ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ – ಬಶೀರ್ ಮದನಿ

Source: SO News | By Laxmi Tanaya | Published on 24th March 2024, 8:34 PM | Coastal News | Don't Miss |

ಮಂಗಳೂರು : ಎಲ್ಲಾ ಧರ್ಮಗಳ ಭೋದನೆಗಳು ಸತ್ಯದ ಹಾದಿಯಲ್ಲಿದ್ದು,ಮನುಷ್ಯ ಕುಲದ ಏಳಿಗೆಗಾಗಿ ಅವುಗಳು ಶ್ರಮಿಸುತ್ತಿದೆಯೇ ಹೊರತು ಮನುಕುಲದ ನಾಶಕ್ಕಾಗಿ ಅಲ್ಲ. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿ, ಸಮಾಜದಲ್ಲಿ ದ್ವೇಷಪೂರಿತ ವಾತಾವರಣವನ್ನು ಸ್ರಷ್ಠಿಸಿ ತಮ್ಮ ಬೇಳೆಯನ್ನು ಬೇಯಿಸುತ್ತಿದ್ದಾರೆ ಎಂದು ಸುನ್ನಿ ವಿದ್ವಾಂಸರೂ, ಎಸ್ ವೈ ಎಸ್ ಜಿಲ್ಲಾ ಉಪಾಧ್ಯಕ್ಷ   ಬಶೀರ್ ಮದನಿಯವರು ಅಭಿಪ್ರಾಯಪಟ್ಟರು.

ಸಂತ ಮದರ್ ತೆರೇಸಾ ವಿಚಾರ ವೇದಿಕೆ ಹಾಗೂ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘದ ಜಂಟಿ ಆಶ್ರಯದಲ್ಲಿ ಪ್ರೀತಿ ಹರಡಲಿ ಎಲ್ಲೆಡೆ ಎಂಬ ಘೋಷವಾಕ್ಯದೊಂದಿಗೆ, ಸರ್ವ ಧರ್ಮಗಳ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ನಗರದ ಪುರಭವನದಲ್ಲಿ ಜರುಗಿದ ಸೌಹಾರ್ದ ಇಫ್ತಾರ್ ಕೂಟ – 2024 ಕಾರ್ಯಕ್ರಮದಲ್ಲಿ ತಮ್ಮ ಸೌಹಾರ್ದ ಸಂದೇಶ ಸಾರುವ ಮೂಲಕ ಮಾತುಗಳನ್ನಾಡಿದರು.

ಸಮಾಜದಲ್ಲಿ ಇಂತಹ ಕಂದಕ ಸೃಷ್ಠಿಸುವವರನ್ನು ಹಿಮ್ಮೆಟ್ಟಿಸಬೇಕಾದರೆ ಸರ್ವ ಧರ್ಮಗಳ ಜನತೆ ಒಂದುಗೂಡುವ ಸೌಹಾರ್ದ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.

ಸಿ ಎಸ್ ಐ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮಾಧ್ಯಕ್ಷ ಹೇಮಚಂದ್ರ ಕುಮಾರ್ ಮಾತನಾಡುತ್ತಾ,  ಇಫ್ತಾರ್ ಕೂಟವು ನಿಜಕ್ಕೂ ಸೌಹಾರ್ದದ ಸಂದೇಶ ಸಾರುವ ಆಚರಣೆಯಾಗಿದೆ. ಮಾತ್ರವಲ್ಲ ಭಾಂಧವ್ಯದ ಸಂಕೇತವಾಗಿದೆ. ಒಬ್ಬರನ್ನೊಬ್ಬರನ್ನು ಪರಸ್ಪರ ಗೌರವಿಸಲು ಇಂತಹ ವೇದಿಕೆಗಳನ್ನು ಸದ್ಬಳಕೆ ಮಾಡಬೇಕಾಗಿದೆ ಎಂದು ಹೇಳಿದರು.

ಸಾಮಾಜಿಕ ಚಿಂತಕ ಡಾ. ಕೆ.ಪ್ರಕಾಶ್ ಮಾತನಾಡಿ,  ಜಗತ್ತಿನ 126 ದೇಶಗಳ ಪೈಕಿ ಭಾರತದ ಹಸಿವಿನ ಸೂಚ್ಯಂಕವು 114ನೇ ಸ್ಥಾನದಲ್ಲಿದೆ. ದೇಶದಲ್ಲಿ ಹಸಿವಿನ ಹೆಚ್ಚಳದ ಜೊತೆಗೆ ಅಸಮಾನತೆಯೂ ಹೆಚ್ಚುತ್ತಿದೆ, ಸೌಹಾರ್ದತೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋರವರು ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಬಿ.ಎ. ನಾಸಿರ್ ಲಕ್ಕಿಸ್ಟಾರ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟಾನಿ ಅಲ್ವಾರೀಸ್, ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ.ಇಮ್ತಿಯಾಜ್, ಅಧ್ಯಕ್ಷ ಮಹಮ್ಮದ್ ಮುಸ್ತಾಫ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಉಪಸ್ಥಿತರಿದ್ದರು.

ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್  ಪ್ರಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ ಬಳಿಕ ಕಾರ್ಯಕ್ರಮವನ್ನು ನಿರೂಪಿಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...