ಡಿಸಿಸಿ ಬ್ಯಾಂಕ್ ಸುಸ್ತಿ ಸಾಲ ವಸೂಲಿಗೆ ತಿಂಗಳ ಗಡುವು 

Source: sonews | By sub editor | Published on 9th December 2018, 11:36 PM | State News |

ಕೋಲಾರ: ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಬ್ಯಾಂಕ್ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದರೊಂದಿಗೆ ಅನ್ನ ನೀಡುವ ಸಂಸ್ಥೆ ಋಣ ತೀರಿಸುವಂತಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಶನಿವಾರ ಮಧ್ಯಾಹ್ನ ಸಹಕಾರಿ ಯೂನಿಯನ್‍ನಲ್ಲಿ ನಡೆದ ಡಿಸಿಸಿ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನೌಕರರು ಪ್ರಾಮಾಣಿಕ ಸೇವೆ ಮೂಲಕ ಬ್ಯಾಂಕ್ ಸದೃಡವಾಗಿ ಕಟ್ಟುವ ಕಾಯಕಕ್ಕೆ ಮುಂದಾಗಬೇಕಿದ್ದು ತಪ್ಪಿದಲ್ಲಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕೆಂದು ಎಚ್ಚರಿಸಿದರು.

ಸಂಬಳ ಮತ್ತು ಸೌಲಭ್ಯ ಪಡೆಯುವ ನೌಕರರು ಬ್ಯಾಂಕ್ ಉಳಿಸಿ ಬೆಳೆಸಬೇಕು, ಮುಂದಿನ ಒಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ಶಾಖೆಗಳಲ್ಲಿ ಯಾವುದೇ ಸುಸ್ತಿ ಸಾಲ ಇಲ್ಲದಂತೆ ಸಿಬ್ಬಂದಿ ವಸೂಲಾತಿಗೆ ಮುಂದಾಗಬೇಕೆಂದು ಕಟ್ಟಪ್ಪಣೆ ಮಾಡಿದರು.

ವಿಧಾನಸಭೆ ಮತ್ತು ಡಿಸಿಸಿ ಬ್ಯಾಂಕಿನ ಚುನಾವಣಾ ಸಂದರ್ಭದಲ್ಲಿ ಆದ ಏರುಪೇರಿನಿಂದಾಗಿ ಬ್ಯಾಂಕಿನಲ್ಲಿ ಸುಮಾರು 15 ಕೋಟಿ ರೂ.ಸಾಲದ ಖಾತೆಗಳು ಸುಸ್ತಿ ಆಗಿದ್ದು ಸಂಬಂಧಪಟ್ಟವರು ತಕ್ಷಣ ಎಚ್ಚೆತ್ತುಕೊಂಡು ವಸೂಲಾತಿಗೆ ಮುಂದಾಗಬೇಕೆಂದರು.
ಸಿಬ್ಬಂದಿ ಮೇಲೆ ಯಾವುದೇ ವೈಯಕ್ತಿಕ ದ್ವೇಷ,ಕೋಪ,ಸೇಡು ಇಲ್ಲವಾದರೂ ಕೆಲಸದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ, ಕೆಲವೊಂದು ಸೊಸೈಟಿಗಳ ಮೂಲಕ ವಿತರಿಸಿರುವ ಸಾಲ ಸುಸ್ತಿ ಆಗಿದ್ದು ಹೀಗಾಗಿ ಆರಂಭದಲ್ಲೇ ಎಚ್ಚೆತ್ತುಕೊಳ್ಳುವಂತಾಗಬೇಕು. ಎರಡನೇ ಬಾರಿ ಅಧ್ಯಕ್ಷನಾಗಿರುವ ನನ್ನನ್ನು ಯಾರೂ ಯಾಮಾರಿಸಲು ಸಾಧ್ಯವಿಲ್ಲ. ಸಾಲದ ಜತೆಗೆ ಬಡ್ಡಿಯೂ ಹಂತ ಹಂತವಾಗಿ ಬೆಳೆಯುತ್ತಿದೆ ಎಂಬುದನ್ನು ನೌಕರರು ಅರಿತುಕೊಂಡು ವಸೂಲಾತಿಗೆ ಮುಂದಾಗಬೇಕು ಎಂದು ಸೂಚಿಸಿದರು.

ಬೆಳೆ ಸಾಲ 2 ಕೋಟಿ ರೂ. ಮತ್ತು ಸ್ತ್ರೀಶಕ್ತಿ ಸಂಘಗಳ ಸದಸ್ಯರ ಸಾಲ 3 ಕೋಟಿ ರೂ. ಸುಸ್ತಿ ಆಗಿದ್ದು ಇದರ ಬಗ್ಗೆ ಎಚ್ಚೆತ್ತುಕೊಂಡು ಕೆಲಸ ಮಾಡಬೇಕು, ಹಣ ವಸೂಲಾತಿ ಆಗುವವರೆಗೆ ತುರ್ತು ಹೊರತುಪಡಿಸಿದಂತೆ ಮತ್ಯಾವುದೇ ರಜೆ ನೀಡಲು ಸಾಧ್ಯವಿಲ್ಲ. ಒಂದು ತಿಂಗಳಲ್ಲಿ ಸಾಲ ವಸೂಲಾತಿಯಲ್ಲಿ ಪ್ರಗತಿ ಸಾಧನೆ ಆಗದಿದ್ದರೆ ಅಂತಹ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತದೆ.ಬ್ಯಾಂಕ್‍ಗೆ ಯಾಮಾರಿಸಿದರೆ ನೋವು ಕಾದಿರುತ್ತದೆ. ಬ್ಯಾಂಕ್ ಶಕ್ತಿ ಕೇಂದ್ರವಾಗಿದ್ದು ದೇವಾಲಯದ ಹಾಗೆ ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಸಾಲ ವಿತರಣೆಯಲ್ಲಿ ನಿರ್ದೇಶಕರ ಮಾತೇ ಅಂತಿಮವಲ್ಲ, ಸ್ಥಳ ಪರಿಶೀಲನೆ ನಡೆಸಿ ಅನರ್ಹರೆಂದು ಕಂಡುಬಂದರೆ ತಕ್ಷಣ ಗಮನಕ್ಕೆ ತಂದರೆ ನಾವ್ಯಾರೂ ಬಲವಂತ ಮಾಡುವುದಿಲ್ಲ. ಬ್ಯಾಂಕ್‍ನಿಂದ ಸಾಲ ಪಡೆದಿರುವ ಸಿಬ್ಬಂದಿ ಸರಿಯಾಗಿ ಕಂತು ಕಟ್ಟದೇ ಹೋದಲ್ಲಿ ಕಠಿಣ ಕ್ರಮ ಆಗುತ್ತದೆ. ನಮಗೆ ನಿಮ್ಮ ನಮಸ್ಕಾರ ಬೇಡ, ಸಾಲ ವಸೂಲಿ ಮೂಲಕ ಬ್ಯಾಂಕ್ ಉಳಿಸಲು ಮುಂದಾಗಿ. ಕಷ್ಟ ಎನಿಸಿದ ಕಡೆ ನಾನೇ ವಸೂಲಿಗೆ ಬರುವೆ, ನಿಮ್ಮ ಫೋನ್ ಕರೆಗಾಗಿ ಕಾಯುವೆ. ಅಗತ್ಯ ಎನಿಸಿದರೆ ನಿರ್ದೇಶಕರೂ ನಿಮ್ಮೊಂದಿಗೆ ಕೈ ಜೋಡಿಸುತ್ತಾರೆ ಎಂದು ಸಿಬ್ಬಂದಿಗೆ ನೈತಿಕ ಸ್ಥೈರ್ಯ ತುಂಬಿದರು.
ಬ್ಯಾಂಕಿನ ಉಪಾಧ್ಯಕ್ಷ ಎ.ನಾಗರಾಜ್, ನಿರ್ದೇಶಕರಾದ ದಯಾನಂದ್,ನರಸಿಂಹರೆಡ್ಡಿ,ಮೋಹನ್‍ರೆಡ್ಡಿ,ನಾಗಿರೆಡ್ಡಿ,ವೆಂಕಟರೆಡ್ಡಿ,ಗೋವಿಂದರಾಜು,ಚನ್ನರಾಯಪ್ಪ,ಮ್ಯಾನೇಜರ್ ಬೈರೇಗೌಡ ಇದ್ದರು.

 

Read These Next