ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

Source: sonews | By Staff Correspondent | Published on 15th July 2019, 6:46 PM | State News |

ಕೋಲಾರ ; ಜಲಶಕ್ತಿ ಅಭಿಯಾನವು ಭಾರತ ಸರ್ಕಾರದ ಬಹುದೊಡ್ಡ ಯೋಜನೆಯಾಗಿದ್ದು ಇದನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ತಿಳಿಸಿದರು.

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನೀರಿನ ಸಂರಕ್ಷಣೆ ಕುರಿತು ಆಯೋಜಿಸಲಾಗಿದ್ದ ಜಲಶಕ್ತಿ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರಾಜ್ಯ ಸರ್ಕಾರವು ಸಹ ಪ್ರಸಕ್ತ ವರ್ಷವನ್ನು ಆಯವ್ಯಯದಲ್ಲಿ ಜಲವರ್ಷವೆಂದು ಘೋಷಿಸಿದೆ. ಜೀವ ಜಲವನ್ನು ಮುಂದಿನ ಪೀಳಿಗೆಗೆ ಉಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಜಲಾಮೃತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಒಂದು ದಿನ ಈ ಕಾರ್ಯಕ್ರಮವನ್ನು ಮಾಡುವುದರಿಂದ ನೀರನ್ನು ಉಳಿಸಲು ಸಾಧ್ಯವಿಲ್ಲ. ನೀರಿನ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಕರ್ತವ್ಯವಾದಾಗ ಮಾತ್ರ ಜಲಸಂಪನ್ಮೂಲ ಉಳಿಯುತ್ತದೆ ಎಂದರು. 

ಸ್ವಚ್ಛ ಭಾರತದಂತೆ ಕ್ರಮ: ಈ ಹಿಂದೆ ಸ್ವಚ್ಛ ಭಾರತ್ ಯೋಜನೆಯಡಿ ದೇಶಾದ್ಯಂತ ಸ್ವಚ್ಛತೆಯನ್ನು ಕಾಪಾಡುವ ಕೆಲಸವನ್ನು ಮಾಡಲಾಯಿತು. ಇದರಿಂದ ದೇಶದಲ್ಲೇ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳು ಕಂಡು ಬಂದವು. ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿತು. ಈ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಮಾಡಲು ಶೌಚಾಲಯಗಳನ್ನು ನಿರ್ಮಿಸಲಾಯಿತು. ಇದನ್ನು ಆಂದೋಲನವಾಗಿ ಕೈಗೆತ್ತಿಕೊಂಡು ಕೋಲಾರ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಯಿತು. ರಾಜ್ಯವು ಸಹ ಬಯಲು ಬಹಿರ್ದೇಸೆಮುಕ್ತ ರಾಜ್ಯವಾಗಿದೆ. ಅದರಂತೆ ಜಲಶಕ್ತಿ ಅಭಿಯಾನದ ಮೂಲಕ ನೀರನ್ನು ಸಂರಕ್ಷಿಸಲು ಎಲ್ಲರೂ ಕೈಜೋಡಿಸಬೇಕು ಎಂದರು. 

 ದೇಶಾದ್ಯಂತ ಜಲಶಕ್ತಿ ಅಭಿಯಾನ:- ನೀರಿನ ಸಮಸ್ಯೆಯು ಕೇವಲ ಒಂದು ಪ್ರದೇಶಕ್ಕೆ ಸಂಬಂಧಿಸಿಲ್ಲ. ಅದು ದೇಶದ ಅತಿದೊಡ್ಡ ಸಮಸ್ಯೆಯಾಗಿದೆ. ದೇಶದಲ್ಲಿ 710 ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ 256 ಜಿಲ್ಲೆಗಳನ್ನು ಮೊದಲ ಹಂತದಲ್ಲಿ ಜಲಶಕ್ತಿ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಕೋಲಾರ ಜಿಲ್ಲೆಯು ಸೇರಿದೆ. ಅದರಂತೆ 1952 ತಾಲ್ಲೂಕುಗಳು ಹಾಗೂ 756 ನಗರ ಸ್ಥಳೀಯ ಸಂಸ್ಥೆಗಳನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಪ್ರದೇಶಗಳಲ್ಲಿ ನೀರಿನ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜಲಶಕ್ತಿ ಅಭಿಯಾನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು. 

ಬತ್ತಿದ ನೀರಿನ ಸೆಲೆಗಳು: ಕೆರೆ, ಕುಂಟೆ, ಬಾವಿಗಳು ಬತ್ತಿ ಹೋಗಿದೆ. ಮೊದಲು ಕೆರೆ ಕುಂಟೆಯಲ್ಲಿನ ನೀರನ್ನೇ ಕುಡಿಯುತ್ತಿದ್ದರು. ನಂತರ ಅಂತರ್ಜಲ ಪಾತಾಳ ಸೇರುತ್ತಿದ್ದಂತೆ ಬಾವಿಗಳನ್ನು ಬಳಸಿದರು. ಮುಂದೆ ಸಾಗಿ ಕೈ ಪಂಪ್‍ಗಳ ಬಳಕೆ ಹೆಚ್ಚಾಯಿತು. ಆದರೆ ಇದೀಗ ಕೊಳವೆ ಬಾವಿಗಳನ್ನು ಹಾಕಿ ನೀರನ್ನು ಭೂಮಿಯಿಂದ ತೆಗೆದು ಕುಡಿಯಲು ಬಳಸುವ ಸ್ಥಿತಿ ಎದುರಾಗಿದೆ. ಇದರಿಂದ ಪ್ಲೋರೈಡ್‍ನಂತಹ ವಿಷಕಾರಿ ವಸ್ತುಗಳು ಹೆಚ್ಚಾಗಿದ್ದು ಶುದ್ಧ ನೀರಿಗೂ ಕುತ್ತು ಬಂದೊದಗಿದೆ. ಇದು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಇದಕ್ಕೆ ಪ್ರತಿಯೊಬ್ಬರೂ ಬೆಲೆ ತೆರಬೇಕಾಗುತ್ತದೆ ಎಂದು ಜಾಗೃತಿ ಮೂಡಿಸಿದರು.

ನೀರನ್ನು ಸಂರಕ್ಷಿಸಿ:- ಸಕಲ ಜೀವ ಸಂಕುಲಕ್ಕೂ ನೀರನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೆರೆ, ಕುಂಟೆ, ಬಾವಿಗಳನ್ನು ಉಳಿಸುವುದು ಎಲ್ಲರ ಕೆಲಸವಾಗಬೇಕು. ನೀರು ಪೋಲಾಗುವುದನ್ನು ತಡೆಗಟ್ಟುವ ಕಡೆ ನಮ್ಮ ಗಮನ ಹರಿಸಬೇಕು. ಮಳೆ ನೀರಿನ ಕೊಯ್ಲನ್ನು ಬಳಸಿಕೊಂಡು ನೀರು ವ್ಯರ್ಥವಾಗುವುದನ್ನು ತಡೆಗಟ್ಟಬೇಕು. ಇದರ ಜೊತೆಗೆ ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡುವ ಮೂಲಕ ಮಳೆ ಪ್ರಮಾಣವನ್ನು ಹೆಚ್ಚಿಸುವಂತೆ ಮಾಡಬೇಕು. 

ಅಂತರ್ಜಲ ಹೆಚ್ಚಳಕ್ಕೆ ಕೆ.ಸಿ.ವ್ಯಾಲಿ:- ಕೋಲಾರ ಜಿಲ್ಲೆಯು ಸತತ ಬರಗಾಲದಿಂದ ಆವರಿಸಿದೆ. ಅಂತರ್ಜಲ ಮಟ್ಟವು ಸಂಪೂರ್ಣ ಕುಸಿದಿದೆ. ಸುಮಾರು 1500 ಅಡಗಳಷ್ಟು ಆಳಕ್ಕೆ ಕೊರೆದರು ನೀರು ದೊರೆಯುತ್ತಿಲ್ಲ. ಹಾಗಾಗಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಕೆ.ಸಿ.ವ್ಯಾಲಿ ಮೂಲಕ ಜಿಲ್ಲೆಯ 136 ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಈಗಾಗಲೇ 18 ಕೆರೆಗಳು ತುಂಬಿದ್ದು ಉಳಿದ ಕೆರೆಗಳಿಗೂ ನೀರು ಹರಿಸಲಾಗುವುದು. ಇದರಿಂದ ಅಂತರ್ಜಲ ಅಭಿವೃದ್ಧಿಯಾಗಲಿದೆ ಎಂದರು. 

ವಿದ್ಯಾರ್ಥಿಗಳಿಂದ ನೀರಿನ ಸಂರಕ್ಷಣೆ:-  ಬದಲಾವಣೆಯು ಸದಾ ಮಕ್ಕಳಿಂದಲೇ ಪ್ರಾರಂಭವಾಗುವುದು ಸೂಕ್ತ. ವಿದ್ಯಾರ್ಥಿಗಳು ಪ್ರತಿಯೊಬ್ಬರೂ ನೀರನ್ನು ಸಂರಕ್ಷಿಸುವ ಕೆಲಸವನ್ನು ಮಾಡಿದ್ದೇ ಆದಲ್ಲಿ ಇದರಿಂದ ಪೋಷಕರು ಹಾಗೂ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಮೂಡುತ್ತವೆ. ಈ ನಿಟ್ಟಿನಲ್ಲಿ ಮಕ್ಕಳು ಇಡುವು ಒಂದು ಸಣ್ಣ ಹೆಜ್ಜೆಯು ದೇಶದಲ್ಲಿ ಅತಿ ದೊಡ್ಡ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್ ಮಾತನಾಡಿ,  ಮನುಷ್ಯನ ದುರಾಸೆಗಳಿಗೆ ಗೋಕುಂಟೆಗಳು, ಕಲ್ಯಾಣಿಗಳು, ಕೆರೆಗಳು ಮುಚ್ಚಿ ಹೋಗಿವೆ. ಪರಿಸರದ ಮೇಲೆ ಮನುಷ್ಯನ ದೌರ್ಜನ್ಯ ಹೆಚ್ಚಾಗಿದೆ. ಇದರಿಂದ ಜಿಲ್ಲೆಯು ನೀರಿನ ಸಮಸ್ಯೆಯನ್ನು ಅನುಭವಿಸುವಂತಾಗಿದೆ. ಪರಿಸರವನ್ನು ಉಳಿಸಲು ಪ್ರತಿಯೊಬ್ಬರು ಗಿಡಗಳನ್ನು ನೆಡಬೇಕು. ಈ ಮೂಲಕ ಜಲಶಕ್ತಿ ಯೋಜನೆಗೆ ಮತ್ತಷ್ಟು ಶಕ್ತಿಯನ್ನು ತುಂಬಬೇಕು ಎಂದು ತಿಳಿಸಿದರು. 

ಸ್ವರೂಪ ಕಳೆದುಕೊಂಡ ಕೆರೆಗಳು:- ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದು ಅದನ್ನು ಭೂಮಿಯಲ್ಲಿ ಇಂಗಿಸುವ ಕೆಲಸವನ್ನು ಮಾಡಬೇಕು. ಇದಕ್ಕಾಗಿ ಚೆಕ್‍ಡ್ಯಾಂಗಳನ್ನು ನಿರ್ಮಿಸಲಾಗಿದೆ. ಈ ಚೆಕ್‍ಡ್ಯಾಂಗಳಲ್ಲಿ ನೀರಿನ ನಿಲುಗಡೆಯಾಗುತ್ತಿದೆ. ಆದರೆ ಕೆರೆಗಳಲ್ಲಿ ನೀರಿನ ನಿಲುಗಡೆಯಾಗುತ್ತಿಲ್ಲ. ಕೆರೆಯಲ್ಲಿ ಮಣ್ಣು, ಮರಳು ತೆಗೆದಿರುವುದರಿಂದ ಕೆರೆಗಳು ತಮ್ಮ ಸ್ವರೂಪವನ್ನೇ ಕಳೆದುಕೊಂಡಿವೆ. ಕೆಲವರ ದುರಾಸೆಗೆ ಕೆರೆಗಳು ಈ ರೀತಿಯಾಗಿದ್ದು ಇವರನ್ನು ಸಮಾಜ ಘಾತುಕ ಶಕ್ತಿಗಳೆಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಇಂತಹವರನ್ನು ಮಟ್ಟ ಹಾಕಲೇ ಬೇಕಾಗಿದೆ ಎಂದರು. 

ಪರಿಸರ ಸ್ನೇಹಿ ಸಸಿಗಳನ್ನು ನೆಡಿ:-  ನೀಲಗಿರಿ ಮತ್ತು ಅಕೇಶಿಯಾ ಮರಗಳಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದರಿಂದ ಪರಿಸರಕ್ಕೆ ಯಾವುದೇ ರೀತಿಯ ಅನುಕೂಲವಿಲ್ಲ. ಇವುಗಳನ್ನು ತೆರವುಗೊಳಿಸಿ ಹಣ್ಣು ಬಿಡುವ ಹಾಗೂ ಪರಿಸರ ಸ್ನೇಹಿ ಸಸ್ಯಗಳನ್ನು ನೆಡುವಂತಾಗಬೇಕು. ಇದಕ್ಕೆ ಸರ್ಕಾರದಿಂದಲೂ ಸಹಕಾರ ನೀಡಲಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ತಪ್ಪದೆ ಸಸಿಗಳನ್ನು ನೆಡಬೇಕು ಎಂದು ಹೇಳಿದರು.

ಕೋಟಿ ನಾಟಿ:-  ಕೋಟಿ ನಾಟಿ ಮೂಲಕ ಜಿಲ್ಲೆಯಲ್ಲಿ ಈ ವರ್ಷ ಒಟ್ಟು 25 ಲಕ್ಷ ಸಸಿಗಳನ್ನು ನೆಡಲು ಕ್ರಮವಹಿಸಲಾಗಿದೆ. ಇದಕ್ಕೆ ಸಸಿಗಳನ್ನು ಸಿದ್ಧಗೊಳಿಸಲಾಗಿದೆ. ವರುಣ ಕಣ್ಬಿಟ್ಟ ಕೂಡಲೇ ಸಸಿಗಳನ್ನು ನಾಟಿ ಮಾಡಲಾಗುವುದು. ಈ ಮೂಲಕ ಜಿಲ್ಲೆಯಲ್ಲಿ ಹಸಿರನ್ನು ಮೂಡಿಸಲಾಗುವುದು ಎಂದರು. 

ಸ್ವಚ್ಛತೆ ಕಾಪಾಡಿ:-  ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿ. ಅದನ್ನು ಬಿಟ್ಟು ಕಸವನ್ನು ರಸ್ತೆ ಮತ್ತು ಚರಂಡಿಗಳಿಗೆ ಎಸೆದು ಬೇರೊಬ್ಬರು ಸ್ವಚ್ಚತೆ ಮಾಡಲಿ ಎಂಬುದರಲ್ಲಿ ಅರ್ಥವಿಲ್ಲ. ನಮ್ಮ ಸ್ವಚ್ಛತೆಯನ್ನು ನಾವೇ ಕಾಪಾಡಿಕೊಳ್ಳಬೇಕು. ಹಾಗಾಗಿ ವಿದ್ಯಾರ್ಥಿಗಳು ಈ ಕೆಲಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಪ್ಲಾಸ್ಟಿಕ್ ಬಳಕೆ ಬೇಡ:- ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತದೆ. ಹಾಗಾಗಿ ಪ್ಲಾಸ್ಟಿಕನ್ನು ಯಾರೂ ಸಹ ಬಳಕೆ ಮಾಡಬಾರದು. ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪ್ಲಾಸ್ಟಿಕ್ ಮಾರುವುದೇ ಅಲ್ಲದೆ ಅದನ್ನು ತೆಗೆದುಕೊಂಡು ಹೋಗುವವರಿಗೂ ದಂಡ ವಿಧಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೆ.ರತ್ನಯ್ಯ ಅವರು ಮಾತನಾಡಿ, ಇರುವುದೊಂದೆ ಭೂಮಿ. ಇಲ್ಲಿ ನೆಲ, ಜಲ, ಗಾಳಿ ಎಲ್ಲವೂ ಇದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಮೂಲಕ ಪ್ರತಿಯೊಂದು ಜೀವ ಸಂಕುಲವು ಬದುಕಲು ಅವಕಾಶ ಮಾಡಿಕೊಡಬೇಕು. ಅಂತರ್ಜಲ ಅಭಿವೃದ್ಧಿಯಾಗಲು ಕೆರೆಗಳು ತುಂಬಬೇಕು. ಕೆರೆ ತುಂಬಲು ಮಳೆ ಬರಬೇಕು. ಮಳೆಯಾಗಲು ಮರಗಳು ಇರಬೇಕು. ಅದರಂತೆ ಪರಿಸರವನ್ನು ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಾವತಿ, ಬಿ.ಇ.ಓ. ನಾಗರಾಜಗೌಡ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮೈಲಾರಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್, ಉಪಾಧ್ಯಕ್ಷರು ರತ್ನಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾರಾಯಣಸ್ವಾಮಿ, ಮುಖ್ಯ ಶಿಕ್ಷಕರಾದ ಶಂಕರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು - ಸಚಿವ ಜಗದೀಶ ಶೆಟ್ಟರ್

ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಸುಗಮ ಮತದಾನಕ್ಕೆ ಸರ್ವ ಸಿದ್ಧತೆ

ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ಸುಗಮ ಮತದಾನಕ್ಕೆ ಸರ್ವ ಸಿದ್ಧತೆ