ವಿಪಕ್ಷ ನಾಯಕನಾಗಿ ಅಶೋಕ್; ಒಂದು ಕುಟುಂಬಕ್ಕೆ ಬಿಜಿಪಿ ಸೀಮಿತವಲ್ಲ; ಯತ್ನಾಳ್ ವಾಗ್ದಾಳಿ

Source: Vb | By I.G. Bhatkali | Published on 20th November 2023, 6:08 AM | State News |

ಬೆಂಗಳೂರು: ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಆ‌ರ್.ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಹೆಸರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಸೂಚಿಸಿದರೆ, ಮಾಜಿ ಸಚಿವ ವಿ.ಸುನೀಲ್ ಕುಮಾರ್ ಅನುಮೋದಿಸಿದರು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.

ಶಾಸಕಾಂಗ ಪಕ್ಷದ ಸಭೆ ಆರಂಭಕ್ಕೂ ಮುನ್ನ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್, ಪ್ರತ್ಯೇಕವಾಗಿ ಎಲ್ಲ ಶಾಸಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿದರು. ಆದರೆ, ಇಂದು ಬೆಳಗ್ಗೆಯೇ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಅಶೋಕ್‌ರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಿಪಕ್ಷ ನಾಯಕನ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ದವಿರುವಂತೆ ತಿಳಿಸಿದ್ದರು ಎನ್ನಲಾಗಿದೆ.

ಯತ್ನಾಳ್-ಜಾರಕಿಹೊಳಿ: ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಖಾಸಗಿ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ್ದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ, ಸಭೆ ಆರಂಭವಾಗುವ ಕೆಲವು ನಿಮಿಷಗಳ ಮುನ್ನವೇ ಅಲ್ಲಿಂದ ತೆರಳಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತು.

ಹೊಟೇಲ್‌ನಿಂದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ಅರವಿಂದ ಬೆಲ್ಲದ್ ಒಟ್ಟಿಗೆ ಹೊರ ಬಂದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್, 'ಇದು ಬಡವರು ಚಹಾ ಕುಡಿಯುವ ಜಾಗ ಅಲ್ಲ. ಆದುದರಿಂದ, ಚಹಾ ಕುಡಿಯಲು ಹೊರಗಡೆ ಹೋಗುತ್ತಿದ್ದೇನೆ' ಎಂದು ಹೇಳಿದರು. ಆನಂತರ, ಯತ್ನಾಳ್ ಹಾಗೂ ಜಾರಕಿಹೊಳಿ ಒಂದೇ ಕಾರಿನಲ್ಲಿ ಅಲ್ಲಿಂದ ತೆರಳಿದರು. ಕೆಲಹೊತ್ತು ನಂತರ ಅವರಿಬ್ಬರೂ ಸಭೆಗೆ ವಾಪಸ್ ಬಂದರು.

ಸಭೆಯ ಆರಂಭಕ್ಕೆ ಮುನ್ನ ವೀಕ್ಷಕರು ಪ್ರತ್ಯೇಕವಾಗಿ ಪ್ರತಿಯೊಬ್ಬ ಶಾಸಕನಿಂದ ಅಭಿಪ್ರಾಯ ಸಂಗ್ರಹಿಸಿದಲ್ಲದೆ, ಹೈಕಮಾಂಡ್ ನಿರ್ಧಾರವನ್ನು ತಿಳಿಸಿದರು. ಈ ವೇಳೆ ಯತ್ನಾಳ್ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಶಾಸಕಾಂಗ ಪಕ್ಷದ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು ಎಂದು ತಿಳಿದು ಬಂದಿದೆ.

ಬಿಜೆಪಿ ನಾಯಕರೊಂದಿಗೆ ಚರ್ಚೆ: ವಿರೋಧ ಪಕ್ಷದ ನಾಯಕರ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಬಿಜೆಪಿ ಹೈಕಮಾಂಡ್‌ ಪ್ರತಿನಿಧಿಗಳಾಗಿ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ 'ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ಬೆಂಗಳೂರಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಹಾಗೂ ದುಶ್ಯಂತ್ ಕುಮಾರ್ ಗೌತಮ್ ಮೊದಲು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಆನಂತರ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರೊಂದಿಗೆ ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಮಾತುಕತೆ ನಡೆಸಿದರು.

ಆನಂತರ, ಆ‌ರ್.ಟಿ.ನಗರದಲ್ಲಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಹೈಕಮಾಂಡ್ ಪ್ರತಿನಿಧಿಗಳು ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಬಳಿಕ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವ ಅತೃಪ್ತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿವಾಸಕ್ಕೆ ಭೇಟಿ ಮಾಡಿ ಚರ್ಚೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಯಿತು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾ‌ರ್ ಗೌತಮ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಿಂದಿ ಚೋರ್'ನನ್ನು ಸುದ್ದಿವಾಹಿನಿಗಳು ಹುಲಿ ಎನ್ನುತ್ತಿವೆ ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ: ಚಿಂದಿ ಚೋರ್ ನನ್ನು ಸುದ್ದಿವಾಹಿನಿಗಳು ಹುಲಿ ಎಂದು ಬಣ್ಣಿಸುವುದನ್ನು ನಿಲ್ಲಿಸಬೇಕು' ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ವಿಜಯೇಂದ್ರ ಪದಗ್ರಹಣ

ಕಾರ್ಯಕ್ರಮಕ್ಕೆ ಗೈರಾಗಿದ್ದು ಏಕೆ ಎನ್ನುವ ಪ್ರಶ್ನೆಗೆ ಸಿಟ್ಟಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಮಾಧ್ಯಮಗಳು ನಿಷಕವಾಗಿ ಕೆಲಸ ಮಾಡ ಬೇಕು. ಆದರೆ, ಯಾವನೋ ಒಬ್ಬ ಚಿಂದಿ ಚೋರ್‌ನನ್ನು ತಂದು ಆ ಹುಲಿ, ಈ ಹುಲಿ ಎಂದು ಬಿಂಬಿಸಿದರೆ ಜನರಿಗೆ ಎಲ್ಲವೂ ಅರ್ಥ ವಾಗಲಿದೆ ಎಂದು ಟೀಕಿಸಿದರು.

ನೂತನ ರಾಜ್ಯಾಧ್ಯಕ್ಷನ ಬಗ್ಗೆ ಸುದ್ದಿವಾಹಿನಿಗಳಿಗೆ ಏಕೆ ಅಪಾರ ಗೌರವ, ಕಾಳಜಿ, ಅಲ್ಲದೆ, ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಿರುವ ಕುರಿತು ಪತ್ರಕರ್ತರು ಕೇಳಲೇಬಾರದು. ಏನೇ ಆಗಲಿ ಅದು ನಮ್ಮ ರಾಜಕೀಯ ನಡೆ ಎಂದು ಅವರು ಹೇಳಿದರು.

ಒಂದು ಕುಟುಂಬಕ್ಕೆ ಬಿಜೆಪಿ ಸೀಮಿತವಲ್ಲ: ಬಿಜೆಪಿ ಒಂದು ಕುಟುಂಬಕ್ಕೆ ಸೀಮಿತ ಆಗಬಾರದು. ಈ ನಿಟ್ಟಿನಲ್ಲಿ ಪ್ರತಿಪಕ್ಷದ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ಕೊಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದಲ್ಲಿರುವ 3 ತಮ್ಮ ನಿವಾಸಕ್ಕೆ ಆಗಮಿಸಿದ್ದ ಕೇಂದ್ರ ವೀಕ್ಷಕರ ಜೊತೆಗಿನ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರು ಊಟ ಹಾಕಿದ್ದಾರೆ. ಹಾಗಾಗಿ, ಈ ಬಾರಿ ಉತ್ತರ ಕರ್ನಾಟಕದವರಿಗೆ ವಿಪಕ್ಷ ಸ್ಥಾನ ಕೊಡಬೇಕು ಎಂದು ಹೇಳಿದರು. 

ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತ ಆಗಬಾರದು. ಇದನ್ನು ನಾವು ಒಪ್ಪುವುದಿಲ್ಲ. ಈ ನಿಟ್ಟಿನಲ್ಲಿ ಕೆಲವೇ ಚೇಲಾಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನ ಮಾಡಬಾರದು ಎಂದ ಅವರು, ಕರ್ನಾಟಕದ ಬಿಜೆಪಿಯ ಬೆಳವಣಿಗೆ, ವಿಧಾನಸಭೆಯಲ್ಲಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದೇನೆ. ಎಷ್ಟೋ ವಿಷಯ ಅವರಿಗೆ ಗೊತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಏನು ನಡೆದಿದೆ ಅಂತ ಅವರಿಗೆ ಹೇಳಿದ್ದೇನೆ ಎಂದರು.

ಕೆಲವರು ಬೆದರಿಕೆ ಹಾಕುತ್ತಾರೆ. ಆದರೆ ನಾನು ಅದಕ್ಕೆ ಭಯ ಪಡುವುದಿಲ್ಲ. ಆದರೆ, ವೀಕ್ಷಕರ ಮುಂದೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ನಾನು ಇವರ ರೀತಿ ಹಲ್ಕಾ ಅಲ್ಲ. ಅಧ್ಯಕ್ಷ ಬೇಕು, ವಿಪಕ್ಷ ನಾಯಕ ಸ್ಥಾನ ಬೇಕೆಂದು ಕೇಳಿಲ್ಲ. ಅದು ಅಲ್ಲದೆ, ಯತ್ನಾಳ್ ನನ್ನು ಖರೀದಿ ಮಾಡಲು ಸಾಧ್ಯವೂ ಇಲ್ಲ ಎಂದು ಅವರು ತಿಳಿಸಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...