"ಪ್ರಜಾಪ್ರಭುತ್ವ: ಮುಂದಿನ ಪೀಳಿಗೆಯ ಸಬಲೀಕರಣ ಮತ್ತು ಪ್ರಸ್ತುತ ಸವಾಲುಗಳು"

Source: SOnews | By Staff Correspondent | Published on 14th September 2024, 5:58 PM | State News | Special Report |

 

ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತದೆ. 2007 ರಲ್ಲಿ  ಯುನೈಟೆಡ್ ನೇಶನ್ಸ್ (ಸಂಯುಕ್ತರಾಷ್ಟ್ರ) ಜನರಲ್ ಅಸೆಂಬ್ಲಿ ಅಂಗೀಕರಿಸಿದ ನಿರ್ಣಯದ ಮೂಲಕ ಇದನ್ನು ಸ್ಥಾಪಿಸಲಾಯಿತು, ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಇದರ ಪ್ರಮುಖ ಉದ್ದೇಶ ಎಂದು ಹೇಳಲಾಗಿದೆ.

2024 ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷ ವಾಕ್ಯ "ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವುದು". ಉದ್ಘೋಷವು ಪ್ರಜಾಪ್ರಭುತ್ವವನ್ನು ಮುನ್ನಡೆಸುವಲ್ಲಿ ಯುವಜನರ ಪ್ರಾಮುಖ್ಯತೆಯನ್ನು ಕೇಂದ್ರೀಕರಿಸುತ್ತದೆ.

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾದರೂ, ಅದರಲ್ಲಿ ಮುಕ್ತ, ಸಮಾನ, ಮತ್ತು ಸಮಗ್ರ ಪ್ರಜಾಪ್ರಭುತ್ವದ ಬಾಕಿ ಉಳಿದಿವೆಯೇ  ಎಂಬ ಪ್ರಶ್ನೆ 2024 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಘೋಷವಾಕ್ಯ "ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವುದು" ಎಂಬುದರ ದೃಷ್ಠಿಕೋನದಲ್ಲಿ ತುಂಬಾ ಮುಖ್ಯವಾಗಿದೆ. ಇಂದಿನ ಭಾರತದ ಸಮಾಜಿಕ ವಾಸ್ತವ್ಯಗಳು, ವಿಶೇಷವಾಗಿ ದಲಿತರು, ಅಲ್ಪಸಂಖ್ಯಾತರು, ಮತ್ತು ಮಹಿಳೆಯರ ಮೇಲಿನ ಹಿಂಸಾಚಾರ, ದೌರ್ಜನ್ಯ, ದಬ್ಬಾಳಿಕೆಗಳು ಈ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದೆ.

ಪ್ರಜಾಪ್ರಭುತ್ವದ ಹೃದಯ ಎಂದರೆ ಎಲ್ಲ ವರ್ಗಗಳ, ಜನಾಂಗಗಳ, ಮತ್ತು ಲಿಂಗಗಳ ಸಮಾನ ಸ್ಥಾನಮಾನ. ಆದರೆ ಪ್ರಸ್ತುತ ಭಾರತದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ಅನುಭವಿಸುತ್ತಿರುವ ಅನ್ಯಾಯಗಳು, ಬಿಹಾರ ಮತ್ತು ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಮೇಲ್ವರ್ಗದ ತಾಕತ್ತಿನಿಂದ, ಮತ್ತು ಹಿಂದುತ್ವವಾದಿಗಳ ನಿಯಂತ್ರಣದಿಂದ ಹೆಚ್ಚುತ್ತಿರುವ ದೌರ್ಜನ್ಯ ಈ ಸಮಾನತೆಯ ಕಲ್ಪನೆಯನ್ನು ಹಾಳುಮಾಡುತ್ತಿವೆ. ಜನಪ್ರತಿನಿಧಿಗಳು ಸ್ವತಃ ಇವರ ಪರವಾಗಿ ನಿಲ್ಲದೆ, ಕೆಲವೊಮ್ಮೆ ಅವರ ವಿರುದ್ಧವೇ ಕಾರ್ಯಾಚರಿಸುತ್ತಿರುವುದು ಪ್ರಜಾಪ್ರಭುತ್ವದ ಸ್ಥಿತಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ.

2024 ನೇ ಇಸ್ವಿಯು ಮಹಿಳೆಯರ ಮೇಲಿನ ಹಿಂಸೆಯ ಪರಮಾವಧಿಯನ್ನು ಕಾಣುತ್ತಿದೆ. ಅತ್ಯಾಚಾರ, ದೌರ್ಜನ್ಯಗಳು ಮಾತ್ರವಲ್ಲದೆ, ಸಾಮೂಹಿಕ ವೈಷಮ್ಯಗಳು ಕೂಡ ತೀವ್ರವಾಗಿವೆ. ನೈತಿಕತೆ ಮತ್ತು ಕಾನೂನು ಪಾಲನೆ ಎರಡೂ ಇಲ್ಲದೇ ಉಳಿದಿರುವ ಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವವು ಎಲ್ಲರಿಗೂ ನೈತಿಕ ಮತ್ತು ಕಾನೂನು ಸಮಾನತೆಯನ್ನು ನೀಡುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ.

ಪ್ರಜಾಪ್ರಭುತ್ವವು ಸಫಲವಾಗಬೇಕಾದರೆ, ನೈತಿಕತೆ, ಪಾರದರ್ಶಕತೆ ಮತ್ತು ನ್ಯಾಯ ಮಾತ್ರ ಮುಖ್ಯವಲ್ಲ, ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವುಗಳನ್ನು ಉಳಿಸಿಕೊಳ್ಳಲು ಸಮಾನ ಅವಕಾಶಗಳು ಅಗತ್ಯವಿದೆ. "ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವುದು" ಎಂಬ ಥೀಮ್‌ನಲ್ಲಿ, ಯುವಜನತೆಯನ್ನು ಈ ದೌರ್ಜನ್ಯಗಳ ವಿರುದ್ಧ ಹೋರಾಡುವ ಮೂಲಕ ದೇಶದ ಪ್ರಜಾಪ್ರಭುತ್ವದ ಭವಿಷ್ಯವನ್ನು ಕಟ್ಟಲು ಪ್ರೇರೇಪಿಸುವ ಅಗತ್ಯವಿದೆ.

ಭಾರತದ ಪ್ರಜಾಪ್ರಭುತ್ವವು ಧರ್ಮನಿರಪೇಕ್ಷತೆ ಮತ್ತು ಸಾಮಾಜಿಕ ನ್ಯಾಯದ ಮೇಲೆ ನಿರ್ಮಿತವಾಗಿದೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಹಿಂದುತ್ವ ಶಕ್ತಿ ಮತ್ತು ಆಧಿಕಾರಶಾಹಿ ವೈಚಾರಿಕತೆಗಳು ಈ ಮೌಲ್ಯಗಳನ್ನು ನಾಶಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಯುವ ಜನತೆ, ವಿಶೇಷವಾಗಿ ದಲಿತರು, ಅಲ್ಪಸಂಖ್ಯಾತರು, ಮತ್ತು ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿನಿಧಿಸಲು ಸಂಘಟಿತರಾಗಬೇಕಾಗಿದೆ.

ಭಾರತದ ಪ್ರಜಾಪ್ರಭುತ್ವದ ಸಫಲತೆ ಮತ್ತು ವೈಫಲ್ಯಗಳು ಒಂದು ಚಿಂತನೆ:

ಪ್ರಜಾಪ್ರಭುತ್ವವೆಂದರೆ ಕೇವಲ ಒಂದು ವ್ಯವಸ್ಥೆ ಅಲ್ಲ, ಅದು ಸಮಾನತೆ, ಸ್ವಾತಂತ್ರ್ಯ, ನ್ಯಾಯಪರತೆ ಮತ್ತು ಎಲ್ಲರಿಗೂ ಹಕ್ಕುಗಳ ಭರವಸೆಯನ್ನು ನೀಡುವ ವ್ಯವಸ್ಥೆಯಾಗಿದೆ. ಈ ಮೌಲ್ಯಗಳನ್ನು ಮುನ್ನಡೆಸಲು, ಜನಪ್ರತಿನಿಧಿಗಳು ದಕ್ಷವಾಗಿ ಕಾರ್ಯನಿರ್ವಹಿಸಬೇಕು ಮತ್ತು ಎಲ್ಲಾ ವರ್ಗಗಳ ಜನರು ತಮ್ಮ ಹಕ್ಕುಗಳನ್ನು ಸಮಾನವಾಗಿ ಅನುಭವಿಸಬೇಕಾಗಿದೆ. ಆದರೆ, ಇಂದಿನ ಭಾರತದ ಅರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ, ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಪ್ರಜಾಪ್ರಭುತ್ವದ ನಿಜವಾದ ಫಲಗಳನ್ನು ಅನುಭವಿಸುತ್ತಿದ್ದಾರೆಯೇ ಎಂಬುದು ಅನುಮಾಸ್ಪದವಾಗಿ ಕಾಡುತ್ತದೆ.

ಅಧಿಕಾರಶಾಹಿ ಹಿಂದುತ್ವದ ದಬ್ಬಾಳಿಕೆ: ಇಂದಿನ ಸರ್ಕಾರ ನಡೆಸುತ್ತಿರುವ ಹಿಂದುತ್ವಪರ ರಾಜಕೀಯ ವಲಯಗಳು, ಪ್ರಜಾಪ್ರಭುತ್ವದ ಮೂಲಭೂತ ಸಿದ್ಧಾಂತಗಳಿಗೆ ಧಕ್ಕೆಯಾಗಿವೆ. ದಲಿತರು ಮತ್ತು ಅಲ್ಪಸಂಖ್ಯಾತರು ಶೋಷಣೆಗೊಳಗಾಗುತ್ತಿದ್ದಾರೆ, ಮತ್ತು ಸಮಾಜದ ಪ್ರತ್ಯೇಕತೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನ್ಯಾಯದಿಂದ ದೂರವೇ ಇರುತ್ತವೆ. ಈ ಜನಾಂಗೀಯ ತಾರತಮ್ಯವು ಮುಗಿಯದಂತೆ ತೋರುತ್ತದೆ, ಏಕೆಂದರೆ ಇವರ ವಿರುದ್ದ ನಡೆಯುವ ದೌರ್ಜನ್ಯಕ್ಕೆ ರಾಜಕೀಯ ಬೆಂಬಲವೂ ಸಿಗುತ್ತಿದೆ.

ಸಮಾಜಿಕ  ತಾರತಮ್ಯ: ದೇಶದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರು ಹೇಗೆ ಶೋಷಣೆಗೊಳಗಾಗುತ್ತಿದ್ದಾರೆ ಎಂಬುದನ್ನು ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಮೂಲಗಳು ಸಾಮಾನ್ಯವಾಗಿ ವರದಿ ಮಾಡುತ್ತವೆ. ಈ ಶೋಷಣೆಯ ಹಿಂದಿನ ಪ್ರಮುಖ ಕಾರಣವೇ ಹಿಂದುತ್ವ ಪರ ಸಂಘಟನೆಗಳ ದುರುದ್ದೇಶ. ಮಹಿಳೆಯರ ಮೇಲಿನ ದೌರ್ಜನ್ಯ ಕೂಡ ನಿರಂತರವಾಗಿದೆ, ಮತ್ತು ಪ್ರಜಾಪ್ರಭುತ್ವದ ತಳಹದಿಯೇ ಕಲುಷಿತವಾಗಿದೆ.

ನ್ಯಾಯದ ಮರಿಚಿಕೆ: ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ನ್ಯಾಯಾಲಯಗಳಲ್ಲಿ ತಮ್ಮ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುತ್ತಿರುತ್ತಾರೆ, ಆದರೆ ಬಹಳಷ್ಟು ಸಂದರ್ಭಗಳಲ್ಲಿ ನ್ಯಾಯಮಂಡಳಿಗಳು ಕೂಡಾ ರಾಜಕೀಯ ಒತ್ತಡಕ್ಕೆ ತತ್ತರಿಸುತ್ತವೆ. ಇದು ಪ್ರಜಾಪ್ರಭುತ್ವದ ಯಶಸ್ಸಿನ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಬಡವರ, ಶೋಷಿತರ ಪಾಲಿಗೆ ನ್ಯಾಯ ಎಂಬುದು ಮರಿಚಿಕೆಯಾಗಿದೆ.

ಮಾಧ್ಯಮಗಳ ಮೇಲೆ ಅಂಕುಶ: ಪ್ರಜಾಪ್ರಭುತ್ವವು ಸಾಧಿಸಬೇಕಾದ ಮಾಧ್ಯಮದ ಸ್ವಾತಂತ್ರ್ಯವೂ ಈಗ ದುರ್ಬಲಗೊಂಡಿದೆ. ಸರ್ಕಾರಗಳು ಮಾಧ್ಯಮ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವ ಎಲ್ಲ ಪ್ರಯತ್ನಗಳು ಮಾಡುತ್ತಿವೆ. ಮಡಿಲ ಮಾಧ್ಯಮಗಳಿಗೆ ಮಣೆ ಹಾಕುವ ಆಡಳಿತರೂಢರು ಅದೇ ನಿರ್ಭಯದಿಂದ ಸತ್ಯವಂತಿಕೆಯನ್ನು ಪ್ರದರ್ಶಿಸುವ ಮಾಧ್ಯಮಗಳು ಮತ್ತು ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳ ಮೇಲೆ ಅಂಕುಶ ಎಳೆಯುವ ಪ್ರಯತ್ನ ಮಾಡುತ್ತಿವೆ. ಎಷ್ಟೋ ಜನ ಪತ್ರಕರ್ತರನ್ನು ಬೆದರಿಸಿ ಅವರ ದ್ವನಿ ಅಡಗಿಸುವ ಕೆಲಸ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರೊಂದಿಗೆ  ಪ್ರಜಾಪ್ರಭುತ್ವವು ತನ್ನ ನೈತಿಕತೆ ಕಳೆದುಕೊಳ್ಳುತ್ತಿದೆ.

ಮುಂದಿನ ಪೀಳಿಗೆಯ ಹೊಣೆಗಾರಿಕೆ: ಯುವಜನಾಂಗವು ಈ ಪರಿಸ್ಥಿತಿಯಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಕಾಪಾಡುವುದು, ಎಲ್ಲರೂ ಸಮಾನವಾಗಿ ನ್ಯಾಯವನ್ನು ಅನುಭವಿಸುವಂತಾ ವ್ಯವಸ್ಥೆಯನ್ನು ನಿರ್ಮಿಸುವುದು ಯುವಜನಾಂಗದ ಮುಂದಿರುವ ದೊಡ್ಡ ಹೊಣೆಗಾರಿಕೆಯಾಗಿದೆ. ಪ್ರತಿಯೊಬ್ಬ ಯುವಕರೂ ಈ ದೇಶದ ಪ್ರಜಾಪ್ರಭುತ್ವದ ಮೂಲಗಳಿಂದ ಬೆಳೆದ ನಿರ್ಣಾಯಕ ಶಕ್ತಿ. ಪ್ರಜಾಪ್ರಭುತ್ವವನ್ನು ಅತಂತ್ರಗೊಳಿಸುವ ಶಕ್ತಿಗಳ ವಿರುದ್ಧ ಯುವಕರು ಧ್ವನಿಯಾಗಬೇಕು.

ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ಎನ್ನಿಸಿಕೊಂಡರೂ, ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಸಫಲವಾಗಿ ಅನುಸರಿಸಿಕೊಳ್ಳುತ್ತಿರುವುದಿಲ್ಲ ಎಂಬ ಮಾತು ನಿಜವಾಗಬಹುದು. ಪ್ರಜಾಪ್ರಭುತ್ವದ ಬಹಿರಂಗ ರೂಪ ಮಾತ್ರ ಉಳಿದಿದ್ದು, ಅಂತರಿಕ ಮೌಲ್ಯಗಳು ನಿರಂತರವಾಗಿ ಕುಸಿಯುತ್ತಿವೆ.

ಭಾರತದ ಪ್ರಜಾಪ್ರಭುತ್ವವು ಸಫಲವಾಗಬೇಕೆಂದರೆ, ಪ್ರಜಾಪ್ರಭುತ್ವದ ಮೂಲಭೂತ ಗುಣಗಳು – ಸಮಾನತೆ, ಸಹಬಾಳ್ವೆ, ಮತ್ತು ನ್ಯಾಯ – ಎಲ್ಲಾ ವಲಯಗಳಲ್ಲಿ ಅನುಷ್ಠಾನಗೊಳ್ಳಬೇಕಾಗಿದೆ.

  • ಎಂ.ಆರ್.ಮಾನ್ವಿ

 

 

 

Read These Next

ದೇವಸ್ಥಾನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ವಕ್ಫ್‌ ವಿಷಯ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಯತ್ನಾಳ್‌ಗೆ ಜನರಿಂದ ತೀವ್ರ ವಿರೋಧ

ಸಾರ್ವಜನಿಕರು ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡು, ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ...

ಶಿಗ್ಗಾಂವಿ ಉಪಚುನಾವಣೆ; ಇಂದು ಪ್ರಚಾರ ಕಾರ್ಯದ ಕೊನೆ ದಿನ; ಕ್ಷೇತ್ರದ ಗೆಲುವಿಗಾಗಿ ಹಾಲಿ-ಮಾಜಿ ಸಿಎಂಗಳ ಪ್ರಭಾವ

ಹಾವೇರಿಯ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆ ಪ್ರಚಾರ ಚಟುವಟಿಕೆಗಳು ಇಂದು ಅಂತ್ಯಗೊಳ್ಳಲಿದ್ದು, ಕ್ಷೇತ್ರದಲ್ಲಿ ...

ವಕ್ಫ್ ಆಸ್ತಿ ತೆರವುಗೊಳಿಸಲು 216 ಪ್ರಕರಣಗಳಲ್ಲಿ 6 ನೋಟಿಸ್ ನೀಡಿದ್ದ ಬಿಜೆಪಿ; ಸಿದ್ದರಾಮಯ್ಯ ಪ್ರಶ್ನೆ: 'ಬೊಮ್ಮಾಯಿ ಯೂಟರ್ನ್ ಏಕೆ?

'ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒತ್ತುವರಿಯಾಗಿರುವ ವಕ್ಫ್ ಆಸ್ತಿಯನ್ನು ಕಾಪಾಡುವುದಾಗಿ ಹೇಳಿದ್ದರು. ಇದೀಗ ರಾಜಕೀಯ ...

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಯನ ಪ್ರವಾಸ

ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು, ಸಮಿತಿಯ ಅಧ್ಯಕ್ಷರಾದ ಪಿ.ಎಂ. ...

ರಾಜಕೀಯ ಪುಡಾರಿಯಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಮೋದಿ: ಸಿಎಂ ಸಿದ್ದರಾಮಯ್ಯ, ಪ್ರಣಾಳಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಸವಾಲು

ಬೆಂಗಳೂರು : ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಯಶಸ್ಸು ಮತ್ತು ಇದರಿಂದಾಗಿ ಏರುಗತಿಯಲ್ಲಿ ಸಾಗುತ್ತಿರುವ ರಾಜ್ಯದ ...

ನೈತಿಕ ಮೌಲ್ಯಗಳು ಮತ್ತು ಸಚ್ಚಾರಿತ್ರ್ಯ: ಪ್ರವಾದಿ ಮುಹಮ್ಮದ್ (ಸ) ಅವರ ಬದುಕಿನ ದಾರ್ಶನಿಕತೆ

ಇಂದು ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ವ್ಯಕ್ತಿ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳೆಂದರೆ ನೈತಿಕ ಮೌಲ್ಯಗಳ ಅಧಪತನ ಮತ್ತು ...

ಕಾರವಾರ: ಶಕ್ತಿ ಯೋಜನೆಗೆ ತುಂಬಿತು ವರ್ಷ: ಜಿಲ್ಲೆಯಲ್ಲಿ 6.19 ಕೋಟಿ ಮಹಿಳೆಯರಿಗೆ ಉಚಿತ ಪ್ರಯಾಣದ ಹರ್ಷ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ರಾಜ್ಯಾದ್ಯಂತ ಸಂಚರಿಸುವ ಉಚಿತ ...

ಮೇ 31 ವಿಶ್ವ ತಂಬಾಕು ರಹಿತ ದಿನ; ಜಿಲ್ಲೆಯಲ್ಲಿ ತಂಬಾಕು ದುಷ್ಪರಿಣಾಮಗಳ ನಿಯಂತ್ರಣಕ್ಕೆ ವಿವಿಧ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ನಿಯಂತ್ರಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾ ಹಾಗೂ ತಾಲೂಕು ...