ಭಟ್ಕಳ: ತೆವಳುತ್ತಲೇ ಸಾಗಿದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಉದ್ಘಾಟನೆ ಮುಗಿದರೂ ಕೆಲಸ ಮುಗಿಯಲೇ ಇಲ್ಲ

Source: S O News service | By V. D. Bhatkal | Published on 20th September 2021, 8:38 PM | Coastal News | Special Report |

ಭಟ್ಕಳ: ಯಾವುದೇ ದೇಶ, ರಾಜ್ಯ ಆಗಿರಲಿ, ಸುಸಜ್ಜಿತ ರಸ್ತೆ ಎನ್ನುವುದು ಅಭಿವೃದ್ಧಿಯ ಸಂಕೇತವಾಗಿದೆ. ಅದರಲ್ಲಿಯೂ ಹೆದ್ದಾರಿಗಳು ಆಧುನಿಕತೆಯ ಪ್ರತಿಬಿಂಬವಾಗಿವೆ. ಅದರಲ್ಲಿಯೂ ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥ, ಷಟ್ಪಥಗಳಾಗಿ ದೇಶಕ್ಕೆ ಮೆರುಗನ್ನು ನೀಡಿವೆ. ಆದರೆ ಅದೇ ಹೆದ್ದಾರಿ ಕಾಮಗಾರಿ ಎನ್ನುವುದು ನಮ್ಮ ಕರಾವಳಿ ತೀರದಲ್ಲಿ ಆಯ ಕಟ್ಟಿನಲ್ಲಿ ಕುಳಿತಿರುವ ವ್ಯಕ್ತಿ, ಕಂಪೆನಿಗಳಿಗೆ ದುಡ್ಡು ಹೊಡೆಯೊಕೆ ಇರುವ ರಹದಾರಿಗಳಾಗಿ ಬದಲಾಗಿವೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಭಟ್ಕಳ ಹೊನ್ನಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಮುಗಿದು ಪರಿಹಾರ ವಿತರಣೆಯೂ ನಡೆದಿದೆ. ಪಟ್ಟಣ ಪ್ರದೇಶದಲ್ಲಿ 5-6 ಪ್ರಕರಣಗಳಷ್ಟೇ ಬಾಕಿ ಇದ್ದು, ಸದ್ಯದಲ್ಲಿಯೇ ಮುಕ್ತಾಯವಾಗಲಿದೆ
  - ಸಾಜೀದ್ ಮುಲ್ಲಾ,           ಭೂಸ್ವಾಧೀನಾಧಿಕಾರಿಗಳು

ಟೋಲ್ ಸಂಗ್ರಹ ಅದಾಗಲೇ ಆರಂಭವಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ, ಐಆರ್‍ಬಿ ಕಂಪೆನಿಯ ಅಧಿಕಾರಿಗಳ ಸಭೆ ಕರೆದು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚಿಸಿದ್ದೆವು. ಆದರೆ ಮಳೆಗಾಲದಿಂದಾಗಿ ಸ್ವಲ್ಪ ತೊಡಕಾಗಿದ್ದು, ಮಳೆ ಕಡಿಮೆಯಾಗುತ್ತಿದ್ದಂತೆಯೇ ಕಾಮಗಾರಿ ಆರಂಭಿಸಲು ಸೂಚಿಸಿದ್ದೇವೆ.
  - ಮಮತಾದೇವಿ, ಸಹಾಯಕ ಆಯುಕ್ತರು ಭಟ್ಕಳ

ಭಟ್ಕಳ ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ವಿಶೇಷ ಮಹತ್ವ ಇದೆ. ಕೇರಳ, ಗೋವಾ, ಮಹಾರಾಷ್ಟ್ರವನ್ನು ಇದೇ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುತ್ತದೆ. ಹೆಚ್ಚಿನ ಸರಕು ಸಾಗಾಟ ಇದೇ ರಾಷ್ಟ್ರೀಯ ಹೆದ್ದಾರಿಯ ಮೂಲಕವೇ ನಡೆಯುತ್ತದೆ. ಮಂಗಳೂರು, ಕಾರವಾರ ಸೇರಿದಂತೆ ಬಂದರು ವ್ಯಾಪಾರ ವಹಿವಾಟುಗಳು ಕೊಂಕಣ ರೈಲು ಮಾರ್ಗವನ್ನು ಬಿಟ್ಟರೆ ಇದೇ ಹೆದ್ದಾರಿಯನ್ನು ಅವಲಂಬಿಸಿಕೊಂಡಿದೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ಕಾಲದಲ್ಲಿ ಅದಿರು ಸಾಗಾಟಕ್ಕೂ ಇದೇ ರಾಷ್ಟ್ರೀಯ ಹೆದ್ದಾರಿಯನ್ನು ಬಳಸಿಕೊಳ್ಳಲಾಗಿತ್ತು. ವಾಹನ ದಟ್ಟಣೆ 15-20 ಪಟ್ಟು ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದಗೆಟ್ಟು ಹೋಗುತ್ತಿದ್ದ ಕಾಲದಲ್ಲಿಯೇ ಸರಕಾರ ಚತುಷ್ಪಥದ ಆಸೆಯನ್ನು ಜನರ ನಡುವೆ ಹರಿ ಬಿಟ್ಟಿತು. ಅಷ್ಟೇ ಅಲ್ಲ, ಕಾಮಗಾರಿಯ ಟೆಂಡರ್‍ನ್ನೂ ಕರೆದು ದೇಶದ ಪ್ರಸಿದ್ಧ ಕಂಪೆನಿಗಳಿಗೆ ಕಾಮಗಾರಿಯ ಹೊಣೆಯನ್ನು ನೀಡಲಾಯಿತು. ಭಟ್ಕಳ, ಹೊನ್ನಾವರ, ಕುಮಟಾ ಸೇರಿದಂತೆ ಉತ್ತರಕನ್ನಡ ಜಿಲ್ಲೆಗೆ ಕಾಮಗಾರಿಯ ಗುತ್ತಿಗೆ ಹಿಡಿದ ಐಆರ್‍ಬಿ ಕಂಪೆನಿಯ ವಾಹನಗಳು ಬಂದು ನಿಂತವು. ( ಕುಂದಾಪುರದಿಂದ ಗೋವಾ ಗಡಿಯವರೆಗೆ 189.6ಕಿಮೀ) 3-4 ವರ್ಷಗಳಲ್ಲಿಯೇ ಕಾಮಗಾರಿ ಮುಗಿದು ಹೋಗುತ್ತದೆ ಎಂದು ಜನರು ಅಂದುಕೊಂಡರು. ಅಂತೂ ಹೆದ್ದಾರಿ ಬದಲಾಗುತ್ತಿದೆ ಎಂದು ಎಲ್ಲರೂ ನಿಟ್ಟುಸಿರು ಬಿಟ್ಟರು.

ಮುಂದೆ ಆಗಿದ್ದೇನು?
ಕಾಮಗಾರಿಯ ಗುತ್ತಿಗೆ ಹಿಡಿದ ಐಆರ್‍ಬಿ ಕಂಪೆನಿಯ ಅಧಿಕಾರಿಗಳು ಮೊದಲು ಕಣ್ಣು ಹಾಕಿದ್ದೇ ಇಲ್ಲಿನ ಶಿಲೆಕಲ್ಲುಗಳ ಗುಡ್ಡದ ಮೇಲೆ. ಸಾವಿರ ರುಪಾಯಿಯ ನೋಟನ್ನು ಸರಿಯಾಗಿ ಕಾಣದೇ ಇದ್ದವರು ದಿನ ಬೆಳಗಾಗುವುದರ ಒಳಗೆ ಕೋಟಿ ರುಪಾಯಿಯ ಆಸೆಗೆ ಬಿದ್ದರು. ಇದ್ದಬಿದ್ದ ಶಿಲೆಕಲ್ಲುಗಳ ಕ್ವಾರಿಗಳನ್ನು ಐಆರ್‍ಬಿ ಕಂಪೆನಿಗೆ ನೀಡಲಾಯಿತು. ಹೆದ್ದಾರಿ ಕಾಮಗಾರಿಯ ಹೆಸರಿನಲ್ಲಿ ಐಆರ್‍ಬಿ ಕಂಪನಿ ಸಂಗ್ರಹಿಸಿದ ಸಂಪನ್ಮೂಲದ ಮೌಲ್ಯವೇ ನೂರಾರು ಕೋಟಿ! ಕಂಪೆನಿ ಸಂಗ್ರಹಿಸಿದ ಜಲ್ಲಿ, ಕಲ್ಲುಗಳ ಹಣದಿಂದಲೇ ಇಷ್ಟರ ಒಳಗೆ ಹೆದ್ದಾರಿ ಕೆಲಸ ಮುಗಿದು ಹೋಗಬೇಕಾಗಿತ್ತು. ಆದರೆ ಕೆಲಸ ಸುರುವಾಗಿ 7 ವರ್ಷ ಕಳೆದರೂ (2013ರಲ್ಲಿ ಕಾಮಗಾರಿ ಒಪ್ಪಂದ) ಹೆದ್ದಾರಿ ಕಾಮಗಾರಿ ಮುಗಿಯಲೇ ಇಲ್ಲ. 2020ರಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಷ್ಟ್ರೀಯ ಹೆದ್ದಾರಿ 66ನ್ನು ಉದ್ಘಾಟಿಸಿದ್ದೂ ಆಯಿತು. ಅಷ್ಟೇ ಅಲ್ಲ, ಟೋಲ್ ಸಂಗ್ರಹ ಆರಂಭವಾಗಿ ಅದಾಗಲೇ ವರ್ಷ ಕಳೆದಿದೆ. ಈಗಲೂ ಹೆದ್ದಾರಿ ಪೂರ್ಣಗೊಂಡಿಲ್ಲ. ಪಟ್ಟಣ ಪ್ರದೇಶದಲ್ಲಿ ಅರ್ಧಂಬರ್ಧ ಕೆಲಸ ಮಾಡಿ ಅಲ್ಲಿಯೇ ಬಿಡಲಾಗಿದೆ. ಹೆದ್ದಾರಿಯ ದಿಕ್ಕು ಬದಲಾಗಿ ಅಪಘಾತಗಳು ಹೆಚ್ಚುತ್ತಲೇ ಇವೆ. ಲಕ್ಷ ಲಕ್ಷ ಜನರ ತೆರಿಗೆ ಹಣವನ್ನು ಕಣ್ಣೆದುರೇ ಲೆಕ್ಕ ತಪ್ಪಿ ಬಾಚಿಕೊಳ್ಳುತ್ತ ಇದ್ದರೂ ಒಬ್ಬನೇ ಒಬ್ಬ ಜನಪ್ರತಿನಿಧಿ, ಅಧಿಕಾರಿ ಹೆದ್ದಾರಿಯ ಅವಸ್ಥೆಯ ಬಗ್ಗೆ ಗಂಭೀರವಾಗಿ ಮಾತನಾಡುತ್ತಿಲ್ಲ. ಅಲ್ಲೊಂದು ಇಲ್ಲೊಂದು ದನಿ ಕೇಳಿಸಿದ್ದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಕೆಲಸ ಮಾಡಿದವರೇ ಇಲ್ಲ. ಪರಿಣಾಮವಾಗಿ 2021ರ ಅಂತ್ಯ ಸಮೀಪಿಸುತ್ತಿದ್ದರೂ ಕಾಮಗಾರಿ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ.

ಭಟ್ಕಳ ಹೊನ್ನಾವರ ಭಾಗದಲ್ಲಿ ಶಿರೂರು ಗಡಿಯಿಂದ ಹೊನ್ನಾವರ ಹಳದಿಪುರದವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಅಂತರ ಇರುವುದು 57ಕಿಮೀ. 1500ಕ್ಕೂ ಹೆಚ್ಚು ಜನರ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ ಪಟ್ಟಣ ಪ್ರದೇಶದ ಕಾಮಗಾರಿ ಆರಂಭಕ್ಕೆ ಮುಹೂರ್ತವೇ ನಿಗದಿಯಾಗಿಲ್ಲ! ಅದಾಗಲೇ ಪಟ್ಟಣ ಪ್ರದೇಶ ಹೆದ್ದಾರಿಯ ವಿನ್ಯಾಸ ಅದೆಷ್ಟು ಬಾರಿ ಬದಲಾಗಿ ಹೋಯಿತೋ, ಎಲ್ಲೆಲ್ಲಿ ಫ್ಲೈಓವರ್ ತೋರಿಸಿ ಮಾಯ ಮಾಡಲಾಯಿತೋ! ಯಾವುದಕ್ಕೂ ದಿಕ್ಕು ದೆಸೆ ಏನೂ ಇಲ್ಲ. ಪಂಚಾಯತ ವ್ಯಾಪ್ತಿಯಲ್ಲಿ ನಡೆಯುವ 50 ಸಾವಿರ, ಲಕ್ಷ ರುಪಾಯಿಯ ಚರಂಡಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅದೆಷ್ಟು ಅರ್ಜಿಗಳೋ, ತಳ್ಳಿ ಅರ್ಜಿಗಳೋ, ತಕರಾರುಗಳೋ...! ಕೋಟ್ಯಾಂತರ ರುಪಾಯಿ ವೆಚ್ಚದ ಹೆದ್ದಾರಿ ಕಾಮಗಾರಿ ವಿಷಯದಲ್ಲಿ ಯಾವ ಕಸರತ್ತೂ ನಡೆಯುವುದೇ ಇಲ್ಲ. ಏಕೆಂದರೆ ಹೆದ್ದಾರಿ ಕಾಮಗಾರಿ ಎನ್ನುವುದೇ ದೊಡ್ಡವರ ವಿಷಯ!                    

Read These Next

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟಿçÃಯ ಹೆದ್ದಾರಿ 66 ಕ್ಕೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ...

ಕಡಲತಡಿಯಲ್ಲಿ ಕಣ್ಮನ ಸೆಳೆಯುತ್ತಿರುವ ಸೀ ವಾಕ್ ಶೃಂಗಾರ; ಭಟ್ಕಳದಲ್ಲಿ ಮಂತ್ರಿಗಳೇ, ಓಡುವುದು ಬೇಡ ನಡೆದಾಡಿ ಬನ್ನಿ

ಕರ್ನಾಟಕಕ್ಕೆ ಕರಾವಳಿ ತೀರ ಎನ್ನುವುದು ಶೃಂಗಾರ ಕಾವ್ಯದಂತಿದೆ. ಕಡಲ ತಡಿಯುದ್ಧಕ್ಕೂ ಸದಾ ಬಣ್ಣ ಬಣ್ಣದ ಕನಸುಗಳು ಚಿಗುರೊಡೆದು ...

ಭಟ್ಕಳ ವಿಧಾನಸಭಾ ಕ್ಷೇತ್ರ; ಜಾತಿ, ಪಕ್ಷಸಿದ್ಧಾಂತ ಬದಿಗಿಟ್ಟು “ಅಭ್ಯರ್ಥಿ” ಗಳ ಬಗ್ಗೆ ಆಸಕ್ತಿ ತೋರುತ್ತಿರುವ ಮತದಾರ

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣೆ ವಿಭಿನ್ನವಾಗಿ ಗೋಚರಿಸುತ್ತಿದೆ. ...

ಆನ್‌ಲೈನ್ ಹಣ ವಂಚನೆ, ಅಶ್ಲೀಲ ಜಾಲತಾಣಗಳ ವಿರುದ್ಧ 3 ವರ್ಷಗಳಲ್ಲಿ 32,746 ಪ್ರಕರಣ ದಾಖಲು

ಹಣ, ಅಶ್ಲೀಲ ಮತ್ತಿತರ ವಿಷಯಗಳ ಜಾಲತಾಣಗಳ ಕುರಿತಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 32,746 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇದೇ ...