ಕಾನ್ಪುರ ಗೋಶಾಲೆ :  152 ದನಗಳ ಸಾವು

Source: S O News service | By sub editor | Published on 8th April 2017, 12:20 AM | National News | Don't Miss |

► ನಾಲ್ಕು ದನಗಳು ಹಸಿವಿವಿನಿಂದ ಮೃತಪಟ್ಟಿರುವುದು: ಮರಣೋತ್ತರ ಪರೀಕ್ಷೆಯಿಂದ ಬಹಿರಂಗ

 

► ಗೋಶಾಲೆಯಲ್ಲಿ ಮೇವಿನ ಕೊರತೆ : ಸೊಸೈಟಿ ಆಡಳಿತದ ವಿರುದ್ಧ ನಿಧಿ ಕಬಳಿಕೆಯ ಆರೋಪ 

ಹೊಸದಿಲ್ಲಿ: ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಕುರಿತು ರಾಜಕೀಯ ಮಟ್ಟದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಕಳೆದ ಐದು ತಿಂಗಳುಗಳಲ್ಲಿ ಭಾರತದ ಅತ್ಯಂತ ಶ್ರೀಮಂತ ಹಾಗೂ ಅತಿ ದೊಡ್ಡ ಗೋಶಾಳೆಯೊಂದರಲ್ಲಿ, ಕಳೆದ ಐದು ತಿಂಗಳುಗಳಲ್ಲಿ 152 ದನಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.ಅವುಗಳಲ್ಲಿ ನಾಲ್ಕು ಹಸಿವಿನಿಂದಲೇ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಖೆಯಿಂದ ದೃಢಪಟ್ಟಿದೆ.

128 ವರ್ಷಗಳ ಇತಿಹಾಸವಿರುವ ಉತ್ತರಪ್ರದೇಶದ ಕಾನ್ಪುರ ಸೊಸೈಟಿಯ ಗೋಶಾಲೆಯಲ್ಲಿ ಕಳೆದ ವಾರವೊಂದರಲ್ಲೇ ನಾಲ್ಕು ದನಗಳು ಸಾವನ್ನಪ್ಪಿವೆ. ಈ ಜಾನುವಾರುಗಳು ಹಸಿವಿನಿಂದಾಗಿ ಸಾವನ್ನಪ್ಪಿರುವುದಾಗಿ ವೈದ್ಯರು ಬಹಿರಂಗಪಡಿಸಿದ ಬಳಿಕ ಸ್ಥಳೀಯರು ಗೋಶಾಲೆಯ ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಗೋಶಾಲೆಯಲ್ಲಿ 542 ದನಗಳಿದ್ದು ಅವುಗಳಲ್ಲಿ 152 ಮೃತಪಟ್ಟಿವೆ. ಇಲ್ಲಿನ ಆಡಳಿತ ನೋಡಿಕೊಳ್ಳುತ್ತಿರುವ ಕಾನ್ಪುರ್ ಸೊಸೈಟಿಯು 220 ಕೋಟಿ ರೂ. ಗೂ ಅಧಿಕ ವೌಲ್ಯದ ಆಸ್ತಿಪಾಸ್ತಿಯನ್ನು ಹೊಂದಿದೆ.

ಕಾನ್ಪುರದ ಗಣ್ಣ ವ್ಯಕ್ತಿಗಳು ಈ ಸೊಸೈಟಿಯನ್ನು ನಡೆಸುತ್ತಿದ್ದು, ಅದಕ್ಕೆ ಕೋಟ್ಯಂತರ ರೂ. ದೇಣಿಗೆ ಹರಿದುಬರುತ್ತಿದೆ. ಈ ಬಗ್ಗೆ ತನಿಖೆಯಾಗಬೇಕಿದೆ ಎಂದು ಸೊಸೈಟಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಬೀಡಾಡಿ ದನಗಳ ಪಾಲನೆ ನಡೆಸುವ ಉದ್ದೇಶದಿಂದ ಕಾನ್ಪುರ ಸೊಸೈಟಿಯನ್ನು ರಚಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟ ದನಗಳ ಜಠರ ಹಾಗೂ ಮೂತ್ರನಾಳಗಳು ಬರಿದಾಗಿದ್ದವೆಂದು ಬಹಿರಂಗಪಡಿಸಿದ ಬಳಿಕ ಸೊಸೈಟಿಯ ವಿರುದ್ಧ ನಿರ್ಲಕ್ಷ ಹಾಗೂ ನಿಧಿ ಕಬಳಿಕೆಯ ಆರೋಪಗಳು ಕೇಳಿಬಂದಿವೆ.

ಮೃತಪಟ್ಟ ದನಗಳು ನಿಶ್ಶಕ್ತಿಯಿಂದಾಗಿ ಮೃತಪಟ್ಟಿದ್ದು ಅವು ದೀರ್ಘಸಮಯದಿಂದ ನೀರು ಅಥವಾ ಆಹಾರವನ್ನು ಸೇವಿಸಿಲ್ಲವೆಂದು ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದೆ. ದೀರ್ಘಾವಧಿಯವರೆಗೆ ಅವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಹಾರವನ್ನು ಸೇವಿಸುತ್ತಿದ್ದುದರಿಂದ ಇಂತಹ ಪರಿಸ್ಥಿತಿಯುಂಟಾಗುವ ಸಾಧ್ಯತೆಯಿರುತ್ತದೆಯೆಂದು, ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯ ಡಾ. ಧರ್ಮೇಂದ್ರ ತಿಳಿಸಿದ್ದಾರೆ. ಈ ದನಗಳು ದುರ್ಬಲವಾಗಿದ್ದವು ಹಾಗೂ ಪೌಷ್ಟಿಕ ಆಹಾರದಿಂದ ವಂಚಿತವಾಗಿದ್ದವು ಎಂದು ಅವರು ಹೇಳಿದ್ದಾರೆ.

ಒಂದು ದನಕ್ಕೆ ಎಂಟು ಕೆ.ಜಿ. ಹುಲ್ಲು ಹಾಗೂ 15 ಕೆ.ಜಿ. ಹಸಿರು ಮೇವಿನ ಅಗತ್ಯವಿರುತ್ತದೆ. ಆದರೆ ಈ ಗೋಶಾಲೆಯಲ್ಲಿ ಮೇವಿನ ಕೊರತೆಯಿಲ್ಲದಿದ್ದರೂ, ಬಹಳ ಸಮಯದಿಂದ ದನಗಳಿಗೆ ಮೇವನ್ನು ಸಮರ್ಪಕ ಪ್ರಮಾಣದಲ್ಲಿ ನೀಡಲಾಗುತ್ತಿರಲಿಲ್ಲವೆಂದು ಗೋಶಾಲೆಯ ಪಾಲಕ ಬಾಬಾ ತಿವಾರಿ ಹೇಳುತ್ತಾರೆ.

ಆದರೆ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಶ್ಯಾಮ್‌ಜಿ ಆರೋರಾ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ‘‘ ದಿನಂಪ್ರತಿ ಈ ದನಗಳನ್ನು ವೈದ್ಯರು ಪರೀಕ್ಷಿಸುತ್ತಿದ್ದರು ಹಾಗೂ ಗೋಶಾಲೆಯ ಎಂಟು ಸದಸ್ಯರು ಮೇವನ್ನು ಪರಿಶೀಲಿಸುತ್ತಿದ್ದರು. ಪ್ರತಿ ದಿನವೂ ದನಗಳಿಗೆ 18 ಕ್ವಿಂಟಾಲ್ ಮೇವು ಹಾಗೂ 20 ಕ್ವಿಂಟಾಲ್ ಹಸಿರು ಹುಲ್ಲು ನೀಡಲಾಗುತ್ತಿತ್ತು. ಆದರೆ ಈಗ ಬೇಸಿಗೆ ಕಾಲಿಟ್ಟಿರುವುದರಿಂದ ಮುಂದಿನ ಮೂರು ತಿಂಗಳವರೆಗೆ ಹಸಿರು ಹುಲ್ಲು ದೊರೆಯಲಾರದು’’ ಎಂದವರು ಹೇಳಿದ್ದಾರೆ.

ಮೃತಪಟ್ಟ ದನಗಳ ಪೈಕಿ ಒಂದು ದನ ನಿರ್ಜಲೀಕರಣದ ಸಮಸ್ಯೆಯಿಂದ ಬಳಲುತ್ತಿತ್ತು ಹಾಗೂ ಉಳಿದ ಮೂರು ಮುದಿ ದನಗಳಿಗೆ ವೈದ್ಯರ ಸಲಹೆಯಂತೆ ಲಘು ಪ್ರಮಾಣದ ಆಹಾರ ನೀಡಲಾಗುತ್ತಿತ್ತು ಎಂದವರು ತಿಳಿಸಿದ್ದಾರೆ.

Read These Next

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಮೂವರು ಸಚಿವ ಖಾತೆ, ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ...

ಅಮಿತ್ ಶಾಗೆ ಗೃಹ ಖಾತೆ, ರಾಜನಾಥ್ ಸಿಂಗ್ ಗೆ ರಕ್ಷಣೆ; ಮೋದಿ ಹೊಸ ಸರ್ಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ

2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ...