ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ 12 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Source: so news | Published on 1st August 2020, 11:57 PM | Coastal News | Don't Miss |

 

ಕಾರವಾರ: ಭಟ್ಕಳ ಶಹರದ ಪೋಲೀಸ್ ಠಾಣಾವ್ಯಾಪ್ತಿಯ ಚೌಥನಿಯ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ವ್ಯಪಹರಿಸಿ ಲಾಡ್ಜನಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ತಾಲೂಕಿನ ಗುಳ್ಮೇಯ ನಿವಾಸಿ ಆರೋಪಿ ಮಹ್ಮದ್ ಅಲ್ತಾಪ್ @ ಆರ್ಮರ್ ನಜೀರ್ ಅಹ್ಮದ್ ಖಾನ್ ಈತನಿಗೆ ಎಫ್.ಟಿ.ಎಸ್.ಸಿ.-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 12 ವರ್ಷ ಜೈಲು ಶಿಕ್ಷೆ ಹಾಗೂ ರೂಪಾಯಿ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಭಟ್ಕಳದ ಗುಳ್ಮೆಯ ಆರೋಪಿ ಮಹ್ಮದ್ ಅಲ್ತಾಪ್ @ ಆರ್ಮರ್ ನಜೀರ್ ಅಹ್ಮದ್ ಖಾನ್ ಈತನು ವೃತ್ತಿಯಲ್ಲಿ ಡ್ರೈವರ್‍ನಾಗಿದ್ದು ದಿನಾಂಕ:02-03-2017 ರಂದು ಬೆಳಿಗ್ಗೆ ತನ್ನ ಗೆಳೆಯನ ಮಾಲಿಕತ್ವದ ಕೆ.ಎ. 47/ಎಂ.2168 ಕಾರಿನಲ್ಲಿ ಬಂದು ಬಾಲಕಿಯನ್ನು ಮನೆಯಿಂದ ವ್ಯಪಹರಿಸಿ ಅಪ್ಸರಕೊಂಡಕ್ಕೆ ಕರೆದುಕೊಂಡು ಹೋಗಿ ಸುತ್ತಾಡಿಸಿ ರಾತ್ರಿ 11.30 ಗಂಟೆಗೆ ಮುರ್ಡೇಶ್ವರದ ಲಾಡ್ಜ ಒಂದರ ರೂಮ್ ನಂ:103 ರಲ್ಲಿ ದಿನಾಂಕ: 03-03-2017 ರಂದು ಬೆಳಗಿನ ಜಾವ 8.00 ಗಂಟೆಯ ವರೆಗೆ ಅಕ್ರಮ ಬಂಧನದಲ್ಲಿರಿಸಿಕೊಂಡು ಮದುವೆಯಾಗುವುದಾಗಿ ಹೇಳಿ ಮೇಲಿಂದ ಮೇಲೆ ಬಾಲಕಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಿ ಅತ್ಯಾಚಾರವೆಸಗಿದ್ದಲ್ಲದೇ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಅಪರಾಧದ ಕುರಿತಂತೆ ಭಟ್ಕಳ ಪೋಲೀಸರು ಪ್ರಕರಣ ದಾಖಲಿಸಿ ಕಾರನ್ನು ಜಪ್ತು ಪಡಿಸಿ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ರಿ ಪ್ರಕರಣದ ಕುರಿತು ಅಂದಿನ ಸಿ.ಪಿ.ಐ. ಗಣೇಶ ಕೆ.ಎಲ್. ಇವರು  ತನಿಖೆ ಜರುಗಿಸಿ ಐ.ಪಿ.ಸಿ. ಕಲಂ: 363, 342, 366 (ಎ), 376, 506 ಐ.ಪಿ.ಸಿ. ಹಾಗೂ ಪೋಕ್ಸೋ ಕಾಯಿದೆ-2012 ರ ಕಲಂ: 4, 6 & 8 ರ ಅಡಿಯಲ್ಲಿ ದಾಖಲಿಸಿದ ಪ್ರಕರಣದ ದೋಷಾರೋಪಣೆ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ಸುಧೀರ್ಘ ವಿಚಾರಣೆ ನಡೆಸಿದ ಎಫ್.ಟಿ.ಎಸ್.ಸಿ.-1 ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಆರೋಪಿತನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಐ.ಪಿ.ಸಿ. ಹಾಗೂ ಪೋಕ್ಸೋ ಕಾಯಿದೆ-2012 ರ ಅಡಿಯಲ್ಲಿ 12 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದ್ದು ಶಿಕ್ಷೆಯು ಒಟ್ಟಾತ್ರಯದಲ್ಲಿ ಜಾರಿಗೆ ಬರುವಂತೆ ಜುಲೈ 31 ರಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶಿವಾಜಿ ಅನಂತ ನಲವಡೆ ಅಂತಿಮ ತೀರ್ಪು ನೀಡಿದ್ದು ನೊಂದ ಬಾಲಕಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಸರಕಾರದ ಪರವಾಗಿ ವಿಶೇಷ ಸರ್ಕಾರಿ 
ಅಭಿಯೋಜಕರಾದ ಸುಭಾಷ ಪಿ. ಕೈರನ್ನ ವಾದ ಮಂಡಿಸಿದ್ದರು

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...