ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೆ ಆಧಾರ್ ಮಾಹಿತಿ ಸೋರಿಕೆ ? ‘ವಿಕಿಲೀಕ್ಸ್’ ವರದಿ

Source: sonews | By sub editor | Published on 26th August 2017, 6:40 PM | National News | Don't Miss |

ಚೆನ್ನೈ: ಅಮೆರಿಕ ಮೂಲದ ತಂತ್ರಜ್ಞಾನ ಸಂಸ್ಥೆ ‘ಕ್ರಾಸ್‌ಮ್ಯಾಚ್ ಟೆಕ್ನಾಲಜೀಸ್’ ರಚಿಸಿರುವ ಸಾಧನಗಳನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಸೈಬರ್ ಗೂಢಚಾರಿಕೆಗೆ ಬಳಸುತ್ತಿದ್ದು ಇದರಲ್ಲಿ ಆಧಾರ್ ದತ್ತಾಂಶ ಮಾಹಿತಿಗಳೂ ಒಳಗೊಂಡಿರುವ ಸಾಧ್ಯತೆಯಿದೆ ಎಂದು ‘ವಿಕಿಲೀಕ್ಸ್’ ವರದಿ ಮಾಡಿದೆ. ಆದರೆ ಈ ಹೇಳಿಕೆಯನ್ನು ಭಾರತದ ಅಧಿಕಾರಿಗಳು ನಿರಾಕರಿಸಿದ್ದಾರೆ.

 

ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಆಧಾರ್ ಗುರುತುಪತ್ರದ ಶಾಸನಬದ್ಧ ಪ್ರಾಧಿಕಾರ)ಕ್ಕೆ ಬಯೊಮೆಟ್ರಿಕ್ ವ್ಯವಸ್ಥೆಯನ್ನು ‘ಕ್ರಾಸ್‌ಮ್ಯಾಚ್ ಟೆಕ್ನಾಲಜೀಸ್’ ಪೂರೈಸುತ್ತಿರುವ ಕಾರಣ ಆಧಾರ್ ದತ್ತಾಂಶವು ಸಿಐಎ ಕೈಸೇರಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎನ್ನಲಾಗಿದೆ.

  ‘ಕ್ರಾಸ್‌ಮ್ಯಾಚ್ ಟೆಕ್ನಾಲಜೀಸ್’ನ ಪಾಲುದಾರ ಸಂಸ್ಥೆ ‘ಸ್ಮಾರ್ಟ್ ಐಡೆಂಟಿಟಿ ಡಿವೈಸಸ್ ಪ್ರೈ.ಲಿ.’ ಸಂಸ್ಥೆಯು 1.2 ಮಿಲಿಯ ಭಾರತೀಯ ಪ್ರಜೆಗಳ ಮಾಹಿತಿಯನ್ನು ಆಧಾರ್ ದತ್ತಾಂಶದ ಕೋಶಕ್ಕೆ ನೋಂದಣಿ ಮಾಡಿದೆ ಎಂಬುದನ್ನು ಉಲ್ಲೇಖಿಸಿ ವಿಕಿಲೀಕ್ಸ್ - ಸಿಐಎ ಗೂಢಚಾರರು ಭಾರತೀಯ ನಾಗರಿಕರ ಗುರುತು ಕಾರ್ಡಿನ ಮಾಹಿತಿಯನ್ನು ಈಗಾಗಲೇ ಕದ್ದಿದ್ದಾರೆಯೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿತ್ತು. ವೆಬ್‌ಸೈಟ್ ವರದಿಯೊಂದರನ್ನು ಉಲ್ಲೇಖಿಸಿ ಕೆಲ ನಿಮಿಷದ ಬಳಿಕ ಮತ್ತೊಂದು ಟ್ವೀಟ್ ಮಾಡಿದ ವಿಕಿಲೀಕ್ಸ್- ಸಿಐಎ ಈಗಾಗಲೇ ಆಧಾರ್ ಮಾಹಿತಿ ಕದ್ದಿದೆಯೇ ಎಂದು ಪ್ರಶ್ನಿಸಿದೆ.

ಸಿಐಎಯ ಒಂದು ವಿಭಾಗವಾಗಿರುವ ಒಟಿಎಸ್ (ಆಫೀಸ್ ಆಫ್ ಟೆಕ್ನಿಕಲ್ ಸರ್ವಿಸಸ್) ಬಯೊಮೆಟ್ರಿಕ್ ಸಂಗ್ರಹ ವ್ಯವಸ್ಥೆಯ ಸಂಪರ್ಕ ಸೇವೆಯನ್ನು ವಿಶ್ವದಾದ್ಯಂತ ಒದಗಿಸುತ್ತದೆ. ಈ ಸೇವೆ ಸುರಕ್ಷಿತವಾಗಿದೆ ಎಂದು ಭಾವಿಸಲಾಗುತ್ತದೆ. ಆದರೆ ಎಕ್ಸ್‌ಪ್ರೆಸ್‌ಲೇನ್ ಎಂಬ ರಹಸ್ಯ ಮಾಹಿತಿ ಸಂಗ್ರಹ ಸಾಧನದ ಮೂಲಕ ಸಿಐಎ ಈ ರೀತಿಯ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸುತ್ತದೆ ಎಂದು ವಿಕಿಲೀಕ್ಸ್‌ನ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಅಧಿಕಾರಿಗಳು ‘ ಈ ವರದಿ ವಿಕಿಲೀಕ್ಸ್ ಹೊರಗೆಡವಿರುವ ಗುಟ್ಟು ಅಲ್ಲ. ಇದು ವೆಬ್‌ಸೈಟ್‌ನಲ್ಲಿ ಬರೆದಿರುವ ವರದಿಯಷ್ಟೇ’ ಎಂದು ತಿಳಿಸಿದ್ದಾರೆ. ಆಧಾರ್ ಮಾಹಿತಿಯು ಗೂಢಲಿಪೀಕರಣ ವ್ಯವಸ್ಥೆಯಲ್ಲಿದ್ದು ಅದನ್ನು ಆಧಾರ್ ಸರ್ವರ್‌ಗೆ ವರ್ಗಾಯಿಸಲಾಗಿದೆ. ಇದು ಸುರಕ್ಷಿತ ಗೂಢಲಿಪೀಕರಣ ವ್ಯವಸ್ಥೆಯಾಗಿರುವ ಕಾರಣ ಬೇರೆ ಯಾವುದೇ ಸಂಸ್ಥೆಗಳಿಗೆ ಮಾಹಿತಿ ಸೋರಿಕೆಯಾಗಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು