ಬಜೆಟ್ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ. ದುರ್ಬಲ ವರ್ಗದ ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪೂರ್ಣ ಪ್ರಮಾಣದ ಬಜೆಟ್ ಮಂಡನೆ

Source: SO News | By Laxmi Tanaya | Published on 8th July 2023, 7:55 AM | State News |

ಬೆಂಗಳೂರು : ನಮ್ಮ ಸರ್ಕಾರ ನೀಡಿದ ಭರವಸೆಗಳು, ಜನರ ಹೊಸ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

 2023-24 ರ ಬಜೆಟ್ ಗಾತ್ರ 3,27,747 ಕೋಟಿ ರೂ.ಗಳಾಗಿದೆ. 2022-23 ರಲ್ಲಿ ಬಜೆಟ್ 2,65,720 ಕೋಟಿ ರೂ. ಗಳ ಚುನಾವಣಾ ಪೂರ್ವ ಬಜೆಟ್ ನ್ನು ಹಿಂದಿನ ಸರ್ಕಾರ ಮಂಡಿಸಿತ್ತು. 

ಈ ಬಜೆಟ್ ನಾವು ಜನತೆಗೆ ನೀಡಿದ್ದ 5 ಗ್ಯಾರಂಟಿಗಳು, ಆಶ್ವಾಸನೆಗಳು ಮತ್ತು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದ ಕೆಲವು ಭರವಸೆಗಳನ್ನು ಒಳಗೊಂಡಿರುವ ಹಾಗೂ ಜಾರಿಮಾಡುತ್ತಿರುವ ಗ್ಯಾರಂಟಿ ಬಜೆಟ್ ಆಗಿದೆ.

ನಮ್ಮ 5 ಗ್ಯಾರೆಂಟಿಗಳಿಗೆ ಈ ವರ್ಷದ ಉಳಿದ ಅವಧಿಗೆ ಒಟ್ಟು 35,410 ರೂ. ಕೋಟಿ ಅಗತ್ಯವಿದೆ. ಐದು ಗ್ಯಾರೆಂಟಿಗಳಿಗೆ ವರ್ಷಕ್ಕೆ ಒಟ್ಟು  52,000 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ಅಗತ್ಯವಿದೆ. ವಿರೋಧ ಪಕ್ಷದವರು ಇವುಗಳಿಗೆ ದುಡ್ಡು ಹೇಗೆ ಸರಿದೂಗಿಸುತ್ತಾರೆ? ಗ್ಯಾರೆಂಟಿ ಜಾರಿ ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯವರು ನಾವು ಘೋಷಣೆ ಮಾಡಿದಾಗ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಲಿದೆ ಎಂದು ಟೀಕಿಸಿದ್ದರು. ನಾವು ಗ್ಯಾರೆಂಟಿಗಳಿಗೆ ಹಣ ಕ್ರೋಢೀಕರಣ ಮಾಡುತ್ತೇವೆ. ಎಲ್ಲ ಗ್ಯಾರೆಂಟಿಗಳನ್ನು ನೂರಕ್ಕೆ ನೂರು ಜಾರಿಗೊಳಿಸುತ್ತೇವೆ. ನಮ್ಮ ಮಾತಿನಂತೆ  ನಡೆದುಕೊಂಡಿದ್ದೇವೆ. ರಾಜ್ಯ ದಿವಾಳಿಯಾಗದಂತೆ ನೋಡಿಕೊಳ್ಳಲಾಗಿದೆ. ಪ್ರಣಾಳಿಕೆಯಲ್ಲಿ ಹೇಳಿದ 76 ಕಾರ್ಯಕ್ರಮಗಳನ್ನು ಜಾರಿ ಮಾಡಲು ಘೋಷಣೆ ಮಾಡಲಾಗಿದೆ. ಅವುಗಳಿಗೆ ಅನುದಾನವನ್ನೂ ಮೀಸಲಿರಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯಿಂದ 1 ಕೋಟಿ 30 ಲಕ್ಷ ಫಲಾನುಭವಿಗಳಿಗೆ ಲಾಭವಾಗಲಿದೆ. ಈ ವರ್ಷದ ಉಳಿದ ಅವಧಿಗೆ 17,500 ಕೋಟಿ ರೂ. ಹಾಗೂ ಇಡೀ ವರ್ಷಕ್ಕೆ 26,250 ಕೋಟಿ ರೂ. ಅಗತ್ಯವಿದೆ. ಜುಲೈ 16 ರಿಂದ ನೋಂದಣಿ ಪ್ರಾರಂಭವಾಗಿ, ಆಗಸ್ಟ್ 15 ಅಥವಾ 16 ಕ್ಕೆ ಮೊದಲನೇ ಕಂತು ಬಿಡುಗಡೆಯಾಗಲಿದೆ. ಕುಟುಂಬದ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ಅವರ ಖಾತೆಗೆ ವರ್ಗಾಯಿಸಲಾಗುವುದು.
ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಶೇ.99 ರಷ್ಟು ಕುಟುಂಬಗಳು ಯೋಜನೆಗೆ ವ್ಯಾಪ್ತಿಗೊಳಪಡುತ್ತವೆ. 1 ಕೋಟಿಗೂ ಹೆಚ್ಚು ನೋಂದಣಿಯಾಗಿದ್ದು, ಈ ವರ್ಷದ ಬಾಕಿ ಅವಧಿಗೆ 9000 ಕೋಟಿ ರೂ. ಇಡೀ ವರ್ಷಕ್ಕೆ 13,500 ಕೋಟಿ ರೂ. ಅಗತ್ಯವಿದೆ.

ಶಕ್ತಿ ಯೋಜನೆಯನ್ನು ಜೂನ್ 11 ರಿಂದ ಜಾರಿಗೊಳಿಸಲಾಗಿದ್ದು, ಪ್ರತಿದಿನ ಸುಮಾರು 49.6 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 13.56 ಕೋಟಿ ಉಚಿತ ಟ್ರಿಪ್ ಮಾಡಲಾಗಿದೆ. ಜೂನ್ 11 ರಿಂದ ಮಾರ್ಚ್ ಅಂತ್ಯದವರೆಗೆ 2,800 ಕೋಟಿ ರೂ. ಹಾಗೂ ಇಡೀ ವರ್ಷಕ್ಕೆ 4000 ಕೋಟಿ ರೂ. ಅಗತ್ಯವಿದೆ.

ಅನ್ನಭಾಗ್ಯ ಯೋಜನೆಯನ್ನು ಹಿಂದೆ ನಾನು ಸಿಎಂ ಆಗಿದ್ದಾಗ, ಪ್ರತಿ ಬಿಪಿಎಲ್ ಅವರಿಗೆ 7 ಕೇಜಿ ಅಕ್ಕಿ ನೀಡಲಾಗುತ್ತಿತ್ತು. ಹಸಿವು ಮುಕ್ತ ಕರ್ನಾಟಕ ಮಾಡಬೇಕು. ಯಾರು ಹಸಿದು ಮಲಗಬಾರದು ಎಂದು ಈ ಬಾರಿ 10 ಕೆಜಿ ಆಹಾರ ಧಾನ್ಯ ಕೊಡುತ್ತೇವೆ ಎಂದು ಘೋಷಿಸಿದ್ದೆವು. ಎಲ್ಲಾ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ದಾರರು 4.42 ಕೋಟಿ ಜನರಿಗೆ ಈ ಯೋಜನೆಯ ಲಾಭವಾಗಲಿದೆ. ಈ ವರ್ಷಕ್ಕೆ 10275 ಕೋಟಿ ರೂ. ಬೇಕಾಗುತ್ತದೆ.  ಜುಲೈ 1 ರಿಂದ ಅಕ್ಕಿ ನೀಡುವುದಾಗಿ ನೀಡಿರುವ ಮಾತನ್ನು ತಪ್ಪಬಾರದು ಎಂದು ಜುಲೈ 10 ರಿಂದ 5 ಕೆಜಿಗೆ 170 ರೂ.ಗಳನ್ನು ಪ್ರತಿಯೊಬ್ಬ ಫಲಾನುಭವಿಗೆ ನೀಡಲಾಗುವುದು. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಟೆಂಡರ್ ಕರೆಯಲಾಗಿದೆ. ಅಕ್ಕಿ ಸಿಗುವವರೆಗೆ ಫಲಾನುಭವಿಗಳ ಖಾತೆಗೆ 170 ರೂ. ನೀಡಲಾಗುವುದು. 

ಯುವನಿಧಿ ಯೋಜನೆಯಡಿ 2022-23 ರಲ್ಲಿ ತೇರ್ಗಡೆಯಾದ ಪದವೀಧರರು, ಡಿಪ್ಲೋಮಾ ಪಡೆದವರು 6 ತಿಂಗಳವರೆಗೆ ಉದ್ಯೋಗ ಸಿಗದಿದ್ದರೆ, ಅಂತಹವರಿಗೆ 24 ತಿಂಗಳವರೆಗೆ ಪದವೀಧರರಿಗೆ ಮಾಹೆಯಾನ 3000 ರೂ. ಹಾಗೂ  ಡಿಪ್ಲೋಮಾ ಪಡೆದವರಿಗೆ 1500 ರೂ. ನೀಡಲಾಗುವುದು.     ಈ ವರ್ಷಕ್ಕೆ 215 ಕೋಟಿ ರೂ. ಅಗತ್ಯವಿದ್ದು , ಇಡೀ ವರ್ಷಕ್ಕೆ 1,000 ಕೋಟಿ ರೂ.ಗಳಾಗುತ್ತದೆ. ಒಟ್ಟು 3 ಲಕ್ಷ 70 ಸಾವಿರ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ದೊರೆಯಲಿದೆ.

ಎಸ್ ಸಿಎಸ್ ಪಿ/ ಟಿಎಸ್ ಪಿ ಕಾರ್ಯಕ್ರಮಗಳಿಗೆ 34,294 ಕೋಟಿ ರೂ. ನೀಡಿದ್ದೇವೆ , 6,060 ಕೋಟಿ ರೂ.ಗಳಷ್ಟು ಹಂಚಿಕೆಯನ್ನು ಹೆಚ್ಚಿಸುವ ಮೂಲಕ, ಈ ವರ್ಗಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. 

ಮಹಿಳಾ ಉದ್ದೇಶಿತ ಆಯವ್ಯಯ 70,427 ಕೋಟಿ ರೂ.ಗಳಿದ್ದು , ಹಿಂದಿನ ಸಾಲಿಗೆ ಹೋಲಿಸಿದರೆ 27,793 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಇಂದಿರಾ ಕ್ಯಾಂಟೀನ್ ಮರು ಪ್ರಾರಂಭಿಸಲಾಗಿದ್ದು , ಇನ್ನೂ ಹೆಚ್ಚಿನ ಕ್ಯಾಂಟೀನ್ ಗಳನ್ನು ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರಾರಂಭಿಸಲಾಗುವುದು.

ಹಿಂದಿನ ಸರ್ಕಾರ ಮೂರ್ಖತನದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಸರ್ಕಾರ ಪ್ರಗತಿದಾಯಕ, ಬಡವರ ಕೈಗೆ ದುಡ್ಡು, ಉದ್ಯೋಗ ನೀಡುವ, ರಾಜ್ಯವನ್ನು ಹಸಿವು ಮುಕ್ತ ಮಾಡುವ ಹಾಗೂ ಬಂಡವಾಳ ಆಕರ್ಷಿಸುವಂತಹ ಬಜೆಟ್  ಮಂಡಿಸಲಾಗಿದೆ ಎಂದು ಅವರು ಸುದ್ದಿಗೋಷ್ಢಿಯಲ್ಲಿ ಹೇಳಿದರು.

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...