್ರತಿಭಟನೆ ಕೈಬಿಡಬೇಕು.

ಲಕ್ಷ್ಮಣ ಸವದಿ, ಸಾರಿಗೆ ಸಚಿವ

ಸುಮಾರು 20 ಸಾವಿರ ಬಸ್‌ಗಳ ಕಾರ್ಯಾಚರಣೆ ಬುಧವಾರ ಸ್ಥಗಿತವಾಗಲಿದೆ  ಎನ್ನಲಾಗಿದ್ದು, ಇದರ ಪರಿಣಾಮ ಬಿಎಂಟಿಸಿಯ 30 ಲಕ್ಷ ಪ್ರಯಾಣಿಕರು ಸೇರಿ 1 ಕೋಟಿಯಷ್ಟು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಲಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಅನಿರ್ದಿಷ್ಟಾವಧಿ ಸತ್ಯಾಗ್ರಹ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ  ಕೋಡಿಹಳ್ಳಿ ಚಂದ್ರಶೇಖರ್, ಬುಧವಾರದಿಂದ ಸಾರಿಗೆ ಮುಷ್ಕರ ನಡೆಸಲು ಉದ್ದೇಶಿಸಲಾಗಿದೆ. ಅಲ್ಲದೆ, ಯಾವುದೇ ಹೊಸ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿಲ್ಲ. ಈ ಹಿಂದೆಯೇ ನೀಡಿದ್ದ ಭರವಸೆ ಈಡೇರಿಸದ ಕಾರಣ ಬೇರೆ ದಾರಿಯಿಲ್ಲದೆ ಹೋರಾಟದ ಹಾದಿ ಹಿಡಿದಿದ್ದೇವೆ. ಅಲ್ಲದೆ, ಹಲವು ಬೇಡಿಕೆಗಳನ್ನು ಸಮರ್ಪಕವಾಗಿ ಈಡೇರಿಸಿಲ್ಲ ಎಂದು ಆರೋಪ ಮಾಡಿದರು.

ಯಾವ ತಪ್ಪಿಗಾಗಿ ನೌಕರರ ಮೇಲೆ ಎಸ್ಮಾ ಸೇರಿದಂತೆ ಕಠಿಣ ಕಾನೂನುಗಳನ್ನು ಹೇರಲಾಗಿದೆ ಎಂದು ಪ್ರಶ್ನಿಸಿದ ಅವರು, ಅರ್ಧ ವೇತನಕ್ಕೆ ಸಾರಿಗೆ ನಿಗಮಗಳ ನೌಕರರು ಕೆಲಸ ಮಾಡುತ್ತಿದ್ದಾರೆ. ಅರೆ ಹೊಟ್ಟೆಯಲ್ಲಿರುವ ಅವರು ನ್ಯಾಯ ಕೇಳಿದರೆ ಸರಕಾರ ಎಸ್ಮಾ ಜಾರಿ ಮಾಡುವುದಾಗಿ ಹೇಳುತ್ತಿರುವುದು ಖಂಡನೀಯ ಎಂದರು.

ಅಧಿಕಾರಿಗಳು, ಮುಖ್ಯಮಂತ್ರಿಗಳಿಗಿಂತಲೂ ಮೇಲ್ಪಟ್ಟು ಕಾನೂನಿದೆ. ಆರೂವರೆ ಕೋಟಿ ಜನರಿದ್ದಾರೆ, ಅವರು ಎಲ್ಲವನ್ನೂ ನೋಡುತ್ತಿದ್ದಾರೆ. ಸರಕಾರ ಇದೇ ರೀತಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ ಅವರು, 6ನೇ ವೇತನ ಆಯೋಗ ಜಾರಿಗೊಳಿಸಿ ಅಧಿಕೃತವಾಗಿ ಘೋಷಣೆ ಮಾಡಿದರೆ ಮಾತ್ರ ಹೋರಾಟ ಹಿಂಪಡೆಯಲು ಸಾಧ್ಯ ಎಂದು ಕೋಡಿಹಳ್ಳಿ ನುಡಿದರು.

ಅನಗತ್ಯ ರಜೆಗೆ ಶಿಸ್ತು ಕ್ರಮ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ವಾರದರಜೆ, ತುರ್ತುರಜೆ ಬಿಟ್ಟು ಎಲ್ಲ ನೌಕರರ ರಜೆಗಳನ್ನು ರದ್ದುಪಡಿಸಿದೆ. ಅನಗತ್ಯ ರಜೆ ಹಾಕಿದರೆ ವೇತನ ಕಡಿತ ಮಾಡುವ ಎಚ್ಚರಿಕೆಯನ್ನು ಕೆಎಸ್ಸಾರ್ಟಿಸಿ ನೀಡಿದ್ದು, ಎ.7ರಿಂದ ಅನಗತ್ಯವಾಗಿ ರಜೆ ಹಾಕಿದರೆ ವೇತನ ನೀಡಲ್ಲ ಎಂದು ಸುತ್ತೋಲೆ ಹೊರಡಿಸಿದೆ.

ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಈ ಆದೇಶ ಅನ್ವಯವಾಗಲಿದೆ. ಅನಗತ್ಯವಾಗಿ ರಜೆ ಹಾಕಿದರೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ. ಜತೆಗೆ, ಬಿಎಂಟಿಸಿ ಸಹ ನೌಕರರ ರಜೆ ರದ್ದುಗೊಳಿಸಿ ಎಂದು ಆದೇಶ ಹೊರಡಿಸಿದೆ.

'ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಮ': ಸಾರಿಗೆ ನೌಕರರ ಮುಷ್ಕರವನ್ನೇ ಗುರಿಯಾಗಿಸಿಕೊಂಡು ಖಾಸಗಿ ವಾಹನಗಳು ಪ್ರಯಾಣಿಕರ ಬಳಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ, ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಾರಿಗೆ ಆಯುಕ್ತ ಶಿವಕುಮಾರ್ ಎಚ್ಚರಿಕೆ ನೀಡಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ವಾಹನಗಳು ಎಲ್ಲ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಿದ್ದೇವೆ. ಆದರೆ, ಇದನ್ನೇ ಲಾಭ ಮಾಡಿಕೊಂಡು ಪ್ರಯಾಣಿಕರ ಬಳಿ ಹೆಚ್ಚುವರಿ ಹಣ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಇನ್ನು, ಮುಷ್ಕರದ ವೇಳೆ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಪರ್ಯಾಯ ಕ್ರಮ ಕೈಗೊಂಡಿದ್ದೇವೆ ಎಂದರು.

ಕೋಡಿಹಳ್ಳಿ ವಿರುದ್ಧ ದೂರು: ಮುಷ್ಕರದ ನೇತೃತ್ವ ವಹಿಸಿರುವ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಬಿಎಂಟಿಸಿ ನೌಕರ ತ್ಯಾಗರಾಜ್ ಎಂಬುವರು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಅವರಿಗೆ ದೂರು ನೀಡಿದ್ದಾರೆ.ಸಾರ್ವಜನಿಕರಿಗೆ ಸೇವೆ ನೀಡುವುದು ನಮ್ಮ ಧೈಯ. ಮುಷ್ಕರದ ವೇಳೆ ಅಹಿತಕರ ಘಟನೆಗಳು ನಡೆದರೆ ಕೋಡಿಹಳ್ಳಿ ಚಂದ್ರಶೇಖರ್ ಅವರೇ ಹೊಣೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮುಷ್ಕರ ನಡೆದಲ್ಲಿ ಖಾಸಗಿ ಬಸ್‌ಗಳ ಮೂಲಕ ಸಾರಿಗೆ ಸೇವೆ

ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ಬುಧವಾರ ಕೆಲಸ ನಿಲ್ಲಿಸಿ ಚಳವಳಿಗೆ ಕರೆ ನೀಡಿದ್ದು, ಸಾರಿಗೆ ಬಸ್‌ಗಳು ರಸ್ತೆಗಿಳಿಯದಿದ್ದಲ್ಲಿ ಸಂಬಂಧಿಸಿದ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳು, ಟೆಂಪೊ, ಟ್ಯಾಕ್ಸಿಗಳ ಮೂಲಕ ಸಾರ್ವಜನಿಕರ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಚಂದ್ರಪ್ಪ ತಿಳಿಸಿದ್ದಾರೆ.

ಮಂಗಳವಾರ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿರುವ ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ವಿಭಾಗದ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಖಾಸಗಿ ಬಸ್ ಗಳ ಮಾಲಕರ ಸಂಘದೊಂದಿಗೆ ಮಾತುಕತೆ ನಡೆಸಿದ್ದು, ಅವರು ಸಂಪೂರ್ಣ ಸಹಕಾರ ನೀಡಲು ಮುಂದಾಗಿದ್ದಾರೆ ಅವರು ತಿಳಿಸಿದರು.

ಮುಷ್ಕರ ನಡೆಸುವ ನೌಕರರ ವಿರುದ ಕಠಿಣ ಕ್ರಮ

ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ನಡೆಸಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ, ಪೊಲೀಸ್ ಕಾಯ್ದೆ, ಎಸ್ಮಾ ಸೇರಿದಂತೆ ಯಾವುದಾದರೂ ಕಾಯ್ದೆಯಡಿ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಎಚ್ಚರಿಕೆ ನೀಡಿದರು. ಸೋಮವಾರ ಮುಖ್ಯಮಂತ್ರಿ ಜೊತೆ ನಡೆದ ಸಾರಿಗೆ ನೌಕರರ ಮುಷ್ಕರ ಕುರಿತ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರನೇ ವೇತನ ಆಯೋಗದ ವರದಿಯಂತೆ ಸಾರಿಗೆ ನೌಕರರಿಗೆ ವೇತನ ಕೊಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸದ್ಯ ಸಾರಿಗೆ ನೌಕರರ ವೇತನವನ್ನು ಶೇ.8ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಆದರೆ, ರಾಜ್ಯದಲ್ಲಿ ಉಪಚುನಾವಣಾ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಲ್ಲಿ ಇದೆ. ಈ ಸಂಬಂಧ ವೇತನ ಹೆಚ್ಚಳಕ್ಕೆ ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಈಗಾಗಲೇ ಪತ್ರ ಬರೆಯಲಾಗಿದ್ದು, ಅನುಮತಿ ಸಿಕ್ಕ ಕೂಡಲೇ ಹೆಚ್ಚಳಕ್ಕೆ ಆದೇಶ ಹೊರಬೀಳಲಿದೆ ಎಂದರು.

ಕೋವಿಡ್ ಪರಿಸ್ಥಿತಿ ಕಾರಣಕ್ಕೆ ಮುಷ್ಕರಕ್ಕೆ ಹೋಗದಂತೆ ನೌಕರರಲ್ಲಿ ಮನವಿ ಮಾಡುತ್ತಿದ್ದೇವೆ ಎಂದ ಅವರು, ಸಾರಿಗೆ ನೌಕರರ ಒಂಭತ್ತು ಬೇಡಿಕೆಗಳಲ್ಲಿ ಎಂಟನ್ನು ಈಗಾಗಲೇ ಜಾರಿ ಮಾಡಿದ್ದೇವೆ. ಆದರೆ, ಸರಕಾರಿ ನೌಕರರಿಗೆ ವೇತನ ಆಯೋಗದ ಶಿಫಾರಸಿನಂತೆ ಕೊಡುವ ವೇತನ ನೀಡಲು ಸಾಧ್ಯವೇ ಇಲ್ಲ. ಸಾರಿಗೆ ನೌಕರರ ಜೊತೆ ಚರ್ಚಿಸಿ, ಸಂಧಾನ ಸಭೆ ಏರ್ಪಡಿಸಿ ಪ್ರತಿ 4 ವರ್ಷಕ್ಕೊಮ್ಮೆ ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುತ್ತಿದ್ದೇವೆ ಎಂದರು.

ನಷ್ಟ: ಕೊರೋನಪರಿಣಾಮದಿಂದ ಸಾರಿಗೆ ನಿಗಮಗಳಿಗೆ ಪ್ರತಿ ದಿನ4 ಕೋಟಿ ನಷ್ಟವಾಗುತ್ತಿದೆ. ಎಲ್ಲ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಆದರೂ, ಆದಾಯ ಇಲ್ಲವೆಂದು ಸಂಬಳ ಕಡಿತ ಮಾಡಿಲ್ಲ. ಇನ್ನು, ಸಾರಿಗೆ ನೌಕರರ ವೇತನಕ್ಕೆ ಸರಕಾರ ಯಾವುದೇ ಸಮಸ್ಯೆ ಮಾಡಿಲ್ಲ. ಹೋದ ವರ್ಷ ಆದಾಯ ಇಲ್ಲದಿದ್ದರೂ ಸಾರಿಗೆ ನೌಕರರ ಸಂಬಳಕ್ಕೆ 2,100 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

Read These Next

1ರಿಂದ 9ನೇ ತರಗತಿಗಳಿಗೆ ಪೈನಲ್ ಪರೀಕ್ಷೆಯಿಲ್ಲ. ವಿದ್ಯಾಗಮ, ಆನ್‌ಲೈನ್ ಚಟುವಟಿಕೆ ಆಧರಿಸಿ ಮೌಲ್ಯಾಂಕನ ವಿಶ್ಲೇಷಣೆ ಫಲಿತಾಂಶ

ಬೆಂಗಳೂರು: ಕೊರೋನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳಿಗೆ ವಿದ್ಯಾಗಮ, ...

ರಾಜ್ಯದಲ್ಲಿ ಏಪ್ರಿಲ್ 21 ರಿಂದ ಮೇ 4 ರವರೆಗೆ ನೈಟ್ ಕರ್ಪ್ಯೂ. ಶುಕ್ರವಾರದಿಂದ ಸೋಮವಾರ ಬೆಳಿಗ್ಗೆವರೆಗೆ ವೀಕೆಂಡ್ ಕರ್ಪ್ಯೂ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವೃವಾಗಿ ವ್ಯಾಪಿಸುತ್ತಿರೋದ್ರಿಂದ ಏಪ್ರಿಲ್ 21 ರಿಂದ ಮೇ 4ರ ವರೆಗೆ ರಾತ್ರಿ 9 ರಿಂದ ...

ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು : ಸಚಿವ ಡಾ. ನಾರಾಯಣಗೌಡ

ಮಂಡ್ಯ : ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರಬೇಕು. ಪ್ರತಿ ತಾಲೂಕಿನಲ್ಲೂ ...