ಸರ್ಕಾರದ ಯೋಜನೆಗಳು‌‌ ಎಲ್ಲರಿಗೂ ತಲುವುವಂತೆ ಕಾರ್ಯನಿರ್ವಹಿಸಬೇಕು: ಮಂಕಾಳ ಎಸ್ ವೈದ್ಯ

Source: SO News | By Laxmi Tanaya | Published on 5th August 2023, 5:57 PM | Coastal News | Don't Miss |

ಕಾರವಾರ : ಸರಕಾರದ ಯೋಜನೆಗಳು ಸಾರ್ವಜನಿಕರಿಗೆ, ಬಡವರಿಗೆ ತಲಪುವಂತೆ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಮೀನುಗಾರಿಕೆ‌, ಬಂದರು ಮತ್ತು ಒಳನಾಡು‌ ಜಲಸಾರಿಗೆ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ನಿರ್ದೇಶನ ನೀಡಿದರು.

           ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ  ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆ ಆಧ್ಯಕ್ಷತೆವಹಿಸಿ ಅವರು ಮಾತನಾಡಿದರು.

            ಸರ್ಕಾರದ  ಯೋಜನೆಗಳು‌ ಅರ್ಹರಿಗೆ ತಲುಪವಂತೆ ಎಲ್ಲಾ ಅಧಿಕಾರಿ‌ಗಳು ಕ್ರಮಕೈಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸಚಿವರು ಹೇಳಿದರು.
            ಜಿಲ್ಲೆಯನ್ನು‌ ರಾಜ್ಯದಲ್ಲಿಯೇ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು‌ ಎಲ್ಲಾ ಶಿಕ್ಷಕರು  ಪ್ರಯತ್ನಿಸಬೇಕು. ಮಕ್ಕಳಿಗೆ ಉತ್ತಮ‌ ಗುಣಮಟ್ಟದ ಶಿಕ್ಷಣ‌‌ ನೀಡಲು‌ ಶಿಕ್ಷಕರು‌ ಬದ್ದರಾಗಿರಬೇಕು ಎಂದು  ಸಚಿವರು ನಿರ್ದೇಶನ ನೀಡಿದರು.
           ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ‌ ಮೂಲಭೂತ ಸೌಕರ್ಯಗಳು ಕಡ್ಡಾಯವಾಗಿ ಇರಬೇಕು. ಇಲ್ಲದ ಶಾಲೆಗಳ ವಿವರಗಳನ್ನು‌ ಪಟ್ಟಿ‌ ಮಾಡಿ ವರದಿ ಸಲ್ಲಿಸಬೇಕು ಎಂದು  ಅಧಿಕಾರಿಗಳಿಗೆ  ಸಚಿವರು ಸೂಚನೆ ನೀಡಿದರು.
            ಶಾಲಾ ಕಟ್ಟಡ ದುರಸ್ತಿ ‌ಮಾಡುವ ಬದಲು ಹೊಸ ಕಟ್ಟಡ ಕಟ್ಟಲು ಕ್ರಮಕೈಗೊಳ್ಳಬೇಕು.  ಹೊರತು ದುರಸ್ತಿ‌‌ ಮಾಡಿ ಅನುದಾನ ದುಂದುವೆಚ್ಚ ಮಾಡದಂತೆ ಅಧಿಕಾರಿಗಳಿಗೆ  ಸಚಿವರು ಸೂಚನೆ‌‌ ನೀಡಿದರು.
            ಜಿಲ್ಲೆಯಲ್ಲಿ‌  10 ಮಕ್ಕಳಿಗಿಂತ  ಕಡಿಮೆ‌ ಇರುವ ಶಾಲೆಗಳನ್ನು  ಪಟ್ಟಿ ಮಾಡಿ‌ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಪೋಷಕರು ಜೊತೆ ಚರ್ಚಿಸಿ ವರದಿ ಸಲ್ಲಿಸುವಂತೆ ಕಾರವಾರ ಮತ್ತು ಶಿರಶಿ ಡಿಡಿಪಿಒ ಅವರಿಗೆ ಸಚಿವರು ಹೇಳಿದರು.
            ಶಾಸಕರಾದ ಸತೀಶ್ ಸೈಲ್ ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ಮುಚ್ಚಿದ ಶಾಲೆಗಳ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
           ಅತಿಥಿ ಶಿಕ್ಷಕರಿಗೆ ನೀಡುವ ಗೌರವ‌ ಸಂಭಾವನೆಯಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಕನಿಷ್ಠ ಗೌರವ ಸಂಭಾವನೆ ನೀಡುವ ಬಗ್ಗೆ‌ ಪರಿಶೀಲಿಸುವಂತೆ ಸಚಿವರಲ್ಲಿ‌ ಮನವಿ ಮಾಡಿದರು‌.
           ಜಿಲ್ಲೆಯಲ್ಲಿ‌ ರೋಗಿಗಳಿಗೆ  ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರುಗಳು ಬರುತ್ತಿದೆ. ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತಾಗಬೇಕು. ವೈದ್ಯರು ಆಸ್ಪತ್ರೆಗೆ ಬಂದ ರೋಗಿಗಳಿಗೆ  ಬೇರೆ ಜಿಲ್ಲೆಯ ಆಸ್ಪತ್ರೆಗೆ ತೆರಳು ಸೂಚಿಸವ ಬದಲು ಇಲ್ಲೆಯೇ ಉತ್ತಮ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
           ಶಾಸಕರಾದ ಭೀಮಣ್ಣ  ಟಿ ನಾಯ್ಕ ಅವರು ಮಾತನಾಡಿ‌ ಸರ್ಕಾರಿ‌ ಆಸ್ಪತ್ರೆಗೆ  ಬರುವ ರೋಗಿಗಳು ಬಡವರಾಗಿದ್ದು, ಅವರಿಗೆ ಉತ್ತಮ ಚಿಕಿತ್ಸೆ ಸಿಗುವಂತಾಗಬೇಕು ಎಂದು ಹೇಳಿದರು.
      ‌‌‌‌     ಎಂಡೋಸಲ್ಫಾನ್  ಸಂತ್ರಸ್ತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ  ಸಿಗುತ್ತಿಲ್ಲ ಎಂದು ಶಾಸಕರು ಸಚಿವರ ಗಮನಕ್ಕೆ ತಂದರು.
         ಇದಕ್ಕೆ ಪ್ರತಿಕ್ರಿಯಿಸಿದ‌ ಸಚಿವರು  ಪ್ರತಿಯೊಂದು ತಾಲ್ಲೂಕಿನಲ್ಲಿ‌ ಸರ್ವೇ ಮಾಡಿಸಿ‌ ಅರ್ಹರಿಗೆ ಸರ್ಕಾರದಿಂದ  ಸಿಗಬೇಕಾದ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ  ಸಚಿವರು ನಿರ್ದೇಶನ ನೀಡಿದರು.
            ಶಾಸಕರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಮಾತನಾಡಿ ಅಂಗನವಾಡಿ  ಕಾರ್ಯಕರ್ತರು ಮತ್ತು ಸಿಬ್ಬಂದಿ  ನೇಮಕಾತಿ‌ ಸಂಬಂಧ ದಿನಾಂಕ ನಿಗದಿಪಡಿಸಬೇಕು ಹಾಗೂ ವಸತಿ ಶಾಲೆಗಳ ಪ್ರವೇಶಾತಿ ಆನ್ ಲೈನ್ ಮೂಲಕ ಮಾಡುತ್ತಿರುವುದರಿಂದ  ಮಕ್ಕಳಿಗೆ ಅನಾನುಕೂಲತೆಯಾಗುತ್ತಿದೆ ಇದರ ಬಗ್ಗೆ ಪರಿಶೀಲಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.
            ಇದಕ್ಕೆ ಪ್ರತಿಕ್ರಿಯಿಸಿದ  ಸಚಿವರು ಮಕ್ಕಳಿಗೆ  ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ವಸತಿ ಶಾಲೆಗಳ ಪ್ರವೇಶಾತಿ ಸಂದರ್ಭದಲ್ಲಿ‌ ಆಂತರಿಕ ಬದಲಾವಣೆಗೆ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ ಎಂದರು.
            ಜಿಲ್ಲೆಯಲ್ಲಿ  2782 ಅಂಗನವಾಡಿ ಕೇಂದ್ರಗಳಿದ್ದು,  ಇದರಲ್ಲಿ ನಿವೇಶನವಿಲ್ಲದ 452,  ಬಾಡಿಗೆ 307 ಅಂಗನವಾಡಿ ಕೇಂದ್ರಗಳು‌ ಕಾರ್ಯನಿರ್ವಹಿಸುತ್ತಿವೆ ಎಂದು ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಕರು ಸಭೆಗೆ  ಮಾಹಿತಿ‌ ನೀಡಿದರು.
            ಸಚಿವರಾದ ಮಂಕಾಳ ಎಸ್ ವೈದ್ಯ ಅವರು‌ ನಿವೇಶನವಿಲ್ಲದ ಅಂಗನವಾಡಿಗಳಿಗೆ  ಜಾಗ ಒದಗಿಸಬೇಕು. ಜಾಗ ಇಲ್ಲದ ಕಡೆ ಖಾಸಗಿ ಅವರಿಂದ‌ ಖರೀದಿಸಲು ಕ್ರಮಕೈಗೊಳ್ಳುವಂತೆ  ಅಧಿಕಾರಿಗಳಿಗೆ ಸೂಚನೆ ನೀಡಿದರು.
           ಜಿಲ್ಲೆಯಲ್ಲಿ‌  ಅನ್ನಭಾಗ್ಯ ಯೋಜನೆಯಡಿ 3,10,789 ಪಡಿತರ ಚೀಟಿಗಳಲ್ಲಿ  ಪ್ರತಿ‌ ಕೆ.ಜಿ.ಗೆ ರೂ.34 ರಂತೆ 5 ಕೆ.ಜಿ. ಅಕ್ಕಿಯ ಮೊತ್ತವನ್ನು  2,37,444 ಪಡಿತರ  ಚೀಟಿದಾರರ ಖಾತೆ ಹಣ ಜಮಾ ಮಾಡಲಾಗಿದೆ ಎಂದು ಅಹಾರ ಮತ್ತು ನಾಗರಿಕ ಸರಬರಾಜು‌ ಇಲಾಖೆ  ಉಪ ನಿರ್ದೇಶಕರು  ಮಾಹಿತಿ ನೀಡಿದರು.
            ಉಳಿದ ಪಡಿತರ ಚೀಟಿದಾರರ ಖಾತೆಗೆ  ಶೀಘ್ರವಾಗಿ  5  ಕೆ.ಜಿ.ಅಕ್ಕಿಯ ಮೊತ್ತವನ್ನು  ಜಮೆ ಮಾಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗೆ ಸಚಿವರು ಸೂಚನೆ ನೀಡಿದರು.
          ಜಿಲ್ಲೆಯಲ್ಲಿ‌ ಪ್ರತಿಯೊಂದು ಮನೆಗೂ‌ ವಿದ್ಯುತ್ ಸಂಪರ್ಕ ಕಲ್ಪಸಲು ಪಿಡಿಓ ಅವರು ತಮ್ಮ ತಮ್ಮ ವ್ಯಾಪ್ತಿಯ ವಿದ್ಯುತ್ ಸಂಪರ್ಕ ಇಲ್ಲದ ಕುಟುಂಬದ  ಮಾಹಿತಿಯನ್ನು ಹೆಸ್ಕಾಂಗೆ ನೀಡಿ ಪ್ರತಿಯೊಬ್ಬರಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಬೇಕು ಅವರು  ಹೇಳಿದರು.
             ಶಾಸಕರಾದ ದಿನಕರ ಕೆ.ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೆಕರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್. ಎನ್, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ ಕುಮಾರ ಕಾಂದೂ, ಹೆಚ್ಚುವರಿ‌ ಜಿಲ್ಲಾಧಿಕಾರಿ‌ ರಾಜು ಮೋಗವೀರ,  ವಿವಿಧ ಇಲಾಖೆಯ ಅಧಿಕಾರಿಗಳು ಇತರರು‌ ಇದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...