2020ರಲ್ಲಿ 5.6 ಕೋಟಿ ಭಾರತೀಯರು ಬಡತನಕ್ಕೆ ಸೇರ್ಪಡೆ; ವಿಶ್ವ ಬ್ಯಾಂಕ್

Source: Vb | By I.G. Bhatkali | Published on 7th October 2022, 5:31 PM | National News |

ಹೊಸದಿಲ್ಲಿ: 2020ರ ಸಾಂಕ್ರಾಮಿಕದ ವರ್ಷದಲ್ಲಿ ಒಟ್ಟು 5.6 ಕೋಟಿ ಭಾರತೀಯರು ಬಡತನಕ್ಕೆ ಜಾರಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ಕೌಟುಂಬಿಕ ಸಮೀಕ್ಷೆಯ ದತ್ತಾಂಶಗಳನ್ನು ಉಲ್ಲೇಖಿಸಿ ವಿಶ್ವಬ್ಯಾಂಕ್ ಬುಧವಾರ ವರದಿಯೊಂದರಲ್ಲಿ ತಿಳಿಸಿದೆ.

ಸಿಎಂಐಇ ಸಮೀಕ್ಷೆಯಲ್ಲಿ ಕಂಡು ಬಂದಿರುವ ಅಂಶಗಳು ಇನ್ನಷ್ಟೇ ಅಂತಿಮಗೊಳ್ಳಬೇಕಿದ್ದರೂ “ಪಾವರ್ಟಿ  ಆ್ಯಂಡ್ ಶೇರ್ ಪ್ರಾಸ್ಟರಿಟಿ 2022 ಶೀರ್ಷಿಕೆಯ ತನ್ನ ವರದಿಯಲ್ಲಿ ವಿಶ್ವಬ್ಯಾಂಕ್ ಮಾಡಿರುವ ಜಾಗತಿಕ ಬಡತನದ ಅಂದಾಜುಗಳಿಗೆ ಅವುಗಳನ್ನು ಬಳಸಿಕೊಳ್ಳಲಾಗಿದೆ.

2011ರಿಂದ ಭಾರತವು ಅಧಿಕೃತ ಅಂಕಿ ಅಂಶಗಳನ್ನು ಪ್ರಕಟಿಸದ ಕಾರಣ ಜಾಗತಿಕ ಮತ್ತು ಪ್ರಾದೇಶಿಕ ಬಡತನ ಅಂದಾಜುಗಳಲ್ಲಿಯ ಅಂತರವನ್ನು ತುಂಬಿಕೊಳ್ಳಲು ಸಿಎಂಐಇ ಸಮೀಕ್ಷೆಯ ಫಲಿತಾಂಶಗಳನ್ನು ಬಳಸಿ ಕೊಳ್ಳಲಾಗಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.

ಆದಾಗ್ಯೂ ಭಾರತದಲ್ಲಿ ಬಡತನದ ಕುರಿತು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯಲ್ಲಿ ಮಂಡಿಸಲಾಗಿದ್ದ ಅಂದಾಜುಗಳಿಗಿಂತ ತನ ಅಂದಾಜುಗಳು ಗಮನಾರ್ಹವಾಗಿ ಹೆಚ್ಚಿವೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. 2020ರಲ್ಲಿ 2.3 ಕೋ. ಜನರು ಬಡತನದ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಐಎಂಎಫ್‌ನಲ್ಲಿ ಮಂಡಿಸಲಾಗಿದ್ದ ಅಂದಾಜುಗಳು ತಿಳಿಸಿದ್ದವು. ರಾಷ್ಟ್ರೀಯ ಅಂಕಿಅಂಶಗಳನ್ನು ಆಧರಿಸಿದ್ದ ಐಎಂಎಫ್ ಅಂದಾಜುಗಳನ್ನು ಅರ್ಥಶಾಸ್ತ್ರಜ್ಞರಾದ ಸುರ್ಜಿತ್ ಭಲ್ಲಾ, ಕರಣ ಭಾಸಿನ್ ಮತ್ತು ಅರವಿಂದ ವಿರ್ಮಾನಿ ಅವರು ಸಿದ್ಧಪಡಿಸಿದ್ದರು. ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದ ಭಲ್ಲಾ 2018ರಲ್ಲಿ ರಾಜೀನಾಮೆ ಸಲ್ಲಿಸಿದ್ದು, ಪ್ರಸಕ್ತ ಐಎಂಎಫ್‌ನಲ್ಲಿ ಭಾರತಕ್ಕಾಗಿ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಈ ನಡುವೆ ವಿಶ್ವಬ್ಯಾಂಕ್ ವರದಿಯು, ಅಂತಿಮ ಸಂಖ್ಯೆಗಳು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು, ಆದರೆ ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಬಡತನ ನಿವಾರಣೆ ಪ್ರಯತ್ನಕ್ಕೆ ಉಂಟಾದ ಜಾಗತಿಕ ಆಘಾತವು 'ಐತಿಹಾಸಿಕವಾಗಿ ದೊಡ್ಡದಾಗಿದೆ' ಎನ್ನುವುದನ್ನು ಎಲ್ಲ ಸಂಕೇತಗಳು ಸೂಚಿಸಿವೆ ಎಂದು ಬೆಟ್ಟು ಮಾಡಿದೆ.

2019ರಲ್ಲಿ ಶೇ.8.4ರಷ್ಟಿದ್ದ ಜಾಗತಿಕ ಕಡು ಬಡತನ ದರವು ಸಾಂಕ್ರಾಮಿಕದಿಂದಾಗಿ 2020ರಲ್ಲಿ ಶೇ.9.3ಕ್ಕೆ ಏರಿಕೆಯಾಗಿದೆ ಎಂದು ವರದಿಯು ತಿಳಿಸಿದೆ. 2011ರಿಂದ ಭಾರತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಡತನದಲ್ಲಿ ಇಳಿಕೆ ಯಾಗಿದೆ ಎನ್ನುವುದನ್ನೂ ವರದಿಯು ಗಮನಿಸಿದೆ.

2019-20ರಲ್ಲಿ ಶೇ.10ರಷ್ಟು ಭಾರತೀಯ ಜನಸಂಖ್ಯೆಯು 2.15 ಡಾ.(175.50 ರೂ.)ಗಳ ಪರಿಷ್ಕೃತ ಬಡತನ ರೇಖೆಯಡಿ ಇತ್ತು ಎಂದು ತಿಳಿಸಿರುವ ವಿಶ್ವಬ್ಯಾಂಕ್ ವರದಿಯು, ಗ್ರಾಮೀಣ ಪ್ರದೇಶಗಳಲ್ಲಿ ಶೇ.12ರಷ್ಟು ಮತ್ತು ನಗರ ಪ್ರದೇಶಗಳಲ್ಲಿ ಶೇ.6ರಷ್ಟು ಭಾರತೀಯರು ಬಡತನ ರೇಖೆಗಿಂತ ಕೆಳಗಿದ್ದರು ಎಂದಿದೆ. ಅಗತ್ಯವುಳ್ಳವರನ್ನು ತಲುಪುವುದು ಸರಕಾರಕ್ಕೆ ಕಷ್ಟವಾಗಿದ್ದರಿಂದ ಬಡವರ ಸ್ಥಿತಿಯು ಸಾಂಕ್ರಾಮಿಕದಿಂದಾಗಿ ಇನ್ನಷ್ಟು ಹದಗೆಟ್ಟಿದೆ ಎಂದಿರುವ ವಿಶ್ವ ಬ್ಯಾಂಕ್, ಅದೇನೇ ಇದ್ದರೂ ಸಾಂಕ್ರಾಮಿಕದ ಸಂದರ್ಭದಲ್ಲಿ ಸರಕಾರವು ತನ್ನ ಯೋಜನೆಗಳ ಮೂಲಕ ಶೇ.85ರಷ್ಟು ಗ್ರಾಮೀಣ ಮನೆಗಳನ್ನು ಮತ್ತು ಶೇ.69ರಷ್ಟು ನಗರ ಪ್ರದೇಶಗಳನ್ನು ತಲುಪಿತ್ತು ಎಂದು ಹೇಳಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...