ದುಬೈ: ಅನಿವಾಸಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸುವ ಭರವಸೆ ನೀಡಿದ ಎನ್ನಾರೈ ಫೋರಂ ವಿಭಾಗದ ಉಪಚೇರ್ಮನ್ ಡಾ.ಆರತಿ ಕೃಷ್ಣ

Source: Arshad Hussain, Dubai | By Arshad Koppa | Published on 6th February 2017, 10:05 PM | Gulf News | Special Report |

ದುಬೈ, ಫೆ ೬: ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಕನ್ನಡಿಗರು ತಮ್ಮ ಕೆಲಸದ ಸ್ಥಳಗಳಲ್ಲಿ ಹಾಗೂ ವಿದೇಶದಿಂದ ಸ್ವದೇಶಕ್ಕೆ ವಾಪಸಾದ ಬಳಿಕ ಎದುರಾಗುವ ಸಮಸ್ಯೆಗಳನ್ನು ಸೋಮವಾರ, ಫೆ ೫ ರಂದು ದುಬೈ ದೇರಾದಲ್ಲಿರುವ ಜೂಡ್ ಪ್ಯಾಲೇಸ್ ಹೋಟೆಲ್ ಸಭಾಂಗಣದಲ್ಲಿ ಅನಿವಾಸಿ ಕನ್ನಡಿಗರು ಕರೆಯಲಾಗಿದ್ದ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಎನ್ನಾರೈ ಫೋರಂ ವಿಭಾಗದ ಉಪಚೇರ್ಮನ್ನರಾಗಿರುವ ಡಾ. ಆರತಿ ಕೃಷ್ಣರವರು ಭಾಗವಹಿಸಿ ಅನಿವಾಸಿಗಳು ಎದುರಿಸುವ ಸಮಸ್ಯೆಯನ್ನು ಆಲಿಸಿದರು.

ರಾತ್ರಿಯೂಟದ ಬಳಿಕ ಪ್ರಾರಂಭವಾದ ಕಾರ್ಯಕ್ರಮ ಇಬ್ರಾಹಿಂ ರವರ ಕಿರಾತ್ ನೊಂದಿಗೆ ಪ್ರಾರಂಭವಾಯಿತು.

ಶ್ರೀ ಸಮಿ ಬುಖಾರಿಯವರು ಸ್ವಾಗತಿಸಿ ಪ್ರಾಸ್ತವಿಕವಾದ ವಿವರಗಳನ್ನು ಸಲ್ಲಿಸಿದರು.

ವೇದಿಕೆಯಲ್ಲಿ ಉಪಚೇರ್ಮನ್ನರೊಂದಿಗೆ ಯು.ಎ.ಇ.ಯ ಪ್ರಮುಖ ಕನ್ನಡಿಗರಾದ ಜನಾಬ್ ಸೈಯದ್ ಖಲೀಲುರ್ರಹ್ಮಾನ್, ಅಬ್ದುಲ್ ಖಾದರ್ ಬಾಷಾ, ಪ್ರವೀಣ್ ಕುಮಾರ್ ಶೆಟ್ಟಿ, ಫಕ್ರುದ್ದೀನ್, ಸ್ಪೈಸ್ ಎಫ್ ಎಂ ನ ಹರ್ಮನ್ ಲೂವಿಸ್, ಮೀರಾಂ ಸಾಹೇಬ್, ಅಸ್ಸಾದ್ ಸಾಹೇಬ್, ಜೈನ್ ಸಮೂಹ ಸಂಸ್ಥೆಗಳ ಮಾಲಿಕರಾದ  ಜಫರುಲ್ಲಾ ಖಾನ್, ಸಿಎಂವೈಸಿ ಅಧ್ಯಕ್ಷರಾದ ಅಬುಮೊಹಮ್ಮದ್ ಮುಖ್ತಸರ್, ಯೂಸುಫ್ ಬರ್ಮಾವರ್, ಶಾರ್ಜಾ ಕರ್ನಾಟಕ ಸಂಘದ ಸುಗಂಧರಾಜ ಬೇಕಲ್, ಧಿಂಡಾ ಅಹ್ಮದ್ ಅಲಿ, ಅತಾವುರ್ರಹ್ಮಾನ್ ಗೌಡ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. 

ಪ್ರಥಮವಾಗಿ ಮಾತನಾಡಿದ ಫಜಲುರ್ರಹ್ಮಾನ್ ರವರು ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುತ್ತಿರುವವರು ತಮ್ಮ ಗಳಿಕೆಯನ್ನು ಊರಿಗೆ ಕಳುಹಿಸುವ ಮೂಲಕ ನಾಡಿಗೆ ಅಮೂಲ್ಯ ವಿದೇಶೀ ವಿನಿಮಯ ದೊರಕಿಸಿಕೊಟ್ಟು ನಾಡಿನ ಅಭಿವೃದ್ದಿಗೆ ನೆರವಾಗುತ್ತಾರೆ. ಅಲ್ಲದೇ ಸ್ವಪ್ರೇರಣೆಯಿಂದ ನೀಡಿದ ಹಣವನ್ನು ಹಳ್ಳಿಗಳಲ್ಲಿ ಶಿಕ್ಷಣ ಮತ್ತು ಇತರ ಸೇವೆಗಾಗಿ ಬಳಸಿಕೊಳ್ಳಲಾಗುತ್ತಿದೆ. ರಾಜ್ಯದ ಅಭಿವೃದ್ದಿಗೆ ಈ ರೀತಿಯಾಗಿ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು. 

ಬಳಿಕ ಮಾತನಾಡಿದ ಅಬುಮುಹಮ್ಮದ್ ಮುಖ್ತಸರ್ ರವರು ಅತಿಥಿಗಳ ಕಿರುಪರಿಚಯ ನೀಡಿ ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು.

ನಂತರ ಮಾತನಾಡಿದ ಯೂಸುಫ್ ಬರ್ಮಾವರ್ ರವರು ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದು ಇವರಲ್ಲಿ ಹೆಚ್ಚಿನವರು ಕಡಿಮೆ ವೇತನದ ಕಾರ್ಮಿಕರಾಗಿದ್ದಾರೆ. ಉಳಿದವರಲ್ಲಿ ಪದವೀಧರರೂ, ಉನ್ನತ ಪದವನ್ನು ಅಲಂಕರಿಸಿದವರೂ ಇದ್ದಾರೆ. ಹೆಚ್ಚಿನವರು ತಮ್ಮ ವೇತನದ ಒಂದು ಭಾಗವನ್ನು ನಾಡಿನ ಅಭಿವೃದ್ದಿಗೆ ರಾಬಿತಾ ಸೊಸೈಟಿಯಂತಹ ಸಂಸ್ಥೆಗಳ ಮೂಲಕ ಕಳುಹಿಸಿ ಇದರ ಮೂಲಕ ಆರೋಗ್ಯ ಶಿಬಿರ, ರಸ್ತೆ ಸುರಕ್ಷತೆ ಮೊದಲಾದ ಜನಪರ ಕೆಲಸಗಳಿಗೆ ನೆರವಾಗುತ್ತಾರೆ. ಆದರೆ ಇನ್ನೂ ಕೆಲವು ಕೆಲಸಗಳಿಗೆ ಸರ್ಕಾರದ ನೆರವು ಮತ್ತು ಬೆಂಬಲದ ಅಗತ್ಯವಿದೆ. ವಿಶೇಷವಾಗಿ ಊರಿನಲ್ಲಿ ಗಟಾರದ ವ್ಯವಸ್ಥೆ ಕುಲಗೆಟ್ಟಿದ್ದು ಇದರ ಪರಿಣಾಮವಾಗಿ ಕಲುಶಿತ ನೀರು ನದಿಯನ್ನು ಸೇರಿ ಕುಡಿಯುವ ನೀರಿಗೆ ತಾತ್ವಾರವಾಗಿದೆ. ಇಲ್ಲಿ ದುಡಿಯುವ ವರ್ಗ ತಮಗೆಂದು ಮನೆ ಕೊಳ್ಳುವ ಮರೀಚಿಕೆಯ ಹಿಂದೆ ಜೀವಮಾನವಿಡೀ ಗಲ್ಫ್ ನಲ್ಲಿ ದುಡಿದರೂ ನಿವೃತ್ತಿಯ ವೇಳೆಗೆ ಊರಿಗೆ ಬಂದಾಗ ಸೈಟ್ ಬೆಲೆ ಏರಿ ಅವರ ಕೈಗೆಟುಗದೇ ಹೋಗುತ್ತದೆ. ೭೫% ಜನರು ತಮ್ಮ ಕುಟುಂಬದಿಂದ ದೂರವಿರುತ್ತಾರೆ. ಕೆಲವರು ಕುಟುಂಬ ತರಿಸಿದರೂ ಇವರ ಮಕ್ಕಳಿಗೆ ಊರಿನಲ್ಲಿ ಉನ್ನತ ವ್ಯಾಸಾಂಗಕ್ಕೆ ಅತಿ ಹೆಚ್ಚಿನ ಫೀಸ್ ತೆರಬೇಕಾಗಿ ಬರುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡರು.

ಬಳಿಕ ಮಾತನಾಡಿದ ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಿಯುದ್ದೀನ್ ರವರು ರಾಬಿತಾ ಸೊಸೈಟಿ ಬೆಳೆದು ಬಂದ ಹಾದಿ ಹಾಗೂ ಈ ಸಂಸ್ಥೆಯ ಸ್ವಯಂಸೇವಕರು ನಡೆಸಿಕೊಡುವ ಸಾರ್ವಜನಿಕ ಕಾರ್ಯವನ್ನು ಉಲ್ಲೇಖಿಸಿದರು. ವಿಶೇಷವಾಗಿ ವಿದೇಶಗಳಲ್ಲಿ ಬಹಳಷ್ಟು ವರ್ಷ ಕಳೆದು ನಾಡಿಗೆ ಹಿಂದಿರುಗುವ ಕನ್ನಡಿಗರು ತಮ್ಮ ವಯಸ್ಸು ಕಳೆದುಕೊಂಡಿರುವ ಕಾರಣ ಉದ್ಯೋಗ ಪಡೆಯಲು ವಿಫಲರಾಗುತ್ತಿದ್ದು ಇವರಿಗೆ ರಾಬಿತಾ ಸೊಸೈಟಿ ವತಿಯಿಂದ ನೆರವು ನೀಡಲಾಗುತ್ತಿದೆ. ಇದರೊಂದಿಗೆ ಅಂಬ್ಯುಲೆನ್ಸ್, ಟೆಂಪೂ ಮೊದಲಾದ ಹಲವಾರು ಜನಸೇವಾ ಕಾರ್ಯಕ್ರಮಗಳ ಮೂಲಕ ಕರಾವಳಿಯ ಜನರಿಗೆ ನೆರವಾಗುತ್ತಾ ಬಂದಿದೆ. ನೀರಿನ ಟ್ಯಾಂಕ್ ಸ್ವಚ್ಛತೆ, ನಿಯಮಿತವಾಗಿ ಆರೋಗ್ಯ ಶಿಬಿರಗಳನ್ನು ಏರ್‍ಪಡಿಸುವುದು, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಪೂರೈಕೆ ಮೊದಲಾದ ಮೂಲಕ ಜನಸೇವೆ ನೀಡುತ್ತಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಅಕ್ರಮವಾಗಿ ಮನೆ ಕಟ್ಟಿಕೊಂಡವರ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ, ವಿಮಾನ ನಿಲ್ದಾಣಗಳಲ್ಲಿ ಅನಿವಾಸಿ ಕನ್ನಡಿಗರು, ಅದರಲ್ಲೂ ಭಟ್ಕಳದವರು ಬಂದರೆ ಅನುಮಾನದ ದೃಷ್ಟಿಯಿಂದ ನೋಡುವುದು ಮೊದಲಾದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಅವರು ಮನವಿ ಮಾಡಿದರು. 

ನಂತರ ಮಾತನಾಡಿದ ಅಬು ಮೊಹಮ್ಮದ್ ಸಾಹೇಬ್ ರವರು ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೀಡಾಗಿ ಕಳೆದ ಒಂಭತ್ತು ತಿಂಗಳಿಂದ ಸೌದಿಯ ಆಸ್ಪತ್ರೆಯಲ್ಲಿರುವ ಶಿರೂರಿನ ಅಬುಬಕರ್ ರವರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಸಾಹಿಲ್ ಆನ್ಲೈನ್ ತಾಣ ಹಾಗೂ ಇತರ ಸಹೃದಯಿ ವ್ಯಕ್ತಿಗಳು ಮತ್ತು ಸಂಘಟನೆಗಳ ಪ್ರಯತ್ನದ ಫಲವಾಗಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ರನ್ನ್ ಭೇಟಿಯಾದರೂ ಹೆಚ್ಚಿನ ಫಲ ಕಾಣಲಿಲ್ಲ, ಈ ಬಗ್ಗೆ ಗಮನ ಹರಿಸಲು ಮನವಿ ಮಾಡಿಕೊಂಡರು. ಮಾಅಜ್ ಶಾಬಂದರಿಯವರು ಪವರ್ ಪಾಯಿಂಟ್ ಪ್ರದರ್ಶನದ ಮೂಲಕ ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದರು.

ನಂತರ ಮಾತನಾಡಿದ ಜನಾಬ್ ಸೈಯದ್ ಖಲೀಲ್ ರವರು ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಲ್ಲಿ ಕೇರಳದವರು ಪ್ರಥಮ ಸ್ಥಾನದಲ್ಲಿದ್ದು ಕರ್ನಾಟಕ ಎರಡನೆಯ ಸ್ಥಾನದಲ್ಲಿದೆ. ಕನ್ನಡಿಗರು ಭಾರತಕ್ಕೆ ಕಳುಹಿಸುವ ವಿದೇಶೀ ವಿನಿಮಯ 1200 ಕೋಟಿ ರೂಪಾಯಿಗಳಾಗಿದೆ. ಆದರೆ ಈ ಹಣದ ಸದುಪಯೋಗ ನಮ್ಮ ನಾಡಿಗೆ ಆಗುತ್ತಿಲ್ಲ. ಊರಿನಲ್ಲಿ ಗಟಾರದ ವ್ಯವಸ್ಥೆ ಹಾಳಾಗಿದ್ದು ನದಿ ಕಲುಶಿತಗೊಂಡಿದೆ. ಇತ್ತೀಚೆಗೆ ಸಚಿವ ರೋಶನ್ ಬೇಗ್ ರವರು ಭೇಟಿ ನೀಡಿದ್ದರೂ ಇದುವರೆಗೆ ಹೆಚ್ಚಿನ ಫಲ ಕಾಣುತ್ತಿಲ್ಲ. ಊರಿನಲ್ಲಿ ಈಗ ಇರುವ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಮೊದಲಾದವೆಲ್ಲಾ ವಿದೇಶದಿಂದ ದೇಣಿಗೆ ನೀಡಿದವರ ಹಣದಿಂದ ಆಗಿದೆಯೇ ಹೊರತು ಸರ್ಕಾರದಿಂದ ಹೆಚ್ಚಿನ ನೆರವು ಸಿಗುತ್ತಿಲ್ಲ. ನಾವು ಉದ್ಯೋಗ ನಿಮಿತ್ತ ಇಲ್ಲಿ ಇದ್ದರೂ ನಾವು ಮದೆವೆಯಾಗುವುದು, ನಿಧನದ ಬಳಿಕ ಮಣ್ಣಾಗುವುದು ಊರಿನಲ್ಲಿಯೇ ಹೊರತು ಇಲ್ಲಲ್ಲ. ಹಾಗಾಗಿ ನಮ್ಮ ಆತ್ಮ ಅಲ್ಲಿ ನೆಲೆಸಿದ್ದು ಊರಿಗೆ ಹೆಚ್ಚಿನದನ್ನು ಮಾಡಬಯಸುತ್ತೇವೆ. ಸಚಿವ ಆರ್ ವಿ ದೇಶಪಾಂಡೆಯವರು ನಾಡಿಗೆ ಹೆಚ್ಚಿನ ನೆರವು ನೀಡಬಯಸಿದರೂ ಅವರ ಸಾಮರ್ಥಕ್ಕೆ ಅನುಸಾರವಾಗಿ ಖಂಡಿತಾ ನೀಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ನೆರವಿನ ಅಗತ್ಯವಿದೆ. ಭಟ್ಕಳ ಸುಂದರ ನಾಡಾಗಿದೆ. ಸಾವಿರ ವರ್ಷದಿಂದ ನೆಲೆಸಿರುವ ಇಲ್ಲಿನ ಜನರು ಶಾಂತಿಪ್ರಿಯರೂ ಭಾವೈಕ್ಯತೆ ಬಯಸುವವರೂ ಆಗಿದ್ದಾರೆ. ಆದರೆ ಕೆಲವು ದುಷ್ಕರ್ಮಿಗಳಿಂದಾಗಿ ಭಟ್ಕಳದ ಹೆಸರನ್ನು ತಪ್ಪಾಗಿ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರ ವತಿಯಿಂದ ಆತ್ಮೀಯ ಕಾಣಿಕೆಯನ್ನು ಅಬ್ದುಲ್ ಖಾದರ್ ಬಾಷಾರವರು ನೀಡಿದರು.

ನಂತರ ವೇದಿಕೆಯಲನ್ನಂಕರಿಸಿದ ಡಾ. ಆರತಿ ಕೃಷ್ಣರವರು ತಮ್ಮ ಹಿಂದಿನ ಉದ್ಯೋಗವೆಲ್ಲಾ ಅಮೇರಿಕಾದ ಜನರ ಸಮಸ್ಯೆಗಳನ್ನು ಆಲಿಸಿವುದರಲ್ಲಿಯೇ ಕಳೆದಿದ್ದು ಈಗ ಗಲ್ಫ್ ರಾಷ್ಟ್ರಗಳ ಜನರ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಕೈಲಾದ ಪ್ರಯತ್ನ ನಡೆಸುವುದಾಗಿ ತಿಳಿಸಿದರು. ಪ್ರಸ್ತುತ ಅಮೇರಿಕಾದಾಲ್ಲಿ ನಲವತ್ತು ಲಕ್ಷ ಭಾರತೀಯರಿದ್ದಾರೆ, ಆದರೆ ಅವರ ಮತ್ತು ಇತರ ರಾಷ್ಟ್ರಗಳ ಸಮಸ್ಯೆಗೂ ಇಲ್ಲಿನ ಭಾರತೀಯರ ಸಮಸ್ಯೆಗೂ ಬಹಳ ವ್ಯತ್ಯಾಸವಿದೆ ಎಂದು ತಿಳಿಸಿದರು. ಗಲ್ಫ್ ರಾಷ್ಟ್ರಗಳಲ್ಲಿ ನಾಲ್ಕು ಲಕ್ಷ ಕನ್ನಡಿಗರಿದ್ದು ಇದರಲ್ಲಿ ಒಂದೂವರೆ ಲಕ್ಷ ಜನರು ಯು.ಎ.ಇ.ಯಲ್ಲಿದ್ದಾರೆ. ಅಮೇರಿಕಾದ ಜನತೆಗೆ ಆಸ್ತಿ, ಮದುವೆ, ಪಿಐಒ, ಪಾಸ್ ಪೋರ್ಟ್ ಮೊದಲಾದ ಸಮಸ್ಯೆಗಳೇ ಪ್ರಮುಖವಾಗಿದ್ದರೆ ಗಲ್ಫ್ ರಾಷ್ಟ್ರಗಳ ಕನ್ನಡಿಗರ ಸಮಸ್ಯೆ ಬೇರೆಯೇ ಆಗಿದೆ. ಕಳೆದ ಕೆಲವಾರು ದಿನಗಳಿಂದ ಈ ಸಮಸ್ಯೆಗಳನ್ನು ಕಲೆಹಾಕಿ, ನೆರಯ ಕೇರಳದಲ್ಲಿ ನೋರ್ಕಾ ಸಚಿವಾಲಯ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಿ ಕರ್ನಾಟಕ ಸರ್ಕಾರ ಕೆಲವು ಯೋಜನೆಗಳನ್ನು ಹೊರತಂದಿದ್ದು ಈ ಬಗ್ಗೆ ಕೈಪಿಡಿಯನ್ನು ಬಿಡುಗಡೆ ಮಾಡಲಾಗಿದೆ. ಈ  ಯೋಜನೆಗಳಲ್ಲಿ ಪ್ರಮುಖವಾದವುಗಳನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು: 


* ರಾಯಭಾರಿ ಕಛೇರಿ ಹಾಗೂ ಜನಸಾಮಾನ್ಯರ ನಡುವೆ ಸಂಪರ್ಕಾಧಿಕಾರಿಯ ನಿಯೋಜನೆ
* ವಿದೇಶ ವಾಸಕ್ಕೆ ವಿದಾಯ ಹೇಳಿ ನಾಡಿಗೆ ಹೋಗುವವರಿಗೆ ಸೂಕ್ತ ಸಲಹೆ
* ಗಲ್ಫ್ ರಾಷ್ಟ್ರಗಳಲ್ಲಿರುವ ಎಲ್ಲಾ ಕನ್ನಡಿಗರ ವಿವರಗಳಿರುವ ಡೇಟಾಬೇಸ್ ನಿರ್ಮಾಣ
* ಎನ್. ಆರ್.ಕೆ ಅಂದರೆ ನಾನ್ ರೆಸಿಡೆಂಟ್ ಕನ್ನಡಿಗ ಕಾರ್ಡ್, ಈ ಮೂಲಕ ನಾಡಿನಲ್ಲಿ ಹೆಚ್ಚಿನ ಸವಲತ್ತುಗಳಿಗೆ ಆದ್ಯತೆ
* ನಮ್ಮ ಊರು ನಮ್ಮ ನಾಡು ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಡಿನ ಏಳ್ಗೆಯಲ್ಲಿ ಭಾಗಿಯಾಗಲು ಅವಕಾಶ
* ಪ್ರತಿ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿಗಳು ಮತ್ತು ಸುಪರಿಂಟೆಂಡೆಂಟ್ ಆಫ್ ಪೋಲೀಸ್ ರವರ್ ನೇತೃತ್ವದಲ್ಲಿ ಕಲ್ಯಾಣ ಸಮಿತಿ. ಈ ಸಮಿತಿಯ ಮೂಲಕ ಅನಿವಾಸಿ ಕನ್ನಡಿಗರ ಮನೆಯವರು ವಿದೇಶದಲ್ಲಿರುವ ತಮ್ಮವರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಸರ್ಕಾರದಿಂದ ನೆರವಿನ ಯೋಜನೆ. ಈ ಮನವಿಗಳು ನೇರವಾಗಿ ತಮ್ಮ ಕಛೇರಿಗೆ ತಲುಪುವಂತೆ ವ್ಯವಸ್ಥೆ ಮಾಡುವ ಮೂಲಕ ಸರ್ಕಾರದ ಲಭ್ಯವಿರುವ ಎಲ್ಲಾ ನೆರವಿನ ಭರವಸೆ
* ೨೪ ಘಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಸ್ಥಾಪನೆ
* ವಿದೇಶದಲ್ಲಿ ನಿಧನರಾದ ಕನ್ನಡಿಗರ ಪಾರ್ಥವ ಶರೀರವನ್ನು ಭಾರತಕ್ಕೆ ಮರಳಿಸಲು ನೆರವಾಗುವಂತೆ "indian committee welfare fund" ನಿಧಿ ಸ್ಥಾಪನೆ
* ವಿದೇಶದಲ್ಲಿ ನಿಧನರಾದ ಕನ್ನಡಿಗರ ಪಾರ್ಥವ ಶರೀರವನ್ನು ಕಳುಹಿಸುವ ಖರ್ಚನ್ನು ಅವರಿಗೆ ಕೆಲಸ ನೀಡಿದ ಸಂಸ್ಥೆ ಅಥವಾ ಪೋಷಕರೇ ಹೊರುವಂತೆ ಕಾನೂನು ಮಾರ್ಪಾಡಿಸಲು ಕ್ರಮ
* ನಾಡಿನಲ್ಲಿ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಕೌಶಲ ತರಬೇತಿ ಕೇಂದ್ರ (skill development center) ಸ್ಥಾಪನೆ, ತನ್ಮೂಲಕ ವಿದೇಶಗಳಲ್ಲಿ ಉದ್ಯೋಗ ಪಡೆಯುವವರಿಗೆ ಮುಂಚಿತವಾಗಿ ಅಲ್ಲಿನ ಕಾನೂನು ಮತ್ತು ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ.
* ಪ್ರವಾಸಿ ಭಾರತೀಯ ದಿವಸದಂತೆಯೇ ’ಕರ್ನಾಟಕ ದಿವಸ’ ಆಚರಣೆಯ ಮೂಲಕ ಎಲ್ಲಾ ವಿದೇಶದಲ್ಲಿರುವ ಕನ್ನಡಿಗರನ್ನು ಒಂದು ಸೂರಿನಡಿ ತರುವ ಪ್ರಯತ್ನ
* ಅನಿವಾಸಿ ಕನ್ನಡಿಗರಿಗೆ ವಿಮೆ ಮತ್ತು ಪಿಂಚಣೆ ವ್ಯವಸ್ಥೆಗೆ ಚಾಲನೆ
* ಅಲ್ಪಸಂಖ್ಯಾತ ನಿಗಮದಿಂದ ಶ್ರೀ ಲೋಬೋರವರು ಕೇರಳದ ನೋರ್ಕಾ ಸಂಸ್ಥೆಯ ಕಾರ್ಯವಿಧಾನದ ಬಗ್ಗೆ ಸರ್ಕಾರದ ಗಮನ ಹರಿಸಿ ಕಳೆದ ಬಜೆಟ್ ನಲ್ಲಿ 145 ಕೋಟಿ ರೂ ಅನುದಾನ ಪಡೆದಂತೆಯೇ ಕರ್ನಾಟಕಕ್ಕೂ ಅನುದಾನ ಪಡೆಯಲು ಸಂಸ್ಥೆಯೊಂದನ್ನು ರಚಿಸುವ ಬಗ್ಗೆ ಚಿಂತನೆ
* ಭಾರತೀಯ ಕಾರ್ಮಿಕ ಸಂಪತ್ತು ಕೇಂದ್ರ (indian worker resource center) ದ ಸ್ಥಾಪನೆ
* ಭಾರತೀಯ ದೂತಾವಾಸಗಳಲ್ಲಿ ಕನ್ನಡ ಭಾಷೆಯನ್ನೂ ಅಳವಡಿಸಿಕೊಳ್ಳಲು ಕ್ರಮ
* ನಾಡಿನಲ್ಲಿ ವಿದೇಶೀ ಕನ್ನಡಿಗರು ಹಣ ಹೂಡಲು ಮನವರಿಕೆ
* ಅನಿವಾಸಿ ಕನ್ನಡಿಗರಿಗೆ ಕಾನೂನು ನೆರವು
 

ಮೊದಲಾದ ಹತ್ತು ಹಲವು ಯೋಜನೆಗಳ ಬಗ್ಗೆ ಅವರು ಕಿರುಮಾಹಿತಿಯನ್ನು ನೀಡಿದರು. ಭಟ್ಕಳದ ನೈರ್ಮಲ್ಯ ಕುರಿತಾದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ನೀಡಿದಲ್ಲಿ ತಾವು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ಬಗ್ಗೆ ಕ್ರಮ ಕೈಗೊಳ್ಳಲು ತಮ್ಮಿಂದಾದ ಸಹಾಯವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು. 

ನಂತರ ಪ್ರಶೋತ್ತರ ಸಮಯದಲ್ಲಿ ಹರ್ಮನ್ ಲೂವಿಸ್, ಜಫರುಲ್ಲಾ ಖಾನ್, ಜಿಲಾನಿ ಹಾಗೂ ಇತರರು ಕೆಲವು ಪ್ರಶ್ನೆಗಳನ್ನು ಕೇಳಿ ಗೊಂದಲವನ್ನು ಪರಿಹರಿಸಿಕೊಂಡರು. ಜಫರುಲ್ಲಾ ಖಾನ್ ರವರು ಮಾತನಾಡಿ ಬರೆಯ ಮನವಿ ನೀಡಿದರೆ ಸಾಲದು, ಸತತವಾಗಿ ಈ ಬಗ್ಗೆ ಮಾಹಿತಿಯನ್ನು ಪಡೆಯುತ್ತಾ ವಿಷಯವನ್ನು ಜೀವಂತವಾಗಿಟ್ಟು ಪ್ರತಿನಿಧಿಗಳು ಇದನ್ನು ಮರೆಯದೇ ತಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಸಾಧ್ಯವಾಗುವಂತೆ ಪ್ರತಿನಿಧಿಯೊಬ್ಬರು ನಿಯುಕ್ತರಾಗಬೇಕು ಎಂದು ಕರೆ ನೀಡಿದರು.

ಬಳಿಕ ಮಾಅಜ್ ಶಾಬಂದರಿಯವರು ಅನಿವಾಸಿ ಕನ್ನಡಿಗರು ಎದುರಿಸುವ ಸಮಸ್ಯೆಗಳ ಪರಿಹಾರ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಸಾರಾಂಶವನ್ನು ಓದಿ ತಿಳಿಸಿದರು. 

ಅಂತಿಮವಾಗಿ ಖಾಜಾ ಅಬ್ಕಾರ್ ರವರು ವಂದನಾರ್ಪಣೆ ಸಲ್ಲಿಸಿದರು. ಮೌಲಾನಾ ಖಾಲಿಖ್ ರವರ ದುವಾದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
 

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...