ಶಿವರಾತ್ರಿ ಉತ್ಸವದ ವೇಳೆ ದಲಿತರ ದೇಗುಲ ಪ್ರವೇಶಕ್ಕೆ ಅಡ್ಡಿ, ಭುಗಿಲೆದ್ದ ಹಿಂಸಾಚಾರ; ಕನಿಷ್ಠ 14 ಮಂದಿಗೆ ಗಾಯ

Source: Vb | By I.G. Bhatkali | Published on 20th February 2023, 10:40 PM | National News |

ಭೋಪಾಲ್: ಶಿವರಾತ್ರಿ ಉತ್ಸವದ ಸಮಯದಲ್ಲಿ ದಲಿತರ ದೇಗುಲ ಪ್ರವೇಶಕ್ಕೆ ಮೇಲ್ವಾತಿಯ ಗುಂಪೊಂದು ತಡೆಯೊಡ್ಡಿದ ಬಳಿಕ ಭುಗಿಲೆದ್ದ ಘರ್ಷಣೆಯಲ್ಲಿ ಕನಿಷ್ಠ 14 ಮಂದಿ ಗಾಯಗೊಂಡ ಘಟನೆ ಮಧ್ಯಪ್ರದೇಶದಲ್ಲಿ ಶನಿವಾರ ವರದಿಯಾಗಿದೆ.

ಖಾರ್ಗೋನ್ ಜಿಲ್ಲೆಯ ಚಾಪ್ರಾ ಗ್ರಾಮದಲ್ಲಿ ಮೇಲ್ಪಾತಿಗೆ ಸೇರಿದ ಕೆಲವರು ಶಿವರಾತ್ರಿ ಉತ್ಸವದಂದು ಶಿವದೇವಸ್ಥಾನ ಪ್ರವೇಶಿಸದಂತೆ ದಲಿತ ಸಮುದಾಯದವರನ್ನು ತಡೆದಿದ್ದರು. ಆ ಬಗ್ಗೆ ಉಂಟಾದ ವಾಗ್ವಾದ ಘರ್ಷಣೆಗೆ ತಿರುಗಿತೆಂದು ಪೊಲೀಸರು ತಿಳಿಸಿದ್ದಾರೆ.

ಎರಡೂ ಗುಂಪುಗಳು ಮನಬಂದಂತೆ ಕಲ್ಲುತೂರಾಟ ನಡೆಸಿದವಲ್ಲದೆ, ಹಿಂಸಾಚಾರದಲ್ಲಿ ತೊಡಗಿದವು ಎಂದು ಪೊಲೀರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಇತ್ತಂಡಗಳಿಂದಲೂ ದೂರನ್ನು ದಾಖಲಿಸಲಾಗಿದ್ದು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ತಿಳಿಸಿದ್ದಾರೆ.

ಗುರ್ಜರ ಸಮುದಾಯಕ್ಕೆ ಸೇರಿದ ಭೈಯಾ ಲಾಲ್ ಪಟೇಲ್ ಎಂಬಾತನ ನೇತೃತ್ವದಲ್ಲಿ ತಂಡವೊಂದು ಕೆಲವು ದಲಿತ ಯುವತಿಯರನ್ನು ದೇಗುಲ ಪ್ರವೇಶಿಸದಂತೆ ತಡೆದಿದೆಯೆಂದು ದಲಿತ ಸಮುದಾಯದವರಾದ ಪ್ರೇಮಲಾಲ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಗಲಭೆ, ಕಲ್ಲುತೂರಾಟ ಮತ್ತಿತರ ಅಪರಾಧಗಳಿಗೆ ಸಂಬಂಧಿಸಿ ಪೊಲೀಸರು 17 ಮಂದಿ ಶಂಕಿತ ಆರೋಪಿಗಳು ಹಾಗೂ 25 ಗುರುತಿಸಲ್ಪಡದ ವ್ಯಕ್ತಿಗಳ ಮೇಲೆ ಪರಿಶಿಷ್ಟ ಜಾತಿ/ಪಂಗಡಗಳ ರಕ್ಷಣೆ ಕಾನೂನು ಹಾಗೂ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ರವೀಂದ್ರ ರಾವ್ ಮರಾಠಾ ಎಂಬವರು ನೀಡಿದ ದೂರಿನ ಮೇರೆಗೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ ಆರೋಪದಲ್ಲಿ ಪ್ರೇಮಲಾಲ್ ಸಹಿತ ದಲಿತ ಸಮುದಾಯದ 33 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿನೋದ್ ದೀಕ್ಷಿತ್ ತಿಳಿಸಿದ್ದಾರೆ.

ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳ ತಂಡವು ಗಲಭೆ ಪೀಡಿತ ಚಾಪ್ರಾ ಗ್ರಾಮಕ್ಕೆ ಭೇಟಿ ನೀಡಿದೆ. “ಯಾವುದೇ ಜಾತಿಗಳವರನ್ನು ದೇವಾಲಯ ಪ್ರವೇಶಿಸದಂತೆ ತಡೆಯಬಾರದು ಎಂದು ಗ್ರಾಮಸ್ಥರಿಗೆ ವಿವರಿಸಲಾಗಿದೆ'' ಎಂದು ದೀಕ್ಷಿತ್‌ ತಿಳಿಸಿದ್ದಾರೆ. 

ಆಲದ ಮರವೊಂದನ್ನು ಕಡಿದುಹಾಕಿದ ವಿಚಾರವಾಗಿ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಪ್ರಸ್ತಾವನೆಯ ಕುರಿತಂತೆ ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು ಎಂದು ಅವರು ಹೇಳಿದ್ದಾರೆ.

ಅರಳಿಮರವನ್ನು ಕಡಿದುಹಾಕಿದ ಘಟನೆಗೆ ಸಂಬಂಧಿಸಿ ಗುರ್ಜರ ಸಮುದಾಯದವರು ದಲಿತ ಸಮುದಾಯಕ್ಕೆ ಸೇರಿದ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಧ್ಯಪ್ರದೇಶದಲ್ಲಿ ಶನಿವಾರ ನಡೆದ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಛೋಟಿ ಕಾಸರವಾಡ್ ಗ್ರಾಮದಲ್ಲಿರುವ ಶಿವದೇವಾಲಯದಲ್ಲಿ ಪೂಜೆ ಸಲ್ಲಿಸುವುದಕ್ಕೆ ತಡೆಯೊಡ್ಡಿದ್ದಾರೆಂದು ಸಮುದಾಯವೊಂದರ ಸದಸ್ಯರು ಆಪಾದಿಸಿದ್ದಾರೆ.

ದೇವಾಲಯದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಆಗಮಿಸಿದ ತನಗೆ ಕೆಲವು ಮಹಿಳೆಯರು ಜಾತಿ ನಿಂದನೆ ಮಾಡಿ, ದೂಡಿದರೆಂದು ಮಂಜು ಬಾಯಿ ಎಂಬವರು ದೂರಿನಲ್ಲಿ ಆಪಾದಿಸಿದ್ದಾರೆ. ಘಟನೆಗೆ ಸಂಬಂಧಿಸಿಐದು ಮಂದಿಯನ್ನು ಆರೋಪಿಗಳಾಗಿ ಹೆಸರಿಸಲಾಗಿದ್ದು, ಅವರ ವಿರುದ್ಧ ಜಾತಿ ತಾರತಮ್ಯ ತಡೆ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮನೋಹರ ಸಿಂಗ್ ಗಾವಳಿ ತಿಳಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...