ಭಟ್ಕಳವನ್ನು ಕತ್ತಲೆಯಲ್ಲಿ ದೂಡಿದ ಹೆದ್ದಾರಿ ಕಾಮಾಗಾರಿ; ನಿಷ್ಕ್ರೀಯ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

Source: SOnews | By Staff Correspondent | Published on 18th September 2023, 4:26 PM | Coastal News | Don't Miss |

 

ಭಟ್ಕಳ: ಭಟ್ಕಳದಿಂದ ಮುಂಬೈ, ಗೋವಾ, ಹುಬ್ಬಳ್ಳಿ, ಮಂಗಳೂರು ಸಂಪರ್ಕಿಸುವ ರಾ.ಹೆ. 66ರ ಚತುಷ್ಪಥ ನಿರ್ಮಾಣದ ಯೋಜನೆ ಆರಂಭಗೊಂಡು ವರ್ಷಗಳೇ ಕಳೆದಿವೆ. ದ.ಕ.ಜಿಲ್ಲೆಯಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಉ.ಕ ಜಿಲ್ಲೆ ಅದರಲ್ಲೂ ಭಟ್ಕಳ ತಾಲೂಕಿನಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಿರಲಿ ಇನ್ನೂ ಆರಂಭಗೊಂಡಿದಿಯೋ ಇಲ್ಲವೋ ಎಂಬ ಅನುಮಾನ ಹುಟ್ಟಿಕೊಳ್ಳತೊಡಗಿದೆ.

ಏಕೆಂದರೆ ಕಳೆದ 3-4ವರ್ಷಗಳಿಂದ ಕೇವಲ ರಸ್ತೆ ಅಗೆಯುವ ರಸ್ತೆ ಮುಚ್ಚುವ ಕಾರ್ಯ ನಡೆಯುತ್ತಿದೆ. ಕಾಟಾಚಾರಕ್ಕೆಂಬಂತೆ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸ ಮಾತ್ರ ನಡೆಯುತ್ತಿದ್ದು ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. ಹೆದ್ದಾರಿ ಅಗಲೀಕರಣದ ನೆಪದಲ್ಲಿ ರಸ್ತೆ ಬದಿಗೆ ಇದ್ದ ಹಳೆಯ ವಿದ್ಯುತ್ ಕಂಬಗಳು ತೆರವುಗೊಳಿಸಿ ಈಗಾಗಲೆ ಮೂರು  ವರ್ಷಕ್ಕೂ ಸಮೀಪಿಸುತ್ತಿದೆ. ಈ ಮೂರು ವರ್ಷಗಳಿಂದಲೂ ಇಲ್ಲಿನ ಜನರು ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಕೇವಲ ರಸ್ತೆಬದಿಗಿರುವ ಅಂಗಡಿಗಳ ಮಂದ ಬೆಳಕಿನಲ್ಲಿ ಬೈಕ್ ಸವಾರರು, ದಾರಿಹೋಕರು, ಮಹಿಳೆಯರು ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಡೆದಾಡುವ ಸ್ಥಿತಿ ನಿರ್ಮಾಣಗೊಂಡಿದೆ.  

ಶಂಸುದ್ದೀನ್ ವೃತ್ತದಿಂದ ರಂಗನಕಟ್ಟೆ, ನವಯತ್ ಕಾಲೋನಿ, ಮದೀನ ಕಾಲೋನಿ ಮತ್ತು ವೆಂಕಟಾಪುರದವರೆಗೆ ನಾಲ್ಕು ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಯಿದ್ದು, ಇನ್ನೊಂದು ಬದಿಯಲ್ಲಿ ಮೂಡುಭಟ್ಕಳ, ಮೋಗ್ಲಿ ಹೊಂಡ, ಸರ್ಪನಕಟ್ಟಾ ಮತ್ತು ಗೊರ್ಟೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಇಡೀ ರಾಷ್ಟ್ರೀಯ ಹೆದ್ದಾರಿ ಕತ್ತಲೆಯಲ್ಲಿ ಮುಳುಗಿದೆ. ಸಂಜೆಯಾಗುತ್ತಿದ್ದಂತೆ ಇಲ್ಲಿ ಕತ್ತಲು ಆವರಿಸುತ್ತದೆ. ಮಳೆಗಾಲದಲ್ಲಂತೂ ಇದು ಮತ್ತಷ್ಟು ಭಯಾನಕತೆಯನ್ನು ಹುಟ್ಟಿಸುತ್ತಿದೆ.  ಹೆದ್ದಾರಿ ಬದಿಯಲ್ಲಿ ಲೈಟ್ ಇಲ್ಲದಿರುವುದರಿಂದ ರಾತ್ರಿ ವೇಳೆ ಹೆದ್ದಾರಿ ಬದಿಯಲ್ಲಿ ಸಂಚರಿಸಲು ಪರದಾಡುವಂತಾಗಿದೆ ಅದರಲ್ಲೂ ಮಹಿಳೆಯರು, ಮಕ್ಕಳು ಕತ್ತಲೆಯಲ್ಲಿ ಸಂಚರಿಸಲು ಪ್ರಾಣವನ್ನೇ ಪಣಕ್ಕಿಡುವಂತಾಗಿದೆ.

ಶಂಶುದ್ದೀನ್ ವೃತ್ತ ಹಾಗೂ ಬಸ್ ನಿಲ್ದಾಣದ ಹೊರಭಾಗದಲ್ಲಿ ಅಳವಡಿಸಿದ್ದ ಟವರ್ ಗಳ ಮೇಲೆ ದೊಡ್ಡ ದೀಪಗಳಿದ್ದು, ಇಡೀ ನಗರವೇ ಬೆಳಕಿನಲ್ಲಿ ಮಿಂದೆದ್ದಂತೆ ಭಾಸವಾಗುತ್ತಿತ್ತು.ಆದರೆ ಇಲ್ಲಿ ಅಳವಡಿಸಿದ್ದ ದೀಪಗಳೂ ಎರಡೂವರೆ ವರ್ಷಗಳಿಂದ ಮಾಯವಾಗಿದ್ದು, ಜನತೆ ಕಂಗಾಲಾಗಿದ್ದಾರೆ. ಜನಪ್ರತಿನಿಧಿಗಳು ಮೌನವಾಗಿದ್ದಾರೆ. ನಗರದ ಹೆದ್ದಾರಿಯಲ್ಲಿ ಕತ್ತಲು ಕವಿದಿದ್ದು, ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರು, ಪಂಚಾಯಿತಿ ಸದಸ್ಯರು, ಸಾಮಾಜಿಕ ಸಂಸ್ಥೆಗಳ ಉಸ್ತುವಾರಿ ವಹಿಸುವವರಿಗೂ ಈ ಕತ್ತಲೆಯಲ್ಲಿ ಜನರ ಸಮಸ್ಯೆಗಳು ಕಾಣುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  

ಭಾರಿ ಮಳೆಯ ಸಂದರ್ಭದಲ್ಲಿ ಹೆದ್ದಾರಿಯ ಕೆಲವೆಡೆ ನೀರು ಸಂಗ್ರಹವಾದಾಗ ಹೆದ್ದಾರಿ ಅಧಿಕಾರಿಗಳು, ಐಆರ್‌ಬಿ ಕಂಪನಿ ಅಧಿಕಾರಿಗಳು ಹಾಗೂ ಡಿಸಿ, ಸಚಿವರು ಸಭೆ ನಡೆಸಿ ಕೆಲ ದಿನಗಳಿಂದ ಜೆಸಿಬಿ ಯಂತ್ರಗಳು ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ ಎಂದು ಜನರು ಹೇಳುತ್ತಾರೆ. ಆದರೆ ಮಳೆ ನಿಂತ ತಕ್ಷಣ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ತೆರಳಿದರು. ಹೆದ್ದಾರಿಯುದ್ದಕ್ಕೂ ಅಳವಡಿಸಿರುವ ವಿದ್ಯುತ್ ಕಂಬಗಳು ನಾಪತ್ತೆಯಾಗಿ ಸುಮಾರು ಎರಡೂವರೆ ವರ್ಷಗಳೇ ಕಳೆದಿವೆ.ಆದರೆ ಈ ಕತ್ತಲು, ಕತ್ತಲಿನಿಂದಾಗುವ ಸಮಸ್ಯೆಗಳು ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಕಣ್ಣಿಗೆ  ಕಾಣುತ್ತಿಲ್ಲ.

ಹೆದ್ದಾರಿಯ ಮೇಲೆ ರಾಜಾರೋಷವಾಗಿ ನಡೆದಾಡುವ ದನಗಳು, ಬೈಕ್ ಸವಾರರಿಗೆ ಯಮಕಂಟಕವಾಗಿ ಪರಿಣಮಿಸುತ್ತಿವೆ. ಹಗಲಿನಲ್ಲಿ ಹೇಗೂ ತಪ್ಪಿಸಿಕೊಳ್ಳಬಹುದು. ಆದರೆ ರಾತ್ರಿ ಕತ್ತಲಲ್ಲಿ ನಡು ರಸ್ತೆಯಲ್ಲೇ ನಿಂತುಕೊಂಡ ಪ್ರಾಣಿಗಳಿಂದ ರಕ್ಷಣೆ ಹೊಂದಲು ಸಾಧ್ಯವಾಗುತ್ತಿಲ್ಲಿ. ಎಷ್ಟೋ ಮಂದಿ ಬೈಕ್ ಮೇಲಿಂದ ಬಿದ್ದು ಕೈಕಾಲು ಕಳೆದುಕೊಂಡು ಆಸ್ಪತ್ತೆ ಸೇರಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಫೋರ್‌ಲೈನ್‌ ಕಾಮಗಾರಿ ವೇಳೆ ಸುಮಾರು ಎರಡೂವರೆ ವರ್ಷಗಳ ಹಿಂದೆ ರಸ್ತೆ ಬದಿಯ ವಿದ್ಯುತ್‌ ಕಂಬಗಳೆಲ್ಲ ಧ್ವಂಸಗೊಂಡಿದ್ದು, ಈಗ ಕಂಬಗಳ ಜಾಗದಲ್ಲಿ ದೊಡ್ಡ ಹಾಗೂ ಎತ್ತರದ ವಿದ್ಯುತ್‌ ಟವರ್‌ಗಳನ್ನು ಅಳವಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಫೋರ್‌ಲೈನ್‌ ಕಾಮಗಾರಿ ಮುಗಿದ ಬಳಿಕ ದೀಪಗಳನ್ನೂ ಅಳವಡಿಸಲಾಗುವುದು ಎಂದು ಹೇಳಲಾಗುತ್ತಿದ್ದು, ನಗರದ ಮಧ್ಯಭಾಗದಲ್ಲಿ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ.ಇದಕ್ಕೆ ಯಾರ ಬಳಿಯೂ ಉತ್ತರವಿಲ್ಲ.

ಸೂರ್ಯ ಮುಳುಗುತ್ತಿದ್ದಂತೆಯೇ ವಾಹನದ ಲೈಟ್ ಅಥವಾ ಹತ್ತಿರದ ಅಂಗಡಿಗಳ ಬೆಳಕಿನ ಸಹಾಯದಿಂದ ಹೆದ್ದಾರಿ ಬದಿಯಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ. ಹೆದ್ದಾರಿ ದಾಟುವುದು ಸಾವಿಗೆ ಆಹ್ವಾನ ನೀಡಿದಂತೆ  ಎಂಬ ಸ್ಥಿತಿ ನಿರ್ಮಣವಾಗಿದೆ.   ಈ ನಿಟ್ಟಿನಲ್ಲಿ ಅಧಿಕಾರಿಗಳು ಚಿಂತನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...