ಎಲ್ಲಾ ಅನಿಷ್ಟಕ್ಕೂ ವಲಸೆ ಕಾರ್ಮಿಕರೇ ಕಾರಣರೆಂಬಂತೆ..

Source: sonews | By Staff Correspondent | Published on 24th October 2018, 10:37 PM | National News | Don't Miss |

ಭಾರತದಲ್ಲಿ ವಲಸೆ ಕಾರ್ಮಿಕರು ಅತ್ಯಂತ ಅಗ್ಗದ ಕೂಲಿಗೆ ದೊರೆಯುತ್ತಾರಲ್ಲದೆ ಎಲ್ಲಾ ಬಗೆಯ ಸಾಮಾಜಿಕ-ಆರ್ಥಿಕ ಅನಿಷ್ಟಗಳಿಗೂ ಕಾರಣರೆಂಬ ದೋಷಾರೋಪಕ್ಕೂ ಬಲಿಯಾಗುತ್ತಾರೆ.

ಭಾರತದ ಬಹುಪಾಲು ನಗರಗಳು ಬಹಳ ಕಾಲದಿಂದ  ಹೊರಗಿನವರನ್ನು ಆಧರಿಸಿ ಬದುಕುತ್ತಿರುವ ಇಬ್ಬಂದಿತನವನ್ನು ಎದುರಿಸುತ್ತಲೇ ಬದುಕುತ್ತಿವೆ. ಹೊರಗಿಂದ ಬಂದ ಬಹಳಷ್ಟು ಜನ ಅರೆಬರೆ ಕಸಬುದಾರಿಕೆ ಬಲ್ಲ ಅಥವಾ ಯಾವ ಬಗೆಯ ಕೌಶಲ್ಯವೂ ಗೊತ್ತಿಲ್ಲದ ಅಕುಶಲಿ ಬಡ ವಲಸೆ ಕಾರ್ಮಿಕರೇ ಆಗಿದ್ದು ನಗರದ ಹಲವು ಬಗೆಯ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಆಯಾ ಪ್ರದೇಶಗಳ ರಾಜಕಾರಣಿಗಳು ತಮ್ಮ ಪ್ರದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗಕ್ಕೆ ಮತ್ತು ಹೆಚ್ಚುತ್ತಿರುವ ಅಪರಾಧಗಳಿಗೆ ಅವರನ್ನು ದೂರುತ್ತಾರೆ. ಸ್ಥಳೀಯರು ತಮ್ಮ ಪ್ರದೇಶದಲ್ಲಿ ಕುಸಿಯುತ್ತಿರುವ ನಾಗರಿಕ ಸೌಲಭ್ಯಗಳಿಗೆ ಅವರೇ ಕಾರಣರೆಂದು ಕಿರಿಕಿರಿ ವ್ಯಕ್ತಪಡಿಸುತ್ತಾರೆ. ಪ್ರಾದೇಶಿಕ ದುರಭಿಮಾನಿಗಳು ವಲಸೆಕೋರರು ಸ್ಥಳೀಯರೊಡನೆ ಸಾಂಸ್ಕೃತಿಕವಾಗಿ ಬೆರೆಯುತ್ತಿಲ್ಲವೆಂದು ಕೂಗಾಡುತ್ತಾರೆ. ಮತ್ತು ವ್ಯವಹಾರೋದ್ಯಮ ವರ್ಗವು ಅವರನ್ನು ಅಗ್ಗದ ಕೂಲಿ ಮತ್ತು ಸೇವೆಗಳಿಗೆ ಬಳಸಿಕೊಳ್ಳುತ್ತಾರೆ. ನಗರದ ಮಧ್ಯಮವರ್ಗಗಳ ಮನೆಗೆಲಸಗಳನ್ನು ಮಾಡುವವರೂ ಇವರೇ ಆಗಿರುತ್ತಾರೆ. ಕಳೆದ ಕೆಲವು ವಾರಗಳಿಂದ ಗುಜರಾತಿಗೆ ವಲಸೆ ಹೋಗಿದ್ದ  ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳ ಮೂಲದ ಕಾರ್ಮಿಕರು ಗುಂಪು ದಾಳಿಗೆ ತುತ್ತಾಗುತ್ತಿದ್ದಾರೆ. ಮತ್ತು ಭಯಭೀತರಾಗಿರುವ ಅವರು ಗುಜರಾತಿನಿಂದ ಓಡಿಹೋಗುತ್ತಿದ್ದಾರೆ. ದಾಳಿಗೆ ಗುರಿಯಾದ ನಂತರದಲ್ಲಷ್ಟೇ ಅವರಿಗೆ ಸುರಕ್ಷತೆಯ ಭರವಸೆಯನ್ನು ನೀಡಲಾಯಿತು ಮತ್ತು ರಾಜ್ಯಬಿಟ್ಟು ಹೋಗಬಾರದೆಂದು ಮತ್ತು ಹೋದವರು ವಾಪಸ್ ಬರಬೇಕೆಂದೂ ಮನವಿ ಮಾಡಲಾಯಿತು. ವಲಸೆ ಕಾರ್ಮಿಕರ ಮೇಲೆ ಮಾಡಲಾಗುತ್ತಿರುವ ದಾಳಿಗಳಲ್ಲಿ ಇದು ಇತ್ತೀಚಿನ ಸೇರ್ಪಡೆಯಷ್ಟೆ ಆಗಿದ್ದು ಘಟನಾವಳಿಗಳು ದೇಶದ ಎಲ್ಲಾ ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಬಡ ವಲಸೆ ಕಾರ್ಮಿಕರು ಆನುಭವಿಸುತ್ತಿರುವ ಬವಣೆಯನ್ನು ಕಟ್ಟಿಕೊಡುತ್ತವೆ.

ಬಿಹಾರ ಮೂಲದ ವಲಸೆ ಕಾರ್ಮಿಕನೊಬ್ಬ ೨೦೧೮ರ ಸೆಪ್ಟೆಂಬರ್ ೨೮ರಂದು ಒಂದು ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂಬ ಆರೋಪವನ್ನು ಸ್ಥಳೀಯರು ಮಾಡಿದರು. ನಂತರದಲ್ಲೇ ಗುಜರಾತಿನಲ್ಲಿ ಉತ್ತರ ಭಾರತದಿಂದ ಬಂದ ವಲಸೆ ಕಾರ್ಮಿಕರ ಮೇಲೆ ಸರಣಿ ದಾಳಿಗಳು ಪ್ರಾರಂಭವಾದವು. ಇದಕ್ಕೆ ಕಾಂಗ್ರೆಸ್ ಮತ್ತು ಕ್ಷತ್ರಿಯ ಠಾಕೂರ್ ಸೇನಾದ ಅಲ್ಪೇಶ್ ಠಾಕೂರ್ ಅವರೇ ಕಾರಣರೆಂದು ಆಡಳಿತರೂಢ ಬಿಜೆಪಿ ಸರ್ಕಾರ ಕೂಡಲೇ ಆರೋಪಿಸಿತು. ದೌರ್ಜನ್ಯಕ್ಕೆ ಬಲಿಯಾದ ಮಗು ಠಾಕೂರ್ ಕುಟುಂಬದ್ದಾಗಿತ್ತು. ಉತ್ತರ ಭಾರತದ ಭಯ್ಯಾಗಳ ಮೇಲೆ ಪ್ರತೀಕಾರವನ್ನು ತೀರಿಸಿಕೊಳ್ಳುವುದು ಮತ್ತು ತಮ್ಮ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದ್ದಾರೆಂಬ ಆರೋಪ ಹೊರಿಸುವುದು ತುಂಬಾ ಸುಲಭವೇ ಆಗಿತ್ತು. ಹಾಗೆ ನೋಡಿದರೆ ಮುಂಬೈ ನಗರವು ದೇಶದ ವಿವಿಧ ಭಾಗಗಳಿಂದ ಬರುವ ವಿವಿಧ ಬಗೆಯ ಪರಿಣಿತಿ ಹಾಗೂ ಶೈಕ್ಷಣಿಕ ಅರ್ಹತೆಯುಳ್ಳ ವಲಸಿಗರಿಂದ ಹಲವು ಬಗೆಯ ಅನುಕೂಲತೆಗಳನ್ನು ಪಡೆದುಕೊಂಡಿದೆ. ಆದರೂ ನಗರದ ವಲಸೆ ಕಾರ್ಮಿಕರು ಪ್ರಾದೇಶಿಕ ಪಕ್ಷಗಳು ಉದ್ರೇಕಿಸುವ ದಾಳಿಗಳಿಗೆ ಪದೇಪದೇ ಬಲಿಯಾಗುತ್ತಲೇ ಬಂದಿದ್ದಾರೆ. ವಲಸೆ ಕಾರ್ಮಿಕರ ಶ್ರಮ ಮತ್ತು ಸೇವೆಗಳಿಂದಲೇ ಮುಂಬೈಗೆ ವಾಣಿಜ್ಯ ರಾಜಧಾನಿಯೆಂಬ ಹೆಸರು ಬಂದಿದೆ ಎಂಬುದು ಎಲ್ಲರೂ ಒಪ್ಪಿಕೊಂಡಿರುವ ಸತ್ಯವೇ ಆಗಿದೆ. ಅಲ್ಲಿನ ಮಧ್ಯಮವರ್ಗವೂ ತನ್ನ ಮನೆಗೆಲಸಗಳಿಗೆ ವಲಸೆ ಕಾರ್ಮಿಕರನ್ನೇ ಅವಲಂಬಿಸಿದೆ. ಅದರೂ ಇವ್ಯಾವುದೂ ಸಹ ತಮ್ಮ ನಗರಿಯ ಸಂಸ್ಕೃತಿ ಮತ್ತು ಭಾಷೆಗಳ ಸಾಂಪ್ರದಾಯಿಕ ಹಿರಿಮೆಗಳಿಗೆ ಹೊರಗಿನವರಿಂದ ಧಕ್ಕೆಯಾಗಿದೆ ಎಂದು ಸ್ಥಳೀಯ ಗುಂಪುಗಳು ಮತ್ತು ಪ್ರಾದೇಶಿಕ ಪಕ್ಷಗಳು ಹೊರಿಸುವ ಆರೋಪವನ್ನು ಮಾತ್ರ ತಪ್ಪಿಸಿಲ್ಲ.

ಗುಜರಾತಿನಲ್ಲಿ ಉತ್ತರ ಭಾರತದ ಕಾರ್ಮಿಕರು ರಾಜ್ಯವನ್ನು ತೊರೆದುಹೋಗುವ ಪ್ರಕ್ರಿಯೆ ನಿಲ್ಲದೆ ಮುಂದುವರೆಯುತ್ತಿದ್ದನ್ನು ಕಂಡು ಕಂಗೆಟ್ಟ ಅಲ್ಲಿನ ಉದ್ಯಮಗಳ ಗಣ್ಯರು ಕಾರ್ಮಿಕರು ಗುಜರಾತನ್ನು ಬಿಟ್ಟು ಹೋಗಬಾರದೆಂದು ಮನವಿ ಮಾಡಲಾರಂಭಿಸಿದರು. ಸತತ ಮೂರುದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಿಕೊಂಡಿದ್ದ ಅಥವಾ ಒಂದಲ್ಲ ಒಂದು ಅಡಚಣೆ ಅನುಭವಿಸಿದ್ದ ಎಲಾ ಕೈಗಾರಿಕಾ ವಸಾಹತುಗಳಿಗೆ ಮತ್ತು ಕಾರ್ಖಾನೆಗಳಿಗೆ ಪೊಲೀಸರನ್ನೂ ಒಳಗೊಂಡಂತೆ ಹಲವು ಬಗೆಯ ಭದ್ರತೆಗಳನ್ನು ನೀಡಲಾಯಿತು. ಗುಜರಾತಿನ ವಾಣಿಜ್ಯ ಮತ್ತು ಉದ್ದಿಮೆಗಳ ಸಂಘವು ಕೂಡಲೇ ಗುಜರಾತಿನ ಮುಖ್ಯಮಂತ್ರಿಗಳು ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿತು. ಇದಕ್ಕೆ  ಗುಜರಾತಿನ ವ್ಯವಹಾರೋದ್ಯಮಗಳು ವಲಸಿಗರ ಶ್ರಮವನ್ನು ಅವಲಂಬಿಸಿರುವ ಅನಿವಾರ್ಯತೆಯ ಜೊತೆಜೊತೆಗೆ ಸದ್ಯದಲ್ಲೇ ಅಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನವೂ ತುರ್ತನ್ನು ನಿರ್ಮಿಸಿದೆ. ೨೦೧೯ರ ಜನವರಿ ನಡೆಯಲಿರುವ ಸಮ್ಮೇಳನ ಮತ್ತು ಹಾಲೀ ಚಾಲ್ತಿಯಲ್ಲಿರುವ ಸಾಲು ಹಬ್ಬಗಳ ಋತುವಿನಲ್ಲಿ ರಾಜ್ಯದ ಜವಳಿ, ವಜ್ರ, ಔಷಧಿ ಮತ್ತು ಪ್ಯಾಕೇಜಿಂಗ್  ಹಾಗೂ ಇನ್ನಿತರ ಉದ್ದಿಮೆಗಳಿಗೆ ಯಾವುದೇ ಅಡ್ಡಿ-ಅಡಚಣೆಯುಂಟಾಗುವುದು ಗುಜರಾತ್ ರಾಜ್ಯ ಸರ್ಕಾರಕ್ಕೆ ಬೇಕಿರಲಿಲ್ಲ. ಇತರ ರಾಜ್ಯಗಳಿಗಿಂತ ಗುಜರಾತ್ ರಾಜ್ಯದ ಕಾರ್ಮಿಕ ಸಂಬಂಧಗಳ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿರಬಹುದು. ಇಲ್ಲಿನ ಕಾರ್ಮಿಕರಿಗೆ ಉದ್ದಿಮೆದಾರರು ಒಂದು ಬಗೆಯ ಹಿರೀಕರ ರಕ್ಷಣೆಯನ್ನು ಒದಗಿಸುತ್ತಾರೆ.

ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಇತರ ನಗರ ಹಾಗೂ ಪಟ್ಟಣಗಳಲ್ಲಾಗುವಂತೆ ಗುಜರಾತಿನಲ್ಲಿಯೂ ನಿಧಾನವಾಗಿ ಬಿಕ್ಕಟ್ಟುಶಮನವಾಗಬಹುದು. ಆದರೆ ಅದು ವಲಸೆ ಕಾರ್ಮಿಕರ ಜೀವನದ ಮತ್ತು ಕೆಲಸದ ಸ್ಥಿಗತಿಗಳನ್ನೇನೂ ಉತ್ತಮಪಡಿಸುವುದಿಲ್ಲ. ಸ್ಥಳೀಯ ಕಾರ್ಮಿಕರ ಸ್ಥಿಗತಿಗಳಿಗಿಂತ ವಲಸೆ ಕಾರ್ಮಿಕರ ಪರಿಸ್ಥಿತಿಗಳು ಅತ್ಯಂತ ಶೋಚನೀಯವಾಗಿರುತ್ತವೆ. ಅತಂತ್ರವಾಗಿರುತ್ತವೆ. ಸಾರ್ವಜನಿಕ ಸೌಲಭ್ಯಗಳನ್ನು ದಕ್ಕಿಸಿಕೊಳ್ಳುವುದರಲ್ಲಾಗಲೀ, ತಮ್ಮ ಕೂಲಿ ಮತ್ತು ಕೆಲಸದ ಸ್ಥಿಗತಿಗಳ ಬಗ್ಗೆ ಮಾಲೀಕರ ಜೊತೆ ಚೌಕಾಶಿ ಮಾಡುವ ಸಾಮರ್ಥ್ಯದಲ್ಲಾಗಲೀ ವಲಸೆ ಕಾರ್ಮಿಕರ ಪರಿಸ್ಥಿತಿ ಸ್ಥಳೀಯರ ಪರಿಸ್ಥಿತಿಗಳಿಗಿಂತ ಅತಂತ್ರವಾಗಿರುತ್ತದೆ. ಸ್ಥಳೀಯರು ಅವರನ್ನು ಹೊರಗಿನವರೆಂದು ನೋಡುತ್ತಾರೆ. ಹಲವಾರು ಕಾರಣಗಳಿಂದಾಗಿ ಸ್ಥಾಪಿತ ಕಾರ್ಮಿಕ ಸಂಘಟನೆಗಳಿಂದಲೂ ಅವರಿಗೆ ಹೆಚ್ಚಿನ ಅನುಕೂಲತೆಗಳು ದಕ್ಕುವುದಿಲ್ಲ. ಕಾರ್ಮಿಕ ಕಾರ್ಯಕರ್ತರು ತೋರಿಸಿಕೊಟ್ಟಿರುವಂತೆ ಅವರಿಗೆ ಸ್ಥಳೀಯ  ಸಂಸ್ಥೆಗಳಲ್ಲಾಗಲೀ ಅಥವಾ ಸೇವೆಗಳಲ್ಲಿ ಅಸ್ಥಿತ್ವವಾಗಲೀ ಪ್ರಾತಿನಿಧ್ಯವಾಗಲೀ ಇರುವುದಿಲ್ಲ. ವಲಸೆ ಕಾರ್ಮಿಕರೂ ಸಹ ತಮ್ಮ ರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಪ್ರಾದೇಶಿಕ ಗುರುತುಳ್ಳ ಸಂಘಸಂಸ್ಥೆಗಳಲ್ಲಿ ಸೇರಬಯಸುತ್ತಾರೆ.

ಕೇರಳದ ಎಡಪ್ರಜಾಸತ್ತಾತ್ಮಕ ರಂಗದ ಸರ್ಕಾರವು ವಲಸೆ ಕಾರ್ಮಿಕರ ಹಿತರಕ್ಷಣೆಯನ್ನು ಕಾಯುವ ಸರಣಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯನ್ನು ಹಾಕಿಕೊಟ್ಟಿದೆ. ಕೇರಳದ  ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ವಲಸೆ ಕಾರ್ಮಿಕರಿದ್ದು ಅವರ ಸಂಕ್ಷೇಮವನ್ನು ನೋಡಿಕೊಳ್ಳಲು ಒಂದು ಸಾವಿರ ಕೊಟೀ ಮೀಸಲು ನಿಧಿಯೊಂದಿಗೆ ಒಂದು ನಿಗಮವನ್ನು ಸ್ಥಾಪಿಸಲಾಗಿದೆ. ಸರ್ಕಾರವು ತನ್ನ ರಾಜ್ಯದಲ್ಲಿರುವ ವಲಸೆ ಕಾರ್ಮಿಕರ ಪರಿಸ್ಥಿತಿಗಳ ಬಗ್ಗೆ ಒಂದು ಸರ್ವೆಯನ್ನು ನಡೆಸುವುದಾಗಿಯೂ ಆರೋಗ್ಯ ವಿಮೆ ಮತ್ತು ಕಾನೂನು ಸೇವೆಯನ್ನು ಪಡೆದುಕೊಳ್ಳಲು ಸಹಕಾರವನ್ನೂ ಒದಗಿಸುವುದಾಗಿಯೂ ಘೋಷಿಸಿದೆ.

ದೇಶದ ರಾಜಕೀಯ ವರ್ಗ ಮತ್ತು ನಾಗರಿಕ ಸಮಾಜವು ವಲಸೆ ಕಾರ್ಮಿಕರ ಬಗ್ಗೆ ತನ್ನ ಸಿನಿಕ ಮತ್ತು ಬಳಸಿಬಿಸಾಡುವ ದೃಷ್ಟಿಕೋನವನ್ನು ಬಿಡಬೇಕು. ಕೈಗಾರಿಕೆಗಳು ಮತ್ತು ಸೇವಾ ವಲಯಗಳು ವಲಸೆ ಕಾರ್ಮಿಕರ ಶ್ರಮದ ಮೇಲೆಯೇ ನಡೆಯುತ್ತಿದ್ದರೂ, ದೊಂಬಿ ಮತ್ತು ಗಲಭೆಗಳು ನಡೆಯುವ ಸಂದರ್ಭದಲ್ಲಿ, ಅವು ಬಲಾಢ್ಯರ ಹಿತಾಸಕ್ತಿಗಳಿಗೆ ಪೂರಕವಾಗಿದ್ದಲ್ಲಿ, ವಲಸೆ ಕಾರ್ಮಿಕರನ್ನು ರಕ್ಷಿಸಲು ಯಾರೂ ಮುಂದಾಗುವುದಿಲ್ಲ. ನಾಗರಿಕರಿಗೆ ದೇಶದ ಯಾವುದೇ ಭಾಗಗಳಿಗೆ ವಲಸೆ ಹೋಗುವ ಮೂಲಭೂತ ಹಕ್ಕುಗಳಿದ್ದು ಅವರ ಸಾಂವಿಧಾನಿಕ ಹಕ್ಕುಗಳನ್ನು ಮತ್ತು ಕರ್ತವ್ಯಗಳನ್ನು ಸಮಾನವಾಗಿ ರಕ್ಷಿಸಬೇಕಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಲಸೆ ಕಾರ್ಮಿಕರನ್ನು ತಮಗೆ ಅಗತ್ಯವಿರುವ ಶ್ರಮ ಮತ್ತು ಸೇವೆಯನ್ನು ಕೊಡುವವರನ್ನಾಗಿ ಮಾತ್ರ ಪರಿಗಣಿಸಿ ಬೇಕೆಂದಾಗ ಬಳಸುವ ಮತ್ತು ಬೇಡವೆಂದಾಗ ಬಿಸಾಡುವ ಧೋರಣೆಯನ್ನು ಬಿಡಬೇಕು. ವಲಸೆ ಕಾರ್ಮಿಕರು ವರ್ಷದ ಕೆಲ ಅವಧಿಯಲ್ಲಿ ಮಾತ್ರ ಕೆಲಸ ಮಾಡುವವರಾಗಿದ್ದರೂ, ತಾತ್ಕಾಲಿಕ ಅವಧಿಯವ್ರಾಗಿದ್ದರೂ ಅಥವಾ ದೀರ್ಘಕಾಲದ ಸೇವೆಯಲ್ಲಿದ್ದರೂ ಶೋಷಣೆ ಮತ್ತು ಅಭದ್ರತೆಗೆ ತುತ್ತಾಗುತ್ತಾರೆಂಬುದನ್ನು ಮರಯಬಾರದು. ದೇಶದ ಸಾರ್ವಜನಿಕ ನೀತಿಗಳು ಮತ್ತು ಮಧ್ಯಪ್ರವೇಶಗಳು ಮುಕ್ತವಾಗಿ ದೇಶದೆಲ್ಲೆಡೆ ನೆಲೆಸುವ ಅವರ ಹಕ್ಕನ್ನು ರಕ್ಷಿಸುವ ಜೊತೆಜೊತೆಗೆ ಮೇಲಿನ ಅಂಶದ ಬಗ್ಗೆಯೂ ಹೆಚ್ಚಬೇಕಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...