ಗರ್ಭಪಾತ ಮಹಿಳೆಯ ಹಕ್ಕು; ಸುಪ್ರೀಂ ಕೋರ್ಟ್

Source: Vb | By I.G. Bhatkali | Published on 30th September 2022, 8:42 AM | National News |

ಹೊಸದಿಲ್ಲಿ: ವಿವಾಹಿತೆ ಅಥವಾ ಅವಿವಾಹಿತೆಯಾಗಿರಲಿ, ಎಲ್ಲ ಮಹಿಳೆಯರೂ ಗರ್ಭಪಾತ ಹಕ್ಕುಗಳನ್ನು ಹೊಂದಿದ್ದಾರೆ ಎಂಬ ಮಹತ್ವದ ತೀರ್ಪನ್ನು ಗುರುವಾರ ನೀಡಿರುವ ಸರ್ವೋಚ್ಚ ನ್ಯಾಯಾಲಯವು, ಅತ್ಯಾಚಾರದ ವ್ಯಾಖ್ಯೆಯಲ್ಲಿ ಗಂಡಂದಿರಿಗೆ ನೀಡಲಾಗಿರುವ ವಿನಾಯಿತಿಯು 'ಕಾನೂನಿನ ಕಲ್ಪನೆ'ಯಾಗಿದೆ ಎಂದು ಹೇಳುವ ಮೂಲಕ ವೈವಾಹಿಕ ಅತ್ಯಾಚಾರವನ್ನು ವ್ಯಾಖ್ಯಾನಿಸುವ ನಿಟ್ಟಿನಲ್ಲಿಯೂ ಹೆಜ್ಜೆಯನ್ನಿಟ್ಟಿದೆ.

ಪತಿಯಿಂದ ಬಲಾತ್ಕಾರದ ಲೈಂಗಿಕ ಕ್ರಿಯೆಯು ಬೇರೊಂದು ಪ್ರಕರಣದ ವಿಷಯವಾಗಿರುವುದರಿಂದ ಅದನ್ನು ನಿರ್ದಿಷ್ಟವಾಗಿ ಅಪರಾಧೀಕರಿಸುವ ಗೋಜಿಗೆ ನ್ಯಾಯಾಲಯವು ಹೋಗಲಿಲ್ಲವಾದರೂ, ಇ೦ತ ಹ ಪ್ರಕರಣಗಳಲ್ಲಿ ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯ್ದೆಯಡಿ ಗರ್ಭಪಾತಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿತು. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಅಥವಾ ನಿಷಿದ್ದ ಲೈಂಗಿಕ ಕ್ರಿಯೆಗಾಗಿ ಪ್ರಕರಣವನ್ನು ದಾಖಲಿಸಲು ಯಾವುದೇ ಪೂರ್ವಾಗತ್ಯವಿಲ್ಲ ಎಂದು ತಿಳಿಸಿತು.

ತನ್ನ ಸಮ್ಮತಿಯಿಲ್ಲದ ಪತಿಯು ನಡೆಸಿದ ಲೈಂಗಿಕ ಕ್ರಿಯೆಯಿಂದ ಮಹಿಳೆ ಗರ್ಭವತಿಯಾಗಬಹುದು. ಅಸ್ತಿತ್ವದಲ್ಲಿರುವ ಭಾರತೀಯ ಕಾನೂನುಗಳು ಕೌಟುಂಬಿಕ ಹಿಂಸಾಚಾರದ ರೂಪಗಳನ್ನು ಗುರುತಿಸುತ್ತವೆ ಎಂದು ನ್ಯಾ.ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಹೇಳಿತು.

ವಿವಾಹಿತ ಮಹಿಳೆಯರೂ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಸಂತ್ರಸ್ತೆಯರ ವರ್ಗದ ಭಾಗವಾಗಬಹುದು. ಅದು ವೈವಾಹಿಕವಾಗಿರಲಿ ಅಥವಾ ಅಲ್ಲದಿರಲಿ, ಸಮ್ಮತಿಯಿಲ್ಲದೆ ಲೈಂಗಿಕ ಕ್ರಿಯೆ ಅತ್ಯಾಚಾರದ ಸಾಮಾನ್ಯ ಅರ್ಥವಾಗಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, 'ಐಪಿಸಿಯ ಕಲಂ 375ರ ವಿನಾಯಿತಿ 2ರ ಹೊರತಾಗಿಯೂ ನಿಯಮ 3ಬಿ (ಎ)ದಲ್ಲಿ ಲೈಂಗಿಕ ದೌರ್ಜನ್ಯ' ಅಥವಾ “ಅತ್ಯಾಚಾರ' ಪದಗಳ ಅರ್ಥವು ಪತಿಯು ತನ್ನ ಪತ್ನಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಕೃತ್ಯವನ್ನು ಒಳಗೊಂಡಿದೆ. ವೈವಾಹಿಕ ಅತ್ಯಾಚಾರವನ್ನು ಅತ್ಯಾಚಾರ ದ ವ್ಯಾಪ್ತಿಯಿ೦ದ ಹೊರಗಿರಿಸಿರುವ ವಿನಾಯಿತಿಯು ಕೇವಲ ಕಾನೂನಿನ ಕಲ್ಪನೆಯಾಗಿದೆ. ಪತ್ನಿಯ ವಯಸ್ಸು 15 ವರ್ಷಕ್ಕೆ ಮೇಲಟಿದರೆ ಪತಿಯು ಆಕೆಯೊಡನೆ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ ಎಂದು ಈ ವಿನಾಯಿತಿಯು ಹೇಳುತ್ತದೆ. ಆದಾಗ್ಯೂ ಅದು ಅತ್ಯಾಚಾರವಾಗುತ್ತದೆ ಎನ್ನುವುದನ್ನು ಇಲ್ಲಿ ಒತ್ತಿ ಹೇಳಬೇಕಿದೆ. ವೈವಾಹಿಕ ಅತ್ಯಾಚಾರಕ್ಕಾಗಿ ಪತಿಯ ವಿರುದ್ಧ ಕ್ರಿಮಿನಲ್ ಕ್ರಮವನ್ನು ಜರುಗಿಸಬಹುದು ಎನ್ನುವುದು ಇಂದಿನ ತೀರ್ಪಿನ ಅರ್ಥವಲ್ಲ. ಅದು ಸೆ.16ರಂದು ವಿಚಾರಣೆ ನಡೆಸಿದ್ದ ಇನ್ನೊಂದು ಪ್ರಕರಣದ ವಿಷಯವಾಗಿದೆ. ನಾವು ಸದ್ಯಕ್ಕೆ ವಿನಾಯಿತಿಯ ಸಾಂವಿಧಾನಿಕ ಸಿಂಧುತ್ವವನ್ನು ಆ ಪ್ರಕರಣದಲ್ಲಿ ಅಥವಾ ಇನ್ಯಾವುದೇ ಸೂಕ್ತ ಪ್ರಕ್ರಿಯೆಯಲ್ಲಿ ನಿರ್ಧರಿಸುವುದಕ್ಕೆ ಬಿಡುತ್ತೇವೆ ಎಂದು ಹೇಳಿತು. ಆದರೆ ಇಂದಿನ ತೀರ್ಪಿನಿಂದಾಗಿ ವಿವಾಹದಲ್ಲಿ ಬಲವಂತದ ಲೈಂಗಿಕ ಕ್ರಿಯೆಗೊಳಗಾದ ಮಹಿಳೆಯರು ಎಂಟಿಪಿ ಕಾಯ್ದೆಯಡಿ ಗರ್ಭಪಾತವನ್ನು ಮಾಡಿಸಿಕೊಳ್ಳಬಹುದು.

ಗರ್ಭಪಾತ ಮಾಡಿಸಿಕೊಳ್ಳಲು ವಿವಿಧ ನಿಯಮಗಳನ್ನು ಪ್ರಶ್ನಿಸಿ ಅವಿವಾಹಿತೆಯೋರ್ವಳು ದಾಖಲಿಸಿದ್ದ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ. ವಿವಾಹಿತ ಮಹಿಳೆಯರು 24 ವಾರಗಳವರೆಗೆ ಗರ್ಭಪಾತವನ್ನು ಮಾಡಿಸಿಕೊಳ್ಳಲು ಅವಕಾಶವಿದ್ದರೆ ಅವಿವಾಹಿತ ಮಹಿಳೆಯರಿಗೆ ಇದು 20 ವಾರಗಳಿಗೆ ಸೀಮಿತವಾಗಿದೆ.

ಈ ತಾರತಮ್ಯವು ಕೃತಕವಾಗಿದೆ ಮತ್ತು ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ' ಎಂದು ಎತ್ತಿಹಿಡಿದ ನ್ಯಾಯಾಲಯವು,ಅದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿ ನಿರ್ಬಂಧವನ್ನು ರದ್ದುಗೊಳಿಸಿತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...