ಬಾಲ್ಯ ವಿವಾಹ ನಡೆದರೆ ಸ್ಥಳೀಯ ಅಧಿಕಾರಿಗಳ ವಿರುದ್ಧವೂ ಕ್ರಮ: ಡಿಸಿ

Source: sonews | By Staff Correspondent | Published on 26th June 2019, 6:53 PM | Coastal News | Don't Miss |

ಕಾರವಾರ: ಬಾಲ್ಯ ವಿವಾಹ ತಡೆಗಟ್ಟಲು ವಿಫಲವಾದ ಸ್ಥಳೀಯ ಸಮಿತಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಎಚ್ಚರಿಸಿದ್ದಾರೆ.
    
ಬಾಲ್ಯವಿವಾಹ ತಡೆ ಕಾಯ್ದೆ, ಕೌಟುಂಬಿಕ ಹಿಂಸೆ ಮಹಿಳೆಯರ ಸಂರಕ್ಷಣಾ ಅಧಿನಿಯಮ, ಲಿಂಗತ್ವ ಅಲ್ಪಸಂಖ್ಯಾತರ ಜೀವನ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸೇರಿದಂತೆ ವಿವಿಧ 14 ಸಮಿತಿಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    
ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಆದಾಗ್ಯೂ ಪ್ರಕರಣಗಳ ನಡೆಯುವುದಾದರೆ ಸ್ಥಳೀಯ ಹಂತದ ಅಧಿಕಾರಿಗಳ ಕರ್ತವ್ಯಲೋಪ ಎಂದು ಪರಿಗಣಿಸಿ ಅವರ ವಿರುದ್ಧವೂ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
    
ಸ್ಥಳೀಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಶಾಲಾ ಶಿಕ್ಷಕರನ್ನೊಳಗೊಂಡು ಸ್ಥಳೀಯ ಹಂತದಲ್ಲಿ ಬಾಲ್ಯ ವಿವಾಹ ತಡೆ ಸಮಿತಿ ರಚಿಸಲಾಗಿದೆ. ಯಾವುದೇ ವಿವಾಹ ನಡೆಯುವುದಾದರೆ ಕನಿಷ್ಠ ಮಾಹಿತಿ ಇವರಿಗೆ ಇರುತ್ತದೆ. ವಾರಗಟ್ಟಲೆ ಕಾಲಾವಕಾಶ ಇಂತಹ ಮದುವೆಗಳಿಗೆ ಇರುತ್ತದೆ. ಮಾಹಿತಿ ತಿಳಿದ ತಕ್ಷಣವೇ ಪ್ರಾಥಮಿಕ ಹಂತದಲ್ಲಿಯೇ ಮದುವೆ ಪ್ರಕ್ರಿಯೆ ನಿಲ್ಲಿಸಲು ಅವಕಾಶವಿರುತ್ತದೆ ಎಂದರು.
    
ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸ್ವಜಾತಿ, ಸ್ವಪ್ರೇಮ ಅಥವಾ ಯಾವುದೇ ಪ್ರತಿರೋಧಗಳಿಗೆ ಅವಕಾಶ ನೀಡಬಾರದು ಎಂದ ಅವರು, ಶಾಲಾ ಹಂತದಲ್ಲಿ ನಿರ್ದಿಷ್ಟವಾಗಿ ಒಬ್ಬ ಬಾಲಕಿ ಗೈರಾಗುತ್ತಿರುವುದು ಕಂಡುಬಂದರೆ ಮುಖ್ಯ ಶಿಕ್ಷಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದೂ ಅವರು ತಿಳಿಸಿದರು.
    
ಬಾಲ್ಯ ವಿವಾಹಗಳು ನಿರ್ದಿಷ್ಟ ಸಮುದಾಯಗಳಲ್ಲಿ ಆಗುತ್ತಿರುವುದು ಕಂಡುಬಂದಲ್ಲಿ ಆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅಲ್ಲದೆ ಅಂತಹ ಪ್ರಕರಣಗಳಲ್ಲಿ ನಿರ್ಧಾಕ್ಷಿಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಸ್ಥಳೀಯ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಾಲ್ಯ ವಿವಾಹ ತಡೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿ ದಾಖಲೀಕರಿಸುವಂತೆ ಜಿಲ್ಲಾಧಿಕಾರಿಯವರು ತಿಳಿಸಿದರು.
    
ಮಹಿಳಾ ದೌರ್ಜನ್ಯ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಮನ್ವಯ ಮಾಡಲು ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಯಾವುದೇ ಮಹಿಳಾ ದೌರ್ಜನ್ಯಗಳು ನಡೆದು ಗಾಯಾಳು ಆಸ್ಪತ್ರೆಗೆ ಬಂದಾಗ ಅವರಿಗೆ ನಿಯಮಾನುಸಾರ ಚಿಕಿತ್ಸೆ ಹಾಗೂ ಸಂರಕ್ಷಣೆ ಅಗತ್ಯವಿರುತ್ತದೆ. ಪ್ರಕರಣದ ಗಾಯಾಳುವೇ ಪರದಾಡುವಂತಾಗಬಾರದು ಎಂದರು.
    
ಪೋಕ್ಸೋ ಪ್ರಕರಣದಲ್ಲಿ ಮಹಿಳಾ ವೈದ್ಯರೇ ಚಿಕಿತ್ಸೆ ನೀಡಬೇಕೆಂದು ನಿಯಮದಲ್ಲಿದೆ. ಇದು ಸೂಕ್ಷ್ಮ ವಿಚಾರವಾಗಿರುವುದರಿಂದ ಆ ಸಂದರ್ಭಕ್ಕೆ ಮಹಿಳಾ ವೈದ್ಯರನ್ನು ವ್ಯವಸ್ಥೆ ಮಾಡಬೇಕು ಹಾಗೂ ಗಾಯಾಳುವಿಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವೈದ್ಯಾಧಿಕಾರಿಗಳು ದೃಢೀಕರಣ ನೀಡಬೇಕು ಎಂದು ಅವರು ಅರೋಗ್ಯ ಇಲಾಖೆಗೆ ಸೂಚಿಸಿದರು.
    
ದಮನಿತ ಮಹಿಳೆಯರ ಸಬಲೀಕರಣ ಮತ್ತು ಪುನರ್ವಸತಿ ಯೋಜನೆಯಡಿ ಸದ್ಯ ಅನುದಾನ ಲಭ್ಯವಿದ್ದು ಚಿಕ್ಕಿ ಮಾಡುವ ಯಂತ್ರ ಖರೀದಿಸಲಾಗುವುದು. ಬಾಕಿ ಅನುದಾನವನ್ನು ಅವರ ಅಭಿವೃದ್ಧಿಗೆ ಪೂರಕವಾಗಿ ವ್ಯಯಿಸಲಾಗುವುದು ಎಂದು ಅವರು ತಿಳಿಸಿದರು.
    
ಜಿಲ್ಲೆಯಲ್ಲಿರುವ ವಿಧವೆಯರ ಸಮೀಕ್ಷೆ ನಡೆಸಿ ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು, ವಿಧವೆಯರಿಗೆ ವಿಧವಾ ವೇತನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಈ ಸಮೀಕ್ಷೆಯ ಅಂಕಿಅಂಶಗಳು ನೆರವಾಗಲಿವೆ ಎಂದರು.
    
ಅಲ್ಲದೆ, ಲಿಂಗತ್ವ ಅಲ್ಪಸಂಖ್ಯಾತ ಪಟ್ಟಿಯನ್ನು ಪಡೆದ ಅವರಿಗೆ ನಿವೇಶನ ನೀಡಲು ಕ್ರಮ ವಹಿಸುವಂತೆ ಹಾಗೂ ಮೈತ್ರಿ ಯೋಜನೆಯಲ್ಲಿ ಅವರಿಗೆ ಪಿಂಚಣಿ ಸೌಲಭ್ಯ ವಿಸ್ತರಿಸುವಂತೆಯೂ ಅವರು ಸೂಚಿಸಿದರು.
    
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಟಿ.ಗೋವಿಂದಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಗೋಪಾಲ್ ಬ್ಯಾಕೋಡ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ರಾಜೇಂದ್ರ ಬೇಕಲ್ ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
    
    
    
 

Read These Next