ಭಟ್ಕಳ: ಅತಿವೃಷ್ಟಿಯಿಂದಾಗಿ ಅಂದಾಜು 16.85ಕೋಟಿ ರೂ ಹಾನಿ-ತಹಸಿಲ್ದಾರ್ ಕೊಟ್ರಳ್ಳಿ

Source: sonews | By Staff Correspondent | Published on 13th August 2019, 8:43 PM | Coastal News | Don't Miss |

ಭಟ್ಕಳ: ನಗರದ ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಅನೇಕ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಎಲ್ಲಾ ಮನೆಗಳವರಿಗೆ ತಾತ್ಕಾಲಿಕ ಪರಿಹಾರವನ್ನು ವಿತರಿಸಲಾಯಿತು. 

ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳು ಒಟ್ಟೂ 37 ಮನೆಗಳಿಗೆ ರೂ.3800-00 ಹಾಗೂ ದಿನ ನಿತ್ಯದ ವಸ್ತುಗಳಾದ 10 ಕೆ.ಜಿ. ಅಕ್ಕಿ, 1 ಕೆ.ಜಿ. ಬೇಳೆ, 1 ಕೆ.ಜಿ. ಉಪ್ಪು ಹಾಗೂ 5 ಲೀಟರ್ ಸೀಮೆ ಎಣ್ಣೆಯನ್ನು ವಿತರಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ ಅವರು ಸರಕಾರದ ನಿಯಮದಂತೆ ಪರಿಹಾರವನ್ನು ನೀಡುವ ಕಾರ್ಯವನ್ನು ಮಾಡಿದ್ದೇವೆ. ಇನ್ನೂ ಅನೇಕ ಮನೆಗಳಿಗೆ ಹಾನಿಯಾಗಿದ್ದು ಸರ್ವೆ ಕಾರ್ಯ ನಡೆದಿದೆ. 

ಇಲ್ಲಿಯ ತನಕ ವಿವಿಧ ಇಲಾಖೆಗಳ ಹಾನಿ ಒಟ್ಟೂ 16.85 ಕೋಟಿ ಎಂದು ಅಂದಾಜಿಸಲಾಗಿದೆ. ತಾಲ್ಲೂಕಿನಲ್ಲಿ 97 ಮನೆಗಳಿಗೆ ಹಾನಿಯಾಗಿದ್ದು, 88 ಮನೆಗಳಿಗೆ ರೂ.18.12 ಲಕ್ಷ ಪರಿಹಾರ ವಿತರಿಸಲಾಗಿದೆ. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶವಾದ ಬಗ್ಗೆ ದೂರು ಬಂದಿದ್ದು, ಮಳೆ ಕಡಿಮೆಯಾದ ನಂತರದಲ್ಲಿ ಜಂಟಿ ಸರ್ವೆ ನಡೆಸಲಾಗುವುದು ಎಂದ ಅವರು ತಾಲ್ಲೂಕಿನಲ್ಲಿ ಹೆಸ್ಕಾಂ ಇಲಾಖೆಯ 169 ವಿದ್ಯುತ್ ಕಂಬ ಮತ್ತು 32 ಟ್ರಾರ್ನಪಾರ್ಮರಿಗೆ ಹಾನಿಯಾಗಿದ್ದು, ರೂ.66.82 ಲಕ್ಷ, ಪಂಚಾಯತ್‍ರಾಜ್ ಇಂಜಿನಿಯರಿಂಗ್ ಇಲಾಖೆಯ ರಸ್ತೆಗಳಿಗೆ ರೂ.684.20 ಲಕ್ಷ ಹಾನಿ, ಶಿಕ್ಷಣ ಇಲಾಖೆಗೆ ರೂ.40.70 ಲಕ್ಷ, ಪುರಸಭೆಗೆ ರೂ.12.20 ಲಕ್ಷ, ಪಿಡಬ್ಲ್ಯೂ ಇಲಾಖೆಗೆ ರೂ.161 ಲಕ್ಷ, ಜಾಲಿ ಪಟ್ಟಣ ಪಂಚಾಯತಿಗೆ ರೂ.35 ಲಕ್ಷ, ಕೃಷಿ ಇಲಾಖೆ ಸಂಬಂಧಿಸಿದಂತೆ ಭತ್ತದ ಬೆಳೆ ಹಾನಿ ರೂ.10.50 ಲಕ್ಷ, ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಅಡಕೆ, ಕಾಳುಮಣೆಸು, ತೆಂಗು ಹಾಗೂ ಕಲ್ಲಂಗಡಿ ಬೆಳೆಗಳಿಗೆ ಹಾನಿಯಾಗಿರುವುದು ರೂ.4 ಲಕ್ಷ, ಅಂಗನವಾಡಿ ಕಟ್ಟಡಕ್ಕೆ ಹಾನಿ ರೂ.8.70 ಲಕ್ಷ, ತೆಂಗಿನಗುಂಡಿ ನಾಮಧಾರಿ ಸಭಾಭವನ ಕಟ್ಟಡಕ್ಕೆ ಹಾನಿ ರೂ.2.50 ಲಕ್ಷ, ಕಡಲಕೊರೆತದಿಂದಾದ ಹಾನಿ ರೂ.630 ಲಕ್ಷ, ಸಣ್ಣ ನೀರಾವರಿ ಇಲಾಖೆಗೆ ರೂ.47 ಲಕ್ಷ, ಹಿಂದುಳಿದ ವರ್ಗಗಳ ಹಾಸ್ಟೆಲ್‍ಗೆ ಹಾನಿ ರೂ.5 ಲಕ್ಷ, ಮುರ್ಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ.2 ಲಕ್ಷ ಸೇರಿ ಒಟ್ಟೂ ರೂ.16.85 ಕೋಟಿ ಹಾನಿಯಾಗಿದೆ ಎಂದು ವಿವರಿಸಿದರು. ಕೋಣಾರ ಹದ್ಲೂರಿನಲ್ಲಿ ಆಕಳೊಂದು ಮೃತಪಟ್ಟಿದ್ದು ರೂ.30 ಸಾವಿರ ರೂಪಾಯಿ ಪರಿಹಾರ ನೀಡಲಾಗಿದೆ. ಪಟ್ಟಣ ಹಾಗೂ  ಹದಿನಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಮಳೆ ಹಾನಿ ಬಗ್ಗೆ ನಿಗಾ ಇಡಲಾಗಿದ್ದು, ಸಿಬ್ಬಂದಿಗಳು ತಕ್ಷಣ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸಾರ್ವಜನಿಕರು ಯಾವುದೇ ರೀತಿಯ ಸಮಸ್ಯೆ ಉಂಟಾದರೂ ಸಹಾಯವಾಣಿ ಕೇಂದ್ರ (08385-226422 ದೂರವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಬಹುದು ಎಂದು ಹೇಳಿದರು. 

ತಾಲೂಕಿನಲ್ಲಿ ಒಟ್ಟೂ ಹಾನಿಯ ಕುರಿತು ವಿವರಣೆ ನೀಡಿದ ಅವರು ಅಧಿಕ ಮಳೆ ಬಂದು ತೊಂದರೆಯಾದ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಐ.ಆರ್.ಬಿ.ಯವರು ಬಹಳಷ್ಟು ಸಹಾಯ ಮಾಡಿದ್ದಾರೆ ಎಂದು ಹೇಳುತ್ತಾ ಸಾರ್ವಜನಿಕರ ಸಹಾಯವನ್ನು ಸಹ ಸ್ಮರಿಸಿದ ಅವರು ಹಾನಿಯಾಗಿರುವುದನ್ನು ಅಂದಾಜಿಸಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು. 

ಎರಡು ದಿನಗಳಲ್ಲಿ ತಾಲೂಕಿನಲ್ಲಿ ಸಂಭವಿಸಿದ ಹಾನಿಯ ವಿವರ: ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಸಂಭವಿಸಿದ ಹಾನಿಯ ಅಂದಾಜು ಮಾಡಲಾಗಿದ್ದು ಸೋಮವಾರ ಮುಂಡಳ್ಳಿಯ ಚಂದ್ರಶೇಖರ ದುರ್ಗಯ್ಯ ನಾಯ್ಕ ಇವರ ವಾಸ್ತವ್ಯದ ಮನೆಯ ಹಂಚುಗಳು ಹಾರಿ ಹೋಗಿ ಹಾನಿಯಾಗಿದ್ದು ಹಾನಿ ರೂ.15,000 ಎಂದು ಅಂದಾಜಿಸಲಾಗಿದೆ. ಮುಟ್ಟಳ್ಳಿಯ ಮಾಸ್ತಮ್ಮ ಹೊನ್ನಪ್ಪ ನಾಯ್ಕ ಇವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಾನಿಯಾಗಿದ್ದು ಹಾನಿ ರೂ.20,000 ಎಂದು ಅಂದಾಜಿಸಲಾಗಿದೆ. ತಲಗೋಡಿನಲ್ಲಿ ಶ್ರೀಧರ ನಾರಾಯಣ ನಾಯ್ಕ ಎನ್ನುವ ಮನೆ ಕುಸಿದಿದೆ.  ಲಕ್ಷ್ಮಣ ಲಚ್ಮಯ್ಯ ನಾಯ್ಕ ಇವರ ವಾಸ್ತವ್ಯದ ಮನೆಯ ಹಂಚು ಹಾರಿ ಹೋಗಿದ್ದು ಹಾನಿ ರೂ.15,000 ಎಂದು ಅಂದಾಜಿಸಲಾಗಿದೆ. ಮಂಗಳವಾರ ಶಿರಾಲಿ-2 ಗ್ರಾಮದ ಅಣ್ಣಪ್ಪ ವೆಂಕ್ಟಯ್ಯ ನಾಯ್ಕ ಇವರ ಮನೆಯ ಗೋಡೆ ಕುಸಿದು ಹಾನಿಯಾಗಿದ್ದು ಹಾನಿ ರೂ.15,000 ಎಂದು ಅಂದಾಜಿಸಲಾಗಿದೆ. ಹಡೀಲು ಗ್ರಾಮದ ಗಣೇಶ ಶಂಭುಲಿಂಗ ಉಪಾಧ್ಯಾಯ ಎನ್ನುವವರ ಕಟ್ಟಿಗೆ ಸಂಗ್ರಹಿಸಿಟ್ಟಿದ್ದ ಕಟ್ಟಡದ ಗೋಡೆ ಕುಸಿದಿರುವ ಕುರಿತು ವರದಿಯಾಗಿದೆ. 


 


 

Read These Next

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ 

ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂರ್ವ ಕಾಲೇಜಿನ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಹೈಸ್ಕೂಲಿನ ಪ್ರೌಢಶಾಲಾ ...