ಗೃಹಲಕ್ಷ್ಮೀ ಯೋಜನೆ: ಜು.19 ರಿಂದ ನೋಂದಣಿ. ಫಲಾನುಭವಿಗಳ ನೋಂದಣಿ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ

Source: SO News | By Laxmi Tanaya | Published on 15th July 2023, 11:14 PM | State News |

ಬೆಳಗಾವಿ : ಸರಕಾರದ ಮಾರ್ಗಸೂಚಿಯ  ಪ್ರಕಾರ ಗೃಹಲಕ್ಷ್ಮೀ ಫಲಾನುಭವಿಗಳ ಸಮರ್ಪಕ ನೋಂದಣಿಗಾಗಿ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿಗೆ ಸಂಬಂಧಿಸಿದಂತೆ ವಿಡಿಯೋ ಸಂವಾದದ ಮೂಲಕ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜುಲೈ 19 ರ ಸಂಜೆ ಮುಖ್ಯಮಂತ್ರಿಗಳು ನೋಂದಣಿಗೆ ಚಾಲನೆ ನೀಡಿದ ಬಳಿಕ ರಾಜ್ಯದಾದ್ಯಂತ ಗೃಹಲಕ್ಷ್ಮೀ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಅದೇ ರೀತಿ ಬೆಳಗಾವಿ ಜಿಲ್ಲೆಯಲ್ಲಿಯೂ ಆರಂಭಗೊಳ್ಳಲಿದೆ. ಸರಕಾರದ ನಿರ್ದೇಶನದಂತೆ ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು, ಬಾಪೂಜಿ ಸೇವಾ ಕೇಂದ್ರ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯಲಿದೆ.
ಜಿಲ್ಲೆಯಲ್ಲಿರುವ ಪಡಿತರ ಚೀಟಿ ಕಾರ್ಡುಗಳು ಹಾಗೂ ಮಹಿಳೆಯರು ಮನೆಯ ಯಜಮಾನತಿಯಾಗಿರುವ ಬಗ್ಗೆ ಈಗಾಗಲೇ ಮಾಹಿತಿಯನ್ನು ಸಂಗ್ರಹಿಸಲಾಗಿರುತ್ತದೆ. ಫಲಾನುಭವಿಗಳ ಸುಗಮ ನೋಂದಣಿಗೆ ಅನುಕೂಲವಾಗುವಂತೆ ಅಗತ್ಯವಿರುವ ಕಂಪ್ಯೂಟರ್, ಅಂತರ್ಜಾಲ ಸಂಪರ್ಕ ಹಾಗೂ ಪರ್ಯಾಯ ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲ ಬಗೆಯ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.

ಇದಕ್ಕೂ ಮುಂಚೆ ನಡೆದ ಜಿಲ್ಲಾಧಿಕಾರಿಗಳ ಜತೆಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು, ಜು.19 ರ ಸಂಜೆ 5 ರ ನಂತರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು. ಮಾರನೇ ದಿನದಿಂದ ನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

ನೋಂದಣಿಗೆ ಆಗಮಿಸುವ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕು. ಮಳೆಗಾಲ ಇರುವುದರಿಂದ ಸರದಿಯಲ್ಲಿ ನಿಲ್ಲಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಬೇಕು.
ನೋಂದಣಿ ಕೇಂದ್ರಗಳಲ್ಲಿ ಸ್ಥಳೀಯ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜಿಸಬೇಕು. ಇದರಿಂದ ನೋಂದಣಿ ಪ್ರಕ್ರಿಯೆ ಮೇಲ್ವಿಚಾರಣೆ ಕೂಡ ಸುಗಮವಾಗಲಿದೆ. ಆದ್ದರಿಂದ ಪ್ರತಿ ನೋಂದಣಿ ಕೇಂದ್ರಗಳಲ್ಲಿ ಮೇಲ್ವಿಚಾರಣಾಧಿಕಾರಿಗಳು ಹಾಗೂ ಸೂಕ್ತ ಭದ್ರತೆಯನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಶುಭಂ ಶುಕ್ಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಆರ್. ನಾಗರಾಜ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ  ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...