ಕುಸ್ತಿಪಟುಗಳ ಆರೋಪಗಳನ್ನು ದೃಢೀಕರಿಸಿದ ಅಂತರ್‌ರಾಷ್ಟ್ರೀಯ ರೆಫರಿ

Source: Vb | By I.G. Bhatkali | Published on 10th June 2023, 5:03 PM | National News |

ಹೊಸದಿಲ್ಲಿ: ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಹಲವು ಲೈಂಗಿಕ ಕಿರುಕುಳ ಆರೋಪಗಳ ಪೈಕಿ ಒಂದನ್ನು ಅಂತರ್‌ರಾಷ್ಟ್ರೀಯ ಕುಸ್ತಿ ರೆಫರಿ ಜಗೀರ್ ಸಿಂಗ್ ದೃಢೀಕರಿಸಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಕಳೆದ ವರ್ಷದ ಮಾರ್ಚ್ ನಲ್ಲಿ ಲಖನೌದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್ ಗಾಗಿ ನಡೆದ ಟ್ರಯಲ್ಸ್‌ನ ಕೊನೆಯಲ್ಲಿ ನಡೆದ ಫೋಟೊ ತೆಗೆಯುವ ಸಂದರ್ಭದಲ್ಲಿ ನಡೆದ ಘಟನೆಯ ಬಗ್ಗೆ ಜಗೀರ್ ಸಿಂಗ್ ಪೊಲೀಸರಿಗೆ ವಿವರಣೆ ನೀಡಿದ್ದಾರೆ. ಸಿಂಗ್ 2007ರಿಂದ ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಓರ್ವ ಬಾಲಕಿ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳು ದೂರು ದಾಖಲಿಸಿದ್ದಾರೆ. ಕನಿಷ್ಠ ಎರಡು ಸಂದರ್ಭಗಳಲ್ಲಿ ವೃತ್ತಿಪರ ನೆರವು ನೀಡುವುದಕ್ಕೆ ಪ್ರತಿಯಾಗಿ ಲೈಂಗಿಕ ತೃಪ್ತಿ ನೀಡಬೇಕೆಂಬ ಬೇಡಿಕೆಯಿಟ್ಟಿದ್ದರು ಎಂದು ಅವರು ದೂರಿದ್ದಾರೆ. ಲೈಂಗಿಕ ಕಿರುಕುಳ ಮತ್ತು ಇತರ ಮಾದರಿಯ ಲೈಂಗಿಕ ದೌರ್ಜನ್ಯದ 15 ಘಟನೆಗಳನ್ನು ಅವರು ವರದಿ ಮಾಡಿದ್ದಾರೆ. ಸಿಂಗ್ ಉಸಿರಾಟ ಪರೀಕ್ಷಿಸುವ ನೆಪದಲ್ಲಿ ತಮ್ಮ ಸ್ತನಗಳು ಮತ್ತು ಹೊಟ್ಟೆಗಳನ್ನು ಸ್ಪರ್ಶಿಸಿದ್ದಾರೆ ಎಂದು ಮೂವರು ಕುಸ್ತಿಪಟುಗಳು ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಸಿಂಗ್ ವಿರುದ್ಧ ಎರಡು ಎಫ್ ಐಆರ್‌ಗಳು ದಾಖಲಾಗಿವೆ.

“ಕಳೆದ ವರ್ಷ ಫೋಟೊ ತೆಗೆಯುವ ಸಂದರ್ಭದಲ್ಲಿ ಸಿಂಗ್ 'ತನ್ನ ಕೈಯನ್ನು ನನ್ನ ನಿತಂಬಗಳ ಮೇಲೆ ಇರಿಸಿದನು. ಆಗ ನಾನು ದೂರ ಹೋಗಲು ಯತ್ನಿಸಿದೆ'' ಎಂಬುದಾಗಿ ಓರ್ವ ಮಹಿಳಾ ಕುಸ್ತಿಪಟು ತನ್ನ ದೂರಿನಲ್ಲಿ ಹೇಳಿದ್ದಾರೆ. ಸಿಂಗ್‌ನ ಅತ್ಯಂತ ಅಶ್ಲೀಲ ಮತ್ತು ಆಕ್ಷೇಪಾರ್ಹ ಕೃತ್ಯದ ಬಗ್ಗೆ ನಾನು ದಂಗಾಗಿದ್ದೆ. ಆತನ ಕೃತ್ಯಕ್ಕೆ ನನ್ನ ಸಮ್ಮತಿ ಇರಲಿಲ್ಲ' ಎಂದು ಮಹಿಳೆ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ನುಡಿದಿರುವ ಜಗೀರ್ ಸಿಂಗ್, ಆತ (ಬ್ರಿಜ್ ಭೂಷಣ್ ಸಿಂಗ್) ದೂರುದಾರೆ ಕುಸ್ತಿಪಟುವಿನ ಹತ್ತಿರ ನಿಂತಿರುವುದನ್ನು ನಾನು ನೋಡಿದ್ದೇನೆ'' ಎಂದು ಹೇಳಿದ್ದಾರೆ. ಆಕೆ ಆತನಿಂದ ಬಿಡಿಸಿಕೊಂಡು ಗೊಣಗುತ್ತಾ ದೂರ ಹೋದರು. ಆಕೆ ಅಧ್ಯಕ್ಷರ ಪಕ್ಕದಲ್ಲಿ ನಿಂತಿದ್ದರು. ಆದರೆ, ಬಳಿಕ ಮುಂದೆ ಬಂದರು. ಆ ಮಹಿಳಾ ಕುಸ್ತಿಪಟು ನೀಡುತ್ತಿದ್ದ ಪ್ರತಿಕ್ರಿಯೆಯನ್ನು ನಾನು ನೋಡಿದ್ದೇನೆ. ಆಕೆಯ ಮುಖದಲ್ಲಿ ಅಸಹನೆಯಿತ್ತು. ಆಕೆಯೊಂದಿಗೆ ಏನೋ ತಪ್ಪು ನಡೆದಿದೆ” ಎಂದರು. “ಆತನ ಕೃತ್ಯವನ್ನು ನಾನು ನೋಡಿಲ್ಲ. ಆದರೆ, ಆತ ಇಲ್ಲಿ ಬಾ, ಇಲ್ಲಿ ನಿಲ್ಲು ಎಂದು ಹೇಳುತ್ತಾ ಕುಸ್ತಿಪಟುಗಳನ್ನು ಮುಟ್ಟುತ್ತಾ ಇರುತ್ತಾನೆ. ದೂರುದಾರೆ ಕುಸ್ತಿಪಟುವಿನ ವರ್ತನೆಯನ್ನು ನೋಡಿದರೆ ಆಕೆಯೊಂದಿಗೆ ಆ ದಿನ ಏನೋ ಅನುಚಿತ ಘಟನೆ ನಡೆದಿರುವುದು ಸ್ಪಷ್ಟವಾಗಿದೆ' ಎಂದು ಅವರು ಹೇಳಿದರು. ಕುಸ್ತಿಪಟುಗಳ ದೂರುಗಳನ್ನು ದೃಢೀಕರಿಸಿದ ನಾಲ್ಕನೇ ವ್ಯಕ್ತಿ ಜಗೀರ್‌ ಆಗಿದ್ದಾರೆ. ಇದಕ್ಕೂ ಮೊದಲು, ಓರ್ವ ಒಲಿಂಪಿಯನ್, ಓರ್ವ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು ಓರ್ವ ರಾಜ್ಯ ಮಟ್ಟದ ಕೋಚ್ ಆರೋಪಗಳನ್ನು ದೃಢೀಕರಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಬೆದರಿಕೆಗೆ ಒಳಗಾಗಿ ಹೇಳಿಕೆ ಬದಲಾಯಿಸಿದೆ ಬಾಲಕಿ ಕುಸ್ತಿಪಟುವಿನ ತಂದೆ: "ನನಗೆ ಕೆಲವು ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ, ಅವರ ಹೆಸರುಗಳನ್ನು ನಾನು ಹೇಳಲಾರೆ. ಇದರಿಂದಾಗಿ ನನ್ನ ಕುಟುಂಬವು ಅತ್ಯಂತ ಹೆದರಿಕೆಯಿಂದ ಬದುಕುತ್ತಿದೆ'' ಎಂದು ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿರುವ ಬಾಲಕಿ ಕುಸ್ತಿಪಟುವಿನ ತಂದೆ 'ದಿ ಹಿಂದೂ' ಪತ್ರಿಕೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

“ನಾನು ನ್ಯಾಯಾಲಯದಲ್ಲಿ ನನ್ನ ಹೇಳಿಕೆಯನು ಬದಲಾಯಿಸಿದೆ. ದುರಾಶೆಯಿಂದಾಗಿ ಅಲ್ಲ, ನಾನು ಹೆದರಿದ್ದೇನೆ. ನನ್ನ ಕುಟುಂಬ, ಮಗಳು ಮತ್ತು ನನ್ನ ಸುರಕ್ಷತೆಯ ಬಗ್ಗೆ ಹೆದರಿಕೆಯಿದೆ'' ಎಂದು ಅವರು ಹೇಳಿದರು.

“ನಾವು ಆರೋಪಗಳನ್ನು ಮಾಡಿದ ಬಳಿಕ ಹಲವರ ಬದುಕುಗಳು ಬದಲಾಗಿವೆ. ನಾನು ಸಮಾಜ ಮತ್ತು ಜನರನ್ನು ಎದುರಿಸಬೇಕಾಗಿದೆ' ಎಂದರು. ನಾನು ನನ್ನ ಮೂಲ ದೂರನ್ನು ವಾಪಸ್ ಪಡೆದಿಲ್ಲ, ಆದರೆ ಸೋಮವಾರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಇನ್ನೊಂದು ಹೇಳಿಕೆಯನ್ನು ನೀಡಿದ್ದೇನೆ ಎಂಬುದಾಗಿ ತಂದೆ ಸ್ಪಷ್ಟಿಕರಣ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...