ದೌರ್ಜನ್ಯಕ್ಕೆ ಒಳಗಾದ ಮಕ್ಕಳ ರಕ್ಷಣೆಗೆ ಸಹಾಯವಾಣಿ ಸಹಕಾರಿ: ಜಿಲ್ಲಾ ನ್ಯಾಯಾಧೀಶರು

Source: so news | By Manju Naik | Published on 12th June 2019, 8:05 PM | Coastal News | Don't Miss |

ಉಡುಪಿ :ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಗಟ್ಟಲು ಮಕ್ಕಳ ಸಹಾಯವಾಣಿ ಸಹಕಾರಿಯಾಗಲಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ ಜೋಷಿ ಹೇಳಿದ್ದಾರೆ. 
ಅವರು ಬುಧವಾರ ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಆಶ್ರಯದಲ್ಲಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ನಡೆದ ಅಂತರಾಷ್ಟ್ರೀಯ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಮತ್ತು ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಗೆ ಬೇರೆಡೆಯಿಂದ ಕೆಲಸ ಅರಸಿಕೊಂಡು ವಲಸೆ ಬರುವ ಕುಟುಂಬಗಳ ಮಕ್ಕಳ ರಕ್ಷಣೆಗೆ ಮಕ್ಕಳ ಸಹಾಯವಾಣಿ ಸಹಕಾರಿಯಾಗಿದೆ. ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮಕ್ಕಳನ್ನು ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಪ್ರವಾಸಿ ತಾಣಗಳಲ್ಲಿ ಬಿಟ್ಟು ಹೋಗುವುದು ಹಾಗೂ ಮಕ್ಕಳನ್ನು ಬಾಲ್ಯದಲ್ಲಿಯೇ ದುಡಿಮೆಗೆ ಕಳುಹಿಸುವಂತಹ ಸಂಗತಿಗಳು ಕಂಡು ಬಂದಿದ್ದು, ಇಂತಹ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿಯ ಅವಶ್ಯಕತೆ ತುಂಬಾ ಇದೆ. ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಮಕ್ಕಳ ಸ್ನೇಹಿಯಾಗಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಮಾಹಿತಿ ತಿಳಿದುಕೊಂಡಿರುವುದು ತುಂಬಾ ಅವಶ್ಯಕವಾಗಿದೆ. ಸಹಾಯವಾಣಿಯ ಮಾಹಿತಿ ಶೀಘ್ರವಾಗಿ ಎಲ್ಲೆಡೆಗೂ ತಲುಪುವಂತಾಗಬೇಕು ಎಂದ ಅವರು, ಜಿಲ್ಲೆಯಲ್ಲಿ ಪ್ರಾರಂಭವಾಗಿರುವ ಮಕ್ಕಳ ಸಹಾಯವಾಣಿ ಫಲಪ್ರದಾಯಕವಾಗಿ ಹೆಚ್ಚಿನ ಮಕ್ಕಳ ರಕ್ಷಣೆಗೆ ಸಹಕಾರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಲೇಲೆ ಮಾತನಾಡಿ, ದೇಶ ಅಭಿವೃದ್ಧಿ ಪಥದಲ್ಲಿ ಬೆಳೆಯ ಬೇಕಾದರೆ ಮಕ್ಕಳು ಬೆಳೆಯ ಬೇಕು. ಮಕ್ಕಳನ್ನು ಸರಿಯಾಗಿ ಸಾಕಿ ಸಲಹದಿದ್ದರೆ ಇಡೀ ವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಮಕ್ಕಳ ಎಳೆ ವಯಸ್ಸಿನಲ್ಲಿ ಸರಿಯಾದ ರಕ್ಷಣೆ ಕೊಡದಿದ್ದರೆ ಅವರ ಇಡೀ ಬಾಲ್ಯವನ್ನು ಕಸಿದುಕೊಂಡತ್ತಾಗುತ್ತದೆ. ಮಕ್ಕಳಿಗೆ ಹಾಗೂ ಹಿರಿಯರಿಗೆ ರಕ್ಷಣೆ ಕೊಡುವಲ್ಲಿ ವಿಫಲರಾಗಿದ್ದೇವೆ ಎಂದ ಅವರು, ಮಕ್ಕಳಿಗೆ ಸರಿಯಾದ ರಕ್ಷಣೆ ಸಿಗಬೇಕಾದರೆ ಮಕ್ಕಳ ಸಹಾಯ ವಾಣಿ ಸಹಕಾರಿಯಾಗಿದೆ ಎಂದರು. ಮಕ್ಕಳ ಸಹಾಯವಾಣಿಯ ಜಾಗೃತಿ ಪ್ರತಿಯೊಬ್ಬರೂ ಮಾಡಬೇಕು. ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ವತಿಯಿಂದ ಬಸ್, ಆಟೋಗಳ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ, ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿಯ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಅಂಟಿಸುವ ಮೂಲಕ ಜಾಹಿರಾತು ನೀಡಿದಾಗ ಜನ ಸಾಮಾನ್ಯರಿಗೆ ಮಕ್ಕಳ ಸಹಾಯವಾಣಿಯ ಜಾಗೃತಿ ನೀಡಿದಂತಾಗುತ್ತದೆ ಎಂದರು.
ಹಲವು ಬಾರಿ ಸಣ್ಣಮಕ್ಕಳು ಹಾಗೂ ಇಳಿ ವಯಸ್ಸಿನವರು ಕೆಲಸ ಮಾಡುವುದನ್ನು ಗಮನಿಸಿದರೆ ಅವರ ಸ್ವಾವಲಂಬಿತನದ ಬದುಕಿಗೆ ಅಭಿನಂದನೆ ಹೇಳಬೇಕೋ ಅಥವಾ ವ್ಯವಸ್ಥೆ ಅವರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ದೂರಬೇಕೋ ಎಂಬ ಗೊಂದಲ ಸೃಷ್ಟಿಯಾಗುತ್ತದೆ ಎಂದ ಅವರು, ಮಕ್ಕಳಿಗೆ ಹಾಗೂ ಹಿರಿಯರನ್ನು ಸಂರಕ್ಷಿಸುವ ವ್ಯವಸ್ಥೆ ಸಮಾಜದಲ್ಲಿ ನಿರ್ಮಾಣವಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಶಾ ಜೇಮ್ಸ್ ಮಾತನಾಡಿ, ಮಕ್ಕಳ ಸಹಾಯವಾಣಿ ಆರಂಭವಾದಾಗಿನಿಂದ ಈವರೆಗೆ ಜಿಲ್ಲೆಯಲ್ಲಿ ಭಿಕ್ಷಾಟನೆ, ಬಾಲ್ಯ ವಿವಾಹ, ದೌರ್ಜನ್ಯ, ಲೈಂಗಿಕ ದೌರ್ಜನ್ಯ ಕುರಿತಂತೆ 23 ಕರೆಗಳು ಬಂದಿದ್ದು, ಈ ಎಲ್ಲಾ ಕರೆಗಳ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗಿದೆ. ಮಕ್ಕಳಿಗೆ ಸರಿ ತಪ್ಪುಗಳ ಅರಿವು ಇರುವುದಿಲ್ಲ. ಹಲವು ಬಾರಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ಯಾರಿಗೆ, ಯಾವ ರೀತಿ ದೂರು ನೀಡಬೇಕು ಎಂಬ ಮಾಹಿತಿ ಕೊರತೆಯಿಂದ ಎಷ್ಟೋ ಬಾರಿ ಮಕ್ಕಳ ಮೇಲಾದ ದೌರ್ಜನ್ಯ ಪ್ರಕರಣಗಳ ಕುರಿತು ಮಾಹಿತಿಗಳನ್ನು ತಲುಪಲು ಸಾಧ್ಯವಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಆರಂಭವಾಗಿರುವ ಮಕ್ಕಳ ಸಹಾಯವಾಣಿಯಿಂದ ಮಕ್ಕಳು ತಮ್ಮ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ದ ಕ್ರಮ ಕೈಗೊಳ್ಳಲು ಸಹಕಾರಿಯಾಗಿದೆ. 
ಮಕ್ಕಳ ವಿರುದ್ದದ ದೌರ್ಜನ್ಯ ಪ್ರಕರಣಗಳ ಕರೆಗಳು ಬಂದಾಗ ಶಿಶು ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಬಾಲಾ ನ್ಯಾಯ ಮಂಡಳಿಗಳ ಪಾಲ್ಗೊಳ್ಳುವಿಕೆ ತುಂಬಾ ಅವಶ್ಯಕವಾಗಿರುತ್ತದೆ. ಪೊಲೀಸ್ ಇಲಾಖೆಯ ಜೊತೆಗೆ ಇತರ ಇಲಾಖೆಗಳು ಸಕ್ರಿಯವಾಗಿ ಕೆಲಸ ಮಾಡಿದಾಗ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳ ಸಹಾಯವಾಣಿಗೆ ಬರುವಂತಹ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಾಗ ಮಕ್ಕಳ ಹಿತದೃಷ್ಟಿಗೆ ಪ್ರಾಮುಖ್ಯತೆ ನೀಡಿ ಎಲ್ಲರೂ ಒಟ್ಟಾಗಿ ಕಾರ್ಯಪ್ರವೃತ್ತರಾದಾಗ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ,  ಮಕ್ಕಳ ಹಕ್ಕುಗಳನ್ನು ಗಮನಿಸುವ ಜೊತೆಗೆ ಮಕ್ಕಳನ್ನು ಗೌರವಯುತವಾಗಿ ಬದುಕಲು ಬಿಡಬೇಕಾಗುತ್ತದೆ. ಮಕ್ಕಳು ದೌರ್ಜನ್ಯಕ್ಕೆ ಒಳಗಾದಾಗ ಸಮಾಜಕ್ಕೆ ಮಾರಕವಾಗಿ ಬೆಳೆಯುವ ಸಾಧ್ಯತೆಗಳಿರುತ್ತದೆ ಹಾಗಾಗಿ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಲಹೆ ನೀಡಿ ಸಮರ್ಪಕವಾದ ರೀತಿಯಲ್ಲಿ ಬೆಳೆಸುವ ಜವಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ನ್ಯಾಯಾಧೀಶರು, ಶ್ರೀ ಕೃಷ್ಣ ಬಾಲನಿಕೇತನದ ಮಕ್ಕಳೊಂದಿಗೆ ಸೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಮ್ಮ ಭೂಮಿ ಸಂಸ್ಥೆಯ ಪ್ರತಿಭೆ ರಾಮಂಜಿ ಅವರನ್ನು ಸನ್ಮಾನಿಸಲಾಯಿತು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಕ್ಕಳ ಸಹಾಯವಾಣಿಯ ಪ್ರತಿಜ್ಞಾ ವಿಧಿ ಭೋಧಿಸಿದರು. ನಮ್ಮ ಭೂಮಿಯ ರಾಮಂಜಿ ಬಳಗದವರಿಂದ ಬೀದಿ ನಾಟಕ ಪ್ರದರ್ಶನ ನಡೆಯಿತು.
ಉಡುಪಿ ಚೈಲ್ಡ್ ಲೈನ್ ಹಾಗೂ ಬೀದರ್ ರೈಲ್ವೇ ಚೈಲ್ಡ್ ಹೆಲ್ಪ್ ಡೆಸ್ಕ್ ಸಹಯೋಗದೊಂದಿಗೆ 5 ದಿನಗಳ ಕಾಲ ಮಕ್ಕಳ ಸಹಾಯವಾಣಿ ಸಿಬ್ಬಂದಿಗೆ ತರಬೇತಿ ನಡೆಯಲಿದ್ದು, ತರಬೇತಿಯಲ್ಲಿ ಮಕ್ಕಳ ಸಹಾಯವಾಣಿಯಲ್ಲಿ ಯಾವ ರೀತಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಕ್ಕಳಿಗೆ ರಕ್ಷಣೆ ನೀಡಬೇಕು ಹಾಗೂ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ಮಾಡುವ ಕುರಿತು ಮಾಹಿತಿ ನೀಡಲಾಗುತ್ತದೆ.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ನಾರಾಯಣ ಬಿ.ಕೆ ಉಪಸ್ಥಿತರಿದ್ದರು. ಚೈಲ್ಡ್ ಇಂಡಿಯಾ ಫೌಂಡೇಶನ್ ಚೆನೈನ ಹಿರಿಯ ಕಾರ್ಯಕ್ರಮ ಸಂಯೋಜಕಿ ಚಿತ್ರ ಅಂಚನ್ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ರಾಮಚಂದ್ರ ಉಪಾದ್ಯಾಯ ಸ್ವಾಗತಿಸಿ, ನಿರೂಪಿಸಿದರು.  ಅಯ್ಯಪ್ಪನ್ ವಂದಿಸಿದರು.

Read These Next

ಐಸಿಎಸ್‍ಇ 10ನೇತರಗತಿ ಫಲಿತಾಂಶ; ನ್ಯೂ ಶಮ್ಸ್ ಸ್ಕೂಲ್‍ಗೆ ಸತತ ನಾಲ್ಕನೇ ವರ್ಷವೂ ಶೇ.100 ಫಲಿತಾಂಶ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯಿಂದ ನಡೆಸಲ್ಪಸಡುವ ನ್ಯೂ ಶಮ್ಸ್ ಸ್ಕೂಲ್ (ಐಸಿಎಸ್‍ಇ ಪಠ್ಯಕ್ರಮ)ದ ...

ಐಸಿಎಸ್‍ಇ 10ನೇತರಗತಿ ಫಲಿತಾಂಶ; ನ್ಯೂ ಶಮ್ಸ್ ಸ್ಕೂಲ್‍ಗೆ ಸತತ ನಾಲ್ಕನೇ ವರ್ಷವೂ ಶೇ.100 ಫಲಿತಾಂಶ

ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯಿಂದ ನಡೆಸಲ್ಪಸಡುವ ನ್ಯೂ ಶಮ್ಸ್ ಸ್ಕೂಲ್ (ಐಸಿಎಸ್‍ಇ ಪಠ್ಯಕ್ರಮ)ದ ...