ಸುಸಜ್ಜಿತ ಟ್ರಕ್ ಟರ್ಮಿನಲ್ ನಿರ್ಮಿಸಲು ಸೂಕ್ತ ಜಾಗ ಗುರುತಿಸಲು ಸೂಚನೆ: ಡಿ.ಎಸ್.ವೀರಯ್ಯ

Source: SO News | By Laxmi Tanaya | Published on 14th January 2022, 9:35 PM | State News | Don't Miss |

ಶಿವಮೊಗ್ಗ :  ಜಿಲ್ಲೆಯಲ್ಲಿ ಸುಸಜ್ಜಿತವಾದ ಟ್ರಕ್ ಟರ್ಮಿನಲ್ ನಿರ್ಮಿಸುವುದು ಅವಶ್ಯವಾಗಿದ್ದು ಶಿವಮೊಗ್ಗ ಸುತ್ತಮುತ್ತ ಸೂಕ್ತ ಜಾಗವನ್ನು ಗುರುತಿಸಿದಲ್ಲಿ ಟರ್ಮಿನಲ್ ನಿರ್ಮಾಣಕ್ಕೆ ಮತ್ತು ಅಭಿವೃದ್ದಿಗೆ ಅನುದಾನ ಒದಗಿಸಲಾಗುವುದು. ನಿಮ್ಮ ಸಹಕಾರ ಇದ್ದರೆ ಮಾತ್ರ ಇದು ಸಾಧ್ಯ ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷ ಡಿ.ಎಸ್.ವೀರಯ್ಯ ಅಧಿಕಾರಿಗಳಿಗೆ ತಿಳಿಸಿದರು.

      ಶಿವಮೊಗ್ಗ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಅನುವಾಗುವಂತೆ ಯೋಗ್ಯ ಜಮೀನನ್ನು ಪಶಪಡಿಸಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳು, ಶಿವಮೊಗ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳು, ಕೆಐಎಡಿಬಿ ಹಾಗೂ ಕಂದಾಯ ಅಧಿಕಾರಿಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲ್ಲಿ ಇಂದು ಏರ್ಪಡಿಸಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ರಾಜ್ಯದಲ್ಲಿ ಕೆಲವೆಡೆ ಸುಸಜ್ಜಿತವಾದ ಟ್ರಕ್ ಟರ್ಮಿನಲ್‍ಗಳ ಸ್ಥಾಪನೆಯಾಗಿದೆ. ಹಲವೆಡೆ ಇನ್ನೂ ಆಗಬೇಕಿದೆ. ಟ್ರಕ್ ಟರ್ಮಿನಲ್‍ಗಳ ಸ್ಥಾಪನೆಯಿಂದ ಅಪಘಾತಗಳು ಕಡಿಮೆಯಾಗುತ್ತದೆ. ಹಾಗೂ ವಾಯು ಮಾಲಿನ್ಯ ಮತ್ತು ದಟ್ಟಣೆ ಕೂಡ ಕಡಿಮೆ ಆಗುತ್ತದೆ. ಜೊತೆಗೆ ಉದ್ಯೋಗಾವಕಾಶದೊಂದಿಗೆ ಮಿನಿ ಟೌನ್‍ಶಿಪ್ ನಿರ್ಮಾಣವಾದಂತೆ ಆಗುತ್ತದೆ. ಇಲ್ಲಿ ಲಾರಿ ಏಜೆಂಟರಿಗೆ ಕಚೇರಿ ನೀಡಬಹುದು. ಹೀಗೆ ಟ್ರಕ್ ಟರ್ಮಿನಲ್‍ನಿಂದ ಅನೇಕ ಅನುಕೂಲತೆಗಳು ಇವೆ. 

       ಟರ್ಮಿನಲ್ ಇಲ್ಲದಿದ್ದರೆ ರಸ್ತೆ ಬದಿ ಲಾರಿಗಳನ್ನು ನಿಲ್ಲಿಸಲಾಗುತ್ತದೆ. ಮುಂಜಾವಿನಲ್ಲಿ ಟ್ರಕ್ ತೆರವುಗೊಳಿಸುವ ಅನಿವಾರ್ಯತೆಯಿಂದ ಬೇಗ ಹೊರಡುವುದರಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಮ್ಮ ಅವಧಿಯಲ್ಲೇ ಆಗಬೇಕೆಂದು ಆಶಯ ವ್ಯಕ್ತಪಡಿಸಿದ ಅವರು ಜಿಲ್ಲಾಧಿಕಾರಿಗಳು ಆರ್‍ಐ, ಗ್ರಾಮ ಲೆಕ್ಕಿಗರು ಸೇರಿದಂತೆ ತಳಮಟ್ಟದ ಅಧಿಕಾರಿಗಳ ಸಭೆ ಕರೆದು ಶಿವಮೊಗ್ಗ ಸುತ್ತಮುತ್ತ ಜಾಗ ಇದೆಯಾ ಎಂದು ಪರಿಶೀಲಿಸಬೇಕೆಂದು ಸೂಚಿಸಿದರು.

     ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಕನಿಷ್ಟ 15 ರಿಂದ 20 ಎಕರೆಯಿಂದ ಗರಿಷ್ಟ 50 ಎಕರೆವರೆಗೆ ಜಾಗ ಗುರಿತಿಸಿದರೆ ಒಳ್ಳೆಯದು. ಇಲ್ಲಿ ವೇರ್‍ಹೌಸ್ ಕೂಡ ನಿರ್ಮಿಸಬಹುದು. ಹೊಸಪೇಟೆ, ಹುಬ್ಬಳ್ಳಿ, ಧಾರವಾಡ, ಯಶವಂತಪುರ ಇಲ್ಲಿ ಸುಸಜ್ಜಿತ ಟರ್ಮಿನಲ್‍ಗಳು ಇವೆ. ಮೊದಲನೇ ಆದ್ಯತೆಯಲ್ಲಿ ಸರ್ಕಾರಿ ಜಮೀನು ಗುರುತಿಸುವುದು ಒಳ್ಳೆಯದು. ಅದು ಲಭ್ಯವಿಲ್ಲದಿದ್ದರೆ ನಗರೋತ್ಥಾನ ಅಥವಾ ಕೆಐಎಡಿಬಿ ಜಾಗವನ್ನು ಗುರುತಿಸಬೇಕು. 

     ರಾಷ್ಟ್ರೀಯ ಹೆದ್ದಾರಿ ಸುತ್ತಮುತ್ತ 2 ರಿಂದ 5 ಕಿ.ಮೀ ಒಳಗೆ ಜಾಗ ಗುರುತಿಸಬೇಕು. ತಹಶೀಲ್ದಾರರು, ನಗರಾಭಿವೃದ್ದಿ ಮತ್ತು ಕೆಎಐಡಿಬಿ ಅಧಿಕಾರಿಗಳು ಜಾಗ ಗುರುತಿಸಲು ಜಿಲ್ಲಾಧಿಕಾರಿಗಳೀಗೆ ಸಹಕರಿಸಬೇಕೆಂದು ಹೇಳಿದರು.

     ಜಿಲ್ಲಾಧಿಕಾರಿಗಳು ಮಾತನಾಡಿ, ತಾಲ್ಲೂಕು ಅಧಿಕಾರಿಗಳು ಮತ್ತು ಆರ್‍ಐ, ವಿಎ ಗಳ ಸಭೆ ಕರೆದು ಜಾಗ ಲಭ್ಯತೆ ಬಗ್ಗೆ ಪರಿಶೀಲಿಸುತ್ತೇನೆ. ಎನ್‍ಹೆಚ್ ಬಳಿ ಅದರಲ್ಲೂ ಶಿವಮೊಗ್ಗ ಸುತ್ತಮುತ್ತ ಜಾಗ ನೋಡುತ್ತೇವೆ. ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಒಳಿತಾಗುತ್ತದೆ ಎಂದರು.

     ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್ ಮಾತನಾಡಿ, ಹರಿಗೆ ಬಳಿ ಇರುವ ಶುಗರ್ ಫ್ಯಾಕ್ಟರಿ ಜಾಗ ಅಥವಾ ಹರಿಗೆ ಬಳಿ ಇರುವ ಜಾಗವನ್ನು ನೋಡಬಹುದೆಂದು ಸಲಹೆ ನೀಡಿದರು.

    ಕೆಐಎಡಿಬಿ ಕಾರ್ಯಪಾಲಕ ಅಭಿಯಂತರ ನಾರಾಯಣಪ್ಪ ವಿಮಾನ ನಿಲ್ದಾಣದ ಬಳಿ ಜಾಗ ಪರಿಶೀಲಿಸಬಹುದೆಂದು ಸಲಹೆ ನೀಡಿದರು.

      ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ, ಸೂಡಾ ಆಯುಕ್ತ ಕೊಟ್ರೇಶ್, ಶಿವಮೊಗ್ಗ ತಹಶೀಲ್ದಾರ್ ನಾಗರಾಜ್, ಇತರೆ ಅಧಿಕಾರಿಗಳು ಹಾಜರಿದ್ದರು.

Read These Next

ಭಟ್ಕಳ: ಬಿಜೆಪಿಯಿಂದ ಎನ್‌ಇಪಿ ಮೂಲಕ ನಾಗ್ಪುರ್ ಗುಪ್ತ ಕಾರ್ಯಸೂಚಿ: ಬಿ.ಕೆ.ಹರಿಪ್ರಸಾದ್

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೂ ಅದರಲ್ಲೂ ಕರಾವಳಿಯನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ...

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ; ಗ್ರಾಮೀಣ ವಿದ್ಯಾರ್ಥಿಗಳದೇ ಮೇಲುಗೈ; 145 ವಿದ್ಯಾರ್ಥಿಗಳಿಗೆ 625 ಅಂಕ

ಮಾರ್ಚ್ ತಿಂಗಳಿನಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆ ಬರೆದ ಒಟ್ಟು 8,53,436 ವಿದ್ಯಾರ್ಥಿಗಳ ಪೈಕಿ 7,30,881 ...

ಶಾಲಾ ಪಠ್ಯ ಪುಸ್ತಕಗಳು ಆರೆಸಸ್ ಮಯ; ಕೇಜ್ರಿವಾಲ್, ಭಗವಂತ್ ಮಾನ್ ಸಹಿತ ಹಲವು ಮುಖಂಡರಿಂದ ಆಕ್ರೋಶ

ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ರಂತಹ ರಾಷ್ಟ್ರ ಪ್ರೇಮಿಗಳ ಅಧ್ಯಾಯಗಳನ್ನು ಕಿತ್ತು ಹಾಕಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವೂ ...

ಪೊನ್ನಂಪೇಟೆಯಲ್ಲಿ ಸಂಘಪರಿವಾರದಿಂದ ತ್ರಿಶೂಲ ದೀಕ್ಷೆ, ಶಸ್ತ್ರಾಸ್ತ್ರ ತರಬೇತಿ; ಸರಕಾರ ಜೀವಂತವಿದೆಯೇ? ಸಿದ್ದರಾಮಯ್ಯ ಆಕ್ರೋಶ

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಶಾಲೆಯ ಆವರಣದಲ್ಲಿ ಬಜರಂಗದಳ ನಡೆಸಿದ ಬಂದೂಕು ತರಬೇತಿಯಂತಹ ಕಾನೂನು ವಿರೋಧಿ ಚಟುವಟಿಕೆಗಳಿಗೆ ಅವಕಾಶ ...