ನಾಮಫಲಕಗಳಲ್ಲಿ ಶೇ.೬೦% ಕನ್ನಡ ಕಡ್ಡಾಯ; ಹೈಕೋರ್ಟ್‌ ಮಧ್ಯಂತರ ಆದೇಶ

Source: SOnews | By Staff Correspondent | Published on 18th March 2024, 10:13 PM | State News |

ಬೆಂಗಳೂರು: ಕನ್ನಡ ನಾಮಫಲಕಗಳಲ್ಲಿ ಶೇ 60ರಷ್ಟು ಕಡ್ಡಾಯ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳು, ಅಂಗಡಿ-ಮುಂಗಟ್ಟುಗಳನ್ನು ಮುಚ್ಚಬಾರದು ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ಕನ್ನಡ ಕಡ್ಡಾಯಗೊಳಿಸುವ ಕಾಯ್ದೆ ಹಾಗೂ ಸುತ್ತೋಲೆಯನ್ನು ಪ್ರಶ್ನಿಸಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘ ಸೇರಿದಂತೆ ಒಟ್ಟು ಎಂಟು ಕಂಪನಿಗಳು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.    ಅರ್ಜಿದಾರರು, ಸರ್ಕಾರದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ಪೀಠ, ಸುತ್ತೋಲೆಯ ಅನುಸಾರ ವಾಣಿಜ್ಯ ಸಂಸ್ಥೆಗಳ ವಿರುದ್ಧ ಸದ್ಯಕ್ಕೆ ಬಲವಂತದ ಕ್ರಮ ಜರುಗಿಸಬಾರದು. ಅಂತೆಯೇ, ಕಾಯ್ದೆ ಯಾವ ದಿನದಿಂದ ಜಾರಿಗೆ ಬಂದಿದೆ? ಯಾವ ದಿನ ಸರ್ಕಾರದ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಅಧಿಸೂಚನೆಗೊಂಡು ಪ್ರಕಟವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಕುರಿತ ದಾಖಲೆಗಳನ್ನು ಒದಗಿಸಿ ಎಂದು ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರಿಗೆ ಸೂಚಿಸಿ ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿದೆ.  ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ’ಕರ್ನಾಟಕದಲ್ಲಿ ವ್ಯಾಪಾರ ಮಾಡುವಾಗ ಕನ್ನಡ ನಾಮಫಲಕವಿರಬೇಕು. ಶೇ 60ರಷ್ಟು ಕನ್ನಡ ನಾಮಫಲಕ ಹಾಕಿದರೆ ಸಮಸ್ಯೆ ಏನು? ಎಂದು ವಾಣಿಜ್ಯ ಮಳಿಗೆಗಳ ಸಂಘದ ಪರ ವಕೀಲರನ್ನು ಮೌಖಿಕವಾಗಿ ಪ್ರಶ್ನಿಸಿದರು.ಇದಕ್ಕೆ ಅರ್ಜಿದಾರರ ಪರ ವಕೀಲರು, ಎಲ್ಲಾ ಬಗೆಯ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯಗೊಳಿಸುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-2022ರ ಜಾರಿ ಸಮರ್ಪಕವಾಗಿಲ್ಲ. ಜಾರಿ ದಿನಾಂಕದ ಬಗ್ಗೆ ಗೆಜೆಟ್‌ ಅಧಿಸೂಚನೆಯನ್ನೇ ಹೊರಡಿಸಿಲ್ಲ. ಅಂತೆಯೇ, ಡಿಜಿಟಲ್‌ ನಾಮಫಲಕಗಳನ್ನು ಬದಲಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.    

ಸರ್ಕಾರ ಮತ್ತು ಬಿಬಿಎಂಪಿ ಸ್ವಲ್ಪ ಸಮಯಾವಕಾಶ ನೀಡಿದೆಯಾದರೂ ಅದು ಸಾಕಾಗುತ್ತಿಲ್ಲ. ಒಂದೇ ಬಾರಿಗೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಫಲಕ ಬದಲಾವಣೆಗೆ ಮುಂದಾಗಿರುವುದರಿಂದ ನಾಮಫಲಕಗಳು ಸಕಾಲದಲ್ಲಿ ಲಭ್ಯವಾಗುತ್ತಿಲ್ಲ. ಆದರೆ, ಸರ್ಕಾರ ಮತ್ತು ಬಿಬಿಎಂಪಿ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಇಲ್ಲದಿದ್ದರೆ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಲು ಮುಂದಾಗುತ್ತಿವೆ. ವ್ಯಾಪಾರಿಗಳ ವಿರುದ್ಧ ಇದೊಂದು ಉಗ್ರ ಕ್ರಮವಾಗಿದೆ. ಇದರಿಂದ ವಾಣಿಜ್ಯ ಸಂಸ್ಥೆಗಳ ವ್ಯಾಪಾರ, ವಹಿವಾಟಿಗೆ ತೊಂದರೆಯಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...