ಸಾಮ್ರಾಜ್ಯಶಾಹಿ ಪೂರ್ವಗ್ರಹಗಳು

Source: sonews | By Staff Correspondent | Published on 19th March 2018, 12:11 AM | National News | Sports News | Don't Miss |

 

ಭಾರತದಲ್ಲಿನ ಧಾರ್ಮಿಕ ನಿರ್ಬಂಧಗಳ ಕುರಿತು ಬ್ರಿಟನ್ನಿನಲ್ಲಿ ನಡೆಯುತ್ತಿರುವ ಚರ್ಚೆಗಳು ಆಷಾಢಭೂತಿತನದಿಂದ ಕೂಡಿವೆ.

ನರೇಂದ್ರ ಮೋದಿಯ ಭಾರತದಲ್ಲಿ ಧಾರ್ಮಿಕ ಅಥವಾ ಶ್ರದ್ಧೆಯ ಸ್ವಾತಂತ್ರ್ಯಗಳು ಹೇಗೆ ಅಪಾಯದಲ್ಲಿವೆ ಎಂಬ ಬಗ್ಗೆ ಬ್ರಿಟೀಷ್ ಸಂಸತ್ತು ೨೦೧೮ರ ಮಾರ್ಚ್ ರಂದು ತನ್ನ ಆತಂಕವನ್ನು ವ್ಯಕ್ತಪಡಿಸಿತು. ಏಪ್ರಿಲ್ ಮಧ್ಯಭಾಗದಲ್ಲಿ ನರೇಂದ್ರ ಮೋದಿಯವರು ಕಾಮನ್ವೆಲ್ತ ಸಭೆಯಲ್ಲಿ ಭಾಗವಹಿಸಲು ಬಂದಾಗ ಬ್ರಿಟಿಷ ಸರ್ಕಾರವು ಅವರೊಡನೆ ವಿಷಯದ ಕುರಿತು ಮಾತನಾಡಬೇಕೆಂದೂ ಸ್ಕಾಟಿಷ್ ನ್ಯಾಷನಲ್ ಪಕ್ಷದ ನಾಯಕರೂ ಮತ್ತು ಬ್ರಿಟನ್ನಿನ ಸಂಸತ್ ಸದಸ್ಯರೂ ಆಗಿರುವ ಮಾರ್ಟಿನ್ ಡೊಷೆರಿ ಹ್ಯೂಗ್ಸ್ ಅವರು ಒತ್ತಾಯಿಸಿದ್ದಾರೆ.

ಹಾಗೆ ನೋಡಿದರೆ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಮನದ ಬಗ್ಗೆ ಬ್ರಿಟನ್ನಿನ ಸಂಸತ್ತು ಈಗಲಾದರೂ ಎಚ್ಚೆತ್ತುಕೊಂಡು ಕಾಳಜಿ ತೋರಿರುವುದು ಸ್ವಾಗತಾರ್ಹವಾದ ವಿಷಯವೇ. ತನ್ನ ಹಿಂದೂ ಬಹುಸಂಖ್ಯಾತತ್ವ ಸಿದ್ಧಾಂತದ  ಮೂಲಕ ಸಮಾಜದಲ್ಲಿ ಮತ್ತು ಪ್ರಭುತ್ವದಲ್ಲಿ ವಿಷ ತುಂಬುತ್ತಿರುವ ಒಂದು ಸರ್ಕಾರದ ಮೇಲೆ ರಾಜತಾಂತ್ರಿಕ ಒತ್ತಡಗಳು ಹೇರಲ್ಪಡುವುದು ಒಳ್ಳೆಯ ವಿಷಯವೇ. ಆದರೆ ಬ್ರಿಟನ್ ಸಂಸತ್ತಿನ ಹೇಳಿಕೆಯ ಪೂರ್ಣಪಾಠವು ಹಲವಾರು ಕಾರಣಗಳಿಂದ ಕುತೂಹಲಕಾರಿಯಾಗಿದೆ. ಇಡೀ ಪಶ್ಚಿಮೇತರ ಜಗತ್ತಿನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕುಸಿಯುತ್ತಿದೆ ಎಂಬ ಬ್ರಿಟನ್ನಿನ ಆತಂಕವು ಹಲವಾರು ಸಾಮ್ರಾಜ್ಯಶಾಹಿ ಪೂರ್ವಗ್ರಹಗಳಿಂದ ಕೂಡಿದೆ ಎಂಬುದನ್ನು ಅದು ಬಯಲು ಮಾಡುತ್ತದೆ.

ಐರೋಪ್ಯ ಮಾದರಿಯ ಆಧುನಿಕ ಸಾಮ್ರಾಜ್ಯಶಾಹಿ ಪ್ರಚಾರಗಳ ರೀತಿ ಬೇರೆ ಇದೆ. ಅದರ ಯಶಸ್ಸನ್ನು ಅವು ಸಾರ್ವಜನಿಕ ವಲಯದಲ್ಲಿ ಎಷ್ಟರಮಟ್ಟಿಗೆ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುತ್ತವೆ ಎಂಬುದನ್ನು ಮಾತ್ರ ಆಧರಿಸಿ ತೀರ್ಮಾನ ಮಾಡಲಾಗುವುದಿಲ್ಲ. ಸಾಮ್ರಾಜ್ಯಶಾಹಿ ಸಿದ್ಧಾಂತಗಳು ಅಂಥಾ ಸಮರ್ಥನೆಗಳಲ್ಲಿ ಎಷ್ಟರಮಟ್ಟಿಗೆ ಅಂತರ್ಗತವಾಗಿರುತ್ತದೆ ಎಂಬುದನ್ನು ಆಧರಿಸಿ ಅವು ಬಯಲುಗೊಳ್ಳುತ್ತಿರುತ್ತವೆ. ಅಂಥ ಒಂದು ಪೂರ್ವ ಗ್ರಹೀತವಾದ ತಿಳವಳಿಕೆಯೆಂದರೆ ಯಾವುದೇ ಕ್ಷೇತ್ರದಲ್ಲಿ ಐರೋಪ್ಯರ ಸಾಧನೆಗಳೇ ಪ್ರಶ್ನಾತೀತ ಮಾನದಂಡವಾಗಿಬಿಡುವುದು ಮಾತ್ರವಲ್ಲದೆ, ಇತರ ಎಲ್ಲಾ ಸಮಾಜಗಳ ಸಾಧನೆಗಳನ್ನು ಹಾಗೂ ವೈಫಲ್ಯಗಳನ್ನು ಯೂರೋಪಿಯನ್ನರ ಅಳತೆಗೋಲಲ್ಲೇ ಅಳೆಯುವಂತಾಗುವುದು. ಪಶ್ಚಿಮೇತರ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಕುಸಿಯುತ್ತಿರುವ ಬಗ್ಗೆ ಬಿಟನ್ನಿನ ಸಂಸತ್ತಿನಲ್ಲಿ ನಡೆದ ಚರ್ಚೆಯು ಅನುದ್ದಿಶ್ಯಪೂರ್ವಕವಾಗಿಯೇ ಯೂರೋಪ್ ಕೇಂದ್ರಿತವಾಗಿತ್ತು. ಅಲ್ಲಿನ ಲೇಬರ್ ಪಕ್ಷದ ಸಂಸತ್ ಸದಸ್ಯ ಫೇಬಿಯನ್ ಹ್ಯಾಮಿಲ್ಟನ್ ಅವರು ಮಾತನಾಡುತ್ತಾ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರವಾಗಿದ್ದರೂ ಯುರೋಪಿನ ಯಾವ ಸಣ್ಣ ಭಾಗದಲ್ಲೂ ಕಾಣಸಿಗದಂಥ ಧಾರ್ಮಿಕ ಅಸಹನೆಯನ್ನು ಉಳಿಸಿಕೊಂಡು ಬಂದಿರುವ ಬಗ್ಗೆ ಸಖೇದಾಶ್ಚರ್ಯವನ್ನು ವ್ಯಕ್ತಪಡಿಸಿದರು. ಹೀಗಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು  ಖಾತರಿ ಪಡಿಸುವಲ್ಲಿ ಭಾರತದ ಸಾಧನೆ ಏಕೆ ಕಳಪೆಯೆಂದರೆ ಅದು ಬ್ರಿಟನ್ನಿನ ಅಥವಾ ಯೂರೋಪಿನ ಯಾವುದೇ ಭಾಗಕ್ಕೂ ಹೋಲಿಸುವ ಮಟ್ಟದಲ್ಲಿಲ್ಲ.

ಧಾರ್ಮಿಕ ಸ್ವಾತಂತ್ರ್ಯದ ಬಗೆಗಿನ ಸಾಮ್ರಾಜ್ಯಶಾಹಿ ಕಥನಗಳ ಪರಿಣಾಮವು ಸುಸ್ಪಷ್ಟವಾಗಿದೆ. ಇವು ಭಾರತದಲ್ಲಿ ಧಾರ್ಮಿಕ ದಮನಗಳಿಗೆ ಗುರಿಯಾಗುತ್ತಿರುವುದು ಕೇವಲ ಕ್ರಿಶ್ಚಿಯನ್ ಮತ್ತು ಸಿಖ್ ಧರ್ಮೀಯರು ಮಾತ್ರವೆಂಬ ಅಭಿಪ್ರಾಯವನ್ನು ಮೂಡಿಸುತ್ತದೆ. ಭಾರತದಲ್ಲಿ ಹಿಂದೂತ್ವ ಹಿಂಸಾಚಾರಗಳಿಗೆ ಪ್ರಧಾನವಾಗಿ ಗುರಿಯಾಗುತ್ತಿರುವ ಮುಸ್ಲಿಮರ ಬಗ್ಗೆ ಒಂದು ಅಕ್ಷರವನ್ನೂ ಚರ್ಚೆಯಲ್ಲಿ ಹೇಳಲಾಗಿಲ್ಲ. ಇಂಥಾ ಒಂದು ಪ್ರಮುಖ ಲೋಪಕ್ಕೆ ಕಾರಣವೇನಿರಬಹುದು? ಅದಕ್ಕಿರಬಹುದಾದ ಒಂದೇ ಕಾರಣವೇನೆಂದರೆ ಮುಸ್ಲಿಮ್ ಅಲ್ಪಸಂಖ್ಯಾತರ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವಲ್ಲಿ ಬ್ರಿಟನ್ನನ್ನು ಒಳಗೊಂಡಂತೆ ಇಡೀ ಪಾಶ್ಚಿಮಾತ್ಯ ದೇಶಗಳ ಇತಿಹಾಸವು ಭಾರತದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯವು ಎದುರಿಸುತ್ತಿರುವ ದಮನಗಳನ್ನು ಹೋಲಿಸಲು ಸರಿಯಾದ ಮಾನದಂಡವನ್ನೇನೂ ಒದಗಿಸುವುದಿಲ್ಲ. ಬ್ರಿಟನ್ನಿನಲ್ಲಿ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರ ವಿರುದ್ಧ ಮತೀಯ ದ್ವೇಷ ಪೂರಿತವಾದ ಅಪರಾಧಗಳು ಸಂಭವಿಸುತ್ತಿವೆ ಎಂದು ಸ್ವತಃ ಹಾಮಿಲ್ಟನ್ ಅವರೇ ತಮ್ಮ ಸ್ವವಿಮರ್ಶಾತ್ಮಕವಾದ ಮಾತುಗಳಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ  ಸಣ್ಣಮಟ್ಟದ ತಪ್ಪೊಪ್ಪಿಗೆಯೂ ಸಹ ನಂತರದಲ್ಲಿ ಕನ್ಸರ್ವೇಟಿವ್ ಪಕ್ಷದ ಸಂಸತ್ ಸದಸ್ಯ ಏದ್ವರ್ಡ್ ಲೇಹ್ ಮಾಡಿದ ಭಾಷಣದಲ್ಲಿ ಕೊಚ್ಚಿಕೊಂಡು ಹೋದವು. ಅವರ ಪ್ರಕಾರ ಜಗತ್ತಿನಲ್ಲಿ ಅತ್ಯಂತ ತೀವ್ರ ಧಾರ್ಮಿಕ ದಮನಗಳಿಗೆ ಗುರಿಯಾಗುತ್ತಿರುವುದು ಕ್ರಿಶ್ಚಿಯನ್ನರು ಮಾತು ಮುಸ್ಲಿಮರೊಳಗಿನ ಅಲ್ಪಸಂಖ್ಯಾತ ಮುಸ್ಲಿಮರು. ಹಾಗೂ ಮುಸ್ಲಿಮರೊಳಗಿನ ಅಲ್ಪಸಂಖ್ಯಾತ ಮುಸ್ಲಿಮರು ಪ್ರಧಾನಧಾರೆ ಮುಸ್ಲಿಮರಿಂದ (ಪಾಕಿಸ್ತಾನದ ಅಹ್ಮದೀಗಳಂತೆ..)ದಮನಕ್ಕೆ ಗುರಿಯಾಗುತ್ತಿದ್ದಾರೆ. ಅಂದರೆ ಭಾರತ ಮತ್ತು ಬ್ರಿಟನ್ನಿನಂತ ಮುಸ್ಲಿಮ್ ಬಹುಸಂಖ್ಯಾತವಲ್ಲದ ದೇಶಗಳಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ದಮನಕ್ಕೆ ಗುರಿಯಾಗುತ್ತಿಲ್ಲವೆಂದೂ, ಒಂದು ವೇಳೆ ಅವರಿಗೆ ಅಸೌಕರ್ಯವಾಗುತ್ತಿದ್ದರೆ ಅದು ಜಗತ್ತನ್ನು ಭಯೋತ್ಪಾದನೆಯಿಂದ ಉಳಿಸಲು ಮಾತ್ರ ಎಂದರ್ಥವೇ?

ಇವೆಲ್ಲ ಅಪಸವ್ಯಗಳ ನಡುವೆಯೂ ಬ್ರಿಟಿಶ್ ಸರ್ಕಾರವು ಒಂದೊಮ್ಮೆ ಮೋದಿಯ ಜೊತೆಗಿನ ಮಾತುಕತೆಗಳಲ್ಲಿ ಧಾರ್ಮಿಕ ದಮನದ ವಿಷಯವನ್ನು ಪ್ರಸ್ತಾಪ ಮಾಡುವುದೇ ಆದರೆ ಅದು ಸ್ವಾಗತಾರ್ಹವೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಂಥಾ ಒಂದು ಚರ್ಚೆ ನಡೆಯುವ ಸಾಧ್ಯತೆ ಬಹಳ ಕಡಿಮೆ. ಚರ್ಚೆಗಳಿಗೆ ಉತ್ತರವನ್ನು ನೀಡುತ್ತಾ ಏಶಿಯಾ ಮತ್ತು ಫೆಸಿಫಿಕ್ ದೇಶಗಳ ಸಂಬಂಧಪಟ್ಟ ಮಂತ್ರಿಯಾದ ಮಾರ್ಕ್ ಫೀಲ್ಡ್ ಅವರು ಮೋದಿಯವರಿಗೆ ಸಂಸತ್ತಿನ ಕಾಳಜಿಯನ್ನು ತಲುಪಿಸಲು ತನ್ನೆಲ್ಲ ಪ್ರಯತ್ನಗಳನ್ನು ಹಾಕುವುದಾಗಿ ಆಶ್ವಾಸನೆಯನ್ನು ನೀಡಿದರು. ಆದರೆ, ಕೆಲವೊಮ್ಮೆ ರಾಜತಂತ್ರವು ಮುಚ್ಚಿದ ಕೋಣೆಯೊಳಗೆ ನಡೆಯಬೇಕೇ ಹೊರತು ಸಾರ್ವಜನಿಕ ಸಭೆಗಳಲ್ಲ ಎಂಬ ಎಚ್ಚರಿಕೆಯನ್ನೂ ಸಹ ತನ್ನ ಜೊತೆಗಾರರಿಗೆ ನೀಡಿದರು. ಒಂದು ವೇಳೆ ಬ್ರಿಟನ್ ಸರ್ಕಾರವು ೨೦೧೫ರಲ್ಲಿ ಮೋದಿಗೆ ಕೊಟ್ಟ ಸ್ವಾಗತವನ್ನು ಒಂದು ಮಾನದಂಡವಾಗಿಟ್ಟುಕೊಳ್ಳುವುದೇ ಆದಲ್ಲಿ ಫೀಲ್ಡ್ ಅವರ ಮುಚ್ಚಿದ ಕೋಣೆಯೊಳಗಿನ ರಾಜತಂತ್ರದ ಮಾತಿಗೆ ಬೇರೆ ಅರ್ಥವಿರುತ್ತದೆ. ಅದನ್ನು ಮೋದಿಯ ಜೊತೆಗಿನ ಮಾತುಕತೆಯಲ್ಲಿ ಹೆಚ್ಚಿನದನ್ನೇನೂ ನಿರೀಕ್ಷಿಸಬಾರದೆಂದು ಸಂಸತ್ ಸದಸ್ಯರಿಗೆ ಅತ್ಯಂತ ಸಂಸದೀಯವಾಗಿ ಹೇಳಿರುವ ಮಾತೆಂದೇ ಸಾರಾಂಶದಲ್ಲಿ ಪರಿಗಣಿಸಬೇಕು. ಬ್ರೆಕ್ಸಿಟ್ ನಂತರದ ಬ್ರಿಟನ್ನು ಭಾರತದೊಂದಿಗೆ ಇನ್ನೂ ನಿಕಟವಾದ ಬಾಂಧವ್ಯವನ್ನು ಇಟ್ಟುಕೊಳ್ಳಲು ಬಯಸುತ್ತಿದೆ. ಈಗಾಗಲೇ ಮೋದಿ ಮತ್ತು ಬ್ರಿಟನ್ನಿನ ಪ್ರಧಾನಿ ತೆರೇಸಾ ಮೇ ಅವರ ಜೊತೆ ದ್ವಿಪಕ್ಷೀಯ ಮಾತುಕತೆಗಳು ನಿಗದಿಯಾಗಿದ್ದು ಹಲವಾರು ವಾಣಿಜ್ಯ ಮತ್ತು ಹೂಡಿಕೆ ಸಂಬಂಧೀ ಒಪ್ಪಂದಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಇದಲ್ಲದೆ ಭಾರತದಲ್ಲಿ ಒಂದು ಪ್ರದೇಶ ಮಟ್ಟದ ವಾಣಿಜ್ಯ ಕೇಂದ್ರವನ್ನು ಏರ್ಪಾಡು ಮಾಡುವ ಬಗ್ಗೆಯೂ ಮಾತುಕತೆಗಳು ನಡೆಯುತ್ತಿವೆ. ಹೀಗಾಗಿ ಬ್ರಿಟನ್ನು ಭಾರತದ ಪ್ರಧಾನಿಯ ಜೊತೆಗಿನ ಮಾತುಕತೆಯಲ್ಲಿ ಧಾರ್ಮಿಕ ದಮನದಂಥ ಕಿರಿಕಿರಿಯಾಗುವಂಥ ವಿಷಯಗಳನ್ನೆತ್ತಿ ಮುಜುಗರವುಂಟು ಮಾಡುವ ಸಂಭವ ಇಲ್ಲ.

 

ಭಾರತದಲ್ಲಿ ಕ್ರಿಶ್ಚಿಯನ್ ಮತ್ತು ಸಿಖ್ ಅಲ್ಪಸಖ್ಯಾತರ ಮೇಲೆ ನಡೆಯುತ್ತಿರುವ ದಮನವೂ ಅಷ್ಟೇ ಪ್ರಮುಖವಾದದ್ದೆಂಬುದನ್ನು ಯಾರು ಮರೆಯುವಂತಿಲ್ಲ. ೨೦೦೮ರ ಕಂದiಲ್ ಹಿಂಸಾಚಾರಗಳಿಗೆ ಬಲಿಯಾದ ಕ್ರಿಶ್ಚ್ಚಿಯನ್ನರಿಗೆ ಮತ್ತು ೧೯೮೪ರ ಸಿಖ್ ವಿರೋಧಿ ಹಿಂಸಾಚಾರಗಳಿಗೆ ತುತ್ತಾದ ಸಿಖ್ಖರಿಗೆ ಈಗಲೂ ನ್ಯಾಯ ದೊರೆತಿಲ್ಲ. ಆದರೆ ಧಾರ್ಮಿಕ ದಮನದ ಮೇಲಿನ ವಿಮರ್ಶೆಯನ್ನು ಸಾಮ್ರಾಜ್ಯಶಾಹಿ ಚೌಕಟ್ಟಿನಲ್ಲಿ ನಡೆಸುವುದರ ಮಿತಿಯೇನೆಂಬುದನ್ನು ಬ್ರಿಟಿಷ್ ಸಂಸತ್ತಿನಲ್ಲಿ ನಡೆದ ಚರ್ಚೆಗಳು ತೋರಿಸಿಕೊಟ್ಟಿವೆ. ವರ್ತಮಾನದ ಭಾರತದಲ್ಲಿ ಮುಸ್ಲಿಮರು ಎದುರಿಸುತ್ತಿರುವ ಅತ್ಯಂತ ಅಮಾನುಷವಾದ ಹಿಂಸೆಯ ಬಗ್ಗೆ ರೂಪುಗೊಂಡಿರುವ ಅಮಾನವೀಯ ಮೌನದಲ್ಲಿ ಅದೂ ಪಾಲುದಾರನಾಗುತ್ತದೆ. ಇಂಥ ಪ್ರಧಾನ ಕಥನಗಳು ಧಾರ್ಮಿಕ ಹಿಂಸಾಚಾರದ ಅನುಭವಗಳಲ್ಲಿರುವ ಒಳಸೂಕ್ಷ್ಮಗಳನ್ನು ಗ್ರಹಿಸಲು ನಿರಾಕರಿಸುತ್ತವೆ. ಭಾರತದಲ್ಲಿರುವ ಕ್ರಿಶ್ಚಿಯನ್ನರು ದಮನಕ್ಕೆ ಗುರಿಯಾಗಲು ಕಾರಣ ಕೇವಲ ಅವರು ಬೈಬಲ್ ಓದುತ್ತಾರೆ ಎಂಬುದಲ್ಲ. ಬದಲಿಗೆ ಅವರು ದಲಿತರು ಮತ್ತು ಆದಿವಾಸಿಗಳು ಆಗಿದ್ದಾರೆಂಬುದು ಮತ್ತು ಜಗತ್ತಿನ ಇನ್ನಿತರ ಅಲ್ಪಸಂಖ್ಯಾತರಂತೆ ಅವರೂ ಸಹ ಜಾಗತಿಕ ಬಂಡವಾಳಶಾಹಿ ಕಬಳಿಸಲು ಹಪಹಪಿಸುತ್ತಿರುವ ಭೂಮಿ ಮತ್ತಿತರ ಸಂಪನ್ಮೂಲಗಳನ್ನು ಆಧರಿಸಿ ಬದುಕುತ್ತಿದ್ದಾರೆಂಬುದೂ ಸಹ ಅಷ್ಟೇ ಮುಖ್ಯವಾಗುತ್ತದೆ. ಜಾಗತಿಕ ಸಮುದಾಂiಗಳ ಶ್ರೇಣಿಯಲ್ಲಿ ಅಂಚಿನಲ್ಲಿ ಬದುಕುತ್ತಿರುವ ನಿರ್ಲಕ್ಷಿತ ಸಮುದಾಯಗಳು ಯಾವ ಸಂಪನ್ಮೂಲಗಳನ್ನು ಆಧರಿಸಿವೆಯೋ ಅವುಗಳ ಮೇಲೆ ಜಗತ್ತಿನ ಶ್ರೀಮಂತ ದೇಶಗಳ ನವ ಸಾಮ್ರಾಜ್ಯಶಾಹಿಗಳ ಕಣ್ಣುಬಿದ್ದಿದೆ. ಲೂಟಿಕೋರ ಶಕ್ತಿಗಳೇ  ಜಗತ್ತಿನ ಬಹುಪಾಲು ಅಲಕ್ಷಿತ ಸಮುದಾಯಗಳ ಮೇಲೆ ದಮನವನ್ನು ನಡೆಸುತ್ತಿರುವ ಪ್ರಧಾನ ಶಕ್ತಿಗಳೂ ಆಗಿವೆ. ಆದ್ದರಿಂದ ಧಾರ್ಮಿಕ ದಮನದ ಬಗ್ಗೆ ಚರ್ಚೆ ನಡೆಯುವುದು ಅಸಾಧ್ಯವೇ ಆಗಿದೆ.

   ಕೃಪೆ: Economic and Political Weekly   ಅನು: ಶಿವಸುಂದರ್ 

             

 

Read These Next

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ಸ್ಥಾನ

ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ಗೆ ವರ್ಣರಂಜಿತ ತೆರೆ: 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕದೊಂದಿಗೆ ಭಾರತಕ್ಕೆ ನಾಲ್ಕನೇ ...

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

ಸಂಸತ್ತಿನಲ್ಲಿ ವಿರೋಧ ಪಕ್ಷಗಳಿಗೂ ಮಾತನಾಡಲು ಬಿಡಿ, ನಿಮ್ಮಲ್ಲಿ ತಾಳ್ಮೆಯಿಲ್ಲದಿದ್ದರೆ ರೋಗಿಗಳಾಗಿಬಿಡುತ್ತೀರಿ': ನಿರ್ಗಮಿತ ಉಪ ...

ಮೂಡುಬಿದಿರೆ:  ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್: ಭಾರತೀಯ ರೈಲ್ವೇ ಹಾಗೂ ಕೆನರಾ ಬ್ಯಾಂಕ್ ಮುನ್ನಡೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಬಾಲ್‍ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ನಡೆಯುತ್ತಿರುವ 67ನೇ ...

ಎದೆಹಾಲು ಮಕ್ಕಳಿಗೆ ಅಮೃತ ಸಮಾನ : ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ - ಡಾ.ಟಿ.ಎ. ಶೇಪೂರ

ಧಾರವಾಡ : ಎದೆಹಾಲು ಮಕ್ಕಳಿಗೆ ಅಮೃತ ಸಮಾನ. ಪ್ರತಿ ತಾಯಿಯು ತನ್ನ ಮಗುವಿಗೆ ತಪ್ಪದೇ ಎದೆಹಾಲು ಉಣಿಸಬೇಕು. ಇದರಿಂದ ಮಗುವಿನಲ್ಲಿ ...

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ. ಆಗಸ್ಟ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಚಿವ ಸಿ.ಸಿ.ಪಾಟೀಲ್ ಸೂಚನೆ

ಬಳ್ಳಾರಿ : ಶಾಸಕರ ಅನುದಾನದ ಕಾಮಗಾರಿಗಳು, ಎಚ್‍ಎಸ್‍ಡಿಪಿ, ಎಸ್‍ಸಿಪಿ-ಟಿಎಸ್‍ಪಿ ಸೇರಿದಂತೆ ಇಲಾಖೆಗೆ ನಿಗದಿಯಾಗಿರುವ ಎಲ್ಲಾ ಬಾಕಿ ...

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದರೆ ಕಠಿಣ ಕ್ರಮ: ಎಸ್ಪಿ ಎನ್ ವಿಷ್ಣುವರ್ಧನ

ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ಪ್ರಚೋದನಕಾರಿ ...