ಹಿರಿಯ ನಾಗರೀಕರಿಗೆ ಪ್ರೀತಿಯ ಸಾಂಗತ್ಯ ನೀಡಿ: ಶೀಲಾ ಕೆ.ಶೆಟ್ಟಿ

Source: S.O. News Service | Published on 1st October 2019, 8:04 PM | Coastal News | Don't Miss |

ಉಡುಪಿ: ಆಧುನಿಕ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದ್ದು, ಎಲ್ಲೋ ಇರುವ ಮಕ್ಕಳು ತಮ್ಮ ಹೆತ್ತವರ ಪಾಲನೆ ಪೋಷಣೆಗೆ ಪ್ರತೀ ತಿಂಗಳು ಹಣ ಕಳುಹಿಸುವ ಪದ್ದತಿ ಬೆಳೆಯುತ್ತಿದೆ. ವಾಸ್ತವವಾಗಿ ಹೆತ್ತವರು ತಮ್ಮ ಮಕ್ಕಳ ಪ್ರೀತಿ ತುಂಬಿದ ಮಾತುಗಳು ಹಾಗೂ ಮಕ್ಕಳೊಂದಿಗಿರುವ ಸಾಂಗತ್ಯವನ್ನು ಬಯಸುತ್ತಾರೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ತಿಳಿಸಿದರು.
ಅವರು ಮಂಗಳವಾರ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ವಕೀಲರ ಸಂಘ ಉಡುಪಿ ಜಿಲ್ಲೆ, ವಕೀಲರ ಸಂಘ (ರಿ), ಉಡುಪಿ, ಹಿರಿಯ ನಾಗರಿಕರ ಸಂಸ್ಥೆಗಳು ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, (ರಿ) ಮತ್ತು ವೃದ್ಧಾಶ್ರಮಗಳು ಉಡುಪಿ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯರನ್ನು ಅತ್ಯಂತ ಗೌರವಾದಾರಗಳಿಂದ ನೋಡುತ್ತಿದ್ದ ನಮ್ಮ ಪರಂಪರೆಗಳು ಇಂದು ನಶಿಸಿ ಹೋಗುತ್ತಿದೆ. ಜೀವನದುದ್ದಕ್ಕೂ ಉತ್ತಮ ಅನುಭವಗಳನ್ನು ಪಡೆದುಕೊಂಡಿರುವ ಹಿರಿಯ ನಾಗರಿಕರು ಅವಿದ್ಯಾವಂತರಾಗಿರಬಹುದು, ಆದರೆ ಅವಿವೇಕಿಗಳಲ್ಲ. ಆಸ್ತಿ ವ್ಯಾಮೋಹದಿಂದ ಮಕ್ಕಳು ಹೆತ್ತವರನ್ನು ಬೀದಿಗೆ ತಳ್ಳುತ್ತಿರುವ ನಿದರ್ಶನಗಳು ಈಗಲೂ ಕಾಣ ಸಿಗುತ್ತದೆ. ಹಿರಿಯರ ಪ್ರೀತಿ, ತ್ಯಾಗ, ಸೇವೆಗಳನ್ನು ಮಕ್ಕಳು ನೆನಪಿಟ್ಟುಕೊಂಡರೆ ಹಿರಿಯರ ಜೀವನ ಸಾರ್ಥಕವಾಗುತ್ತದೆ. ಯುವ ಪೀಳಿಗೆ ಹಿರಿಯ ನಾಗರಿಕರನ್ನು ಪ್ರೀತಿಸುವ, ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರ ಬೆಳವಣಿಗೆಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಹೆತ್ತವರು, ಮಕ್ಕಳ ಬೆಳವಣಿಗೆಯನ್ನು ನೋಡಿ ಖುಷಿ ಪಡುವ ಜೊತೆಗೆ ಅವರಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟಾಗ ಕೊರಗುತ್ತಿರುತ್ತಾರೆ. ಪ್ರಸ್ತುತ ಸಮಾಜದ ಸ್ಥಿತಿಗತಿ ಹಾಗೂ ಮಕ್ಕಳ ವರ್ತನೆಯನ್ನು ಅರಿತುಕೊಂಡು ಮುಂಜಾಗೃತಾ ಕ್ರಮವಾಗಿ ಆಸ್ತಿಯನ್ನು ಪಾಲು ಮಾಡುವಾಗ ತಮಗೆ ಒಂದು ಪಾಲನ್ನು ಇರಿಸಿಕೊಂಡು ಮಕ್ಕಳಿಗೆ ಪಾಲನ್ನು ನೀಡಬೇಕು. ತಮ್ಮ ಜೀವನದ ಅವಶ್ಯಕತೆಗಾಗಿ ಉಳಿತಾಯವನ್ನು ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರಿಗಿರುವ ಸೇವೆ ಹಾಗೂ ಸೌಲಭ್ಯಗಳಿಗೆ (ಪಾಲಿಸಿ ಮ್ಯಾಟರ್) ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಅರ್ಜಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸಲ್ಲಿಸಿದ್ದಲ್ಲಿ ಅದನ್ನು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪರಿಹಾರ ಕಂಡುಕೊಳ್ಳುವಲ್ಲಿ ಸಹಕರಿಸುವುದಾಗಿ ತಿಳಿಸಿದರು. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಹಿರಿಯ ನಾಗರಿಕರ ಪಾಲಿಸಿ ಮ್ಯಾಟರ್ಸ್ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಒಂದುರಿಟ್ ಪಿಟೀಶನ್ ಹಾಕುವ ಅಧಿಕಾರವಿದೆ. ಸರಕಾರವು ಹಿರಿಯ ನಾಗರಿಕರಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡದಿದ್ದರೆ ಉಚ್ಚ ನ್ಯಾಯಾಲಯದಿಂದ ನಿರ್ದೇಶನ ನೀಡಿ ನ್ಯಾಯಕೊಡಿಸುವ ಅಧಿಕಾರ ರಾಜ್ಯ ಪ್ರಾಧಿಕಾರಕ್ಕಿದೆ. ಹಿರಿಯ ನಾಗರಿಕರಿಗೆ ಇತರ ಸೌಲಭ್ಯಗಳು ಸಿಗುವಲ್ಲಿ ವಿಳಂಬವಾಗಿದ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಪ್ರಾಧಿಕಾರದ ಸ್ವಯಂ ಸೇವಕರು ಹಾಗೂ ಪ್ಯಾನಲ್ ವಕೀಲರು ಅರ್ಜಿದಾರರ ಬಳಿ ತಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು, ಪರಿಹಾರ ನೀಡುವ ಸೌಲಭ್ಯ ಪ್ರಾಧಿಕಾರದಲ್ಲಿ ಇದೆ ಎಂದು ಕಾವೇರಿ ತಿಳಿಸಿದರು.
ಅಸಹಾಯಕ ಹಿರಿಯ ನಾಗರಿಕರ ರಕ್ಷಣೆಗೆ ಸರಕಾರದ ವತಿಯಿಂದ ಒಂದು ವೃದ್ದಾಶ್ರಮ ಅಗತ್ಯವಿದೆ ಎಂದ ಕಾವೇರಿ, ಯಾವುದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ರಕ್ಷಣೆಗೆ 1090 ಸಹಾಯವಾಣಿಗೆ ಕರೆ ಮಾಡಿ ಅಗತ್ಯವಿರುವವರಿಗೆ ಸಹಾಯ ಮಾಡಬಹುದು ಎಂದು ಸಲಹೆ ನೀಡಿದರು. 
ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಮಾತನಾಡಿ, ಸಾಕಿ ಸಲಹಿದ ಹೆತ್ತವರನ್ನು ನಿರ್ಲಕ್ಷಿಸುವ ಮನೋಭಾವದಿಂದಾಗಿ ಹೆತ್ತವರು ವೃದ್ಧಶ್ರಮದಲ್ಲಿ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ವಿಭಕ್ತ ಕುಟುಂಬದ ಪರಿಕಲ್ಪನೆಯಿಂದಾಗಿ ಹಿರಿಯರಲ್ಲಿ ಅಭದ್ರತೆ ಕಾಡುತ್ತಿದೆ. ಆದ್ದರಿಂದ ಹಿರಿಯ ನಾಗರಿಕರ ಪ್ರಾಮುಖ್ಯತೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಎ.ಪಿ.ಕೊಡಂಚ ಹಿರಿಯ ನಾಗರಿಕರ ಬೇಡಿಕೆಗಳ ಕುರಿತು ಮಾತನಾಡಿದರು. 
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಧುಸೂದನ್ ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗಿರುವ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ವಕೀಲ ಬಿ.ಮುರಳೀಧರ ವಾರಂಬಳ್ಳಿ ಹಿರಿಯ ನಾಗರಿಕರ ಕಾನೂನುಗಳ ಕುರಿತುಉಪನ್ಯಾಸ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವೀಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಸರಳಾ ಬಿ ಕಾಂಚನ್ ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಚಂದ್ರನಾಯ್ಕ್ ಸ್ವಾಗತಿಸಿದರು. ಯೋಜನಾ ಸಹಾಯಕ ಗಣೇಶ್ ಮರಾಠೆ ವಂದಿಸಿದರು. ಡಿಎನ್ಎ ಸಂಸ್ಥೆಯ ಮ್ಯಾನೇಜರ್ ರೂಪಲಕ್ಷ್ಮೀ ನಿರೂಪಿಸಿದರು.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...