ಸೈಂಟ್ ಮೇರೀಸ್ ದ್ವೀಪದ ಫುಡ್‌ಕೋರ್ಟ್ ಮುಚ್ಚಲು ಉಡುಪಿ ಜಿಲ್ಲಾಧಿಕಾರಿ ಆದೇಶ

Source: sonews | By Staff Correspondent | Published on 17th July 2018, 11:38 PM | Coastal News | State News | Don't Miss |

ಉಡುಪಿ: ಮಲ್ಪೆಗೆ ಸಮೀಪದ ಕರಾವಳಿಯ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಒಂದಾಗಿರುವ ಸೈಂಟ್ ಮೇರೀಸ್ ದ್ವೀಪದಲ್ಲಿ ರುವ ಖಾಸಗಿ ರೆಸ್ಟೋರೆಂಟನ್ನು ತಕ್ಷಣವೇ ಬಂದ್ ಮಾಡುವಂತೆ, ಯಾವುದೇ ಮಾರಾಟ ಮಳಿಗೆಗಳನ್ನು ಅಲ್ಲಿ ತೆರೆಯದೇ ಇರುವಂತೆ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ-2011ನ್ನು ಉಲ್ಲಂಘಿಸಿ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ದ್ವೀಪದಲ್ಲಿ ನಡೆಸದೇ ಇರುವಂತೆ ಹಾಗೂ ಪೂರ್ವಾನು ಮತಿಯನ್ನು ಪಡೆಯದೇ ಯಾವುದೇ ಕಾರ್ಯ ಚಟುವಟಿಕೆಗಳನ್ನು ಅಲ್ಲಿ ನಡೆಸದೇ ಇರುವಂತೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಆದುದರಿಂದ ಸೈಂಟ್ ಮೇರೀಸ್ ದ್ವೀಪದಲ್ಲಿ ತಾವು ಆರಂಭಿಸಿರುವ ಫುಡ್ ಕೋರ್ಟ್ ಹಾಗೂ ಇತರೆ ಚಟುವಟಿಕೆಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ, ತಪ್ಪಿದಲ್ಲಿ ಕಾನೂನು ಕ್ರಮ ಜರಗಿಸಿ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರ ಸೂಚನೆಯಂತೆ ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭೆಯ ಪೌರಾಯುಕ್ತರಾದ ಜನಾರ್ದನ್ ಅವರು ಸೈಂಟ್ ಮೇರೀಸ್ ದ್ವೀಪ ನಿರ್ವಹಣೆಯ ಟೆಂಡರ್‌ದಾರ ರಾದ ಸುದೇಶ್ ಶೆಟ್ಟಿ ಅವರಿಗೆ ಕಳೆದ ವಾರ ಕಳುಹಿಸಿರುವ ನೋಟೀಸಿನಲ್ಲಿ ತಿಳಿಸಿದ್ದಾರೆ.

ಸೈಂಟ್ ಮೇರೀಸ್ ದ್ವೀಪವನ್ನು ರಾಷ್ಟ್ರೀಯ ಭೌಗೋಳಿಕ ಸ್ಮಾರಕವೆಂದು ಗುರುತಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಈ ನೈಸರ್ಗಿಕ ಸ್ಮಾರಕ ಕರಾವಳಿ ನಿಯಂತ್ರಣ ವಲಯದಲ್ಲಿ ಸಿಆರ್‌ಝಡ್-1ಕ್ಕೆ ಸೇರಿರುವ ಕಾರಣ ಇವುಗಳು ಸಂರಕ್ಷಿಸಲೇ ಬೇಕಾದ ತಾಣಗಳಾಗಿವೆ. ಇಂತಹ ರಾಷ್ಟ್ರೀಯ ಸ್ಮಾರಕಗಳಲ್ಲಿ ಖಾಸಗಿ ಸಂಸ್ಥೆಯವರು ರೆಸ್ಟೋರೆಂಟ್ ಮತ್ತು ಇತರೆ ಸಿಆರ್‌ಝಡ್ ಅಧಿಸೂಚನೆಯಲ್ಲಿ ನಿಷೇಧಿಸಿರುವ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯ ಕಾರ್ಯದರ್ಶಿಯವರ ಪತ್ರವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ  ತಮ್ಮ ಆದೇಶದಲ್ಲಿ ತಿಳಿಸಿದ್ದರು.

ಇದರಿಂದ ಸ್ಮಾರಕಕ್ಕೆ ಧಕ್ಕೆಯಾಗುವ ಸಂಭವವಿದ್ದು, ಸ್ಮಾರಕದ ಸುತ್ತಲೂ ಇರುವ ಅನೇಕ ಕಡಲ ತೀರಕ್ಕೆ ಸಂಬಂಧಿಸಿದ ಜಲಚರಗಳಿಗೂ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ನಿಯಂತ್ರಣ ವಲಯದ ಸೂಕ್ಷ್ಮ ಪ್ರದೇಶವಾದ ಸಿಆರ್‌ಝಡ್-1 ಪ್ರದೇಶದಲ್ಲಿ ಇಂತಹ ಖಾಸಗಿ ಸಂಸ್ಥೆ ರೆಸ್ಟೋರೆಂಟ್ ಮತ್ತು ಇತರೆ ಯಾವುದೇ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಬೇಕಾದಲ್ಲಿ ಅವುಗಳಿಗೆ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ- 2011ರ ಪ್ರಕಾರ ರಾಜ್ಯ ಕರಾವಳಿ ನಿಯಂತ್ರಣ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಇಲ್ಲಿ ಯಾವುದೇ ಪೂರ್ವಾನುಮತಿಯನ್ನು ಪಡೆಯದೇ ಈ ಎಲ್ಲಾ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಿದೆ. ಆದುದರಿಂದ ಸಿಆರ್‌ಝಡ್ ಕಾನೂನನ್ನು ಉಲ್ಲಂಘಿಸಿ ಇಂಥ ಚಟುವಟಿಕೆಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರಗಿಸಿ ಮೊಕದ್ದಮೆ ಹೂಡಿ ಈ ಎಲ್ಲಾ ಚಟುವಟಿಕೆಗಳನ್ನು ಕೂಡಲೇ ಸ್ಥಗಿತಗೊಳಿಸಿ ಸರಕಾರಕ್ಕೆ ವರದಿ ನೀಡುವಂತೆಯೂ ಜಿಲ್ಲಾಧಿಕಾರಿಗಳಿಗೆ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದರು.

ಕಳೆದ ವಾರ ‘ಇಕೋ ಸ್ಮಾರ್ಟ್ ಕೋಸ್ಟಲ್ ವಿಲೇಜ್’ ಯೋಜನೆಗೆ ಸಂಬಂಧಿಸಿ ಕರಾವಳಿ ತೀರ ಪ್ರದೇಶದ ಸೂಕ್ತ ಗ್ರಾಮಗಳನ್ನು ಆಯ್ಕೆ ಮಾಡಲು ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ (ಜೀವಿ ಪರಿಸ್ಥಿತಿ ಮತ್ತು ಪರಿಸರ) ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೂ ಈ ಪ್ರಕರಣದ ಬಗ್ಗೆ ಪ್ರಸ್ತಾಪವಾಗಿ ಸಿಆರ್‌ಝಡ್ ನಿಯಮವನ್ನು ಉಲ್ಲಂಘಿಸಿ ದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಸೈಂಟ್ ಮೇರೀಸ್ ದ್ವೀಪದಲ್ಲಿ ಈಗಾಗಲೇ ಇರುವಂತಹ ಮೂಲಭೂತ ಸೌಕರ್ಯ ಸೌಲಭ್ಯ, ಜೀವರಕ್ಷೆ/ಸುರಕ್ಷತೆಗಾಗಿ ಇರುವ ವಿವಿಧ ಸೌಕರ್ಯಗಳು/ ಶೌಚಾಲಯ ಹಾಗೂ ಇತರೆ ಸೌಲಭ್ಯಗಳನ್ನು ಹೊರತು ಪಡಿಸಿ ಬೇರೆ ಯಾವುದೇ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳದಿರಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಅಲ್ಲದೇ ಪ್ರಸಕ್ತ ನಡೆಸುತ್ತಿರುವ ರೆಸ್ಟೋರೆಂಟ್‌ನ್ನು ಕೂಡಲೇ ಕಡ್ಡಾಯವಾಗಿ ನಿಲ್ಲಿಸಲು ಹಾಗೂ ರಾಷ್ಟ್ರೀಯ ಭೌಗೋಳಿಕ ಸ್ಮಾರಕಕ್ಕೆ ದಕ್ಕೆ ಉಂಟಾಗುವ ಯಾವುದೇ ಖಾಸಗಿ ಕಾರ್ಯಕ್ರಮಗಳನ್ನು ನಡೆಸದಂತೆ ಮತ್ತು ಕರಾವಳಿ ನಿಯಂತ್ರಣ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಪೂರ್ವಾನುಮತಿ ಪಡೆಯದೇ ಯಾವುದೇ ಕಾರ್ಯ ಚಟುವಟಿಕೆಗಳನ್ನು ಸಿಆರ್‌ಝಡ್-1 ಸೂಕ್ಷ್ಮ ಪ್ರದೇಶದಲ್ಲಿ ಕೈಗೊಳ್ಳದಿರಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ಸೂಚಿಸಿದ್ದಾರೆ.

ಇದರಂತೆ ಸೈಂಟ್ ಮೇರೀಸ್ ದ್ವೀಪದಲ್ಲಿ ಖಾಸಗಿ ಸಂಸ್ಥೆಯ ರೆಸ್ಟೋರೆಂಟ್, ಇತರೆ ನಿಯಮ ಬಾಹಿರ ಚಟುವಟಿಕೆಗಳನ್ನು ನಡೆಸದಂತೆ ನಿಷೇಧ ಹೇರುವಂತೆ ಹಾಗೂ ಸಿಆರ್‌ಝಡ್ ಅಧಿಸೂಚನೆ ಉಲ್ಲಂಘನೆಯಾದಲ್ಲಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರಗಿಸಿ ಮೊಕದ್ದಮೆ ಹೂಡುವಂತೆಯೂ ಮಲ್ಪೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು, ಸಮಿತಿಯ ಕಾರ್ಯದರ್ಶಿ ಹಾಗೂ ಪೌರಾಯುಕ್ತರಿಗೆ ಸೂಚನೆಗಳನ್ನು ನೀಡಿದ್ದಾರೆ.

Read These Next